Sunday, October 21, 2007

ಹೀಗೊಂದು ಪತ್ರ

ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ? ಎಂಬ ಲೇಖನಕ್ಕೆ ನನ್ನ ಪತ್ರ (thatskannada.com)

ಶಾಸ್ತ್ರಿಯವರೇ,

ನಾನೂ ನಿಮ್ಮ ಹಾಗೆ ಪಾಶ್ಚಿಮಾತ್ಯ ದೇಶದಲ್ಲಿರುವವನೇ (ಇಂಗ್ಲಂಡ್). ಆದರೆ ನನ್ನ ಅನುಭವ ನಿಮ್ಮ ಲೇಖನಕ್ಕೆ ತೀರ ತದ್ವಿರುದ್ಧ. ನನಗೆ ಇಲ್ಲಿನ ಖಾಲಿ ರಸ್ತೆಗಳು (ನಮ್ಮ ದೇಶದಲ್ಲಿ ಕರ್ಫ್ಯೂ ಆದಾಗ ಮಾತ್ರ ಕಾಣುವಂಥಹ), ತುಂಬ ಕೃತಕವಾಗಿ Good Morning, Good evening, BYE, ಮತ್ತು ಮಾತು ಮಾತಿಗೆ Thanks, Sorry, excuse me ಎನ್ನುವುದನ್ನು ಕೇಳಿ ತಲೆ ಚಿಟ್ಟು ಹಿಡಿಯುತ್ತದೆ.

ನಾವು ನಮ್ಮ ದೇಶದ ಏರೋಪ್ಲೇನ್ ಹತ್ತಿದಾಗ ನಮ್ಮ ಸಂಕೋಚಗಳನ್ನೆಲ್ಲ ಬಿಟ್ಟು, ಮೈಛಳಿ ಬಿಟ್ಟು (ಅಕ್ಷರಶಃ ಚಳಿಯೂ ಬಿಟ್ಟು ಹೋಗುತ್ತದೆ), ಪಾಶ್ಚಾತ್ಯರ ಢಾಂಬಿಕ (pseudo)ನಯ-ನಾಜೂಕುಗಳನ್ನು ಬಿಟ್ಟು ಹಗುರಾಗುತ್ತೇವೆ, ಅದಕ್ಕೆಂದೇ ಹತ್ತು ಸಾರಿ ಗಗನಸಖಿಯರನ್ನು ಕರೆಯುತ್ತೇವೆ. ಫಾರಿನ ಏರ್-ಲೈನಿನಲ್ಲಿ ಯಾಕೆ ಹೀಗಾಗೋಲ್ಲ ಅಂತ ಕೇಳ್ತೀರಲ್ಲಾ, ಒಂದು ಸಲ ಬಿಟ್ಟು ಎರಡು ಸಲ ಗಗನಸಖಿಯರನ್ನು ಕರೆದು ನೋಡಿ, ಕಂದು ಚರ್ಮದ ನಮ್ಮ ಬಣ್ಣದ ಬಗ್ಗೆ ಮಾತಾಡಿಕೊಳ್ಳುತ್ತಾರೆ, ಅದಕ್ಕೆ ನಾವು ನೀವೆಲ್ಲ ಸುಮ್ಮನಿರುವುದು.

ಇನ್ನು ಕಸದ ಬುಟ್ಟಿಯಲ್ಲಿ ಬೀಸಾಕುವುವುದರ ವಿಚಾರಃ ದಿನಕ್ಕೆ ಸಾವಿರಾರು ಬಾರಿ CCTVಯಲ್ಲಿ ನಮ್ಮನ್ನು ರೆಕಾರ್ಡ್ ಮಾಡುವ ಈ Big Brother ಪಾಶ್ಚಾತ್ಯ ದೇಶಗಳಲ್ಲಿ ಕಸ ಬೀಸಾಕಿದರೆ ಕೌನ್ಸಿಲ್ನಿಂದ ತಪ್ಪಿಸಿಕೊಳ್ಳುವ ಛಾನ್ಸೇ ಇಲ್ಲ, ಮೇಲಾಗಿ ಕಸಕ್ಕೆ ಸಾವಿರಾರು ರೂಪಾಯಿ ದಂಡತೆರಬೇಕಾದ ಪರಿಸ್ಥಿತಿ. ನಮ್ಮ ದೇಶವಿನ್ನೂ Big Brother ಆಗಿಲ್ಲ ಸ್ವಾಮಿ, ಅದಕ್ಕೇ ಹಾಯಾಗಿ ನಾವು ಪಾನ್-ಬೀಡಾ ತಿಂದು ರಸ್ತೆಗಳಲ್ಲಿ ಆರಾಮವಾಗಿ ಉಗಿಯುತ್ತೇವೆ.

ಒಂದು ಭೇಲ್-ಪುರಿಗೆ ಇಲ್ಲಿ ಇಂಗ್ಲಂಡಿನಲ್ಲಿ ನಾನು ಕೊಡುವುದು ಕೇವಲ ೩೦೦ ರೂಪಾಯಿ ಮಾತ್ರ (ನಿಮ್ಮ ಅಮೇರಿಕದಲ್ಲಿ ಎಷ್ಟು ಅಂತ ಗೊತ್ತಿಲ್ಲ). ಭಾರತದಲ್ಲಿ ನೀವು ಅಷ್ಟು ದುಡ್ಡು ಕೊಟ್ಟು ತಿನ್ನುವಿರಾದರೆ, ಅಮೇರಿಕದಲ್ಲಿ ಸಿಗುವುದಕ್ಕಿಂತ ಚೆನ್ನಾಗಿ, ಶುಚಿಯಾಗಿ ಮಾಡಿ ಇನ್ನೂ ಜಾಸ್ತಿ quantity ಕೊಡುತ್ತಾರೆ. ಆದರೆ ನಿಮಗೆ ಭಾರತಕ್ಕೆ ಬರುತ್ತಿದ್ದಂತೆ , ಅಯ್ಯೋ, ಭೇಲ್-ಪುರಿಗೆ ೧೫ ರೂಪಾಯಿಯೇ, ೧೦ ರೂಪಾಯಿಗೆ ಸಿಗುತ್ತಿತ್ತಲ್ಲ ಅಂತ ಚಡಪಡಿಸುತ್ತೀರಿ. ಸುಮ್ಮನಿರಿ ಸಾರ್, ಈ ಥರ ಮಾತಾಡುವ NRIಗಳನ್ನು ದಿನನಿತ್ಯ ಕೇಳಿಸಿಕೊಳ್ಳುತ್ತಲೇ ಇರುತ್ತೇನೆ, ಬ್ಲಾಗುಗಳಲ್ಲಿ ಓದುತ್ತಲೇ ಇರುತ್ತೇನೆ.ಇನ್ನು STOP ಸಿಗ್ನಲ್-ಗಳ ವಿಚಾರಃ ಪ್ರತಿ ಮೂಲೆಯಲ್ಲಿರುವ CCTVಗಳು, ಜೇಬನ್ನೆಲ್ಲ ಬರಿದು ಮಾಡುವ ಇನ್ಸುರನ್ಸ್ ಪಾಲಿಸಿಗಳು, ಸಣ್ಣ ತಪ್ಪಿಗೂ ಡ್ರೈವಿಂಗ್ ಲೈಸನ್ಸನ್ನೇ ರದ್ದು ಮಾಡುವ ಕಾನೂನುಗಳು - ಏಲ್ಲ ರಸ್ತೆಗಳು ಖಾಲಿ ಇದ್ದಾರೂ ಯಾವನಿಗೆ ಸ್ವಾಮಿ STOP ಸಿಗ್ನಲ್ ದಾಟಿ ಕಾರ್ ಓಡಿಸುವ ಧೈರ್ಯವಾಗುತ್ತೆ?

ಇನ್ನು Wheel chairಗಳ ವಿಚಾರಃ ನಮ್ಮ ದೇಶದ ಸದ್ಯದ ಸಮಸ್ಯೆಗಳಲ್ಲಿ ಇದು ಒಂಚೂರೂ ಮುಖ್ಯವಲ್ಲ. ಬೇಕು ನಿಜ, ಅದಕ್ಕಿನ್ನೂ ತುಂಬ ಕಾಲವಿದೆ.

Cell phone ವಿಚಾರಃ ಇಲ್ಲೂ ಯಾರಿಗೂ ಕಮ್ಮಿಯಿಲ್ಲ ಬಿಡಿ, ಬಸ್ಸು, ಟ್ರೇನು ಎಲ್ಲ ಕಡೆ ಜನ ಸೆಲ್ನಲ್ಲಿ ಮಾತಾಡ್ತಾನೇ ಇರ್ತಾರೆ. ಯಾಕೆ, ನಮ್ಮ ಚಂದದ ಐರಾವತಕ್ಕೆ ಬಯ್ತೀರಾ?

Be a Roman in Rome, ಅಂತ ಈ ಇಂಗ್ಲೀಷರು ಮಾಡಿರುವ ಗಾದೆ ನಿಮಗೂ ಗೋತ್ತು ಅಂದ್ಕೊಂಡಿದೀನಿ. ನಾವು ಈ ಪಾಶ್ಚಾತ್ಯ ದೇಶಗಳಿಗೆ ವಲಸೆ ಬರುತ್ತಿರುವಂತೇ, ಕುಂಡೆ ಸುಟ್ಟ ನಾಯಿಯಂತೆ, ಬಾಲವನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡು ಬದುಕಲು ಶುರುವಚ್ಚಿಕೊಳ್ಳುತ್ತೇವೆಯೋ, ಹಾಗೆಯೇ, ತಾವುಗಳು ಭಾರತಕ್ಕೆ ಬಂದಾಗ ಇಲ್ಲಿಯವರಂತೆ ವ್ಯವಹರಿಸಿ, ಕ್ಯೂ ಇರಲಿ, ಬಿಡಲಿ, ಮುದುಕರು-ಹೆಂಗಸರಿಗೆ ನಮ್ಮ ಜನ ದಾರಿಮಾಡಿಕೊಡುವುದು ತಮಗೆ ಮರೇತು ಹೋಗಿದೆಯೇ (ಅಪವಾದಲಿಲ್ಲ ಏಂದಲ್ಲ)?

ಇಷ್ಟೆಲ್ಲ ಬರೆದರೂ, ನಾವು ಭಾರತೀಯರು ಅಥವಾ ನಮ್ಮ ಭಾರತ 100% ಒಳ್ಳೆಯ ಜನ್ 100% ಸುಂದರ ದೇಶ ಅಂತ ಹೇಳುತ್ತಿಲ್ಲ; ನಾವು ಮತ್ತು ನಮ್ಮ ದೇಶ ಪಶ್ಚಿಮದ ಜನಗಳಿಗಿಂತ, ದೇಶಗಳಿಗಿಂತ ಒಳ್ಳೆಯ ಜನ-ದೇಶ ಅಂತ ಹೇಳುತ್ತಿಲ್ಲ. ಅವರ ದೇಶ ಅವರಿಗೆ, ನಮ್ಮ ದೇಶ ನಮಗೆ...

ನಮ್ಮ ದೇಶದ ಏಳ್ಗೆಗೆ ಕೈಲಾದ ಸಹಾಯ ಮಾಡೋಣ, ಇಲ್ಲಾ ಪಲಾಯನವಾದಿಗಳಾಗಿ ದೇಶಬಿಟ್ಟು ವಲಸೆ ಹೋಗೋಣ. ಎರಡನೇ ಹಾದಿ ಹಿಡಿದಿರುವ ನಾವು (ಅಂದರೆ NRIಗಳು - Not Required Indians), ರಜೆಗೆಂದು ನಮ್ಮ ದೇಶಕ್ಕೆ ಹೋದಾಗ, ಸುಂಸುಮ್ನೆ ಅರ್ಥವಿರದ comparisonಗಳನ್ನು ಮಾಡಿ ನಮ್ಮ ದೇಶವನ್ನೇ ಹೀಯಾಳಿಸುವುದನ್ನು ಬಿಟ್ಟು, ರಜೆಯನ್ನು ಆನಂದಿಸೋಣ. ನನ್ನ ಪ್ರಕಾರ, ನಾವು ನಮ್ಮ ದೇಶವನ್ನು ತೊರೆದು ಇನ್ನೊಂದು ನೆಲಕ್ಕೆ ನೆಲಸಲು ಬಂದಕೂಡಲೇ, ನಮ್ಮ ದೇಶದ ಕುಂದುಕೊರತೆಗಳ ಬಗ್ಗೆ ಮಾತಾಡುವ ಹಕ್ಕನ್ನು ಕಳೆದುಕೊಳ್ಳುತ್ತೇವೆ; ಏಕೆಂದರೆ ನಾವು ನಮ್ಮ ದೇಶದ ಸಾಮಾಜಿಕ ಬದ್ಧತೆಗೆ, ಸಂಸ್ಕೃತಿಗೆ, ರಾಜಕೀಯ ಪರಿಸ್ಥಿತಿಗೆ ಯಾವುದೇ ತರಹದ ಪಾಲ್ಗೊಳುವಿಕೆಯಿಲ್ಲದೇ ಬದುಕುವ ಎಡಬಿಡಂಗಿಗಳಾಗುತ್ತೇವೆ. ಶಕ್ಯವಿದ್ದರೆ, ನಿಮ್ಮ ಅಮೇರಿಕದ ಒಬ್ಬ ಅಧ್ಯಕ್ಷ ಹೇಳಿದಂತೆ, 'ದೇಶ ನಿಮಗಾಗಿ ಏನು ಮಾಡಿತೆಂದು ಕೇಳಬೇಡಿ, ನೀವು ನಿಮ್ಮ ದೇಶಕ್ಕೆ ಏನು ಮಾಡಿದ್ದೀರೆಂದು ಕೇಳಿಕೊಳ್ಳಿ' .

5 comments:

 1. "ದೇಶ ನಿಮಗಾಗಿ ಏನು ಮಾಡಿತೆಂದು ಕೇಳಬೇಡಿ, ನೀವು ನಿಮ್ಮ ದೇಶಕ್ಕೆ ಏನು ಮಾಡಿದ್ದೀರೆಂದು ಕೇಳಿಕೊಳ್ಳಿ"
  ಈ ಮಾತನ್ನು ನೀವು ಸಾವಿರ ಸಲ ಹೇಳಿದರೂ ಸರಿ! ಇದೆಲ್ಲ ಬೇರೆಯವರಿಗೆ ಅನ್ವಯಿಸುವುದು . ನಮಗಲ್ಲ. ಹಾಗಂತ ಉಪದೇಶ ಮಾಡಲು ನಮಗೆ ಒಂದಲ್ಲ ಎರರೆಡಡು ನಾಲಿಗೆ ಇರುತ್ತದೆ!
  ಹೆಚ್ಚಿನ NRIಗಳು ಭಾರತಕ್ಕೆ ಬರುವಾಗಲ್ಲೆಲ್ಲಾ ಈ ಮಾತನ್ನು(ನೀವು ಬರೆದ ಮಾತನ್ನೇ) ಹೇಳುತ್ತಿರುತ್ತಾರೆ. ಅಲ್ಲಿನ ಮುಖ್ಯ ವಾಹಿನಿಯಲ್ಲೇ ಒಂದಾಗಿ ಹೋದ ಇವರು ನಮ್ಮ ಹಬ್ಬಗಳಿರಲಿ ಭಾಷೆಯನ್ನೇ ಮರೆತು ಬಿಡುತ್ತಾರೆ. ( ಇದಕೆಲ್ಲಾ ಅಪವಾದಗಳು ಖಂಡಿತ ಇರುತ್ತದೆ) ಹಾ! ದೀಪಾವಳಿ ಮೊದಲಾದ ಮುಖ್ಯ ಹಬ್ಬಗಳನ್ನು ಆಚರಿಸುತ್ತಾರೆ. ಯಾಕೆಂದರೆ ಅದಕ್ಕೊಂದು glamorous touch ಇರುತ್ತದೆ. ರಜೆಗೆ ಬಂದ ಇವರು ಇಲ್ಲಿನ ಶೆಖೆ, ರಸ್ತೆ, ನೀರು ಮೊದಲಾದ ವಿಷಯಗಳ ಬಗ್ಗೆ ಅಸಮಧಾನ ಮಾಡುವುದು ನೋಡಿದರೆ ಹುಟ್ಟಿದಾರಭ್ಯ ಇವರು ವಿದೇಶದಲ್ಲೇ ಇದ್ದ್ದಿರಬೇಕೆಂದು ತೋರುತ್ತದೆ! ಇದರ ಅರ್ಥ ನಾವೆಲ್ಲಾ ವಿದೇಶದಲ್ಲಿದ್ದ ನಮ್ಮವರ ಬಗ್ಗೆ ಅಸೂಯೆ ಹೊಂದಿದ್ದಾರೆಂದಲ್ಲ.... ಆದರೂ ಒಮ್ಮೊಮ್ಮೆ ನಮ್ಮವರ ನಡವಳಿಕೆಯ ಬಗ್ಗೆ ತುಂಬಾ ಬೇಸರವಾಗುತ್ತದೆ.....
  ಏನಾಗಲಿ, ನಿಮ್ಮ ದೇಶಾಭಿಮಾನ ಕಂಡು ತುಂಬಾ ಸಂತೋಷವಾಯಿತು....ಅದರಲ್ಲೂ ಕನ್ನಡದ ಮೇಲಿನ ಅಕ್ಕರೆ ನೋಡಿ ಆಶ್ಚ್ರರ್ಯ ಮತ್ತು ಆನಂದ ಎರಡೂ ಆಗುತ್ತಿದೆ! ಬಹುಶಃ ಒಬ್ಬ ವೈದ್ಯನಾಗಿ ಕನ್ನಡದಲ್ಲಿ ಬ್ಲಾಗ್ ಬರೆಯುವರು ಬಹಳ ಅಪರೂಪ ಎಂದು ತೋರುತ್ತದೆ.

  ReplyDelete
 2. ಶೀಲಾ ಅವರೇ,
  ತಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು. ಇಂಥದನ್ನೆಲ್ಲ ದಿನವೂ ನೋಡಿ ಇಲ್ಲಿ ಯಾರೂ ಹಂಚಿಕೊಳ್ಳುವರಿಲ್ಲದೇ, ಬ್ಲಾಗಿಸಿದರೆ ಮನಸ್ಸಿಗೂ ಸಮಾಧಾನ, ಯಾರಾರರೂ ಓದಿ ಪ್ರತಿಕ್ರಿಯಿಸಿದರೆ ತುಂಬ ಖುಷಿ.
  ತಮ್ಮ ಬ್ಲಾಗು ತುಂಬ ಚೆನ್ನಾಗಿದೆ.
  ಕೇಶವ

  ReplyDelete
 3. ಡಾಕ್ಟ್ರೆ, ಮದ್ದು ಚೆನ್ನಾಗಿ ಕೊಟ್ಟಿದ್ದೀರಿ.ತ್ಯಾಂಕ್ಸ್.

  ReplyDelete
 4. ಮಲ್ಲಿಕಾರ್ಜುನವರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಯಿಂದಾಗಿ ನಿಮ್ಮ ಬ್ಲಾಗೂ ಸಿಕ್ಕಿತು, ತುಂಬ ಚೆಂದದ ಬ್ಲಾಗು ಮಾಡಿಕೊಂಡಿದ್ದೀರಿ.- ಕೇಶವ

  ReplyDelete
 5. kulakarniyavare nimma dEshaabhimaanakke nanna tumbu hridayada namskaaragaLu...

  nimma abhipraayagaLu bahaLa oLLeya samnjasavaada kaaraNa neeDutta saagiddannu kandu santoshavaayitu...

  ReplyDelete