Sunday, December 07, 2008

ಗಾಳಿಪಟ

ನಾವು ವಿಜಾಪುರದಲ್ಲಿರುವಾಗ ಪತಂಗ (ಉತ್ತರ ಕರ್ನಾಟಕದಲ್ಲಿ ಗಾಳಿಪಟಕ್ಕೆ ಪತಂಗ ಎನ್ನುತ್ತಾರೆ) ಹಾರಿಸುವ ಮಾಸ ಬಂದರೆ ನಮಗೆಲ್ಲ ಹಬ್ಬ. ಪತಂಗ ಮಾಡುವ ವಿದ್ಯೆ ಒಂಥರ ರೇಖಾಗಣಿತ ಕರತಲಾಮಕ ಮಾಡಿಕೊಂಡಂತೆ. ಯಾವ್ಯಾವುದೋ ಲೆಖ್ಖ ಹಾಕಿ, ಅಷ್ಟು ಗೇಣು, ಇಷ್ಟು ಬೆರಳು ಎಂದೆಲ್ಲ ದಾರವನ್ನು ಹಾಕಬೇಕು. ಅದೆಷ್ಟೋ ಬಿದಿರನ್ನು ಕತ್ತರಿಸಿ ಆ ಕಾಗದಕ್ಕೆ ಅಂಟಿಸಬೇಕು. ಇಷ್ಟೆಲ್ಲ ಮಾಡಿದರೂ ಪತಂಗ ಹಾರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಇರಲಿ ಎಂದು ಅಂಗಾಡಿಯಿಂದಲೂ ಒಂದು ತಂದಿಟ್ಟುಕೊಂಡಿರುತ್ತಿದ್ದೆವು. ಅದಾದ ಮೇಲೆ ಅದಕ್ಕೊಂದು ಬಾಲಂಗಸಿ.

ಎಲ್ಲೆಲ್ಲಿಂದಲೋ ಯರ್ಯಾರಿಂದಲೋ ಹೇಗ್ಹೇಗೋ ಐದೋ-ಹತ್ತು ಪೈಸೆ ಸೇರಿಸಿ ಗಟ್ಟಿ ದಾರದ ಉಂಡೆಗಳನ್ನು ತರುತ್ತಿದ್ದೆವು. ದಾರಿಯಲ್ಲಿ ಸಿಕ್ಕಿರುವ ಕಾಜಿನ ಚೂರುಗಳು-ಹಳೆ ಸೋಡಾ ಬಾಟಲಿಗಳು, ಮನೆಯಲ್ಲಿನ ಹಳೆ ಬಳೆಗಳು - ಇವನ್ನೆಲ್ಲ ಒಂದು ಒರಳಿನಂತಿರುವ ಕಲ್ಲಲ್ಲಿ ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡುತ್ತಿದ್ದೆವು. ಶಿರಿಯಾಳ ಶೆಟ್ಟಿ ಚೌಕಿನಲ್ಲಿರುವ ವಿಠೋಬಾ ದೇವರ ಗುಡಿಯ ಹಿಂದೆ ಮೂರು ಇಟ್ಟಂಗಿ ಇಟ್ಟು, ಅಂಗಡಿಯಿಂದ ತಂದ ಅಂಟನ್ನು ಕರಗಿಸಲು ಕೂರುತ್ತಿದ್ದೆವು. ದಾರಕ್ಕೆ ಮಾಂಜಾ ಮಾಡಲು ಮೂರು ನಾಕು ಹುಡುಗರಾದರೂ ಬೇಕು. ಒಬ್ಬ ಹೇರ್ ಪಿನ್ ನಲ್ಲಿ ದಾರವನ್ನು ಪೋಣಿಸಿ ಅದನ್ನು ಕರಗಿಸಿದ ಅಂಟಿನ ಪಾತ್ರೆಯಲ್ಲಿ ಅದ್ದಿ ಹಿಡಿದು ಕೂತುಕೋಬೇಕು. ಒಬ್ಬ ಬಟ್ಟೆಯಲ್ಲಿ ಗಾಜಿನ ಚೂರುಗಳನ್ನು ಸುತ್ತಿ ಅಂಟಿನಿಂದ ಬಂದ ದಾರವನ್ನು ಅದರಿಂದ ದಾಟಿಸಬೇಕು. ಇನ್ನೊಬ್ಬ ಅದನ್ನು ಎಳೆದು ಒಣ ಹಾಕಬೇಕು. ಅದೆಲ್ಲ ಒಣಗುವವರೆಗೂ ಕಾಯಬೇಕು, ಯಾರಾದರೂ ಅದನ್ನು ಕದ್ದುಕೊಂಡು ಹೋದರೆ?

ಪತಂಗ ಹಾರಿಸುವಾಗ ದಾರದ ಫಿರಕಿಯನ್ನು ಹಿಡಿದುಕೊಳ್ಳಲು ಒಬ್ಬ, ಹಾರಿಸುವವನೊಭ್ಭ, ನೋಡಲು ಕಡಿಮೆಯೆಂದರೂ ನಾಕಾರು ಜನ. ಇಂಥಹ ಮೂವತ್ತರಿಂದ ಐವತ್ತು ಗುಂಪುಗಳು. ಎಷ್ಟು ತರಹದ ಪತಂಗಗಳು! ಚಿಕ್ಕವು, ದೊಡ್ಡವು, ಜೋಡಿ ಪತಂಗಗಳು, ಬಾಲಂಗಸಿ ಇರುವ ಪತಂಗಗಳು, ಇಲ್ಲದವುಗಳು, ನ್ಯೂಸ್ ಪೇಪರ್ ನಲ್ಲಿ ಮಾಡಿದವುಗಳು, ಬಣ್ಣ ಬಣ್ಣದ ಹಾಳೆಯವು, ಚಿತ್ರ ಬರೆದವುಗಳು, ಅರ್ಧ ಹರಿದವುಗಳು - ಆಕಾಶದ ತುಂಬೆಲ್ಲ ಬಣ್ಣ ಬಣ್ಣದ ಮಕ್ಕಳು ಕುಣಿದಾಡುತ್ತಿರುವಂತೆ! ಪತಂಗ ಹಾರಲು ಶುರುವಾಗುತ್ತಿದ್ದಂತೆಯೇ ಶುರು - ಕಾಟಾಕೂಟಿ - ಒಬ್ಬರ ಪತಂಗ ಒಬ್ಬರು ಕತ್ತರಿಸಲು. ಮಾಂಜಾ ಹಾಕಿದ ದಾರ ಮಾಂಜಾ ಹಾಕದ ಪತಂಗ ಕತ್ತರಿಸಲು ಎಷ್ಟು ಹೊತ್ತು ಬೇಕು? ಆದರೆ ಎರಡು ಮಾಂಜಾ ಹಾಕಿದ ಪತಂಗಗಳಿಗೆ ಕಾಟಾಕೂಟಿ ಬಿದ್ದರೆ ಬರುವ ಮಜವೇ ಬೇರೆ! ಯಾವುದಾದರೂ ಪತಂಗ ಕಾಟಾಕೂಟಿಯಲ್ಲಿ ಕತ್ತರಿಸಿ ಬಿದ್ದರೆ, ಮಕ್ಕಳ ತಂಡ ಬೀಳಲಿರುವ ಪತಂಗ ಹಿಡಿಯಲು ಓಡುತ್ತಿದ್ದೆವು. ಕೆಲೆವೊಮ್ಮೆ ಉಪಲಿಬುರಜದವರೆಗೂ ಓಡಿ ದಣಿಯುತ್ತಿದ್ದೆವು.

ಎರಡೂವರೆ ಸಾವಿರ ಕಿಲೋಮೇಟರ್ ದೂರದಲ್ಲಿರುವ ಅಫಘಾನಿಸ್ತಾನದ ಕಾಬೂಲಿನಲ್ಲೂ ಅದೇ ಸುಮಾರಿಗೆ ಅಮೀರ್ ಮತ್ತು ಹಸನ್ ಎನ್ನುವ ಹುಡುಗರು ಯಥಾವತ್ ಹೀಗೇ ಮಾಡಿ ಎಲ್ಲ ಪತಂಗಳನ್ನು ಕತ್ತರಿಸಿ ಗೆಲ್ಲುತ್ತಾರೆ. ಹಾಗಂತ ಐದೂವರೆ ಸಾವಿರ ಮೈಲಿ ದೂರದ ಅಮೇರಿಕದಲ್ಲಿ ಕೂತು ಖಾಲಿದ್ ಹುಸೇನಿ "Kite Runner" ಎನ್ನುವ ಕಾಲ್ಪನಿಕ ಕತೆಯಲ್ಲಿ ದಾಖಲಿಸಿದ್ದನ್ನು ಇಂಗ್ಲಂಡಿನ ಡಿಸೆಂಬರಿನ ಚಳಿಯಲ್ಲಿ ಬೆಚ್ಚಗೆ ಕೂತು, ೧೯೭೮ರ ಸದಾ ಬೇಸಿಗೆ ಕಾಲದ ವಿಜಾಪುರದ ನನ್ನ ಬಾಲ್ಯದಲ್ಲಿ ನೆನೆದು ಖುಷಿಸುತ್ತಿದ್ದೇನೆ.

ಎತ್ತಣ ಕಾಬೂಲು, ಎತ್ತಣ ವಿಜಾಪುರ - ಎತ್ತಣಿದೆತ್ತ ಸಂಬಂಧವೈಯ್ಯಾ!

4 comments:

 1. ಕೇಶವ,
  ನನ್ನ ಬಾಲ್ಯದ ನೆನಪುಗಳು ಉಮ್ಮಳಿಸುವಂತೆ ಮಾಡಿದಿರಿ.

  ReplyDelete
 2. ಸುನಾಥ,

  ಧನ್ಯವಾದಗಳು

  -ಕೇಶವ

  ReplyDelete
 3. ಕೇಶವ ಕುಲಕರ್ಣಿಯವರೇ,

  ಗಾಳಿ ಪಟ ಲೇಖನ ಓದಿದ ಮೇಲೆ ನನಗೆ ಬಾಲ್ಯದ ನೆನಪಾಯಿತು.. ನಿಮ್ಮಂತೆ ನಾವು ಹೀಗೆ ಕಲರ್ ಪೇಪರಿನಲ್ಲಿ ಮಾಡಿ ಅದಕ್ಕೆ ಸೂತ್ರ ಹಾಕುತ್ತಿದ್ದೆವು. ಅದು ಸರಿಯಾದ ಲೆಕ್ಕಚಾರದಲ್ಲಿ. ನಂತರ ದಾರ, ಅಂಟು, ಮಾಂಜಪುಡಿ[ಗಾಜಿನಚೂರುಗಳನ್ನು]ಅಂಗಡಿಯಿಂದ ತಂದು ಮೂರ್ನಾಲ್ಕು ಜನ ಸೇರಿ ಮಾಂಜದಾರ ರೆಡಿ ಮಾಡುತ್ತಿದ್ದೆವು. ಅನಂತರ ಪಟ ಹಾರಿಸುವುದು, ಡೀಲು ಬಿಡುವುದು. ವಾಲಿಸುವುದು, ಗೋತ ಹೊಡೆಸುವುದು...ಕೊನೆಗೆ ಆಟ್ಯಾಕ್ ಮಾಡಿ ಬೇರೆ ಪಟಗಳನ್ನು ಚಟ್ ಆನ್ನಿಸುವುದು....ಎಲ್ಲವೂ ನಿಮ್ಮಂತೆಯೇ ಅದರೆ ಪದಗಳು ಬೇರೆಬೇರೆ... ಚೆನ್ನಾಗಿದೆ.

  ReplyDelete
 4. ಶಿವು,
  ಥ್ಯಾಂಕ್ಸ್!
  -ಕೇಶವ

  ReplyDelete