Saturday, November 22, 2008

ವರ್ಷ ಮುಗಿಯುವ ಮೊದಲು ಒಂದು ಪ್ರಾರ್ಥನೆ

ಈ ವರ್ಷವೂ ಮುಗಿಯುತ್ತ ಬಂದಿತು. ನನ್ನ ಬ್ಲಾಗು ನೋಡಿದರೆ ನನಗೇ ಬೇಸರವಾಗುತ್ತದೆ. "ಕೆಂಡಸಂಪಿಗೆ"ಗೆ ಮೂರು ಸಲ ಬರೆದದ್ದು ಬಿಟ್ಟರೆ ಇನ್ನೇನೂ ಬರೆದಿಲ್ಲ. ಅಬ್ದುಲ್ ರಶೀದರಿಗೆ ಇನ್ನೊಂದು ಲೇಖನ ಬರೆದು ಕಳಿಸುವವವರೆಗೆ ಈ-ಮೇಲೂ ಬರೆಯಲು ನಾಚಿಗೆಯಾಗಿ, ಅವರ ಈ-ಮೇಲ್ ಬಂದು ತಿಂಗಳುಗಳು ಕಳೆದಿದ್ದರೂ ಉತ್ತರಿಸದೇ ಕೂತಿದ್ದೇನೆ. ವಸುಧೇಂದ್ರ ಅವರು ಅವರ ಪುಸ್ತಕಗಳನ್ನು ಇಂಗ್ಲಂಡಿಗೆ ಬಂದು ಬಿಟ್ಟು ಹೋಗಿದ್ದರೂ ಇನ್ನೂ ಲಂಡನ್ನಿಗೆ ಹೋಗಿ ತೆಗೆದುಕೊಳ್ಳಲಾಗದೇ ಕೂತಿದ್ದೇನೆ, ನಾಚಿಕೆಯಿಂದ; ಅದಕ್ಕೇ ಅವರಿಗೂ ಈ-ಮೇಲ್ ಬರೆದಿಲ್ಲ. ಹಿರಿಯ ಲೇಖಕ ಪ್ರಹ್ಲಾದ ಅಗಸನಕಟ್ಟೆಯವರು ಈ-ಮೇಲ್ ಮೇಲೆ ಈ-ಮೇಲ್ ಬರೆಯುತ್ತಲೇ ಇದ್ದಾರೆ, ಅವರಿಗೂ ಉತ್ತರಿಸದೇ ಗಪ್ಪು ಕೂತಿದ್ದೇನೆ.

ಈಗ ಸಮಯ ರಾತ್ರಿ ೩.೦೦ ಗಂಟೆ. ಇದು ಎಚ್ಚರ ಇರಬೇಕಾದ ಸಮಯವೇನಲ್ಲ. ಆದರೆ ದಿನಾಲೂ ಕೆಂಡಸಂಪಿಗೆಯನ್ನು ಪೂರ್ತಿ ಓದದೆ, ಗೂಗಲ್ ರೀಡರಿನಲ್ಲಿರುವ ನೂರಾರು ಬ್ಲಾಗುಗಳನ್ನು ಓದದೇ, ದಿನದ ನ್ಯೂಸ್ ಓದದೇ ಮಲಗಲು ಆಗುವುದೇ ಇಲ್ಲ. ಇಷ್ಟು ಬಿಟ್ಟರೆ ನಾನು ಏನನ್ನೂ ಓದುತ್ತಿಲ್ಲ ಎನ್ನುವುದೇ ನನ್ನ ದಿಗಿಲು.

ಇಡೀ ವರ್ಷ ನಾನು ಓದಿದ್ದು ಒಂದೇ ಪುಸ್ತಕ ಎಂದರೆ ನನಗೇ ನಂಬಲಾಗುತ್ತಿಲ್ಲ. ೧೯೮೯ ರಲ್ಲಿ ದಿನ್ನಕ್ಕೊಂದು ಪುಸ್ತಕ ಓದುತ್ತಿದ್ದ ನಾನು ೨೦೦೮ರಲ್ಲಿ ಓದಿದ್ದು ಒಂದೇ ಪುಸ್ತಕ. ಎಂಬಿಬಿ‍ಎಸ್, ಎಂಡಿ ಅಂತೆಲ್ಲ ಸಾಹಿತ್ಯ ಮರೆತದ್ದಲ್ಲ ನಾನು. ಎಂಬಿಬಿ‍ಎಸ್ ಮಾಡುವಾಗ ಓದಿದಷ್ಟು ತೀವ್ರವಾಗಿ ಪುಸ್ತಕಗಳನ್ನು ನಾನಿವತ್ತು ಓದಲು ಸಾಧ್ಯವೇ ಇಲ್ಲ. ಎಂಡಿಯಲ್ಲಿ ತೀವ್ರವಾಗಿ ನೋಡಿರುವಷ್ಟು ನಾಟಕ, ಸಿನೆಮಾ (ಕಾಸರವಳ್ಳಿ ಕೆಟಗರಿ) ಇನ್ನೆಂದೂ ನೋಡುವುದಿಲ್ಲ.

ಎಂಡಿ ಮುಗಿದು ದುಡ್ಡು ಕೈಲಿ ಓಡಾಡಲು ಶುರುವಾಗುತ್ತಿದ್ದಂತೆಯೇ ಬದಲಾಗುವ ನೋಟ, ಬದಲಾಗುವ ಪ್ರಿಯಾರಿಟಿಗಳು, ಬದಲಾಗುವ ಅಂತಸ್ತು, ಬದಲಾಗುವ ಗೆಳೆಯರು, ಬದಲಾಗುವ ಹವ್ಯಾಸಗಳು...

ಹರೆಯದ ಉನ್ಮಾದದಲ್ಲಿ ಒಲಿದ ಗೆಳತಿ, ಪ್ರೀತಿ-ಪ್ರೇಮ-ಪ್ರಣಯ, ಒಪ್ಪಿಗೆ-ಮದುವೆ-ಸಂಸಾರ-ಮಗು - ಇವುಗಳ ನಡುವೆ ಹುಟ್ಟೂವ ಸುಖ-ನಲಿವು-ನೋವು-ಹತಾಶೆ-ಆಸೆ-ಕನಸುಗಳಲ್ಲಿ ಕಳೆದುಹೋದ ಏಕಾಂತ, ಸಿಕ್ಕಲೊಲ್ಲದ ಸಮಯ, ಮರಳಿಬಾರದ ಸ್ಪಂದನ...

ಮುಂದಿನ ವರುಷ ಹೀಗಾಗದಿರಲಿ ಎಂದು ಪ್ರಾರ್ಥಿಸುತ್ತಾ, ಮುಂದಿನ ವರುಷವಾದರೂ ಸಿಕ್ಕಾಪಟ್ಟೆ ಪುಸ್ತಕ ಓದುವ ಪುಸ್ತಕ ಪ್ರೀತಿ-ಸಮಯವಿರಲಿ ಎಂದು ಕೇಳಿಕೊಳ್ಳುತ್ತಾ, "ಕೆಂಡಸಂಪಿಗೆ"ಗೆ ಈ ಸಲದ ಯುಕೆ ಕನ್ನಡಬಳಗದ ವರದಿ ಬರೆದು, ಪ್ರಹ್ಲಾದ ಮತ್ತು ವಸುಧೇಂದ್ರರಿಗೆ ಕ್ಷಮೆಪತ್ರ ಬರೆದು ಈ ವರ್ಷ ಮುಗಿಸಬೇಕು ಎಂದು ಕೊಂಡಿದ್ದೇನೆ, ದಯವಿಟ್ಟು ಹರಸಿರಿ.

8 comments:

  1. ಕೇಶವ್ ಸರ್, ಅದು ಹಾಗಾಗತ್ತೆ ಕೆಲವೊಮ್ಮೆ.. ಬೇಜಾರ್ ಮಾಡ್ಕೋಬೇಡಿ. ಮುಂದಿನ ವರ್ಷ ಹಾಗಾಗದೇ ಇರ್ಲಿ ಅಂತ ನಾನಂತೂ ಹಾರೈಸ್ತೀನಿ.
    ಮತ್ತೆ, ವರ್ಷ ಪೂರೈಸಿದ ಖುಶಿಗೆ ಶುಭಾಶಯಗಳು. :-)

    ReplyDelete
  2. ನೀವು ಬರೆದಿರುವುದನ್ನು ನೋಡಿದರೆ ಈ ವರ್ಷ ಏನೋ ದುಃಖದಲ್ಲಿದ್ದಿರಿ ಎಂದೆನಿಸುತ್ತದೆ. ಮುಂದಿನ ವರ್ಷ ಹಾಗಾಗದಿರಲಿ, ಹರ್ಷ ತರಲಿ ಎಂದು ಹಾರೈಸುತ್ತೇನೆ.

    ReplyDelete
  3. Dear Keshav,

    Hope your rekindled passion will take you to new heights.

    Best wishes

    Murali

    ReplyDelete
  4. ಕೇಶವ,
    ಜೀವನ ದೀರ್ಘವಾಗಿದೆ. ಶುಭಾಸ್ತೇ ಪಂಥಾನಃ ಸಂತು.

    ReplyDelete
  5. ಜೀವನ ದೀರ್ಘವಾಗಿದೆ :-)

    ಸುನಾಥರು ಹೇಳಿರೋ ಈ ಮಾತನ್ನ ನೆನಪಿಸ್ಕೋತಾ, ನಾನೂ ನನ್ನ ಪಟ್ಟಿಯಲ್ಲಿರೋ, ಕಪಾಟಲ್ಲಿರೋ, ಹಾರ್ಡ್ ಡಿಸ್ಕ್ ನಲ್ಲಿರೋ, ಗೂಗಲ್ ಬುಕ್ಸ್ ನಲ್ಲಿ ಬುಕ್ ಮಾರ್ಕ್ ಮಾಡೀಟ್ಟಿರೋ ಪುಸ್ತಕಗಳನ್ನೆಲ್ಲ ಒಂದಲ್ಲ ಒಂದು ದಿವಸ ಓದೇ ಓದ್ತೀನಿ ಅನ್ನೋ ಆಸೆಯನ್ನು ನಾನು ಬಿಡೋದಿಲ್ಲ :)

    -ಹಂಸಾನಂದಿ

    ReplyDelete
  6. ಸುಶ್ರುತ, ಹರೀಶ, ಮುರಳಿ, ಸುನಥ ಮತ್ತು ಹಂಸಾನಂದಿಯವರಿಗೆ,

    ಇನ್ನೂ ನನ್ನ ಬ್ಲಾಗನ್ನು ಓದುವುದಷ್ಟೇ ಅಲ್ಲ, ಪ್ರತಿಕ್ರಿಯಿಸಿ ಹಾರೈಸಿದ್ದಕ್ಕೆ ತುಂಬ ಧನ್ಯವಾದಗಳು.

    ಕೇಶವ

    ReplyDelete