Monday, August 06, 2007

ಎಸ್ಸೆಮ್ಮೆಸ್ ಕವಿತೆ


ಕವಿತೆ ಬರೆಯಬೇಕು
ತಪ್ಪು, ತಪ್ಪು!
ಟೈಪು ಮಾಡಬೇಕು

ಟೈಪಿಸಲು ಕೂತರೆ, ಹಾಳಾದ್ದು,
ಎಲ್ಲ ಹಳೆಯ ಪ್ರತಿಮೆಗಳೇ
ಬೇಧಿಯಂತೆ ಒತ್ತರಿಸಿ ಬರುತ್ತವೆ

ಹೊಸ ಪ್ರತಿಮೆಗಳು ಬೇಕು
ಹೊಸ ವಸ್ತುಗಳು ಬೇಕು
ತಪಸ್ಸಿನಲ್ಲಿ ವಾಲ್ಮೀಕಿ ಹುತ್ತಗಟ್ಟಬೇಕು
ಪುರುಷೋತ್ತಮನ ರೂಪ ಚಿತ್ತಗಟ್ಟಬೇಕು

ಛೇ! ಮತ್ತೆ ಹಳೆಯ ರೂಪಕ
ನನಗೆ ಬಂದಿತು ತುಂಬ ಕೋಪ (LOL)
ರಾಮ "ರಾಮ"ವಾಗಿ ಯಾವ ಕಾಲವಾಯಿತು
ನಾನು ಹುತ್ತಗಟ್ಟದೇ ಎಷ್ಟು ವರ್ಷವಾದವು

ಕವಿತೆ ಏನಿದ್ದರೂ ಈಗ
ಎಸ್ಸೆಮ್ಮೆಸ್ಸಿನಂತೆ
ಚಾಟ್ ರೂಮಿನಂತೆ
ಕಾಲ್ ಸೆಂಟರಿನ ರಾತ್ರಿ ಕೆಲಸದಂತೆ
ಎಂಜಿರೋಡಿನ ಪಬ್ಬಿನಂತೆ
ಎಫ್ ಟೀವಿಯ ಮಾಡಲ್ಗಳಂತೆ

(ಇತ್ತೀಚೆ ಎಸ್ಸೆಮ್ಮೆಸ್ಸಿನಲ್ಲಿ ಬರೆದ ಒಂದು ಹಾಡಿಗೆ ಕರ್ನಾಟಕ ಸರ್ಕಾರದ ಅತ್ಯುತ್ತಮ ಗೀತಕಾರ ಪ್ರಶಸ್ತಿ ಸಿಕ್ಕಿತಂತೆ)

3 comments:

  1. ಕೇಶವ ಅವರಿಗೆ ನಮಸ್ಕಾರ,

    ಬಹಳ ಚನ್ನಾಗಿದೆ ಕವಿತೆ. ಇತ್ತೀಚೆಗಷ್ಟೇ ಈ ಹುತ್ತಗಟ್ಟುವ ಪ್ರಕ್ರಿಯೆಯಿಂದ ಪ್ರಭಾವಿತನಾಗಿ ನಾನೂ ಒಂದು ಕವಿತೆ ಬರೆದೆ! ನಿಮ್ಮ ಈ ಕವನವನ್ನ ಓದಿದ ಮೇಲೆ ನಿಮಗೆ ಅದನ್ನು ಕಳಿಸಬೇಕೆನಿಸಿತು :) ಇಲ್ಲಿದೆ,
    (ಕವನ ಬರೆದ ಅನುಭವ ಹೆಚ್ಚು ಕಡಿಮೆ ಶೂನ್ಯ ಎಂಬ ಡಿಸ್ಕ್ಲೇಮರಿನೊಂದಿಗೆ!)

    ಹೆಕ್ಕಿ ಹೆಕ್ಕಿ ಅಕ್ಕರ
    ಸಾಲು ಸಾಲು ಬರೆದು
    ತಿದ್ದಿ ತೀಡಿ ಶಬ್ದಗಳ
    ಜೋಡಿಸಿದೊಡನೆ ಕವಿತೆಯಾಯಿತೆ?

    ಒಳಗಣ ಹಸಿಬಿಸಿ ಭಾವ
    ಅರೆಬೆಂದು ಅವಸರದಲಿ
    ಎದೆಯ ಎಲ್ಲೆ ದಾಟಿ
    ಹೊರಟ ನಿಟ್ಟುಸಿರಿನಿಂದೆಂಥ ಕವನ?

    ಹೆಪ್ಪುಗಟ್ಟಿದ ಹಾಲು ಕೆನೆಮೊಸರು
    ಮುಚ್ಚಟೆಯಿಂದ ಕಡೆದರೇ ತಾನೆ
    ಬೆಣ್ಣೆ ತೇಲಿ ಬರುವದು ಮಜ್ಜಿಗೆಯಲಿ
    ಹೆಪ್ಪುಗಟ್ಟದ ಹಾಲು ಕೊಟ್ಟೀತೆ ನವನೀತ?

    ಕನಸುಗಳ ಬಿತ್ತಿ
    ಪರಿಶ್ರಮದ ಪಾತಿ ಕಟ್ಟಿ
    ವಿಧಿಕರಾರಿನ ಎಲ್ಲೆ ಪರಖಿ
    ಬೆಳೆದ ಸಿಹಿಕಹಿಯ ಮೆದ್ದು
    ಹುತ್ತಗಟ್ಟದ ಚಿತ್ತ ಕಟ್ಟೀತಾದರು ಏನ?

    ReplyDelete
  2. this is not about your poem. But the color format of your blog. The earlier color combination (maroon and grey) was splendid. Just when i was thinking about this you happened to change the colors. Wonder why you did it :( Nevertheless your blog is very interesting and very very informative too!

    ReplyDelete
  3. ಅನಿಲ್ ಜೋಶಿ,
    ಧನ್ಯವಾದಗಳು.
    ನಿಮಗೂ ಅಡಿಗರ ಕವನದ ರುಚಿಯಿರುವಂತೆ ತೋರುತ್ತದೆ.

    ಅನಾಮಧೇಯರೇ,
    ನಿಮ್ಮ ಇಚ್ಛೆಯಂತೆ, ವಾಪಸ್ ಬಣ್ಣಗಳನ್ನು ಬದಲಿಸುತ್ತೇನೆ.
    ನನ್ನ ಬ್ಲಾಗನ್ನು ಮೆಚ್ಚಿದ್ದಕ್ಕೆ ತುಂಬ ಥ್ಯಾಂಕ್ಸ್

    ಕೇಶವ

    ReplyDelete