Saturday, October 20, 2007

ಇಂಗ್ಲೀಷ್ ಮತ್ತು ಇಂಗ್ಲೀಷ್ ಏಕ್ಸೆಂಟು


'Hi Sandy, how are you? Tell mom that I'll be a bit late. Take care, bye...' ಅಂತ ನನ್ನ ಕನ್ನಡದ ಗೆಳೆಯ ತನ್ನ 12 ವರ್ಷದ ಮಗ ಸಂದೀಪನಿಗೆ ಇಂಗ್ಲಂಡಿನ accentನಲ್ಲಿ ಫೋನಿದ.

ಭಾರತದಲ್ಲಿ ಹುಟ್ಟಿ ಬೆಳೆದು ಕಲಿತು ಇಂಗ್ಲಂಡಿಗೆ ಬಂದ ನನ್ನಂಥವರು ಭಾರತದವರೊಡನೆ ಮಾತಾಡುವುದು (ಕನ್ನಡಿಗರಲ್ಲದ) ಭಾರತದ ಇಂಗ್ಲೀಷ್ accentನಲ್ಲೇ. ನನ್ನಂಥವರು ಈ ದೇಶಕ್ಕೆ ಬಂದು ಎಷ್ಟೇ ವರ್ಷಗಳಾಗಲಿ, ಎಷ್ಟೇ ಪ್ರಯತ್ನ ಪಡಲಿ, ಇನ್ನೂ Indian Accent ಬಿಟ್ಟು ಹೋದದ್ದು ಕಾಣೆ. ಆದರೂ ಇಲ್ಲಿನ ಜನರೆದುರಲ್ಲಿ English accentನಲ್ಲಿ ಮಾತಾಡುವ ವ್ಯ್ರರ್ಥಪ್ರಯತ್ನ ದಿನನಿತ್ಯ ಮಾಡುತ್ತಿರುತ್ತೇವೆ.

ನನಗೆ ಗೊತ್ತಿರುವಂತೆ ಬಹಳಷ್ಟು ನನ್ನಂಥ ಅನಿವಾಸಿಗಳು ತಮ್ಮ ಮಕ್ಕಳ ಜೊತೆ ಮಾತಾಡುವುದು ಇಂಗ್ಲೀಷಿನಲ್ಲೇ. ತಾವು ತಮ್ಮ ತಾಯಿಮಾತಿನಲ್ಲಿ ಮಾತಾಡಿದರೂ ಮಕ್ಕಳು ಇಂಗ್ಲೀಷಿನಲ್ಲೇ ಸಂಭಾಷಣೆಯನ್ನು ಮುಂದುವರೆಸುತ್ತಾರಂತೆ, ಅದು ಈ ದೇಶದ ಗುಣ ಎಂದು ನನ್ನ ಮಿತ್ರರ ಅಂಬೋಣ. ಇಲ್ಲಿಯವರೆಗೂ ನನ್ನ ಯಾವ ಮಿತ್ರರೂ ತಮ್ಮ ಮಕ್ಕಳ ಜೊತೆ ತಮ್ಮ ಮಾತೃಭಾಷೆಯಲ್ಲಿ ಮಾತಾಡಿದ್ದು ಕಾಣೆ. ಇಲ್ಲಿ ಹುಟ್ಟಿ ಬೆಳೆದ ಮಕ್ಕಳು ಸಹಜವಾಗಿ ಇಲ್ಲಿನ accentನಲ್ಲಿ ಮಾತಾಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

'Hi Sandy, how are you? Tell mom that I'll be a bit late. Take care, bye...' ಅಂತ ನನ್ನ ಕನ್ನಡದ ಗೆಳೆಯ ತನ್ನ ೧೨ ವರ್ಷದ ಮಗ ಸಂದೀಪನಿಗೆ ಇಂಗ್ಲಂಡಿನ accentನಲ್ಲಿ ಫೋನಿಸಿದಾಗ, ಪಕ್ಕದಲ್ಲಿ ನಿಂತ ನನಗೆ ತುಂಬ ಕಸಿವಿಸಿಯಾಯಿತು. ಮಾತೃಭಾಷೆಯಲ್ಲಿ ಮಕ್ಕಳ ಜೊತೆ ಮಾತಾಡಲಾಗದ, Indian accentನಲ್ಲ ಇಂಗ್ಲೀಷ ಮಾತಾಡಲಾಗದ ಅನಿವಾಸಿಗಳು ತಮ್ಮ ಮಕ್ಕಳ ಜೊತೆ ಸಹಜವಾಗಿ ಬದುಕಲು ಸಾಧ್ಯವೇ? ಕೃತಕವಾಗಿ ಕಷ್ಟಪಟ್ಟು ನಮ್ಮದಲ್ಲದ ಇಂಗ್ಲೀಷಿನಲ್ಲಿ, ನಮಗೆ ಬಾರದ English accentನಲ್ಲಿ ಮಕ್ಕಳನ್ನು ಬೆಳೆಸಿದರೆ, ತಂದೆ-ತಾಯಿಯಾಗಿ ನಮ್ಮ ಬಾಳು ತುಂಬುಜೀವನವಾದೀತೇ?

ಉತ್ತರ ನನಗೆ ಗೊತ್ತಿಲ್ಲ. ನನ್ನ ಪುಟ್ಟನಿಗೆ ಮೀಸೆ ಚಿಗುರುವ ವಯಸ್ಸು ಕಲ್ಪಿಸಿಕೊಂಡು ಕಸಿವಿಸಿಯಾಯಿತು.

4 comments:

 1. ನನ್ನ ತಮ್ಮನ ಮಗಳು ನಮ್ಮೊಂದಿಗೆ ಮಾತಾಡುವಾಗ ಕೊಂಕಣಿಯಲ್ಲಿ ಮಾತಾಡುದಿಲ್ಲ(ನಮ್ಮ ಮಾತೃ ಭಾಷೆ) ಆದರೆ ಅವಳಿಗೆ ನಾವು ಹೇಳಿದ್ದು ಅರ್ಥವಾಗುತ್ತದೆ ಎಂದು ಅವಳ ತಂದೆ ಹೇಳುತ್ತಾನೆ.ಅವಳ english accent ನಮಗೆ ಅರ್ಥವಾಗುದಿಲ್ಲ.. ಅವಳಿಗಿನ್ನೂ ಬರೇ ಮೂರು ವರ್ಷ... ಈಗಲೇ ಹೀಗಾದರೆ ಮುಂದೆ ಹೇಗೆ? ಹೆಚ್ಚಿನ ಅನಿವಾಸಿ ಭಾರತೀಯರು ತಮ್ಮ ಮಕ್ಕಳಿಗೆ ಅಲ್ಲಿನವರ ಮುಂದೆ ಕೀಳುರಿಮೆ ಬರದಿರಲಿ ಎಂದು ಹೀಗೆ ಮಾಡುತ್ತಾರೆ ಎಂದು ನಾನು ತಿಳಿದಿದೆ. ಆದರೆ ನಮ್ಮ ಭಾಷೆಯ ಗತಿ? ನಮ್ಮ ಮಕ್ಕಳಿಗೆ ನಮ್ಮ ಭಾಷೆ ಬೇಡವೇ?
  ಭಾರತದಲ್ಲೇ ಇರುವವರಿಗೆ ಬೇಡವಾದ ಭಾಷೆ ದೂರದಲ್ಲಿರುವವರಿಗೆ ಬೇಕಾದಿತೇ? metroದಲ್ಲಿರುವ ವೈದ್ಯರು ಮತ್ತು ಉನ್ನತ ಸ್ಥಾನದಲ್ಲಿರುವರು ಮನೆಯಲ್ಲಿ ಆಂಗ್ಲ ಬಾಷೆಯಲ್ಲೇ ಮಾತಾಡುತ್ತಾರೆಂದು ನಿಮಗೆ ಗೊತ್ತೇ? ಬಹುಶಃ ತಮ್ಮ ಮಕ್ಕಳನ್ನು ಮುಂದಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸಲು ಈಗಲೇ ತಯಾರಿ!
  ತಂದೆ ತಾಯಿಯರಿಗೆ ತಮ್ಮ ಬೇರು, ಭಾಷೆಯ ಮೇಲೆ ಅಭಿಮಾನವಿದ್ದರೆ ಖಂಡಿತ ಮಕ್ಕಳು ಅದನ್ನು ಹೊಂದುತ್ತಾರೆ. ನಿಮ್ಮ ಮಗ ಕೃಷ್ಣನೂ ಸಹ ನಿಮ್ಮ ಅಭಿಮಾನ ಮುಂದುವರಿಸಲಿ ಎಂದೇ ನನ್ನ ಹಾರೈಕೆ!

  ReplyDelete
 2. ಶೀಲಾ ಅವರೇ,

  ಇದು ಬರೀ ಪರದೇಶದಲ್ಲಿರುವವರ ಸಮಸ್ಯೆ ಅಲ್ಲ, ನಮ್ಮ ರಾಜ್ಯದಲ್ಲೇ ಇದ್ದು ಬೆಳೆಯುವ ಮಕ್ಕಳ ಪರಿಸ್ಥಿತಿಯೂ ಭಿನ್ನವಾಗೇನೂ ಇಲ್ಲ ಎಂದು ಸೂಕ್ಶ್ಮವಾಗಿಯೇ ಹೇಳಿದ್ದೀರಿ.

  ಬಹುಷಃ ನೀವು ಹೇಳಿರುವಂತೆ ನಮ್ಮ ಜನಕ್ಕೆ ನಮ್ಮ ಭಾಷೆಯ ಮೇಲೆ, ನಮ್ಮ ಸಂಸ್ಕೃತಿಯ ಬಗ್ಗೆ ಕೀಳರಿಮೆಯಿದೆ. ಅದಕ್ಕೆ ಪರದೇಶಕ್ಕೆ ಬರುತ್ತಿದ್ದಂತೆ ತಮ್ಮ ಮಾತೃಭಾಷೆಯನ್ನು ತಮ್ಮ ಮಕ್ಕಳಿಗೆ ಸಾಗಿಸುವುದಿಲ್ಲ; ಅಷ್ಟೇ ಅಲ್ಲ, ಕನ್ನಡ ಹಾಡುಗಳನ್ನು ಕೇಳುವುದಿಲ್ಲ. ಮೊನ್ನೆ ಮಾತಾಡುತ್ತಾ, ' ಯು.ಕೆ. ನಲ್ಲಿ ಈಗ ತೆಲಗು ಚಾನೆಲ್ ಬಂದಿದೆ, ಕನ್ನಡದ್ದೂ ಇದ್ದರೆ ಎಷ್ಟು ಚೆಮ್ದ ಅಲ್ಲವಾ?' ಎಂದರೆ, 'ಅಯ್ಯೋ ಮಾರಾಯ, ಅದನ್ಯಾವನು ನೋಡುತ್ತಾನೆ, ನಮ್ಮ ಮನೆನಲ್ಲಿ ನಾವು ಯಾವುದೇ ಇಂಡಿಯನ್ ಚಾನೆಲ್ ಹಾಕಿಸಿಕೊಂಡಿಲ್ಲ' ಎಂದ. ಸ್ವಲ್ಪ ಹೊತ್ತು ಬಿಟ್ಟು, 'ಹೌದೌದು, ಕನ್ನಡ ಚಾನೆಲ್ ಇದ್ದರೆ, ನಮ್ಮ ಅಪ್ಪ-ಅಮ್ಮ ಬಂದಾಗ ಇಲ್ಲಿ ಬರೀ ಬೋರು ಎನ್ನುವುದಾದರೂ ನಿಲ್ಲುತ್ತದೆ' ಎಂದು ದೊಡ್ಡದಾಗಿ ನಕ್ಕ.

  ಪುಟ್ಟ ಕೃಷ್ಣನ ಬಗ್ಗೆ ಚಂದದ ಮಾತು ಬರೆಸಿದ್ದಕ್ಕೆ ತುಂಬ ಧನ್ಯವಾದಗಳು.

  ಕೇಶವ

  ReplyDelete
 3. ವೈದ್ಯರಿಗೆ ನ್ನನ ನಮಸ್ಕಾರಗಳು,
  ಕನ್ನಡ ಬರವಣಿಗೆಗೆ ಸಮಯ ಉಳಿಸಿಕೊಳ್ಳೋ ಮೊದಲನೇ ಡಕ್ಟರ್ ನಿವೇನೆ ಇರಬೇಕು!
  ಈ ನಿಮ್ಮ ಬರಹ ಬಹಳ ಯೋಚನಾಪೂರ್ವಕ ವಿಷಯ. ನಾನು ಸಂಗಡಿಗರ ಜೊತೆ ಇದನ್ನ ಹಲವಾರುಬಾರಿ ಚರ್ಚಿಸಿ ..... ಚರ್ಚಿಸಿ.. ಕೊನೆಗೆ ನಿರ್ದರಿಸಿದ್ದು, ಈಗ ಮುಂದೆವರಿತಾಯಿರೋದು ’ಕನ್ನಡದ ಯೆವಲ್ಯೂಷಂನ್’. ಡಾರ್ವಿನ್ ಮಹೋದಯ ಹೇಳೋ ಹಾಗೆ ’ಸರ್ವೈವಲ್ ಆಫ್ ದಿ ಫಿಟ್ಟೇಸ್ಟ್’, ನಮ್ಮ ಭಾಷೆ-ಸಂಸ್ಕೃತಿ ನಶಿಸೋದು ಬಹಳ ದೂರದಲ್ಲಿಲ್ಲ.

  ReplyDelete
 4. ರಘು ಅವರೇ,
  ಧನ್ಯವಾದಗಳು. ಡಾರ್ವಿನ್ನನ ವಿಕಾಸವಾದವನ್ನು ನಾವೆಲ್ಲರೂ ಸೇರಿ ಸುಳ್ಳುಮಾಡಬೇಕಿದೆ, ಅದರಲ್ಲಿ ಎಷ್ಟರ ಮಟ್ಟಿನ ಯಶಸ್ಸು ಗಳಿಸುತ್ತೆವೆಯೂ ಗೊತ್ತಿಲ್ಲ.
  ಕೇಶವ

  ReplyDelete