Sunday, October 29, 2006

Bendre's Love is our life

ಬೇಂದ್ರೆಯವರ 'ನಾನು ಬಡವಿ' - ಕಿರುಗವಿತೆಯಲ್ಲ, ಒಲವಿನ ಗಾಥೆ
Da Ra Bendre, also known as 'Ambikaatanayadatta', is considered as one of the best poets of modern Kannada literature. He is known as 'magician of words' (ಶಬ್ದ ಗಾರುಡಿ). No Kannada poets utilised Kannada as Bendre did. He was fond of origin of words and immensely interested in numerology. Hailing from the edge of 'malenadu', Dharwad (Dharwar), North part of Karnataka, he used the dialect of north Karnataka with intesnse influence of local folk and Vedic philosophy. Here, I am trying to enjoy his one of the immensely popular 'Love is our life' (ಒಲವೆ ನಮ್ಮ ಬದುಕು), which was written well back between 1920 and 1930, when he was travelling between Ranebennur and Pune.

ಮೈಸೂರು ಅನಂತಸ್ವಾಮಿ ಅಮರವಾಗಿಸಿದ ಮತ್ತೊಂದು ಕವಿತೆ ಇದು. ದ.ರಾ.ಬೇಂದ್ರೆ (ಅಂಬಿಕಾತನಯದತ್ತ) ಕನ್ನಡದ ಶಬ್ದ ಗಾರುಡಿ; ಉತ್ತರ ಕರ್ನಾಟಕದ ಆಡುಭಾಷೆಯನ್ನು ಅರಗಿಸಿ ಉಣಬಡಿಸಿದ ವರಕವಿ. ಅವರ 'ನಾನು ಬಡವಿ' ಎಂಬ ಕವಿತೆ ಒಂದು ಸರಳ ಸುಂದರ ನಾಟ್ಯ ಕವಿತೆ. ನಾಯಕಿ ನಾಯಕನ ಬಗ್ಗೆ ಇರುವ ಪ್ರೀತಿಯನ್ನು ಹಾಡುತ್ತಾಳೆ, ಸ್ವಗತದಲ್ಲಿರಬಹುದು, ಅಥವಾ ಗೆಳತಿಯೆದುರು ಇರಬಹುದು. ಮೊದಲು ಕವಿತೆಯನ್ನು ಓದೋಣ:

ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು

------------------------------------------------------------------------------------------------
ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು


ಕವಿತೆಯ ನಾಯಕಿ ಬಡವಿ, ನಾಯಕನೂ ಬಡವ. ಆದರೂ ನಾಯಕಿ ಖುಷಿಯಲ್ಲಿ ಹಾಡುತ್ತಿದ್ದಾಳೆ, ' ಒಲವೆ ನಮ್ಮ ಬದುಕು'. ಬೇಂದ್ರೆಗೆ ಪ್ರೀತಿ, ಪ್ರೇಮಕ್ಕಿಂತ ಒಲವು ಎಂಬ ಶಬ್ದ ತುಂಬ ಇಷ್ಟ, ಅದು ಪ್ರೀತಿ-ಪ್ರೇಮಕ್ಕಿಂತ ಹೆಚ್ಚಿನದನ್ನೇನೋ ಹೇಳುತ್ತದೆಯೆಂದೆನಿಸುವುದಿಲ್ಲವೇ?
ನಾಯಕ ನಾಯಕಿಯರಿಬ್ಬರಿಗೂ ಒಲವನ್ನು ಬಿಟ್ಟರೆ ಬೇರೆ ಜೀವನವೇ ಇಲ್ಲ ಮತ್ತು ಅವರ ಬಳಿ ಒಲವಿನ ಹೊರತಾಗಿ ಇನ್ನೇನೂ ಇಲ್ಲದ ಬಡವರು. ಬೇಂದ್ರೆ ಬರೆಯುವ ಪ್ರಾಸವೆನ್ನು ಯಾರಾದರೂ ಊಹಿಸಲಾದೀತೇ? ' ಬದುಕು' ಗೆ ಅವರು ಹಾಕುವ ಪ್ರಾಸ 'ಎದಕು'! ಉತ್ತರ ಕರ್ನಾಟಕದ ಆಡುಮಾತಿನ 'ಎದಕು' (ಎಲ್ಲದಕು), ಎಷ್ಟು ಸುಂದರವಾಗಿ ಸಹಜ ಪ್ರಾಸವಾಗುತ್ತದೆ ಎನ್ನುವುದನ್ನು ಗಮನಿಸಿದರೆ ಬೇಂದ್ರೆ ಏಕೆ ಕನ್ನಡ ಕಂಡ ಅದ್ವಿತೀಯ ಕವಿ ಎನ್ನುವುದು ಅರ್ಥವಾಗುತ್ತದೆ. ಕವಿತೆಯ ಸೌಂದರ್ಯವನ್ನು ನೋಡಿ: ಅವರಿಬ್ಬರೂ ಕಡುಬಡವರು, to conpensate that, ಪ್ರೀತಿಯನ್ನು ಬಳಸುತ್ತಾರೆ - ಬೇಂದ್ರೆ ಹೆಣೆಯುವ ಶಬ್ದಗಳು - ಅದಕು-ಇದಕು-ಎದಕು! ವಾಹ್ ಬೇಂದ್ರೆ ವಾಹ್!!
ಈ ನಾಕು ಸಾಲುಗಳು ಕವನದ ಪೀಠಿಕೆಯಾಗಿದೆ.

------------------------------------------------------------------------------------------------
ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣುಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ


ನಾಯಕಿಗೆ ನಾಯಕನ ಮೇಲೆ ಒಲವು ಶುರುವಾಗಿದೆ. ನಾಯಕಿಗೆ ಸದಾ ನಾಯಕನ ಚಿಂತೆ, ಆಸೆ, ಕನಸು; in short, ಆತ ನಾಯಕಿಯ ರಂಗಸಾಲೆ. ಅವರಿಬ್ಬರೂ ಬಡವರಿರಬಹುದು, ಆದರೆ ಬಡವ ನಾಯಕ ನಾಯಕಿಗೆ ಕೊಡುವ ಉಡುಗೊರೆ ಯಾವ ಶ್ರೀಮಂತನಗೆ ಕಡಿಮೆ? ನಾಯಕನ ರೂಪ ಕಣ್ಣುಕಟ್ಟುವಂಥ 'ಮೂರ್ತಿ'. ಆತ ನಾಯಕಿಯ ಕಿವಿಯಲ್ಲಿ ಉಲಿಯುವುದು ನಾಯಕಿಯನ್ನು, ಅವಳ ರೂಪವನ್ನು, ಅವಳ ಪ್ರೀತಿಯನ್ನು; ನಾಯಕಿಗೆ 'ಕಿವಿಯೋಲೆ' ಸಿಕ್ಕಿದ್ದು ಹಾಗೆ! ಅದೂ ಅಂತಿಂಥ ಕಿವಿಯೋಲೆಯಲ್ಲ, ಮೆಚ್ಚುಗೆಯ ಕಿವಿಯೋಲೆ!!
ಈ ನಾಕು ಸಾಲುಗಳು ಗಂಡು ಹೆಣ್ಣಿನ ಪ್ರಣಯದ ಮೊದಲಿನ ಪ್ರೇಮವನ್ನು ಹೀಳುತ್ತವೆ: ಒಬ್ಬರಿಗೊಬ್ಬರು ನೋಡುತ್ತ ಕೂಡುವುದು, ಮೆಚ್ಚಿಸುತ್ತ ಮಾತಾಡುತ್ತಲೇ ಇರುವುದು...

------------------------------------------------------------------------------------------------
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರುಬಟ್ಟೆ

ಮೆಚ್ಚುಗೆಯ 'ಓಲೆ' ಧರಿಸಿದ ನಾಯಕಿ, ತನ್ನಿಷ್ಟದ 'ಮೂರ್ತಿ'ಯನ್ನು ಈಗ ಮುಟ್ಟುತ್ತಾಳೆ. ನಾಯಕನ ಮೈ, ಚಳಿಯಲ್ಲಿ ಬಿಸಿ, ಬಿಸಿಲಲ್ಲಿ ತಂಪು; ನಾಯಕಿಗೆ ಕಂಬಳಿಯ ಅವಶ್ಯಕತೆಯಿಲ್ಲ. ನಾಯಕ ನಾಯಕಿಗೆ ಹೊಸ ಸೀರೆ ತರದಿದ್ದರೇನಂತೆ? ಆತನ ಮೈ ಮುಟ್ಟಿದರೆ ಸಾಕು, ಆ ರೋಮಾಂಚನದಲ್ಲೇ, ಮೈಯ ತುಂಬ ನಾಯಕಿಗೆ 'ನವಿರು ಬಟ್ಟೆ'! ಪ್ರೀತಿಯ ಮುಂದಿನ ಘಟ್ಟವಿದು. ಮಾತು-ನೋಟಗಳ ನಂತರ - ಮುಟ್ಟುವುದು - ಮುಟ್ಟುವುದರಲ್ಲಿ ಆಗುವ ರೋಮಾಂಚನ- ಈ ನಾಕು ಸಾಲುಗಳಲ್ಲಿವೆ.
------------------------------------------------------------------------------------------------
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು

ಪ್ರೀತಿ-ಪ್ರಣಯಕ್ಕೆ ಕಾಮನ ಕಾವೇರುತ್ತಿದೆ. ನೋಟ- ಮಾತು-ಮುಟ್ಟು-ಮುಗಿದು, ಈಗ ಪ್ರೇಮಿಗಳಿಬ್ಬರಿಗೂ ಪ್ರಣಯೋನ್ಮಾದ. ನಾಯಕನ ಅಪ್ಪುಗೆ, ನಾಯಕಿಗೆ 'ತೋಳಬಂದಿ'. ಆಕೆಯ ಹತ್ತಿರ ಕೊರಳಲ್ಲಿ ಮುತ್ತಿನ ಮಾಣಿಯಿಲ್ಲದಿದ್ದರೇನಂತೆ? ಆಕೆಯ ಕೆನ್ನೆ ತುಂಬ ಲೆಖ್ಖವಿರದಷ್ಟು 'ಮುತ್ತು'ಗಳನ್ನು ನಾಯಕ ಕೊಟ್ಟಿದ್ದಾನೆ. ಅಷ್ಟೆ ಅಲ್ಲ, ನಾಯಕ ಇನ್ನೂ ಬಹಳಷ್ಟು ಒಡವೆ ಕೊಟ್ಟಿದ್ದಾನೆ, but that is secret, ಅದು ಅವರಿಬ್ಬರಿಗೆ ಮಾತ್ರ ಗೊತ್ತು, ಅದು ಏನು ಎಂದು ನಿಮಗೂ ಗೊತ್ತು, ಹೇಳಿದರೆ ಅದರ ಸ್ವಾರಸ್ಯ ಹೋಗುತ್ತದೆ, ಆದ್ದರಿಂದಲೇ ಕವಿ ಹೇಳುತ್ತಾರೆ 'ನನಗೆ ಅವಗೆ ಗೊತ್ತು'. ಈ ನಾಕು ಸಾಲುಗಳು ಪ್ರೇಮಿಗಳ ಪ್ರಣಯವನ್ನು ಹೇಳುತ್ತವೆ.
------------------------------------------------------------------------------------------------
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು

ನಾಯಕ ನಾಯಕಿಯರಿಬ್ಬರಿಗೂ ಮದುವೆಯಾಗಿದೆ. ನೋಟ-ಮಾತು-ಮುಟ್ಟು-ಪ್ರಣಯ ಗಳೆಲ್ಲ ಮಾಗಿವೆ; ಆದರೆ ಒಲವು ಇನ್ನೂ ಬೆಳೆದಿದೆ. ನಾಯಕ ಬಡವನಾದರೇನು, ಯಾವತ್ತೂ ಕುಂದುಕೊರತೆ ತೋರಿಲ್ಲ. ಅಷ್ಟೇ ಅಲ್ಲ, ಆತ ಕೊಟ್ಟ 'ಫಲ', ಬಾಯಿಗಲ್ಲ; ಹೊಟ್ಟೆಗೆ ಮಗು. ಮಗುವಿನ ಫಲಕೊಟ್ಟ ಚಲುವ, ತುಟಿಗೆ ತುಟಿಯಿಂದ ಕೊಟ್ಟಿದ್ದಾನೆ 'ಹಾಲು-ಜೇನು'! ಈ ನಾಕು ಸಾಲುಗಳು ಮಗುವಾಗುವ, ಸಂಸಾರ ಸಾಗಿಸುವ ಒಲವನ್ನು ಹೇಳುತ್ತವೆ.
------------------------------------------------------------------------------------------------
ಇದು ಮೊದಲಿಗೆ ಕಾಣುವಂತೆ ಸರಳ ಕವಿತೆಯೇನಲ್ಲ. ಒಲವಿನ ಶ್ರೀಮಂತಿಕೆಯ ಮುಂದೆ ಲೌಕಿಕ ಶ್ರೀಮಂತಿಕೆ ಏನೂ ಅಲ್ಲ ಎಂಬುದನ್ನು ತೋರಲು ನಾಯಕಿಯನ್ನು ಬಡವಿ- ನಾಯಕನನ್ನು ಬಡವನನ್ನಾಗಿಸಿದ್ದಾರೆ ಕವಿ. ಒಲವು ಶ್ರೀಮಂತಿಗೆಗಿಂತ ಹೆಚ್ಚು ಶ್ರೀಮಂತ, ಮತ್ತದು ಯಾವಾಗಲೂ ಹೆಚ್ಚಾಗುತ್ತಲೇ ಇರುವ ಶ್ರೀಮಂತಿಕೆ ಎನ್ನುವುದನ್ನು ಕವಿತೆ ಸಾರುತ್ತದೆ. ನೋಟದಲ್ಲಿ ಆರಂಭವಾಗುವ ಪ್ರೇಮವು ಮಾತಿನಲ್ಲಿ, ಪರಸ್ಪರರನ್ನು ಮೆಚ್ಚಿಸುವುದರಲ್ಲಿ ಮುಂದುವರಿದು, ಯೌವನದ ಬಿಸಿಯಲ್ಲಿ ದೇಹಗಳು ತಾಗಿ ಪ್ರಣಯವಾಗುತ್ತದೆ, ಪ್ರಣಯ ಕಾಮವಾಗುತ್ತದೆ; ಕಾಮದಿಂದ ಪರಿಶುದ್ಧ ಮಮತೆಯ ಮಗು ಹುಟ್ಟುತ್ತದೆ. ಒಲವು ಬೆಳೆಯುವ ನೈಸರ್ಗಿಕ ರೀತಿಯಿದು.
ಮೊದಲಿನ ನಾಕು ಸಾಲುಗಳ ಅರ್ಥವಾಗುವುದು, ಉಳಿದ ಹದಿನಾರು ಸಾಲು ಓದಿದ ಮೇಲೆ. 'ಪ್ರೀತಿ ನಮ್ಮ ಬದುಕು' ಎನ್ನದೇ 'ಒಲವೆ ನಮ್ಮ ಬದುಕು' ಎನ್ನುವುದರ ಅರ್ಥವಾದುವುದು, ಉಳಿದ ಹದಿನಾರು ಸಾಲು ಓದಿದ ಮೇಲೆ. ಒಲವೆಂದರೆ ಬದುಕು, ಬದುಕೆಂದರೆ ಒಲವು. ಅಥವಾ ಒಲವಿಲ್ಲದಿದ್ದರೆ ಬದುಕೇಕೆ?

2 comments:

 1. ಚೆಂದದ ವಿಶ್ಲೇಷಣೆ ಕೇಶವರೇ.

  ಬೇಂದ್ರೆ ಸಾಹಿತ್ಯ ಅಲೌಕಿಕ, ಅಪೂರ್ವ, ಅನೂಹ್ಯ ಮತ್ತು ಅನುಪಮವಾದದ್ದು.

  ಆ ಶಬ್ದ ಗಾರುಡಿಗ ಒಂದೇ ಶಬ್ದದಲ್ಲಿ ಹಲವು ಅರ್ಥ ಹೇಳುತ್ತಿದ್ದ.

  ಇದು ಗಂಡ -ಹೆಂಡತಿಯು ಲೌಕಿಕ ಪ್ರಪಂಚದ ಬೇಕು ಬೇಡಗಳನ್ನು ಪೂರೈಸಲು ಅಸಮರ್ಥರಾಗಿದ್ದರೂ, ಪರಸ್ಪರರಲ್ಲಿನ ಒಲವು, ಪ್ರೀತಿ, ಕಾಮಗಳಲ್ಲಿನ ಅವರ ಬೆಸುಗೆಯ ಮುಂದೆ ಮತ್ತು ಅವುಗಳಿಂದ ಸಿಗುವ ಆನಂದದ ಮುಂದೆ ಲೌಕಿಕ ಸುಖಗಳು ನಗಣ್ಯ ಅನ್ನೋ ಸಂದೇಶ ಅಪರೂಪದ್ದು.

  ಇದನ್ನು ಅವರು ಸರಳವಾಗಿ ಆಡುಭಾಷೆಯ ಶಬ್ದದಲ್ಲಿ ಹೇಳುವದೇ ಓದುಗರಿಗೆ ತೀವ್ರ ಅಪ್ಯಾಯಮಾನ ಎನಿಸುತ್ತದೆ.
  ತಮ್ಮ ಅಭಿರುಚಿಗೆ ವಂದನೆಗಳು.

  ReplyDelete