Monday, February 25, 2008

ಒಂದೇ ವಸ್ತು ಮೂರು ಕತೆ

ಕತೆ ೧:
ರಾಜಕುಮಾರ. ರಾತ್ರಿ ಮಲಗಿದಾಗ ಆತನ ಕೋಣೆಯಲ್ಲಿರುವ ದೀಪದ ಮೊಲ್ಲೆ ವಿಗ್ರಹಕ್ಕೆ ಜೀವ ಬಂದು ಆತನನ್ನು ಸೇರುತ್ತಾಳೆ. ರಾಜಕುಮಾರನಿಗೆ ದೀಪದ ಮೊಲ್ಲೆಯನ್ನಲ್ಲದೇ ಯಾವ ಹುಡುಗಿಯನ್ನೂ ಕಣ್ಣೆತ್ತಿ ನೋಡಲಾರ. ಆತನ ತಾಯಿ ಯಾರ್ಯಾರಿಗೋ ಕೇಳಿ, ಕೊನೆಗೆ ರಾಜಕುಮಾರನನ್ನೇ ತುಂಡರಿಸಿ ಎರಡು ಭಾಗ ಮಾಡಿ ಎರಡು ಮಡಿಕೆಗಳಲ್ಲಿ ಹೂತು ಹಾಕುತ್ತಾರೆ. ಒಂದರಿಂದ ರಾಜಕುಮಾರ ಬರುತ್ತಾನೆ. ಇನ್ನೊಂದರಿಂದ ದೀಪದ ಮೊಲ್ಲೆ ಬರುವುದಿಲ್ಲ, ಬದಲಿಗೆ ಕಾಳಿಂಗ ಹೊರಬರುತ್ತದೆ. ಜನ ಕಾಳಿಂಗನನ್ನು ಹೊಡೆಯಲು ಹೊರಡುತ್ತಾರೆ, ಕಾಳಿಂಗ ತಪ್ಪಿಸಿಕೊಂಡು ಕಾಡು ಸೇರುತ್ತಾನೆ. ರಾಜಕುಮಾರ ವಿಡಿಯಿಲ್ಲದೇ ತಾಯಿ ಹೇಳಿದ ಹುಡುಗಿಗೆ ತಾಳಿ ಕಟ್ಟಿ, ಊರೂರು ಸುತ್ತತೊಡಗುತ್ತಾನೆ, ದೀಪದ ಮೊಲ್ಲೆಯ ಹುಡುಕಾಟದಲ್ಲಿ. ಕಾಳಿಂಗ ರಾಜಕುಮಾರನ ರೂಪ ತಾಳಿ ರಾಜಕುಮಾರನ ಹೆಂಡತಿಯೊಡನೆ ಸರಸದಲ್ಲಿ ತೊಡಗುತ್ತಾನೆ, ಆಕೆ ಗರ್ಭಿಣಿಯಾಗುತ್ತಾಳೆ. ಆಗ ರಾಜಕುಮಾರನಿಗೆ ತನ್ನ ಹೆಂಡತಿಯ ಶೀಲದ ಮೇಲೆ ಸಂದೇಹ. ಅವಳ ಪರೀಕ್ಷೆಯಾಗುತ್ತದೆ. ಅವಳು, "ನನ್ನ ಗಂಡ ಮತ್ತು ಈ ಸರ್ಪವನ್ನಲ್ಲದೇ ಬೇರೆ ಯಾವ ಗಂಡನನ್ನು ಮುಟ್ಟಿದ್ದರೂ ನನಗೆ ಈ ಸರ್ಪ ಕಚ್ಚಲಿ" ಎನ್ನುತ್ತಾಳೆ, ಗೆಲ್ಲುತ್ತಾಳೆ. ರಾಜಕುಮಾರನಿಗೆ ತಲೆ ಕೆಟ್ಟು ಅಂತಪುರಕ್ಕೆ ಪಹರೆಯಿಡುತ್ತಾನೆ. ಕಾಳಿಂಗ ಸಿಕ್ಕಿಹಾಕಿಕೊಳ್ಳುತ್ತಾನೆ. ಇಬ್ಬರಿಗೂ ಯುದ್ಧವಾಗಿ ಕಾಳಿಂಗ ಸಾಯುತ್ತಾನೆ, ಕಾಳಿಂಗ ಸಾಯುತ್ತಿದ್ದಂತೆ ರಾಜಕುಮಾರನೂ ಸಾಯುತ್ತಾನೆ. ಸಾಯುವಾಗ ಹೆಂಡತಿಗೆ ಹೇಳುತ್ತಾನೆ, "ನನ್ನಂತೆ ಈ ಹೊಟ್ಟೆಯಲ್ಲಿರುವ ಮಗುವನ್ನು ಎರಡು ಮಾಡಲು ಬಿಡಬೇಡ".


ಕತೆ ೨:

ಹಳ್ಳಿಯ ಶ್ರೀಮಂತ ಚಲುವ ಯಾವಾಗಲೂ ತನ್ನ ವೇಶ್ಯೆಯ ಹತ್ತಿರವೇ! ತಾಯಿ ತಡೆಯಲಾಗದೇ ಮಗನ ಮದುವೆ ಮಾಡುತ್ತಾಳೆ, ಏನುಪಯೋಗ? ಮನೆಯ ಹತ್ತಿರದ ಕಾಳಿಂಗವೊಂದು ಶ್ರೀಮಂತನ ರೂಪತಾಳಿ ಹೊಸ ಹುಡುಗಿಯೊಡನೆ ರತಿಕ್ರೀಡೆಯಲ್ಲಿ ತೊಡಗುತ್ತದೆ, ಆಕೆ ಗರ್ಭಿಣಿಯಾಗುತ್ತಾಳೆ. ಮೇಲಿನ ತರಹದ್ದೇ ಪರೀಕ್ಷೆ, ಗೆಲ್ಲುತ್ತಾಳೆ. ಶ್ರೀಮಂತನಿಗೆ ತಲೆ ಕೆಟ್ಟು ಅವಳ ಮೇಲೆ ಕಣ್ಣಿಡುತ್ತಾನೆ, ಕಾಳಿಂಗ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇಬ್ಬರ ಯುದ್ಧದಲ್ಲಿ, ಕಾಳಿಂಗ ಸಾಯುತ್ತಾನೆ, ಶ್ರೀಮಂತ ತನ್ನ ತಪ್ಪಿನ ಅರಿವಾಗಿ ಹೊಟ್ಟೆಯಲ್ಲಿರುವ ಮಗುವನ್ನು ತನ್ನದೆಂದು ಒಪ್ಪಿ, ಹೆಂಡತಿಯೊಡನೆ ಸುಖವಾಗಿ ಬಾಳುತ್ತಾನೆ.ಕತೆ ೩:
ವರ್ತಕರ ವಂಶ. ಮಗನಿಗೆ ಮದುವೆಯಾಗುತ್ತಿದ್ದಂತೆ ಆತ ಊರು ಬಿಟ್ಟು ಹೋಗುತ್ತಾನೆ. ಭೂತವೊಂದು ಆತನ ವೇಷ ಧರಿಸಿ ಹೊಸ ಹೆಂಡತಿಗೆ ಗರ್ಭಧಾರಣೆ ಮಾಡುತ್ತದೆ. ಎಲ್ಲ ಮೇಲಿನೆರೆಡು ಕತೆಗಳಲ್ಲಿದ್ದಂತೇ ನಡೆದು ಹೋಗುತ್ತದೆ.

ಮೊದಲ ಕತೆಯನ್ನು ನಾಟಕದಲ್ಲಿ ಬರೆದವರು ಚಂದ್ರಶೇಖರ ಕಂಬಾರ. ಎರಡನೇ ಕತೆ ಕಾರ್ನಾಡರ "ನಾಗಮಂಡಲ". ಮೂರನೇ ಕತೆ, ಹಿಂದಿಯಲ್ಲಿ ಚಲನಚಿತ್ರವಾದ, "ಪಹೇಲಿ".


ಈ ಕತೆ ಯಾಕೆ ಇಷ್ಟು ಜನರ ತಲೆ ತಿಂದು ನಾಟಕ, ಸಿನೆಮಾ ಆಯಿತು?


ಭಾರತೀಯ ತತ್ವಶಾಸ್ತ್ರದಲ್ಲಿ ದೇಹ ಮತ್ತು ಆತ್ಮ, ಲೌಕಿಕ ಮತ್ತು ಅಲೌಕಿಕ, ಕಾಮ ಮತ್ತು ಪ್ರೇಮ, ರಾಜಸ ಮತ್ತು ಸಾತ್ವಿಕ ಗಳ ನಡುವಿನ ಮಸೆದಾಟ ವೇದಗಳಿಂದಲೂ ಬಂದಿದೆ, ಭಾರತದ ಮೂಲೆ ಮೂಲೆಗಳಲ್ಲಿರುವ ಜನಪದ ಕತೆಗಳಲ್ಲಿ ಕೂಡ ಈ ತಿಕ್ಕಾಟ ಕಾಣಬಹುದು. ಈ ಮೇಲಿನ ಮೂರು ಕತೆಗಳೂ ಒಂದೇ ಜಾನಪದ ಕತೆಯ ಬೇರೆ ಬೇರೆ ರೂಪಗಳು. ಆಧುನಿಕ ಸಾಹಿತ್ಯದಲ್ಲಿ, ಅದರಲ್ಲೂ ನವ್ಯ ಸಾಹಿತ್ಯದಲ್ಲಿ ಈ ತುಮುಲವನ್ನು ಮೇಲಿಂದ ಮೇಲೆ ನೋಡುತ್ತೇವೆ.

ದೇಹಕ್ಕಿಂತ ಮನಸ್ಸು-ಆತ್ಮ ಮುಖ್ಯ, ಲೌಕಿಕಕ್ಕಿಂತ ಅಲೌಕಿಕ, ಕಾಮುಕ್ಕಿಂತ ಪ್ರೇಮ-ಭಕ್ತ್ತಿ, ರಾಜಸಕ್ಕಿಂತ ಸಾತ್ವಿಕ ದೊಡ್ಡದು, ಮತ್ತು ಅದರ ಹುಡುಕಾಟದಲ್ಲೇ ನಮ್ಮ ಅಭಿವೃದ್ಧಿ-ಮುಕ್ತಿ, ಮೋಕ್ಷ ಎಂಬುದು ವೈದಿಕ ನಂಬಿಕೆ. ಆದರೆ ದೇಹ, ಲೌಕಿಕ, ಕಾಮಗಳಲ್ಲಿ ಮುಕ್ತಿ ಕಾಣುವ ಚಾರ್ವಾಕರು ವೇದಕಾಲದಿಂದಲೂ ಉಲ್ಲೇಖಗೊಂಡಿದ್ದಾರೆ. ವೈದಿಕದ ಕತೆಗಳಲ್ಲಿ ಆತ್ಮ ಗೆಲ್ಲುತ್ತದೆ (ನಚಿಕೇತ), ಪ್ರೇಮ ಗೆಲ್ಲುತ್ತದೆ (ಸಾವಿತ್ರಿ). ಆದರೆ ಜನಪದ ಕತೆಗಳಲ್ಲಿ ದೇಹ ಗೆಲ್ಲುತ್ತದೆ, ಕಾಮ ಮನುಷ್ಯನ ಸಹಜ ಗುಣ ಎನ್ನುತ್ತದೆ.

ಅಧುನಿಕ ಸಾಹಿತ್ಯದಲ್ಲಿ ಈ ವಿಭಜನೆಯ ಸಂಕೀರ್ಣತೆ ಈ ಮೂರು ಕತೆಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆದರೆ ಈ ಮೂರು ಕತೆಗಳಲ್ಲಿ ನನ್ನ ಆಯ್ಕೆ, ಕಂಬಾರರ "ಸಿರಿಸಂಪಿಗೆ". ನಾಟಕದ ಅಂತ್ಯದಲ್ಲಿ ದೇಹ-ಆತ್ಮದ, ಲೌಕಿಕ-ಅಲೌಕಿಕದ, ಕಾಮ-ಪ್ರೇಮದ ಅದ್ವೈತದಲ್ಲಿ ಮನುಷ್ಯ ಬದುಕಲು ಸಾಧ್ಯವಿದ್ದರೆ ಎಷ್ಟು ಚೆನ್ನಿತ್ತು ಎಂಬ ಪ್ರಶ್ನೆಯೊಂದಿಗೆ ಮುಗಿಯುತ್ತದೆ.

2 comments:

 1. ಕೇಶವ,

  ವಿಶೇಷ ಸಂಗತಿಯೆಂದರೆ, ನಾಗಮಂಗಲ ಮತ್ತು ಸಿರಿಸಂಪಿಗೆ ಎರಡೂ ನಾಟಕಗಳು 'ಪಹೇಲಿ' ಕತೆಯಿಂದ ಪ್ರೇರಣೆಗೊಂಡು ಬರೆದಂತಹವು. ಎ.ಕೆ. ರಾಮಾನುಜನ್ ಈ ಗುಜರಾತಿ ಕತೆಯನ್ನು ಕಂಬಾರ ಮತ್ತು ಕಾರ್ನಾಡರಿಗೆ ಹೇಳಿದ್ದರಂತೆ.

  ವಸುಧೇಂದ್ರ

  ReplyDelete
 2. ವಸುಧೇಂದ್ರ,

  ಈ ವಿಷಯ ನನಗೆ ಗೊತ್ತಿರಲಿಲ್ಲ. ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

  ಕೇಶವ

  ReplyDelete