Monday, December 15, 2008

ಟೆಸ್ಟ್ ಕ್ರಿಕೆಟ್ ಮತ್ತು ಹಿಂದುಸ್ತಾನೀ ಸಂಗೀತ

ಇಂಗ್ಲಂಡಿನ ಅತೀ ಜನಪ್ರೀಯ ಆಟ ಕ್ರಿಕೆಟ್ ಅಂತ ನೀವು ತಿಳಿದಿದ್ದರೆ ಅದು ಶುದ್ಧ ತಪ್ಪು. ಕಾಲ್ಚಂಡಾಟ - ಅಮೇರಿಕದಲ್ಲಿ ಸಾಕರ್ ಅಂತಾರಲ್ಲ - ಆ ಆಟ ಇಲ್ಲಿನ ಜನರಿಗೆ ಅಚ್ಚುಮೆಚ್ಚು. ವೀಕೆಂಡಲ್ಲಿ ಒಳ್ಳೆ ಫುಟ್‍ಬಾಲ್ ಮ್ಯಾಚ್ ಇದ್ದರೆ ಆಯಿತು, ಇಲ್ಲಿಯ ಪಡ್ಡೆ ಹುಡುಗರು ತಮ್ಮ ಗರ್ಲ್‍ಫ್ರೆಂಡುಗಗಳನ್ನೂ ಮರೆತು, ಪಬ್ಬಿನಲ್ಲಿ ಬಿಯರ್ ಮೇಲೆ ಬಿಯರ್ ಇಳಿಸಿ, ಸ್ಕೈ ಸ್ಪೋರ್ಟ್‍ ಟಿವಿ ಚನಲ್ ನೋಡುತ್ತ ಎರಡು ಗಂಟೆ ಕಳೆದು ಬಿಡುತ್ತಾರೆ. ಇಲ್ಲಿನ ದಿನಪತ್ರಿಕೆಯಲ್ಲಿ ಅರ್ಧಕಿಂತ ಹೆಚ್ಚು ಆಟದ ಪುಟಗಳು ಪುಟ್‍ಬಾಲಿಗೇ ಮೀಸಲು; ಕ್ರಿಕೆಟ್ಟಿಗೆ ಏನಿದ್ದರೂ ಅರ್ಧ ಪುಟ, ಇಂಗ್ಲಂಡ್ ಗೆದ್ದಾಗ ಮಾತ್ರ ಪೂರ್ತಿ ಪುಟ.

ವರ್ಷದ ೧೦ ತಿಂಗಳು ಒಂದಿಲ್ಲೊಂದು ಪುಟ್‍ಬಾಲ್ ಆಟ ನಡೆಯುತ್ತಲೇ ಇರುತ್ತದೆ ಈ ದೇಶದಲ್ಲಿ. ಪ್ರತಿ ಚಿಕ್ಕ ಊರಿಗೂ ಒಂದು ಪುಟ್‍ಬಾಲ್ ಸ್ಟೇಡಿಯಂ, ಪ್ರತಿ ಊರಿಗೂ ಒಂದು ಕ್ಲಬ್ಬು, ಆ ಕ್ಲಬ್ಬಿಗೆ ಒಂದಿಷ್ಟು ಪ್ರಾಯೋಜಕರು. ಅಂಥ ಚಿಕ್ಕ ಊರಿ ಆಟಕ್ಕೂ ಹತ್ತುಸಾವಿರ ಜನ ಕೈಯಲ್ಲಿ ಬಿಯರ್ ಕ್ಯಾನ್ ಹಿಡಿದುಕೊಂಡು ಎಲ್ಲಿಂದಲೋ ಜಮಾಯಿಸಿಬಿಡುತ್ತಾರೆ. ದೊಡ ಕ್ಲಬ್ಬಿಗೆ ಆಡುವ ಒಂದೊಂದು ಆಟಗಾರರ ಸಂಬಳ ವಾರಕ್ಕೆ ಮಿಲಿಯನ್ ಪೌಂಡುಗಳ ಲೆಖ್ಖದಲ್ಲಿ!

ಕ್ರಿಕೆಟ್ ಫುಟ್‍ಬಾಲಿನಷ್ಟು ಜನಪ್ರೀಯ ಅಲ್ಲದಿರಬಹುದು. ಆದರೆ ಟೆಸ್ಟ್ ಮ್ಯಾಚು ನೋಡಲು ಈ ದೇಶದಲ್ಲಿ ಸೇರುವಷ್ಟು ಜನ ಭಾರತ, ಆಸ್ಟ್ರೇಲಿಯಾಗಳಲ್ಲೂ ಸೇರುವುದಿಲ್ಲ. ಭಾರತದಲ್ಲಿ ಒಂದು ದಿನ ಮತ್ತು ೨೦-೨೦ ಆಟಗಳಿಗೆ ಮಾತ್ರ ಪ್ಪ್ರೇಕ್ಷಕರು, ಟೆಸ್ಟ್ ಆಟ ನೋಡಲು ಜನರನ್ನು ಹುಡುಕಿ ತರಬೇಕಾದ ಪರಿಸ್ಥಿತಿ!

ಅದೆಲ್ಲ ಇರಲಿ, ಇವತ್ತು ನಮ್ಮ ಹುಡುಗರು ಚೆನ್ನೈನಲ್ಲಿ ಮ್ಯಾಚು ಗೆದ್ದರಲ್ಲ, ನಮಗೆಲ್ಲ ಖುಷಿಯೋ ಖುಷಿ. ಸೇಹ್‍ವಾಗನ ವೇಗವೇನು, ತಂಡುಲ್ಕರನ ಕಲೆಯೇನು, ಯುವರಾಜನ ಆರ್ಭಟವೇನು - ನಮಗೆಲ್ಲ ಇಂಗ್ಲಂಡನ್ನೇ ಗೆದ್ದ ಖುಷಿ. ಇವೆಲ್ಲದರ ನಡುವೆ ಮ್ಲಾನ್ ಮುಖ ಮಾಡಿ ತಲೆ ಕೆಳಗೆ ಮಾಡಿ ಕೂತ ದ್ರಾವಿಡನ ಮುಖ ಕಂಡು ಪಿಚ್ಚೆನಿಸುತ್ತದೆ - ಬ್ಯಾಟಿಂಗ್ ಆಡುವುದು ಕೈಯಿಂದ ಅಲ್ಲವೇ ಅಲ್ಲ, ಮನಸ್ಸಿನಿಂದ.

ಯಾರೇ ಗೆಲ್ಲಲಿ, ಇಂಥದ ಟೆಸ್ಟ್ ಆಟ ನೋಡಿದಾಗ ಅನಿಸುತ್ತದೆ - ಐದು ದಿನ ಈ ಕ್ರಿಕೆಟ್ಟಿನ ಮುಂದೆ ಯಾವ ಆಟಗಳೂ ಇಲ್ಲ ಅಂತ. ೯೦ ನಿಮಿಷದಲ್ಲಿ ಮುಗಿಯುವ ಫುಟ್‍ಬಾಲ್, ನಾಕು ಗಂಟೆಯಲ್ಲಿ ಮುಗಿಯುವ ೨೦-೨೦, ೨-೩ ಗಂಟೆಯಲ್ಲಿ ಮುಗಿಯುವ ಟೆನಿಸ್ - ಊಹುಂ - ಐದು ದಿನದ ಕ್ರಿಕೆಟ್ಟಿಗೆ ಈ ಯಾವ ಆಟಗಲೂ ಹತ್ತಿರ ಕೂಡ ಬರಲಾರವು. ೯೦ ನಿಮಿಷದ ಫುಟ್‍ಬಾಲ ಸಿನೆಮಾ ಅಥವಾ ಪಾಪ್ ಸಂಗೀತದಂತೆ - ಧಡಧಡ ಎಂದು ಒಂದೇ ವೇಗದಲ್ಲಿ ಶುರುವಾಯಿತು ಅನ್ನುವಷ್ಟರಲ್ಲಿ ಏರಿಳಿತವಿಲ್ಲದೇ ಮುಗಿದೇ ಹೋಗುತ್ತದೆ; ಆದರೆ ಐದು ದಿನದ ಕ್ರಿಕೆಟ್ ಹಿಂದುಸ್ತಾನೀ ಸಂಗೀತದಂತೆ - ಆಲಾಪ, ಖಯಾಲ್ ಮತ್ತು ದ್ರುತ್‍ಗತ್ - ನಿಧಾನವಾಗಿ ಬಿಚ್ಚಿಕೊಳ್ಳುತ್ತ, ಆವರಿಸಿಕೊಳ್ಳುತ್ತ, ಒಳಕ್ಕೆ ಇಳಿಯುತ್ತ ಹೋಗುತ್ತದೆ.

7 comments:

 1. ಐದು ದಿನದ ಕ್ರಿಕೆಟ್ ಹಿಂದುಸ್ತಾನಿ ಸಂಗೀತದಂತೆ ಹೌದು.
  ೨೦-೨೦ ಕ್ರಿಕೆಟ್‌ಗೆ ಏನಂತೀರಾ?

  ReplyDelete
 2. ಸುನಾಥ,
  ೨೦-೨೦ ಸಿನೆಮಾ ಹಾಡುಗಳಂತೆ, ಒಂಡೇ ಮ್ಯಾಚು ಅರೆಶಾಸ್ತ್ರೀಯ ಸಂಗೀತದಂತೆ (ಗಜಲ್, ತುಮರಿ, ದಾಸರ ಹಾಡು). ಏನಂತೀರಿ?

  ಕೇಶವ

  ReplyDelete
 3. :) ಟೆಸ್ಟ್ ಅನ್ನು ಮಂದ್ರ ಅಂತ್ಲೂ ಅನ್ನಬಹುದು ಅಲ್ವಾ? ;)

  ReplyDelete
 4. ಟೆಸ್ಟ್ ಕ್ರಿಕೆಟ್ ಮತ್ತು ಹಿಂದೂಸ್ತಾನಿ ಸಂಗೀತ ಎಂಥಹಾ ಅದ್ಭುತ ಕಲ್ಪನೆ.ಇಂಗ್ಲೆಂಡ್ ಅನುಭವಗಳನ್ನು ಕೇಳಲು ಖುಷಿಯಾಗುತ್ತೆ.

  ನನ್ನ ಬ್ಲಾಗಿಗೆ ಬಂದದ್ದಕ್ಕೆ ಧನ್ಯವಾದ.ಮಲ್ಲಿಗೆ ಮುಡಿಯುತ್ತಿರಿ.
  ಅಶೋಕ ಉಚ್ಚಂಗಿ
  http://mysoremallige01.blogspot.com/

  ReplyDelete
 5. ಕೇಶವ ಕುಲಕರ್ಣಿಯವರೆ,
  ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ. ನಿಮ್ಮ ಲೇಖನ ಚಿಕ್ಕದಾಗಿ ಚೊಕ್ಕವಾಗಿದೆ. ನಿಮ್ಮ ಮಾತಿನಂತೆ ಕ್ರಿಕೆಟ್ ಒಂದು ಸುಂದರ ಕ್ಲಾಸಿಕ್ ಸಂಗೀತದಂತೆ ! ಮುಂದೆ ಬರುತ್ತಿರುತ್ತೇನೆ.. ನೀವು ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳೀಗೆ ಬನ್ನಿ ಅಲ್ಲಿ ಫೋಟೊ ಮತ್ತು ಲೇಖನಗಳಿವೆ. ನಿಮಗಿಷ್ಟವಾಗಬಹುದು. ಮತ್ತೆ ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ.
  ನನ್ನ ಬ್ಲಾಗ್ ವಿಳಾಸ:
  http://chaayakannadi.blogspot.com/

  ಮತ್ತೊಂದು ವಿಭಿನ್ನ ಬರಹಕ್ಕಾಗಿ :
  http://camerahindhe.blogspot.com/

  ReplyDelete
 6. ಸುಶ್ರುತ,
  ಹೌದು, ಮಂದ್ರ ಎನ್ನಬಹುದು.

  ಅಶೋಕ್ ಮತ್ತು ಶಿವು,
  ಥ್ಯಾಂಕ್ಸ್

  ಕೇಶವ

  ReplyDelete
 7. keshava kulakarniyavare,
  namaste . nimma blog ge aagage bheti needuttiruttene..bahaLa aaptavaagide.

  hindustani sangeeta , test cricket upame bahaLa sogasaagide!!

  hosa varushada shubhaashayagaLu.
  preetiyinda,
  archana

  ReplyDelete