Tuesday, November 25, 2008

ಟಪಾಲ


ನಾಕ ದಿನಾ ಆಗಿಲ್ಲಾ ತವರಿಗೆ ನಾ ಬಂದು
ಮತ್ತೇನು ಸುದ್ದಿ ತಂದಿ ಟಪಾಲಣ್ಣಾ ಇಂದು?

ನಾ ಹಳ್ಳಿ ಮುಕ್ಕಿ ಓದಾಕ ಬರ್ಯಾಕ ಬರಾಣಿಲ್ಲ
ಇತಲಾಗ ಬಾ, ಮೆಲ್ಲಕ ಓದಿ ಹೇಳು ಎಲ್ಲ

ನನ್ನ ಜೀವದ ಗೆಣೆಯನs ಬರಸಿರಬೇಕು
ಅಕ್ಷರದಾಗ ತನ್ನ ಎಲ್ಲಾ ಪ್ರೀತಿ ತುಂಬಿರಬೇಕು

ಘಸಕ್ಕನs ಯಾರರ ಬಂದಾರು, ಕೇಳಿಸೀತು ಇದು?
ಪಿಸು ಮಾತಿನಾಗ ತಿಳ್ಯುಹಾಂಗ ಕಿವ್ಯಾಗ ಓದು

ಘಡ್ಯಾಳದಾಗಿನ ಎರಡು ಮುಳ್ಳು ನಾವಿಬ್ರು
ಹನ್ನೆರಡು ಹೊಡಧಂಗ ಬಿಡಂಗಿಲ್ಲ ಒಬ್ರಿಗೊಬ್ರು

ಬಂದೀನಿ ಖರೆ, ಏನ್ ಹೇಳ್ಳಿ ನನ್ನ ಕತಿ
ಸದಾ ಅವನದs ಧ್ಯಾಸ ಸುಡತೈತಿ

ಅದನ್ನs ಬರಿಸ್ಯಾನ ಅಂತ ನೀ ಹೇಳ್ದಿ
ಉತ್ತರಾ ನನ್ನ ಎದ್ಯಾಗಿಂದು ನೀ ಕೇಳ್ದಿ

ಪಿರಿತೀನs ಶಾಹಿ, ಮನಸs ಟಾಕ
ಪರತ ಟಪಾಲ ಮರೀದs ಹಾಕ

(ನನ್ನ ತಂದೆ ದಶಕಗಳ ಹಿಂದೆ ಬರೆದ ಹಾಡು)

1 comment:

  1. nimma blog nanage bekaddannella needide. neelu, nadu naduve intha kavanagalu, cinema haagu sangeetada barahagalu. tumba late aagi nimma blog kannige bittu anista ide.:(

    ReplyDelete