Saturday, January 05, 2008

ಪರದೇಸೀ ಪುಟಗಳು

ಅಬ್ದುಲ್ ರಶೀದ್ ಹೊಣೆಗಾರಿಕೆಯಲ್ಲಿ ಸುಂದರವಾಗಿ ಅರಳುತ್ತಿರುವ ಕೆಂಡಸಂಪಿಗೆ ಎಂಬ ಸಾಂಸ್ಕೃತಿಕ ಜಾಲ್ಪತ್ರಿಕೆಯಲ್ಲಿ ಬರೆಯಲು ನನ್ನನ್ನೂ ಸೇರಿಸಿಕೊಂಡಿದ್ದಾರೆ. ಅದರಲ್ಲಿ ನಿಯಮಿತವಾಗಿ ಬರೆಯಿರಿ ಎನ್ನುವುದು ಅವರ ಪ್ರೀತಿಯ ಆರ್ಡರ್! ನಾನೆಂದೂ ನಿಯಮಿತವಾಗಿ ಬರೆದವನಲ್ಲ. ಏನಾಗುತ್ತೋ ನೋಡೋಣ! ಈ ಪುಟದಲ್ಲಿ ಅಲ್ಲಿನ ಬರಹಗಳ ಕೊಂಡಿ ಕೊಡುತ್ತೇನೆ.

ಪರದೇಸೀ ಪುಟ ೧: ಇರುವುದೆಲ್ಲವ ಬಿಟ್ಟು…
ಪರದೇಸೀ ಪುಟ ೨: ಲಂಡನ್ನಿನಲ್ಲಿ ತಿಗಣೆಗಳು!
ಪರದೇಸೀ ಪುಟ ೩: ಗಂಡುಸಾದರೆ ನಿನ್ನ ಬಲಿಕೊಡುವೆಯೇನು?
ಪರದೇಸೀ ಪುಟ ೪: ಓದುಗರೊಬ್ಬರು ಕಂಡ ಲಂಕೇಶ್

ಇರುವುದೆಲ್ಲವ ಬಿಟ್ಟು...    
ಕೇಶವ ಕುಲಕರ್ಣಿ
ಗುರುವಾರ, 27 ಮಾರ್ಚ್ 2008 (05:37 IST)
೨೦೦೭ರ ಕೊನೆಯ ರಾತ್ರಿ. ಇಂಗ್ಲಂಡಿನಲ್ಲಿ ಹೊರಗೆ ಕೊರೆಯುವ ಚಳಿ. ಮನೆಯೊಳಗೆ ಬೆಚ್ಚಗೆ ಬಿಸಿ. ಗಂಟಲೊಳಗೆ ಬಿಸಿಯಾದ ಗುಂಡು. ಯಥಾಪ್ರಕಾರ, "ಭಾರತ ಆರ್ಥಿಕವಾಗಿ ಯದ್ವಾ ತದ್ವಾ ಬೆಳೆದಿದೆ. ಬೆಂಗಳೂರಿನ ನೆಲ ಬರ್ಮಿಂಗ್ ಹ್ಯಾಂನ ಮನೆಗಳಿಗಿಂತ ದುಬಾರಿ. ಇಲ್ಲಿನ ಕ್ವಾಲಿಫಿಕೇಶನ್ ತೊಗೊಂಡು ವಾಪಸ್ಸು ಹೋಗಲು ಈಗ ಬೆಸ್ಟ್ ಟೈಮು" ಎಂದೆಲ್ಲ ಬ್ರಿಟೀಷ್ ನಾಗರೀಕತೆಯನ್ನು ಪಡೆದ ಅಥವಾ ಆ ಪ್ರಾಸೆಸ್ ನಲ್ಲಿರುವ ವೈದ್ಯರುಗಳು ಭಾವುಕರಾಗಿ ಮಾತಾಡುತ್ತಿರುವಾಗ,
 ಒಬ್ಬ ತಾನೇ ಈ ಮಾತನ್ನು ಮೊದಲು ಬಾರಿ ಕಂಡು ಹಿಡಿದೆನೇನೋ ಎಂಬಂತೆ ದೊಡ್ಡದನಿಯಲ್ಲಿ, " ಯಾವ ಮಗನೂ ವಾಪಸ್ ಹೋಗೋದಿಲ್ಲ, ಆದರೂ ಪ್ರತಿ ಗುಂಡುಪಾರ್ಟಿಯಲ್ಲಿ ನಾಳೆನೇ ವಾಪಸ್ಸು ಹೋಗುವವರ ಥರ ಮಾತಾಡ್ತೀವಿ; ಯಾಕ್ ಗೊತ್ತಾ?  ಇಲ್ಲಿ ಏನೋ ಸಾಧಿಸ್ತೀವಿ ಅಂತ ಕನಸು ಕಂಡು ಬಂದ್ವಿ; ಬಂದ ಎಂಟ್-ಹತ್ತು ವರ್ಷದಲ್ಲಿ ಬಣ್ಣವೊಂದು ಬಿಟ್ಟು ಎಲ್ಲಾ ಥರ ಬದಲಾಗಿ ಸತ್ತುಹೋಗಿದೀವಿ. ಜೀವಾಂತವಾಗಿ ಇದ್ದೀವಿ ಅಂತ ತೋರಿಸಿಕೊಳ್ಳೊ ಒಂದೇ ಉಪಾಯ ಅಂದ್ರೆ, ನಾನು ಮುಂದಿನ ವರ್ಷ ಭಾರತಕ್ಕೆ ವಾಪಸ್ ಹೋಗುತ್ತೇನೆ ಅಂತ ಪ್ರತಿ ಗುಂಡುಕೂಟದಲ್ಲಿ ಕೊಚ್ಚಿಕೊಳ್ಳುವುದು" ಎಂದ.
ನಲವತ್ತರ ಆಸುಪಾಸಿನಲ್ಲಿರುವ ಮಧ್ಯವಯಸ್ಕರು ಹೇಳಿದರು, "ನಾನು ಇಂಡಿಯಾಗೆ ಹೋದಾಗಲೆಲ್ಲ ಯಾರಾದರೂ ನನ್ನ ಎಮ್‌ಬಿಬಿಎಸ್ ಗೆಳೆಯರು ಸಿಕ್ಕಿದಾಗ ಒಂದು ವಿಚಿತ್ರ ಭಾವನೆ ಆಗುತ್ತದೆ ಕಾಲದಲ್ಲಿ ಸಿಕ್ಕಿಕೊಂಡ ಹಾಗೆ. ಅಂದರೆ ನನ್ನ ಮಾತೆಲ್ಲ ನಾನು ಭಾರತದಲ್ಲಿದ್ದ  ದಿನಗಳ ಬಗ್ಗೆ ಮಾತ್ರ. ಅಲ್ಲಿಗೇ ನಮ್ಮ ವೇಳೆ ನಿಂತು ಹೋಗಿದೆ. ನಾನು ಈ ದೇಶಕ್ಕೆ ಬಂದು ಹನ್ನೆರೆಡು ವರ್ಷವಾಯಿತು. ಅಲ್ಲಿಂದ ಇಲ್ಲಿಯವರೆಗೆ ನಾನು ಮುಂದೆ ಹೋಗಿಯೇ ಇಲ್ಲ. ಕಾಲದಲ್ಲಿ ಸಿಕ್ಕಿಕೊಂಡಿದ್ದೇನೆ. ನನ್ನ ಗೆಳೆಯರಿಗೆ ಎಮ್‌ಬಿಬಿಎಸ್ ದಿನಗಳ ನೆನಪೇ ಇಲ್ಲ. ‘ಏನಮ್ಮ ಗುರು, ಎಷ್ಟೊಂದು ನೆನಪಿಟ್ಕೊಂಡಿದೀಯಾ' ಅಂತ ಆಶ್ಚರ್ಯಪಡ್ತಾರೆ. ಇದು ನನ್ನೊಬ್ಬನ ಸ್ಥಿತಿಯಲ್ಲ, ನಿಮ್ಮ ಅನುಭವಕ್ಕೂ ಬಂದಿರಬಹುದು". ಪರ್ಮನಂಟ್ ಕೆಲಸವಿದ್ದೂ ಭಾರತಕ್ಕೆ ಮರಳಿ ಹೋದವನ ಬಗ್ಗೆ ಮಾತು ತಿರುಗಿತು. 'ಜಾಣ ಕಣೋ ಅವ್ನು, ಕರೆಕ್ಟ್ ಟೈಮಿಗೆ ವಾಪಸ್ ಹೋದ' ಅಂತ ಒಬ್ಬ ಹೇಳಿದರೆ, ‘ಮುಠ್ಠಾಳ ಕಣೋ ಅವ್ನು, ಅಲ್ಲೇನಿದೆ - ಸೊಳ್ಳೆ, ಹೊಗೆ, ಧೂಳು, ಟ್ರಾಫಿಕ್ ಜಾಂ, ದರಿದ್ರ ರಸ್ತೆಗಳು, ಪವರ್ ಕಟ್, ಸೊಳ್ಳೆ, ಇಂಫೆಕ್ಷನ್' ಅಂತ ಇನ್ನೊಬ್ಬ. ‘ನೋಡ್ತಾ ಇರು, ಇನ್ನೆರೆಡು ವರ್ಷದಲ್ಲಿ ವಾಪಸ್ ಇಲ್ಲಿಗೇ ಬರ್ತಾನೆ' ಅಂದ ಮಗದೊಬ್ಬ.
ಹುಟ್ಟಿದ ಹಳ್ಳಿಯಲ್ಲಿ ಕಾಲೇಜಿಲ್ಲವೆಂದು ಪಟ್ಟಣಕ್ಕೆ ಬಂದು, ಪಟ್ಟಣದಲ್ಲಿ ಮೆಡಿಕಲ್ ಕಾಲೇಜಿಲ್ಲವೆಂದು ನಗರಕ್ಕೆ ಬಂದು, ನಗರದ ತೆವಲುಗಳೆಲ್ಲವನ್ನೂ (ಕಾರು, ಮನೆ, ಶೇರು, ಬ್ಯಾಂಕ್ ಬ್ಯಾಲೆನ್ಸು, ವೀಕೆಂಡ್ ಪಾರ್ಟಿ ಇತ್ಯಾದಿ) ಅಂಟಿಸಿಕೊಂಡು ಆ ಎಲ್ಲ ತೆವಲುಗಳ ಮೂಲ ದುಡ್ಡು ಎಂದು ಖಾತರಿ ಮಾಡಿಕೊಂಡು, ಕನಸುಗಳ ಗಂಟು ಕಟ್ಟಿ, ಒಂದು ಪೌಂಡಿಗೆ ೮೦ ರೂಪಾಯಿ ತರುವ ದೇಶಕ್ಕೆ ಬಂದು, ಇಲ್ಲಿರಬೇಕಾದ ರಿಯಾಲಿಟಿಗೆ ಅಂಜಿ, ಅಲ್ಲಿನ ಬದುಕಿಗೆ ಮರಳುವ ಸುಳ್ಳು ರೊಮ್ಯಾಂಟಿಸಿಸಂನಲ್ಲಿ, ಬಾಲಿವುಡ್ಡಿನ ಹಾಡುಗಳಿಗೆ ಕುಣಿದು, ಕುಡಿದು, ‘ಹ್ಯಾಪಿ ನ್ಯೂ ಇಯರ್' ಅಂತ ಗೆಳೆಯರನ್ನು ತಬ್ಬಿಕೊಳ್ಳುತ್ತಿರುವಾಗ ನನ್ನೂರಿನ ಮನೆಯ ಹತ್ತಿರದ ಮಸೀದಿಯಲ್ಲಿ ಈಗಾಗಲೇ ನಮಾಜಿನ ಟೈಮಲ್ಲವೇ? ಆ ನಮಾಜಿನದನಿಯನ್ನೇ ಅಲಾರಾಂ ತರಹ ಉಪಯೋಗಿಸುವ ನನ್ನಜ್ಜಿ ‘ನಾರಾಯಣಾ, ಮತ್ತೊಂದು ದಿನ ಶುರುವಾತs' ಎಂದು ಈಗಾಗಲೇ ಎದ್ದಿರಬಹುದಲ್ಲವೇ? ಎಂದು ನೆನಪಾಗಿ ಹೊಸ ವರ್ಷ ಶುರುವಾಯಿತು.
ಹಿಂದಿನ ಪ್ರತಿಕ್ರಿಯೆಗಳು
sudhanva:
January 5th, 2008 at 4:06 pm
Nammaju-Naaraayana, Ajji-Mommaga, England-India, its fine.
gundu kootada pundarige sharanu !
DR Hemant:
January 7th, 2008 at 2:46 pm
Dear Keshav
ANISIKE ANUBHVA ELLA CHANNAGIDE.
WISH YOU HAPPY NEW YEAR2008
Dr Hemant
Ravi:
January 9th, 2008 at 10:05 am
koneya pyarada REALITY chennagide - satya erabahudeno anisuttade !!


೨೦೦೪ರಲ್ಲಿ  ಪಿ.ಎಲ್‌.ಎ.ಬಿ  ಬರೆಯಲು ನಾನು ಇಂಗ್ಲಂಡಿನಲ್ಲಿ ಇಳಿದಿದ್ದು ರಾಜ್-ಕುಮಾರ್ ಹುಟ್ಟು ಹಬ್ಬದಂದು. ನನ್ನ ಕ್ರಿಕೆಟ್ ಪಂಡಿತ ಗೆಳೆಯ ಹೇಳಿದ್ದು, ಸಚಿನ್ ತಂಡೂಲ್ಕರ್ ಬರ್ಥ್-ಡೇ ಎಂದು. ಲಂಡನ್ನಿನ ಹೀಥ್ರೋ ಏರ್‌ಪೊರ್ಟಿನಿಂದ ನಮ್ಮ ಹೊಸ ಇಂಜಿನಿಯರಿಂಗ್ ಗೆಳೆಯನ ಮಾತನ್ನು ನಂಬಿ ಹೀತ್ರೊ-ಎಕ್ಸ್-ಪ್ರೆಸ್ ಗೆ ೧೨೦೦ ರೂಪಾಯಿ (೧೫ ಪೌಂಡು) ತೆತ್ತು ಪ್ಯಾಡಿಂಗ್ಟನ್ನಲ್ಲಿ ಇಳಿದೆವು. ನಾವಿನ್ನೂ ಹೋಗಬೇಕಾಗಿರುವುದು ಈಸ್ಟ್-ಹ್ಯಾಮ್ ಗೆ! ಮತ್ತೆ ಟಿಕೆಟ್ ತೊಗೋಬೇಕಂತೆ! ಕಂಪನಿ ಕೊಡುವ ದುಡ್ಡಿನಿಂದ ಆರಾಮವಾಗಿ ಓಡಾಡುವ ಇಂಜಿನಿಯರ್ ಸಂತತಿಯ ಮೇಲೇ ಇಲ್ಲದ ಕೋಪ ಬಂತು. ಬಡವೈದ್ಯನ ಕೋಪ ರೋಗಿಗೆ ಮೂಲ ಎನ್ನುವಂತೆಯೂ ಇಲ್ಲ, ಏಕೆಂದರೆ ಈ ದೇಶದಲ್ಲಿ ನಾವಿನ್ನೂ ವೈದ್ಯರಲ್ಲ, ಪಿ.ಎಲ್‌.ಎ.ಬಿ ಪಾಸಾಗದ ಹೊರತು, ನಾವು ಬರೀ ಪ್ರವಾಸಿಗರು ಮಾತ್ರ.

ಉಸ್ಸ್.. ಎಂದು ತೇಕುತ್ತಾ ನಮ್ಮನ್ನು ನೋಡಿಕೊಳ್ಳುವ ಹೊಣೆ ಹೊತ್ತ ಈಸ್ಟ್-ಹ್ಯಾಂನಲ್ಲಿರುವ ಆಫೀಸಿನ ಬಾಗಿಲಲ್ಲಿ ಇಣುಕಿದರೆ, ಅಲ್ಲಿ ನಮ್ಮೂರ ಸಂತೆಗಿಂತಲೂ ಗಲೀಜಾದ ದೊಡ್ಡ ದೊಡ್ಡಿಯಂತಹ ರೂಮಿನಲ್ಲಿ ನಮ್ಮಂಥ (ಭಾರತ ಮತ್ತು ಪಾಕಿಸ್ತಾನ) ನೂರಾರು ಜನರ ಸಂತೆ. ಕೆಲವರು ಬಿಪಿ ನೋಡುವುದು ಹೇಗೆ, ಕಿವಿ ನೋಡುವುದು ಹೇಗೆ, ಕಣ್ಣು ನೋಡುವುದು ಹೇಗೆ ಎಂದು ಇನ್ನೊಬ್ಬರ ಮೇಲೆ ತಮ್ಮ ಪ್ರಹಾರವನ್ನು ಮಾಡುತ್ತಿದ್ದರು; ಇನ್ನೂ ಕೆಲವರು ಅಲ್ಲಿ ಸಾಲಾಗಿರುವ ಕಂಪ್ಯೂಟರ್-ಗಳಿಗೆ ಕಿವಿ ಹಾಕಿಕೊಂಡು ಧ್ಯಾನದಲ್ಲಿದ್ದರು. ಕೆಲವರು ನಮ್ಮನ್ನು ತಮ್ಮ (ಇನ್ನೂ ಸಿಕ್ಕಿರದ) ಕೆಲಸವನ್ನು ಕಸಿದುಕೊಳ್ಳಲು ಬಂದಂಥ ವೈರಿಗಳಂತೆ ನೋಡಿದರೆ, ಇನ್ನೂ ಕೆಲವರು "ನಮಗೇ ಇನ್ನೂ ಕೆಲಸ ಸಿಕ್ಕಿಲ್ಲ, ನೀವಿನ್ನೂ ಬಚ್ಚಾಗಳು" ಎನ್ನುವಂತೆ ಕನಿಕರದಿಂದ ನೋಡಿದರು. ನಾವು ಬಡಪಾಯಿಗಳಂತೆ ಹಲ್ಲುಕಿರಿದು ನಿಂತೆವು. ಅಷ್ಟರಲ್ಲಿ ಫೋನಿನಲ್ಲಿ ತನ್ನ ಸಂಭಾಷಣೆಯನ್ನು ಮುಗಿಸಿ ಅಫೀಸಿನಲ್ಲಿ ಕೂತಿದ್ದ ಒಬ್ಬ (ಆತ ಜವಾನನಿಂದ ಹಿಡಿದು ಮ್ಯಾನೇಜರ್ ವರೆಗೆ ಎಲ್ಲವೂ ಆಗಿದ್ದ ಎಂದು ನಂತರ ಗೊತ್ತಯಿತು), ನನ್ನತ್ತ ತಿರುಗಿದ. ನನ್ನ ಅಡ್ಡಹೆಸರು "ಕುಲಕರ್ಣಿ" ಎಂದು ಗೊತ್ತಾಗುತ್ತಲೇ ಚಕಚಕನೆ ಮರಾಠಿಯಲ್ಲಿ ಮಾತಾಡಿದ. ನನಗೆ ತಲೆಬುಡ ಅರ್ಥವಾಗದೇ, ನಾನು " ಮಿ ಕಾನಡಿ" ಎಂದೆ. ಆತ ದೊಡ್ಡದಾಗಿ ನಕ್ಕು ಇಂಗ್ಲೀಷಿನಲ್ಲಿ ಮಾತಾಡಲು ಶುರುವಿಟ್ಟು, ನನ್ನ ರೂಮಿನ ಬೀಗದ ಕೈ ಕೊಟ್ಟ. "ಕೃತಾರ್ಥನಾದೆ" ಎಂಬ ಮುಖಮಾಡಿ ನಮ್ಮ ದೊಡ್ಡ ದೊಡ್ಡ ಲಗೇಜುಗಳನ್ನು ಎಳೆದುಕೊಂಡು ನಮ್ಮ ರೂಮಿನ ಕಡೆ ಹೊರಟೆವು.
 ಅಲ್ಲಿ ನೋಡಿದರೆ ಅದೊಂದು ಚಿಕ್ಕ ಮನೆ (ಇಂಗ್ಲಂಡಿನಲ್ಲಿ ಬಹುತೇಕ ಎಲ್ಲ ಮನೆಗಳೂ ಚಿಕ್ಕವೇ ಎಂದು ಗೊತ್ತಾದದ್ದು ನಂತರ), ಅಂತ ಚಿಕ್ಕ ಮನೆಯಲ್ಲಿ ರೂಮಿಗೆ ಮೂವರಂತೆ, ಒಟ್ಟು ೧೨ ಜನ. ಅಷ್ಟು ಜನಕ್ಕೆ ಸೇರಿ ಒಂದು ಬಚ್ಚಲುಮನೆ ಕಮ್ ಪಾಯಿಖಾನೆ, ಒಂದು ಅಡಿಗೆಮನೆ! ನನಗೆ ಯಾವ ರೂಮು, ಬೆಡ್ಡು ಗೊತ್ತಾಗಲಿಲ್ಲ. ಅಲ್ಲಿನ ಜನರೆಲ್ಲ ನನ್ನ ಥರದವರೇ - ಭಾರತದ ಮೂಲೆ ಮೂಲೆಯಿಂದ ಇಂಗ್ಲಂಡಿಗೆ ಧನದಾಸೆಯ ಕನಸು ಕಟ್ಟಿದ ಧನ್ವಂತ್ರಿಗಳೇ! ಒಬ್ಬ ಇನ್ನೇನು ಮುರಿದು ಬೀಳಲಿರುವ ಮಂಚ ತೋರಿಸಿ, ಇದೇ ಉಳಿದಿರೋದು ಎಂದ. ಅದಕ್ಕೆ ಹಾಸಲು ಹೊದಿಕೆಯಾಗಲೀ, ಹೊದ್ದುಕೊಳ್ಳಲು ಕ್ವಿಲ್ಟ್ ಆಗಲೀ ಇರಲಿಲ್ಲ.  ಕೋಪದಲ್ಲಿ ಫೋನಿಸೋಣ ಎಂದರೆ, ಅದಕ್ಕಾಗುವ ದುಡ್ಡನ್ನು ರೂಪಾಯಿಗೆ ಕನ್ವರ್ಟ್ ಮಾಡಿ, ಬೇಡ ಎಂದು ನಿರ್ಧರಿಸಿ, ಲಗೇಜನ್ನು ಅಲ್ಲಿಯೇ ಬಿಟ್ಟು ಮತ್ತೆ ಆಫೀಸಿನತ್ತ ನಡೆದೆ.

ತಲೆ ಸಿಡಿಯುತ್ತಿತ್ತು, "ಎಲ್ಲಿಗೆ ಪಯಣ, ಯಾವುದೋ ದಾರಿ, ಏಕಾಂಗಿ ಸಂಚಾರಿ" ಎಂದು ಪಿ.ಬಿ ಒಂದು ಕಿವಿಯಲ್ಲಿ ಹಾಡಿದರೆ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?" ಎಂದು ಅಡಿಗರು ಅಡಿಗಡಿಗೆ ಇನ್ನೊಂದು ಕಿವಿಯಲ್ಲಿ ಪ್ರಶ್ನೆ ಹಾಕಿ ತಿವಿಯುತ್ತಿದ್ದರು. ಎರಡನ್ನೂ ಬಿಟ್ಟು, " ನಮ್ಮ ಹಳ್ಳಿ ಊರ ನಮಗ ಆssರಾssಮ, ಯಾತಕ್ಕವ್ವಾ ಲಂಡನ್ನು-ಈಸ್ಟ್-ಹ್ಯಾಮ" ಎಂದು ನನ್ನದೇ ಲಿರಿಕ್ಸ್ ಹಾಡಿಕೊಂಡು ಆಫೀಸು ತಲುಪಿದೆ. ನನ್ನ ಮರಾಠಿ ಅಡ್ಡ ಹೆಸರಿನ ಉಪಯೋಗ ತೆಗೆದುಕೊಂಡು ಅವರದೇ ಇನ್ನೊಂದು ಮನೆಯ ಕೀ ತೆಗೆದುಕೊಂಡೆ. ಮತ್ತೆ ಶುರುವಾಯಿತು, ಲಗೇಜನ್ನು ಎಳೆಯುವ ಕೆಲಸ. ಆ ಮನೆಯೂ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಆದರೆ ಬೆಡ್ಡಿಗೆ ಹಾಸಿಗೆಯಿತ್ತು, ಹೊದಿಕೆಯಿತ್ತು. ಅಲ್ಲಿನ ಧನ್ವಂತ್ರಿಗಳ ಪರಿಚಯವಾಯಿತು. ಇಬ್ಬರು ಪರಿಚಿತ ಕನ್ನಡಿಗರೇ! ಅವರ ನಳಪಾಕ (ಅನ್ನ- ಸಾಂಬಾರ್)ದಲ್ಲಿ ಉಂಡಿದ್ದಾಯಿತು. ಹೊಟ್ಟೆ ಖಾಲಿ ಮಾಡಲು ಪಾಯಿಖಾನೆಗೆ ಹೋಗುತ್ತಿದ್ದಂತೆ ಎರಡು ದೊಡ್ಡ ಇಲಿಗಳು (ಹೆಗ್ಗಣಗಳೇ ಇರಬೇಕು) ಓಡಿ ಅಟ್ಟ ಸೇರಿದವು. ಬರುವ ಸಂಡಾಸು ಮತ್ತೆ ಒಳಗೆ ಸೇರಿತು.

ಪ್ರಯಾಣದ ದಣಿವು, ಲಂಡನ್ನಿನ ಟ್ಯೂಬ್ (ಲಂಡನ್ನಿನ ಭೂ-ಗತ ರೇಲುವೇ) ಗೆ ತೆತ್ತ ದುಡ್ಡು, ಲಗೇಜನ್ನು ಎಳೆದ ಭುಜನೋವು ಎಲ್ಲ ಸೇರಿ ಜೋರು ನಿದ್ದೆ.  ಮಧ್ಯರಾತ್ರಿಯ ಸಮಯ - ಆಗಾಧ ನೋವಿನಿಂದ ಎಚ್ಚರವಾಯಿತು. ಯಾರೋ ನನ್ನ ಕಾಲು, ತೊಡೆ, ಭುಜ, ಕೈ, ಕತ್ತಲ್ಲೆಲ್ಲ ಜೋರಾಗಿ ಕಚ್ಚುತ್ತಿದ್ದಾರೆ. ಎದ್ದು ಕುಳಿತೆ, ನನ್ನ ರೂಮಿನ ಉಳಿದ ಇಬ್ಬರಿಗೂ ಗಾಢ ನಿದ್ರೆ. ಲೈಟು ಹುಡುಕಿ ಹಾಕಿ ನೋಡಿದರೆ...ತಿಗಣೆಗಳ ಸಾಮ್ರಾಜ್ಯ! ರಾತ್ರಿ ಪೂರ ನನಗಿನ್ನೇನು ಕೆಲಸ, ನನಗೂ ತಿಗಣೆಗಳಿಗೂ ಯುದ್ಧ - ಕೈ ಪೂರ ರಕ್ತಸಿಕ್ತ!! ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಪದ್ಯದಲ್ಲಿ ಬರುವಂತೆ ನಾನು ಇಲಿಯನ್ನು ನೋಡಿದ್ದೂ ಆಯಿತು, ಹೆದರಿದ್ದೂ (ನಾನು ಹೆಗ್ಗಣಗಳನ್ನು ಹೆದರಿಸಲು ಬೆಕ್ಕೇ?) ಆಯಿತು. ಇನ್ನೂ ಒಂದು ಕೈ ಮುಂದೆ ಹೋಗಿ, ತಿಗಣೆಗಳನ್ನೂ ನೋಡಿದ್ದಾಯಿತು, ಕೊಂದದ್ದಾಯಿತು.

ನಿದ್ದೆ ಬಂದಾಗ ಬೆಳಗಿನ ಜಾವ. ಕಣ್ಣು ಬಿಟ್ಟಾಗ ಮತ್ತೆ ನನ್ನ ಸುತ್ತ ತಿಗಣೆಗಳು. ಲಂಡನ್ನಿನ ಈಸ್ಟ್-ಹ್ಯಾಂನಲ್ಲಿ ತೆವಳಿ ಅಡಗಿಕೊಂಡು, ದೇವಸ್ಥಾನ ಗುರುದ್ವಾರಗಳಲ್ಲಿ ಕಣ್ತಪ್ಪಿಸಿ ಊಟಮಾಡಿ, ಕೆಲಸದ ಪರ್ಮಿಟ್ ವೀಸಾ ಇಲ್ಲದಿದ್ದರೂ ೩-೪ ಪೌಂಡುಗಳಿಗೆ ಕೂಲಿ ಕೆಲಸಮಾಡಿ ಗೂಡುಗಳಲ್ಲಿ ಅವಿತುಕೊಳ್ಳುವ ಅಸಂಖ್ಯಾತ ಭಾರತದ ಧನ್ವಂತ್ರಿ ತಿಗಣೆಗಳು.  ಕಾಪ್ಕಾನ "ಮೆಟಾಮಾರ್ಫಾಸಿಸ್" ಕತೆಯಂತೆ ನಾನೂ ತಿಗಣೆಯಾದೆ, ಅದೂ ಒಂದೇ ದಿನದಲ್ಲಿ!?
(ಚಿತ್ರ ಕೃಪೆ-ದ ಹಿಂದೂ)
ಹಿಂದಿನ ಪ್ರತಿಕ್ರಿಯೆಗಳು
ಜೋಗಿ:
February 8th, 2008 at 11:44 pm
ಸೊಗಸಾಗಿದೆ ಲೇಖನ. ನಗೆಯ ನಡುವೆಯೇ ಒಂದು ತೆಳು ವಿಷಾದ.
Supriya:
February 9th, 2008 at 1:11 am
Good insight into Desi diaspora in UK. Aren't there any regulations on how many people can stay in a house? I guess Desis will always find a way to break the rule! 
Your experience reminds me of what Hispanic people go through here in US. They also live like rats in small houses! I personally knew an incident where 12 hispanic dudes were living in 2 bed room appt!!
ಸುಪ್ರೀತ್.ಕೆ.ಎಸ್:
February 10th, 2008 at 12:19 am
ದೂರದ ಬೆಟ್ಟ ನುಣ್ಣಗೆ!
http://uniquesupri.wordpress.com/
ಪಯಣಿಗ:
February 10th, 2008 at 12:49 am
ಅಗಣಿತ ತಿಗಣೆಗಳು-ಅಪ್ಲಿಕೇಶನ್ನುಗಳ ಲೆಕ್ಕದಲ್ಲಿ ಆರ೦ಭವಾದ ನಮ್ಮ೦ತ ನೂರಾರು ವಲಸೆ-ವೈದ್ಯರ ಬವಣೆಗೆ ಒಳ್ಳೆ ಹಾಸ್ಯದ ಲೇಪನದ ಲೇಖನ.....ಅದು ೨೦೦೩-೦೪
ಈಗ, ಈಸ್ಟ-ಹ್ಯಾಮಿನ ಅಡ್ಡ ಮುಚ್ಚಿದೆ, ಪರದೇಶಿ ವೈದ್ಯರಿಗೆ ಯು.ಕೆ ಬಾಗಿಲು ಮುಚ್ಚಿದ೦ತೆ!
madhav:
February 10th, 2008 at 12:18 pm
Indiadalli iruva janakke UK ondu doorada betta. UK poorti sophesticated ide endu tilidiruttare. Aa bettadallu bavane,
horatada badukide endu goththaytu.
PONDSE DODAPPA
ಸತೀಶ್:
February 11th, 2008 at 7:56 am
ಚೆನ್ನಾಗಿದೆ.
ಡಾಕ್ಟರರ ರಕ್ತವನ್ನು ಕುಡಿದ ತಿಗಣೆಗಳನ್ನು ಭೇಟಿಯಾಡಿದ ನಿಮ್ಮ ವರಸೆ.
Wadiraj:
February 11th, 2008 at 3:44 pm
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು. ಆ ಮುರಳಿ ಯಾವುದು?
ವಿದೇಶದಲ್ಲಿ ತಿಗಣೆಯಾಗುವದಕ್ಕಿ೦ತ ನಮ್ಮ ದೇಶದಲ್ಲಿ ಇಲಿಯಾಗಿರುವುದು ಲೇಸು.
ವಾದಿರಾಜ
anjali:
March 19th, 2008 at 2:15 pm
hmmm tumba chennagide kulakarni sir...
 

ಕನ್ನಡವನ್ನು ಪ್ರಾದೇಶಿಕ ಸೊಗಡಿಲ್ಲದೇ, ಕಾವ್ಯದ ಭಾಷೆಯಿಲ್ಲದೇ ಸರಳವಾಗಿ ಬರೆಯಬೇಕು ಎಂದು ಕಾರಂತರು ವಾದಿಸಿ ಹಾಗೇ ಬರೆದರಂತೆ. ಹಾಗೇನಾದರೂ ಎಲ್ಲ ಬರಹಗಾರರೂ ಅವರ ಮಾತನ್ನು ಕೇಳಿದ್ದರೆ ಬೇಂದ್ರೆ "ಚಹಾದ ಜೊತಿ ಚೂಡಾದಂಗ ನೀ ನನಗಂದಾವ" ಅಂತ ಬರೆಯುತ್ತಲೇ ಇರಲಿಲ್ಲ. ಕನ್ನಡ- ಕನ್ನಡಿಗರಿಗಾಗಿ ಮಾತ್ರ ಎಂದು ಕನ್ನಡ ಹೋರಾಟಗಾರರ ಫ್ಯಾಸಿಸಂನಲ್ಲಿ ಎಲ್ಲ ಕನ್ನಡಿಗರೂ ಕೈಜೋಡಿಸಿದ್ದರೆ, ನಮಗೆ ಮಾಸ್ತಿ, ಬೇಂದ್ರೆ, ಕಾರ್ನಾಡ್ ಸಿಗುತ್ತಿರಲಿಲ್ಲ. ಕನ್ನಡದಲ್ಲಿ ಬರೀ ಕನ್ನಡ ಪದಗಳಿರಬೇಕು ಎಂಬ ಅಚ್ಚ ಕನ್ನಡಿಗರ ಮಾತುಗಳನ್ನು ಕೇಳಿದ್ದರೆ, ಕುವೆಂಪು ಕಾವ್ಯವೇ ಹುಟ್ಟುತ್ತಿರಲಿಲ್ಲ. ಇಂಗ್ಲೀಷ್ ಕನ್ನಡವನ್ನು ಕೊಲ್ಲುತ್ತಿದೆ ಎಂದು ಕರ್ನಾಟಕದಲ್ಲಿ ಇಂಗ್ಲೀಷನ್ನು ನಿಷೇಧಿಸಿದ್ದರೆ, ನಾನೀಗ ಇಂಗ್ಲಂಡಿನಲ್ಲಿ ಕೂತು ಕನ್ನಡದಲ್ಲಿ ಟೈಪಿಸುತ್ತಿರಲಿಲ್ಲ, ನೀವು ನಿಮ್ಮ ಗಣಕಗಳ ಮುಂದೆ ಕೂತು ಓದುತ್ತಲೂ ಇರಲಿಲ್ಲ.
ಈಗ ಭಾರತದಲ್ಲಿ ಬಹುತೇಕ ಮಧ್ಯಮ ವರ್ಗದ ಜನ ಮತ್ತು ಎಲ್ಲ ಶ್ರೀಮಂತರು ಓದುವ ಮಾಧ್ಯಮ - ಇಂಗ್ಲೀಷು, ಅಲ್ಲದೇ ಮನೆಯಲ್ಲೂ ಇಂಗ್ಲೀಷ್ ಮಾತಾಡುವ ಚಾಳಿ ಶುರುವಾಗಿದೆ, ಮಕ್ಕಳು ಇಂಗ್ಲೀಷನ್ನು ಬೇಗ ಕಲಿಯಲಿ ಎಂದು. ಮನೆಯಲ್ಲಿ ಇಂಗ್ಲೀಷ್ ಪತ್ರಿಕೆಗಳು ಮಾತ್ರ (ಮನೆಯಲ್ಲಿ ಮುದುಕ ಮುದುಕಿ ಇದ್ದರೆ ಅವರ ಸಲುವಾಗಿ ಕನ್ನಡ ಪತ್ರಿಕೆಗಳು ಬರಬಹುದು). ಟಿ ವಿ ಯಲ್ಲಿ ಇಂಗ್ಲೀಷ್ ವಾರ್ತೆಗಳು, ಇಂಗ್ಲೀಷ್ ಕಾರ್ಟೂನುಗಳು, ಆಗಾಗ ಹಿಂದಿ ಚಾನೆಲ್ಲುಗಳು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದರೂ ಒಂದೇ ಒಂದು ಕನ್ನಡ ಸಿನೆಮಾ ನೋಡದ, ಒಂದೇ ಒಂದು ಕನ್ನಡ ಪುಸ್ತಕ ಓದಿರದ, ಅಷ್ಟೇ ಏಕೆ ಒಂದೇ ಒಂದು ಸಲ ಕನ್ನಡ ದಿನಪತ್ರಿಕೆಗಳನ್ನು ಓದಿರದ ಬೇಕಾದಷ್ಟು ಕನ್ನಡಿಗರಿದ್ದಾರೆ,  ಅನಂತಮೂರ್ತಿಯವರ "ಭಾರತೀಪುರ"ದಲ್ಲಿ ಬರುವ ಪುರಾಣಿಕ್  ಎಂಬ ಪಾತ್ರ ಒಮ್ಮೆಯೂ ಇಂಗ್ಲಂಡನ್ನು ನೋಡಿರದಿದ್ದರೂ, ಇಂಗ್ಲಂಡಿನ ಗಲ್ಲಿ ಗಲ್ಲಿ ಗೊತ್ತಿರುವ ಪಾತ್ರದಂತೆ  ನಮ್ಮ ದೇಶದ ಮಧ್ಯಮ ಮತ್ತು ಉತ್ತಮ ವರ್ಗಗಳು ತಯಾರಾಗುತ್ತಿವೆ.
ಇಂಗ್ಲಂಡಿನಲ್ಲಿ ಬಹಳಷ್ಟು ಕನ್ನಡದ ಜನ ತಮ್ಮ ಮಕ್ಕಳ ಜೊತೆ ಮಾತಾಡುವುದು ಶುದ್ಧ ಇಂಗ್ಲೀಷಿನಲ್ಲಿ. ಅದಕ್ಕೆ ಅವರು ಕೊಡುವ ಕಾರಣ, ಮಗುವಿನ ಬೆಳವಣಿಗೆಗೆ ತೊಂದರೆಯಾಗಬಾರದು, ಮಗುವಿಗೆ ಕೀಳರಿಮೆ ಬರಬಾರದು; ಅಲ್ಲದೇ ಮಕ್ಕಳಿಗೆ ಎರೆಡೆರೆಡು ಭಾಷೆ ಕಲಿಯುವುದು ತುಂಬ ಕಷ್ಟವಾಗುತ್ತದಂತೆ. ಎ.ಕೆ. ರಾಮಾನುಜನ್ ಅಡುಗೆಮನೆ ಮಾತು ತಮಿಳು, ಹೊರಗಡೆ ಭಾಷೆ ಕನ್ನಡ, ಕಲಿತದ್ದು ಇಂಗ್ಲೀಷು ಮತ್ತು ಸಂಸ್ಕೃತ ಎಂದು ಎಲ್ಲೋ ಓದಿದ ನೆನಪು. ಯು ಆರ್ ಅನಂತಮೂರ್ತಿ ಬರೆಯುವಂತೆ ದಕ್ಷಿಣ ಕನ್ನಡದ ಜನ ತುಳು, ಕೊಂಕಣಿ, ಕನ್ನಡ ಭಾಷೆಗಳನ್ನು ಏಕಕಾಲಕ್ಕೆ ಮಾತಾಡುವುದರ ಜೊತೆ ಈಗ ಇಂಗ್ಲೀಷನ್ನೂ ಸರಾಗವಾಗಿ ಕಲಿಯುತ್ತಿದ್ದಾರೆ. ನಾನು ಸೌದಿ ಅರೇಬಿಯದಲ್ಲಿದ್ದಾಗ ಅಲ್ಲಿನ ಕನ್ನಡಿಗರು ತಮ್ಮ ಮಕ್ಕಳ ಜೊತೆ ಕನ್ನಡದಲ್ಲಿ ಮಾತಾಡುತ್ತಿದ್ದರು, ಮಕ್ಕಳು ಶಾಲೆಯಲ್ಲಿ ಇಂಗ್ಲೀಷ್ ಓದುತ್ತಿದ್ದರು, ಅರೇಬಿಕ್ ಅನ್ನೂ ಅಷ್ಟಿಷ್ಟು ಮಾತಾಡುತ್ತಿದ್ದರು. ಭಾರತದಲ್ಲಿ, ಗಲ್ಫ್ ದೇಶಗಳಲ್ಲಿ ಕಂಡುಬರದ ಕಷ್ಟ ಮುಂದುವರೆದ ಇಂಗ್ಲಂಡು-ಅಮೇರಿಕದಂಥ ದೇಶಗಳಿಗೆ ವಲಸೆ ಬರುತ್ತಿದ್ದಂತೆ ಶುರುವಾಗುವುತ್ತದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ನನ್ನಂತೆ ಇಲ್ಲಿ ವಲಸೆ ಬಂದ ತಮಿಳು ಹುಡುಗನೊಟ್ಟಿಗೆ ಅದೂ ಇದೂ ಮಾತಾಡುತ್ತಿರುವಾಗ ಮಾತು ಸಾಹಿತ್ಯದತ್ತ ತಿರುಗಿತು. ಹ್ಯಾರಿ ಪಾಟರ್ ಅದ್ಭುತ ಕತೆ ಎಂದ, ಜುಂಪಾ ಲಾಹಿರಿಯ ನೇಮ್-ಸೇಕ್ ಅನ್ನು ಹೊಗಳಿ ಹೊಗಳಿ ಹೊನ್ನಶೂಲಕ್ಕಿಕಿದ, ಕಿರಣ್ ದೇಸಾಯಿಯ ಇನ್ಹೆರಿಟನ್ಸ್ ಆಫ್ ಲಾಸ್ ಓದುತ್ತಿದ್ದೇನೆ, ತುಂಬಾ ಚೆನ್ನಾಗಿದೆ ಅಂದ; ನಾನು ಹೂಂಗುಟ್ಟುತ್ತಿದ್ದೆ,  ಕೊನೆಕೊನೆಗೆ ಸಲ್ಮಾನ್ ರಷ್ದಿಯಂತೆ, " The best Indian writing is in English" ಅನ್ನೋ ಅರ್ಥದಲ್ಲಿ ಹೇಳಿದ. ಆಗ ನಾನು ಕೇಳಿದೆ, " ನೀನು ನಿಮ್ಮ ತಮಿಳಿನ ಅಕಿಲಾಂಡನ್, ಜಯಕಾಂತನ್, ಸುಂದರ ರಾಮಸಾಮಿ, ಅಥವಾ ಮುತ್ತುಲಿಂಗಂ ಬರೆದ ಒಂದೇ ಒಂದು ಪುಸ್ತಕ ಓದಿದ್ದೀಯಾ? ಹಾಳಾಗಿ ಹೋಗಲಿ, ನಿನಗೆ ವೈರಮುತ್ತು ಗೊತ್ತಾ? ಕನ್ನಡದ ಆಸ್ತಿ ಮಾಸ್ತಿ ತಮಿಳರು ಗೊತ್ತಾ?" ಎಂದು, "ಎಂಬಿಬಿಎಸ್ ಮುಗಿಯುವವರೆಗೂ ಬೆಂಗಳೂರಿನಲ್ಲಿದ್ದೆಯಲ್ಲಾ, ಒಂದೇ ಒಂದು ಕನ್ನಡ ಪುಸ್ತಕದ ಹೆಸರು ಹೇಳು ನೋಡೋಣ" ಎಂದೆ. ಅದಕ್ಕೆ ಆತ ನೇರವಾಗಿ ಉತ್ತರಿಸುವ ಬದಲು, ತುಂಬ ಖಾರವಾಗಿ ಸಿಟ್ಟಿನಿಂದ, "ನಿಮಗೆ ಈ ದೇಶ ಇಷ್ಟವಿಲ್ಲದಿದ್ದರೆ ವಾಪಸ್ ಹೋಗಿ, ಇಲ್ಲಿ ಹಣ ಗಳಿಸಿ ಇಲ್ಲಿಗೇ ಬಯ್ಯುತ್ತೀರಲ್ಲಾ?" ಎಂದ. ಭಾಷೆಗಳ ಆಳದಲ್ಲಿ ಹುದುಗಿರುವ ಕೀಳರಿಮೆ/ ಹೆಗ್ಗಳಿಕೆ, ಎಕಾನಾಮಿಕ್ಸ್, ರಾಜಕೀಯ, ಬಂಡವಾಳಶಾಹಿತನ ಎಲ್ಲ ಒಂದೇ ಸಲ ಮುಖಕ್ಕೆ ರಪ್ಪನೆ ಹೊಡೆದಂತಾಯಿತು. ಭಾಷೆ ಎಷ್ಟು ಸಂಕೀರ್ಣವಲ್ಲವೇ?

ಮುಗಿಸುವ ಮುನ್ನ: ನಾವು ಚಿಕ್ಕವರಾಗಿದ್ದಾಗ ಇಂಗ್ಲೀಷ್ ಮಾಧ್ಯಮದ ಹುಡುಗರಿಗೆ ತುಂಬ ಜಂಭ ಇರುತಿತ್ತು, ಇಂಗ್ಲೀಷ್ ದೇವಲೋಕದ ಭಾಷೆ ಎನ್ನುವಂತೆ ಮಾತಾಡುತ್ತಿದ್ದರು, ಇಂಗ್ಲೀಷಿನಲ್ಲಿಲ್ಲದಿರುವುದು ಇನ್ನೆಲ್ಲೂ ಇಲ್ಲ ಎನ್ನುವಂತೆ ಮಾತಾಡುತ್ತಿದ್ದರು. ಆಗ ನಾವು ಅವರಿಗೆ ಕನ್ನಡದ ಒಂದು ವಾಕ್ಯವನ್ನು ಇಂಗ್ಲೀಷಿಗೆ ಭಾಷಾಂತರಿಸಲು ಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದೆವು, "ರಾಜೀವ್ ಗಾಂಧಿ ಇಂದಿರಾ ಗಾಂಧಿಯ ಎಷ್ಟನೇ ಮಗ?" ಇಂಗ್ಲೀಷೇ ಅಂತಿಮ. ಸಕಲ ವ್ಯಾಧಿಗಳಿಗೂ ರಾಮಬಾಣ ಎಂದು ನಿಮ್ಮಲ್ಲಿ ಯಾರಾದರೂ ನಂಬಿಕೊಂಡಿದ್ದರೆ ಮೇಲಿನ ಸಾಲನ್ನು ಇಂಗ್ಲಿಷ್‌ಗೆ ಅನುವಾದಿಸಿ ಕಳುಹಿಸುತ್ತಿರಾ?
ಹಿಂದಿನ ಪ್ರತಿಕ್ರಿಯೆಗಳು
nanda:
February 25th, 2008 at 2:26 pm
I beg to differ. The families who are pretty successful kannadiga's, do speak Kannada in England and also across USA. The children have learnt to read and write kannada along with German and French, I dont see them being rediculed or losing confidance for speaking in their own mother tongue..
Irrespective of your stay whether in India or outside, it is the decision and guidance the parents provide with respect to the language of choice at home.
jyotiguruprasad:
February 25th, 2008 at 3:28 pm
Sari.Nmmae e lekhanakke e title yake thiliyalilla.
Thriveni H.B:
February 25th, 2008 at 4:07 pm
i really surprised we have no idea about the kannada literature or india as a whole. even i have the feeloing that harry potter,or kiran desai's writings are great. but now....
we have lot more to read..
And its happy to see still people are interested in
literature.what ever the field may be they are in.
keshav:
February 26th, 2008 at 3:32 pm
ನಂದಾ ಅವರೇ,
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಅನಿವಾಸೀ ಕನ್ನಡಿಗರ ಮಕ್ಕಳು ಅಲ್ಲಿನ ಸ್ಥಳೀಯ ಭಾಷೆ, ಇಂಗ್ಲೀಷ್ ಜೊತೆಗೆ ತಾಯ್ನುಡಿಯನ್ನು ಕಲಿಯುತ್ತಿರುವುದು ತುಂಬ ಸಂತಸದ ವಿಷಯವೇ! ಅಂಥ ಕನ್ನಡಿಗರು ನಿಮ್ಮ ಸುತ್ತ ಇರುವುದುದನ್ನು ಓದಿ ನಿಜವಾಗಲೂ ಖುಷಿಯಾಯಿತು. ಇತ್ತೀಚಿನ ಕನ್ನಡದ "ಆ ದಿನಗಳು" ಚಿತ್ರದ ನಾಯಕ ಚೇತನ್ ಅನಿವಾಸೀ ಕನ್ನಡಿಗ ಎನ್ನುವುದನ್ನು ಓದಿ ಹೆಮ್ಮೆ ಅನಿಸಿತು. ಆದರೆ ಇಲ್ಲಿ ನನ್ನ ಅನುಭವ ನಿಮ್ಮದಕ್ಕಿಂತ ತುಂಬ ಭಿನ್ನ, ಅದಕ್ಕೇ ಈ ಲೇಖನ ಬರೆಯಬೇಕಾಯಿತು. ನಿಜ, ಕನ್ನಡ ಕಲಿಯಬೇಕೇ ಬೇಡವೇ ಎನ್ನುವುದು ಮಕ್ಕಳ ಸ್ವತಂತ್ರ ನಿರ್ಧಾರ, ಆದರೆ ಪ್ರಿತೃಗಳೇ ತಮ್ಮ ತಾಯ್ನುಡಿಯ ಬಗ್ಗೆ ಅಸಡೆ ತೋರಿದರೆ, ಮಕ್ಕಳು ತಾಯ್ನುಡಿಯನ್ನು ಹೇಗೆ ಕಲಿತಾರು? ತಾಯ್ನುಡಿಯ ಜೊತೆ ಸರಾಗವಾಗಿ ಹರಿದು ಬರುವ ಸಂಸ್ಕೃತಿ, ಸಾಹಿತ್ಯ, ಸಂಗೀತ ತಾನೇ ತಾನಾಗಿ ಕಡಿದು ಹೋಗುವುದಿಲ್ಲವೇ ಎಂದು ನನ್ನ ದಿಗಿಲು.
ಜ್ಯೋತಿ ಗುರುಪ್ರಸಾದ್ ಅವರೇ,
"ಗಂಡುಸಾದರೆ ನಿನ್ನ ಬಲಿಕೊಡುವೆಯೇನು?" ಇದು ದ ರಾ ಬೇಂದ್ರೆಯವರ "ಕನಸಿನೊಳಒಂದು ಕನಸು" ಕವನದ ಸಾಲು. ಕವನ ಓದಿ, ಶೀರ್ಷಿಕೆ ಏಕೆ ಹೀಗೆ ಅರ್ಥವಾಗುತ್ತದೆ.
ತ್ರಿವೇಣಿ ಅವರೇ,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
-ಕೇಶವ
ಪಯಣಿಗ:
February 29th, 2008 at 1:16 pm
ಕೇಶವರೇ,
ನಿಮ್ಮ ಅನುಭವಗಳನ್ನು ತು೦ಬಾ ತೂಕದಿ೦ದ ಹ೦ಚಿದ್ದೀರ.ಈ ವಿಚಾರದಲ್ಲಿ ನಿಮ್ಮಷ್ಟೇ ನನಗೂ ದಿಗಿಲು. ಆದರೆ ಭಾಷೆಯ ಬಗೆಗಿನ ತಾತ್ಸಾರ, ತಾವು ತಮ್ಮ ಸುತ್ತಲಿರುವವರಿಗಿ೦ತ ತೂಕದ ಜನ, ತಮ್ಮ ‘ನೆಲೆ' ಇನ್ನೆಲ್ಲೋ ಮೇಲೆ ಎ೦ದೆಲ್ಲ ಭಾವಿಪ ‘ಬುಧ್ದಿವ೦ತ'ರ ತುಡಿತದ ಒ೦ದು ಅ೦ಗ ಅಷ್ಟೇ. ನನ್ನ ಅನುಭವದ ಮಟ್ಟಿಗೆ, ಈ ತರದ ‘ಸಭ್ಯ'ರಿಗೆ ತಮ್ಮ ಭಾಷೆ, ಸ೦ಸ್ಕೃತಿ, ಸಾಹಿತ್ಯ, ಶಿಕ್ಷಣ ಎಲ್ಲವೂ ಕೀಳೆ. ಇತ್ತೀಚೆಗೆ ಪೂರ್ವ-ಲ೦ಡನ್ನಿನಲ್ಲಿ ಗೆಳೆಯನೊಬ್ಬನ ಅವಳಿಗಳ ಹುಟ್ಟು ಹಬ್ಬದಲ್ಲಿ ಸಿಕ್ಕ ಒ೦ದು ಯುವ ದ೦ಪತಿ ತಮ್ಮನ್ನು ಪರಿಚಯಿಸಿಕೊ೦ಡದ್ದು ‘Oxford Graduates' ಎ೦ದು. ಜೋರಾಗಿ ಕೇಳುತ್ತಿದ್ದ ಮು೦ಗಾರು ಮಳೆಯ ಹಾಡಿನ ಹಿನ್ನೆಲೆಯಲ್ಲಿ ಇ೦ಗ್ಲೀಷ್ ಬಿಡದ ಅವರ ಮಾತುಗಳೆಲ್ಲ oxford ನ ಸುತ್ತಲೇ! ಕೆದಕಿ ಕೆರೆದಾಗ ತಿಳಿದದ್ದು, ಆ ದ೦ಪತಿ ಚೆನ್ನೈಬಿಟ್ಟದ್ದೇ ೨೫ ವಸ೦ತಗಳ ನ೦ತರ. ಹೆಚ್ಚೆ೦ದರೆ ೨ ವರ್ಷ oxford ನಲ್ಲಿ ಹಣೆ ಉಜ್ಜಿರಬಹುದು. ಆದರೂ ತಮ್ಮ ಬಣ್ಣದ ಆಳ ಬೇರೆ ಎ೦ಬ ಹು೦ಬತನ. ಬೇಸರವೆ೦ದರೆ, ಭಾರತದ ಮೇಲೇರುತ್ತಿರುವ ಮಧ್ಯಮ ವರ್ಗದ ಹೆಚ್ಚು ಜನ ಈ ಭಾವಕ್ಕೆ ಶರಣು.
ಮೇಲೆರಿದ್ದು ಇಳಿಯಲೇ ಬೇಕಲ್ಲವೇ? ಅಮಲು ಇಳಿದ ಮೇಲೆ ಉಳಿಯುವದು ಅಮ್ಮನ ಮಡಿಲಿನ ನುಡಿ ತಾನೆ!
ಕೇಶವ:
March 3rd, 2008 at 7:44 am
ಪಯಣಿಗರೇ,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಥರಹದ್ದೇ ಅನುಭವ ನನಗೂ ಆಗಿದೆ.
ನನ್ನ ಒಬ್ಬ ದೂರದ ಸಂಬಂಧಿ (ಇಂಗ್ಲಂಡಿಗೆ ಅವರು ಬಂದು ಸುಮಾರು ೨೦ ವರ್ಷ ಆಯಿತು)ಯವರ ಮನೆಗೆ ಹೋದಾಗ ಅದೂ ಇದೂ ಮಾತು ಬಂದಾಗ ನನ್ನ ಬ್ಲಾಗಿನ ಬಗ್ಗೆ ಹೇಳುತ್ತಿದ್ದೆ, ಅದರಲ್ಲಿ ಸಾಹಿತ್ಯವೇ ಹೆಚ್ಚು ಎಂದು ಹೇಳಿದೆ. ಹಾಗಾದರೆ ನೋಡಬೇಕಲ್ಲ ಎಂದರು. ಅದು ಕನ್ನಡದಲ್ಲಿದೆ ಎಂದೆ. "ಏನು? ಕನ್ನಡವಾ??" ಎಂದು ತಾತ್ಸಾರದಲ್ಲಿ ಅವರು ಮುಖ ಮಾಡಿದ್ದು ಇನ್ನೂ ನನಗೆ ನೆನಪಿದೆ. ಹಾಗೆ ಹೇಳಿದ ನನ್ನ ಸಂಬಂಧಿ ಉತ್ತರ ಕರ್ನಾಟಕದ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಎಂದು ಇನ್ನೂ ನಿರಾಸೆಯಾಯಿತು. ಅವರು ಅವರ ಮಗನಿಗೆ ಕನ್ನಡದ ಗಂಧ ಗಾಳಿಯನ್ನೂ ಸೋಕಿಸಲು ಬಿಟ್ಟಿಲ್ಲ.
-ಕೇಶವ


ನೀರನ್ನು ಕುದಿಸಿ ಅದರಲ್ಲಿ ಒಂದು ಟೀ ಬ್ಯಾಗ್ ಕೇವಲ ೧೫ ಸೆಕೆಂಡು ಹಾಕಿ, ತೆಗೆದು, ಸಕ್ಕರೆ ಹಾಕಿಕೊಳ್ಳದೇ, ನೀರು ನೀರಾದ ಕೊಬ್ಬಿಲ್ಲದ ಹಾಲು ಹಾಕಿಕೊಂಡು ಇಲ್ಲಿನ ಥಂಡಿಯಲ್ಲಿ ಗಂಟೆಗಟ್ಟಲೇ ಕೂತು ಆರಿದ ಚಹಾ ಕುಡಿಯುತ್ತಾರೆ.  ಕಾಫಿ ಕುಡಿಯಬೇಕೆಂದರೆ ಚಕೋರಿ ಇಲ್ಲದ ಕಾಫಿ, ಕೆಫೀನ್ ಇಲ್ಲದ ಕಾಫಿ!  ಅದು ಅವರವರ ಇಷ್ಟ, ಅಯಾ ದೇಶದ ರೀತಿ ರಿವಾಜು.

ಭಾರತದಲ್ಲಿ ಇಪ್ಪತೈದು ಮೂವತ್ತು ವರ್ಷ ಚಹಾಪುಡಿಯನ್ನು ನೀರಲ್ಲಿ ಕುದಿಸಿ, ಸಕ್ಕರೆ ಕರಗಿಸಿ, ಹಾಲು ಹಾಕಿಕೊಂಡು ಕುಡಿದವರು ಇಂಗ್ಲಂಡಿಗೆ ಬರುತ್ತಿದ್ದಂತೆ ಡಯಾಬಿಟಿಸ್ ಬಂದವರ ಥರ, ಕೊಲೆಸ್ಟೆರಾಲ್ ರಕ್ತನಾಳಗಳನ್ನೆಲ್ಲ ಬ್ಲಾಕ್ ಮಾಡಿದವರಂತೆ, ಸ್ಕಿಮ್ಡ್ ಹಾಲು ಹಾಕಿಕೊಂಡು ಸಕ್ಕರೆಯಿಲ್ಲದೇ ಚಹಾ ಕಾಫಿ ಕುಡಿಯುತ್ತಾರೆ. ಆದರೆ ಕೆಲವರಿರುತ್ತಾರೆ, ಅವರಿಗೆ ಸಕ್ಕರೆಯಿಲ್ಲದೇ ಚಹಾ ಕಾಫಿ ಕುಡಿಯಲಾಗುವುದಿಲ್ಲ. ಆದರೂ ಎಲ್ಲರ ಮುಂದೆ "ನೋ ಶುಗರ್" ಎಂದು ಹೇಳಿ ತಮ್ಮ ಕೋಣೆಗೆ ಬಂದು ಎರಡು ಸಕ್ಕರೆ ಪ್ಯಾಕೆಟ್ ಹಾಕಿ ಕದಡುತ್ತಾರೆ. ಇಲ್ಲಿನ ಜನರ ತಿಂಡಿ, ಊಟದಲ್ಲಿ ಸಕ್ಕರೆಯಿಲ್ಲದಿದ್ದರೆ ಆಗುವುದೇ ಇಲ್ಲ (ಕೇಕು, ಚಾಕಲೇಟು, ಡೋನಟ್ ಇತ್ಯಾದಿ). ಚಹಾ ಕುಡಿಯುವಾಗ ಅವರ ಕೈಯಲ್ಲೊಂದು ಯಾವುದಾದರೂ ಸಿಹಿ ತಿಂಡಿ ಇರುತ್ತದೆ. ಭಾರತೀಯರ ದಿನನಿತ್ಯದ ಊಟದಲ್ಲಿ ಸಕ್ಕರೆಗೆ ಜಾಗವಿಲ್ಲವೆಂದೇ ಹೇಳಬಹುದು (ಅದರಲ್ಲೂ ದಕ್ಷಿಣ ಭಾರತದಲ್ಲಿ). ಅಂಥಹುದರಲ್ಲಿ ಚಹಾಕ್ಕೆ ಒಂದೆರೆಡು ಚಮಚ ಸಕ್ಕರೆ ಹಾಕಿಕೊಂಡ ಮಾತ್ರಕ್ಕೆ ಕೊಬ್ಬು ಜಾಸ್ತಿಯಾಗುತ್ತದೆ ಎಂಬ ಲಾಜಿಕ್ಕಿನಲ್ಲಿ ಯಾವ ಅರ್ಥವಿದೆ?
ಪೃಷ್ಟ ಕಾಗದ:
ಯುರೋಪಿನಲ್ಲಿ, ಚೈನಾದಲ್ಲಿ ಚಳಿ ಬಹಳ. ಆಗಿನ ಕಾಲದಲ್ಲಿ ಬಿಸಿನೀರು ಬಹುಷಃ ಲಕ್ಸುರಿಯಿರಬಹುದು. ಆದ್ದರಿಂದ ಅವರು ತಮ್ಮ ಪೃಷ್ಟವನ್ನು ಹುಲ್ಲು, ಎಲೆಗಳಿಂದ ಒರೆಸಿಕೊಂಡು ಏಳುತ್ತಿದ್ದರೆಂದು ಇತಿಹಾಸ ಹೇಳುತ್ತದೆ. ಕಾಗದ ಕಂಡು ಹಿಡಿದ ಬಳಿಕ ಆ ಜಾಗದಲ್ಲಿ ಈಗ ಇಲ್ಲೆಲ್ಲ ಟಾಯ್ಲೆಟ್ ಟಿಶ್ಯೂ.  ಅದು ಅವರವರ ಇಷ್ಟ, ಅಯಾ ದೇಶದ ರೀತಿ ರಿವಾಜು.
ಭಾರತದಲ್ಲಿ ಇಪ್ಪತೈದು ಮೂವತ್ತು ವರ್ಷ ನೀರಿನಿಂದ ತಿಕ ತೊಳೆದ ಜನ ಇಲ್ಲಿಗೆ ಬರುತ್ತಲೇ ಕಾಗದ ಹಿಡಿದು ಒರೆಸಿಕೊಳ್ಳಲು ಆರಂಭಿಸುತ್ತಾರೆ. ಅಷ್ಟೇ ಅಲ್ಲ, ನೀರಿನಲ್ಲಿ ತೊಳೆಯುವುದು ಶುದ್ಧ ಅನಾಗರಿಕ ಕೆಲಸ ಎಂದು ನಮ್ಮವರ ಮುಂದೆಯೇ ಹೇಳುತ್ತಾರೆ. ನಾನು ಸೌದಿಯಲ್ಲಿದ್ದಾಗ ಅಲ್ಲಿನ ಜನರು ಭಾರತೀಯರಂತೆ ನೀರಿನಲ್ಲಿ ತೊಳೆಯುತ್ತಾರೆ. ಈಗ ಇಲ್ಲಿ ಕೂಡ ಯಾವಾಗಲೂ ಒಂದು ನಲ್ಲಿಯಲ್ಲಿ ಬಿಸಿ ನೀರು ಬರುತ್ತದೆ, ಒಂದು ಚಂಬಿನಲ್ಲಿ ನೀರು ತೆಗೆದುಕೊಂಡು ತೊಳೆದರೆ ಹೆಚ್ಚು ಸ್ವಚ್ಛವಾಗುವುದೋ ಇಲ್ಲಾ ಕಾಗದದಿಂದ ಒರೆಸಿಕೊಂಡರೆ ಹೆಚ್ಚು ಸ್ವಚ್ಛವಾಗುವುದೋ ಎಂದು ಪರೀಕ್ಷಿಸಲು ಪಿ.ಎಚ್.ಡಿ ಏನೂ ಮಾಡಬೇಕಾಗಿಲ್ಲ.
ಊಟ, ಫೋರ್ಕು ಮತ್ತು ಕೈ:
ಈ ದೇಶದಲ್ಲಿ ಕೈಯಿಂದ ತಿಕ ತೊಳೆಯುವುದು ಹೇಗೆ ಅನಾಗರಿಕತೆಯ ಪ್ರತೀಕವೋ, ಹಾಗೆಯೇ ಕೈಯಿಂದ ಊಟ ಮಾಡುವುದು ಕೂಡ. ಮಕ್ಕಳಿಗೆ ಒಂದು ವರ್ಷವಾಗುತ್ತಿದ್ದಂತೆ ಬಲಗೈಯಲ್ಲೊಂದು ಚಾಕು, ಎಡಗೈಯಲ್ಲೊಂದು ಫೋರ್ಕು ಕೊಟ್ಟು ತಿನ್ನುವುದನ್ನು ವಿಧಿವತ್ತಾಗಿ ಹೇಳಿ ಕೊಡಲಾಗುತ್ತದೆ. ಕಳೆದ ವರ್ಷ ಇಲ್ಲಿನ ಟಿವಿಯಲ್ಲಿ ನಡೆದ "ಸೆಲೆಬ್ರಿಟಿ ಬಿಗ್ ಬ್ರದರ್" ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿಗೆ ಭಾರತೀಯರು ಕೈಯಲ್ಲಿ ಊಟ ಮಾಡುವ ವಿಷಯದ ಬಗ್ಗೆ ಜೇಡ್ ಗುಡಿ ಮತ್ತು ಅವಳ ಸಂಗಡಿಗರು ಅವಹೇಳನ ಮಾಡಿ, ಅದು ಜನಾಂಗೀಯ ನಿಂದನೆ ಎಂದು ಇಂಗ್ಲಂಡಿನ ಪಾರ್ಲಿಮೆಂಟಿನಲ್ಲೂ ಗಲಾಟೆಯಾಯಿತು. ಭಾರತೀಯರು ಕೈಯಿಂದ ತಿನ್ನುವುದನ್ನು ಅವಹೇಳನ ಮಾಡುವ ಇವರೇ ಸ್ಯಾಂಡ್-ವಿಚ್-ಗಳನ್ನು, ಕೇಕುಗಳನ್ನು, ಹಾಟ್-ಡಾಗ್-ಗಳನ್ನು ಕೈಯಿಂದಲ್ಲದೇ ಚಾಕು ಫೋರ್ಕಿನಲ್ಲಿ ತಿನ್ನುತ್ತಾರೆಯೇ? ಅದು ಬೇರೆ ಮಾತು. ಅದು ಅವರವರ ಇಷ್ಟ, ಅಯಾ ದೇಶದ ರೀತಿ ರಿವಾಜು.

ಭಾರತದಲ್ಲಿ ಇಪ್ಪತೈದು ಮೂವತ್ತು ವರ್ಷ ಕೈಯಿಂದ ಊಟ ಮಾಡಿದ ಜನ, ಇಲ್ಲಿಗೆ ಬರುತ್ತಲೇ, ಮನೆಯಲ್ಲಿ ಮಾಡುವ ಭಾರತೀಯ ಊಟವನ್ನೂ ಚಾಕು ಫೋರ್ಕಿನಿಂದಲೇ ತಿನ್ನಲು ಶುರುವಚ್ಚಿಕೊಳ್ಳುತ್ತಾರೆ, ಮುಖ್ಯವಾಗಿ ಮಕ್ಕಳಿಗೆ ಕಲಿಸುತ್ತಾರೆ. ಇಂಡಿಯನ್ ರೆಸ್ಟೋರಂಟುಗಳಲ್ಲಿ ಭಾರತೀಯರೇ ಮಸಾಲೆ ದೋಸೆಯನ್ನೂ, ತಂದೂರಿ ರೋಟಿಯನ್ನೂ ಕಷ್ಟದಲ್ಲಿ ಚಾಕುವಿನಿಂದ ಕತ್ತರಿಸಿ, ಫೋರ್ಕಿನಲ್ಲಿ ಹಿಡಿದು ತಿನ್ನುವ ದೃಶ್ಯ ಸರ್ವೇ ಸಾಮಾನ್ಯ. ಲಂಡನ್ನಿನ ಚನ್ನೈ ದೋಸಾ ಎಂಬ ರೆಸ್ಟೋರೆಂಟಿನಲ್ಲಿ ಒಂದು ಸುಂದರ ಬರಹವಿದೆ, ‘ಊಟವನ್ನು ಎಲ್ಲ ಇಂದ್ರಿಯಗಳೂ ಅನುಭವಿಸಿದರೆ ಚೆನ್ನ. ಚಾಕು ಫೋರ್ಕು ಬದಿಯಿಟ್ಟು ಕೈಯಿಂದ ತಿನ್ನಿ. ಇದು ನಮ್ಮ ನಮ್ರ ವಿನಂತಿ' ಎಂದು.

ಇವು ಬರೀ ಮೂರು ಉದಾಹರಣೆಗಳಷ್ಟೇ. ಯುರೋಪಿಯನ್ನರು ಅಥವಾ ಅಮೇರಿಕದವರು ಭಾರತಕ್ಕೆ ಬಂದರೆ ಭಾರತೀಯರ ಥರ ಕೈಯಿಂದ ತಿನ್ನುತ್ತಾರೆಯೇ? ಸಕ್ಕರೆ ಹಾಕಿದ ಚಹಾ ಕುಡಿಯುತ್ತಾರೆಯೇ? ನೀರಿನಲ್ಲೀ ತಿಕ ತೊಳೆಯಬಲ್ಲರೇ? ನಾವೇಕೆ ಸಮುದ್ರೋಲಂಘನ ಮಾಡುತ್ತಿದ್ದಂತೆ, ಯಾರಿಗೂ ಹಾನಿಕಾರಕವಲ್ಲದ ನಮ್ಮ ಸರಳ ಆಚಾರಗಳನ್ನು ಬಿಟ್ಟು, ಕಂದು ಬಣ್ಣದ ಚರ್ಮವಿದ್ದರೂ ಒಳಗೆಲ್ಲ ಬಿಳಿಯಾಗ ಬಯಸುವ ತೆಂಗಿನಕಾಯಿಗಳಾಗುತ್ತೇವೆ?
ಪುಟದ ಮೊದಲಿಗೆ
 
Votes:  11     Rating: 1.91    


 ಕೆಲವರು ಇಲ್ಲಿ ಬಸ್ಸಿನ್ನಲ್ಲಿ ಓಡಾಡಿ, ಕ್ಯೂ ನಲ್ಲಿ ಸಿನಿಮಾ ಟಿಕೆಟ್ ತೊಗೊಂಡು, ಉಪವಾಸ, ವನವಾಸ ಅನುಭವಿಸಿ, ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಹೋಗಿ ಒಂದು ವಾರ ಇದ್ದು, ‘ಬ್ಲಡಿ ಇಂಡಿಯಾ, ಅಲ್ಲಿ ರಿಸರವೇಶನ್ ಇದೆ, ಕರೆಂಟ್ ಹೋಗ್ತದೆ, ಸೊಳ್ಳೆ ಇದೆ, ಮಲೇರಿಯಾ ಇದೆ, ಜನ ಹೇಗೆ ಇರ್ತಾರೆ’ ಅಂತ ಮಾತಾಡ್ತಾರೆ....

 ಇದೇನು ಕತೆ! "ಒಳಗೆಲ್ಲ ಬಿಳಿಯಾಗ ಬಯಸುವ ತೆಂಗಿನಕಾಯಿ" ಅನ್ನೋ ಒಂದೇ ಸಾಲು ಹೇಳೋಕೋಸ್ಕರ ಬರೆದ ಹಂಗಿದೆಯಲ್ಲ?! ಒಂದು ಸಾಲಿನ ಮಾತು. ಇವೆಲ್ಲಾ ಒತ್ತಡ ಎಲ್ಲಾ ಊರಿನಲ್ಲೂ ಇರ್ತಾವೆ ಮಾರಾಯ್ರೆ. ಅಲ್ಲೂ ಇಲ್ಲೂ ಎಲ್ಲೂ... ಗೊತ್ತಿರೋದನ್ನೇ ಹೇಳೋದು ಬಿಟ್ಟು ಒತ್ತಡದ ಬಗ್ಗೆ ಒಂಚೂರು ಹೊಸದೇನಾದರೂ ಇದ್ದರೆ ಹೇಳಬಾರದ? ಕೈ, ಫೋರ್ಕು ಬಿಟ್ಟು ಪೃಷ್ಠದ ಕಾಗದ ಒಂದೇ ಹಿಡಕೊಂಡು ಹೋಗಿದ್ದರೆ ಏನಾದರೂ ಸಿಕ್ಕಿರೋದೇನೋ!?...
 Re:  tappu tiidukollabedi keshav avare ee barahadalli alavilla.enu helabeku annuvudara spastate illa. Sanjeev


4.
ನಾನು ಐದೋ ಆರೋ ಕ್ಲಾಸಿನಲ್ಲಿದ್ದೆ. ನನ್ನ ಗೆಳೆಯನ ಮನೆಗೆ ಹೋದಾಗ ಅವನಣ್ಣ ಇತ್ತ ಸಂಯುಕ್ತ ಕರ್ನಾಟಕದಂತೆಯೂ ಅಲ್ಲದ, ಅತ್ತ ಸುಧಾದಂತೆಯೂ ಅಲ್ಲದ ಮಾಸಲು ಹಾಳೆಯ ಪತ್ರಿಕೆಯೊಂದನ್ನು ಓದುತ್ತ ಕುಳಿತಿದ್ದ. ಅದೇನೆಂದು ಕೇಳಿದ್ದಕ್ಕೆ "ಲಂಕೇಶ್ ಪತ್ರಿಕೆ" ಅಂದ. ನನ್ನ ಮೊದಲ ಉದ್ಗಾರ, "ಲಂಕೇಶಾ? ಅಂದ್ರ ರಾವಣನ ಪತ್ರಿಕೆಯಾ?" ಎಂದೆ. ಅದಕ್ಕೆ ಆತ ನಕ್ಕು, "ಅಲ್ಲಲೇ, ಅದು ಪತ್ರಿಕಾ ನಡೆಸವನ ಹೆಸರು" ಎಂದ. "ನಾ ಓದಲ್ಯಾ?" ಅಂತ ಕೇಳಿದ್ದಕ್ಕೆ, "ಇದು ನಿನಗ ಅರ್ಥ ಆಗೂದಿಲ್ಲ" ಎಂದ. ನನಗೆ ಚೆನ್ನಾಗಿ ಕನ್ನಡ ಓದಲು ಬರುತ್ತದೆ, ಅಲ್ಲದೇ ಪ್ರತಿವಾರ ಸುಧಾದಲ್ಲಿ ಫ್ಯಾಂಟಮ್ ಅಲ್ಲದೇ ಮುಖಪುಟದ ಲೇಖನವನ್ನೂ ಓದುತ್ತೇನೆ, ತಿಂಗಳು ತಿಂಗಳು ಚಂದಮಾಮಾನನ್ನು ಎರೆಡೆರೆಡು ಸಲ ಒಂದೂ ಪುಟ ಬಿಡದೇ ಓದುತ್ತೇನೆ, ನನಗೆ ಅರ್ಥವಾಗುವುದಿಲ್ಲವಾ? ಹಾಗೆ ಶುರುವಾಯಿತು ನನ್ನ ಮತ್ತು ಲಂಕೇಶ್ ಪತ್ರಿಕೆ ಸಂಬಂಧ.
ಪ್ರತಿವಾರವೂ ನನ್ನ ಗೆಳೆಯನ ಮನೆಗೆ ಹೋಗಿ ಲಂಕೇಶ್ ಓದಲು ಶುರುಮಾಡಿದೆ. ಕಣ್ಣಮುಚ್ಚಾಲೆ ಮತ್ತು ಅದರಡಿಯಲ್ಲಿರುವ ತುಂಟಾಟವನ್ನು ಕದ್ದು ಓದುತ್ತಿದ್ದೆ. ಹಿಂದಿನ ಸಿನೆಮಾ ಪುಟಗಳನ್ನು ಒಂದಕ್ಷರವೂ ಬಿಡದೇ ಓದುತ್ತಿದ್ದೆ. ಬಾಕಿ ಯಾವುದೂ ಅರ್ಥವಾಗುತ್ತಿರಲಿಲ್ಲ. ನನ್ನ ಗೆಳೆಯನ ಅಣ್ಣ ಓದಲು ಹುಬ್ಬಳ್ಳಿಗೆ ಹೋದ, ಆಗ ನಾನು ಎಂಟನೇ ಕ್ಲಾಸಿನಲ್ಲಿರಬೇಕು. ಲಂಕೇಶ್ ನಿಂತುಹೋಯಿತು ನನಗೆ. ಮನೆಯಲ್ಲಿ ಕೇಳಿದರೆ, "ಆ ಪತ್ರಿಕೆ ಮನೀಗೆ ಬರೂದು ಬ್ಯಾಡ, ಅದರಾಗೇನಿರತದ ಹೊಲಸು, ಬರೇ ರಾಜಕೀಯ" ಎಂದರು ನನ್ನಪ್ಪ. ಊರಿನ ಒಂದೇ ಒಂದು ಪ್ರೈವೇಟ್ ಸರ್ಕ್ಯುಲೇಟಿಂಗ್ ಲೈಬ್ರರಿಯಲ್ಲಿ ಮನೆಯಲ್ಲಿ ಏನೋ ಪೂಸಿ ಹೊಡೆದು ಮೆಂಬರ್ ಆದೆ, ಅಮರ ಚಿತ್ರಕತೆ ಓದಬೇಕು ಎಂದು. ಲಂಕೇಶ್ ವಾರದಲ್ಲಿ ಒಂದು ದಿನ ಮನೆಗೆ ಬರತೊಡಗಿದ, ಅದೂ ನನ್ನಪ್ಪನಿಗೆ ಕಾಣದಂತೆ ಅವರಿಲ್ಲದಾಗ ಓದಿ ಮುಚ್ಚಿಡುತ್ತಿದ್ದೆ. ನಿಧಾನವಾಗಿ ಸಿನೆಮಾ ಪುಟಗಳ ಆಚೆಗಿನ ಬರಹಗಳು ಅರ್ಥವಾಗತೊಡಗಿದವು.

ತುಂಟಾಟ, ನೀಲುಗಳು ಮತ್ತು ಆ ನೀಲುಗಳ ಜೊತೆಯಿರುವ ಚಿತ್ರಗಳು ಆ ವಯಸ್ಸಿಗೆ ಮನಸ್ಸಿನಲ್ಲಿ ಕಿಚ್ಚೆಬ್ಬಿಸುತ್ತಿದ್ದವು. ನಿಮ್ಮಿ ಹೆಚ್ಚು ಕಡಿಮೆ ನನ್ನ ಕನಸಿನ ಕನ್ಯೆಯಾದಳು. ವಾರವಾರವೂ ನಿಮ್ಮಿ ಪತ್ರ ಓದಲು ಕಾಯುತ್ತಿದ್ದೆ, ಆಕೆ ಈ ವಾರ ಏನು ಮಾಡಿದಳು, ಆಕೆಯ ಪ್ರಿಯಕರ ಆಕೆಗೆ ಏನು ಮಾಡಿದ ಎಂದು ತಿಳಿದುಕೊಳ್ಳಲು. ಟೀಕೆ ಟಿಪ್ಪಣೆಯಲ್ಲಿ ಚಡ್ಡಿಗಳು, ಕಾಂಗ್ರೆಸ್, ಸಮಾಜವಾದ ಓದುತ್ತ ರಾಜಕೀಯ ದೂರದ ಬೆಂಗಳೂರಿನಲ್ಲಿಲ್ಲ, ಬದಲಿಗೆ ನನ್ನ ಮನೆ ಬಾಗಿಲಲ್ಲೇ ಇದೆ ಎಂದು ಅರ್ಥವಾಗತೊಡಗಿತು. ಬರೀ ಕನ್ನಡ ಪುಸ್ತಕದ ಹಿಂದಿನ ಪುಟಗಳಲ್ಲಿ ಅವಿತಿದ್ದ ಬೇಂದ್ರೆ ಅಡಿಗರು ಹೊರಬರತೊಡಗಿದರು. ಯಂಡಮೂರೀ ವೀರೇಂದ್ರನಾಥನೇ ಜಗತ್ತಿನ ಶ್ರೇಷ್ಟ ಕತೆಗಾರ ಅಂದು ಕೊಂಡಿದ್ದವನಿಗೆ ಚಿತ್ತಾಲ, ಕಾರಂತ, ಮಾಸ್ತಿ, ದೇಸಾಯಿ, ವ್ಯಾಸರಾಯರನ್ನು ತೋರಿಸಿದರು. ನನ್ನ ಲೋಕದ ಅರಿವಿಗೂ ಮೀರಿದ ಬೋದಿಲೇರ್, ಕಾಪ್ಕಾ ಕಾಮೂರನ್ನು ನಮ್ಮ ಅಕ್ಕಪಕ್ಕದ ಮನೆಯವರೇನೋ ಅನಿಸುವಂತೆ ಬರೆದರು.

ಪಿಯುಸಿ ಮುಗಿದು ಮೆಡಿಕಲ್ ಸಿಕ್ಕು ಹುಬ್ಬಳ್ಳಿಗೆ ಬಂದ ಮೇಲೆ ಲಂಕೇಶ್ ಚಾಚೂ ತಪ್ಪದೇ ಪ್ರತಿವಾರ ನನ್ನ ರೂಮಿನಲ್ಲಿ ಹಾಜರ್. ಅವರು ಬರೆದ ಕವಿಗಳ, ಕತೆಗಾರರ, ಕಾದಂಬರಿಕಾರರ ಪುಸ್ತಕಗಳನ್ನು ತಂದು ಓದಿದ್ದೇ ಓದಿದ್ದು, ಅಧೇಗೆ ಮೆಡಿಕಲ್ ಪಾಸಾದೆನೋ ಯಾರಿಗೆ ಗೊತ್ತು?  ಪಿಜಿ ಮಾಡಲು ಮೈಸೂರಿಗೆ ಬರುವ ಹೊತ್ತಿಗೆ ಲಂಕೇಶ್ ಪತ್ರಿಕೆ ತುಂಬೆಲ್ಲ ಅವರ ಕಾಯಿಲೆಗಳ ವರಾತ, ಎಣ್ಣೆ ಕುಡಿದು ಗಳಗಳ ಗಂಟಲಲ್ಲಿ ಬಾಯಾಡಿಸಿದರೆ ಕತ್ತು ನೋವು ಕಡಿಮೆಯಾಗುತ್ತೆ ಎಂಬ ಟಿಪ್ಪಣೆ. ಜೊತೆಯಲಿ ರವಿಯ "ಹಾಯ್" ನ ಭರಾಟೆ ಬೇರೆ. ರವಿಯ ಹೊಸ ಭಾಷೆ, ಖಾಸ್ ಬಾತ್, ಹಲೋ, ಜೋಗಿಯವರ "ರವಿ ಕಾಣದ್ದು" ಲಂಕೇಶ್ ಪತ್ರಿಕೆಯನ್ನು ಕೆಲಕಾಲ ಮರೆಸಿದ್ದು ಸುಳ್ಳಲ್ಲ. ಲಂಕೇಶ್ ಹೋದರು, ಲಂಕೇಶ್ ಪತ್ರಿಕೆಯ ಮೇಲಿನ ಒಲವೂ ಹೋಯಿತು. ಲಂಕೇಶ್ ಇಲ್ಲದೇ ಅದು ಬರೀ "ಪತ್ರಿಕೆ" ಆಗಿತ್ತು. ಈಗ ಅವರು ಪತ್ರಿಕೆಯಲ್ಲಿ ಬರೆದಿರುವ "ಟೀಕೆ ಟಿಪ್ಪಣೆ" ಪುಸ್ತಕಗಳು, "ನೀಲು ಕಾವ್ಯ" ಓದುತ್ತ ಹೊಸ ಅರ್ಥಗಳನ್ನು ಹುಡುಕುತ್ತಿದ್ದೇನೆ.

ಬಹುಷಃ ಈ ನೀಲು ಲಂಕೇಶ್ ಪತಿಕೆ ನನ್ನ ಮೇಲೆ ಮಾಡಿದ ಪರಿಣಾಮವನ್ನು ಒಟ್ಟುಮಾಡುತ್ತೋ ಏನೋ?

"ಮೋಕ್ಷವೆಂದರೆ ಎಲ್ಲ ಸುಖದುಃಖಗಳಿಂದ ಬಿಡುಗಡೆ
ಎಂದು ಪಂಡಿತರು ಹೇಳಿದ್ದು ಕೇಳಿದೊಡನೆ
ಮೋಕ್ಶದಿಂದ ತಪ್ಪಿಸಿಕೊಳ್ಲಲು ಆತ
ಪಾಪಗಳನ್ನು ಮಾಡಲು ಓಡಿದ

No comments:

Post a Comment