Sunday, January 18, 2009

ಆಸ್ಕರಿನಿಂದ ಬಂದರೆ ಮಾತ್ರ ತೀರ್ಥ?

ಕೆಂಡಸಂಪಿಗೆ ಯಲ್ಲಿ ಪ್ರಕಟಿತ ಬರಹ:

೧೯೮೨ರಲ್ಲಿ ಗಾಂಧಿ ಚಿತ್ರಕ್ಕೆ ೮ ಆಸ್ಕರ್ ಪ್ರಶಸ್ತಿಗಳು ಬಂದಾಗ ನನಗಿನ್ನೂ ಅರ್ಧಂಬರ್ಧ ಇಂಗ್ಲೀಷು, ಅರ್ಧಂಬರ್ಧ ಹಿಂದಿ ಅರ್ಥವಾಗುತ್ತಿತ್ತು. ಆದರೂ ಗಾಂಧಿಯ ಮೇಲಿನ ಪ್ರೀತಿಯಿಂದಲೋ (ಆಗ ನಮಗೆ ಮಕ್ಕಳಿಗೆಲ್ಲ ಗಾಂಧಿ ‘ತಾತ’ ಮತ್ತು ‘ರಾಷ್ಟ್ರಪಿತ’ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರು ಎನ್ನುವುದನ್ನು ಬಿಟ್ಟರೆ ಗಾಂಧಿಯ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಈಗಲೂ ಪ್ರೀತಿಯಿಲ್ಲ ಎಂದಲ್ಲ) ಅಥವಾ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಿನೆಮಾ ಪ್ರಶಸ್ತಿ ಬಂದದ್ದರಿಂದಲೋ (ಆ ವಯಸ್ಸಿಗೆ ನಮಗೆ ನೋಬಲ್ ಮತ್ತು ಆಸ್ಕರ್‍ಗಳು ಜಗತ್ತಿನಲ್ಲೇ ಶ್ರೇಷ್ಟ ನಿಷ್ಪಕ್ಷಪಾತ ಪ್ರಶಸ್ತಿಗಳು), ಆ ಸಿನೆಮಾವನ್ನು ಒಂದು ಸಲ ಇಂಗ್ಲೀಷಿನಲ್ಲಿ, ಇನ್ನೊಂದು ಸಲ ಹಿಂದಿಯಲ್ಲಿ ನೋಡಿದೆ. ನಮಗೆ ಕ್ವಿಜ್ ಸ್ಪರ್ಧೆಗಳಲ್ಲಿ ಆಗ ಕೇಳುತ್ತಿದ್ದ ಪ್ರಶ್ನೆಗಳಲ್ಲಿ "ಆಸ್ಕರ್ ಪಡೆದ ಮೊದಲ ಭಾರತೀಯ ಯಾರು?" ಎಂಬ ಪ್ರಶ್ನೆ ಮೇಲಿಂದ ಮೇಲೆ ಕೇಳಿಬರುತ್ತಿತ್ತು. ಕೆಲ ಹುಡುಗರು ‘ಗಾಂಧಿ’ ಎಂದು ಉತ್ತರಕೊಟ್ಟು ನಗೆಗೀಡಾದರೂ, ನಾವೆಲ್ಲ ‘ಭಾನು ಅಥಯ್ಯಾ’ ಎಂದು ಊರು ಹೊಡೆದು ಸರಿ ಉತ್ತರಕೊಡುತ್ತಿದ್ದೆವು. ಥೇಟ್ ಗಾಂಧಿಯ ತರಹವೇ ಕಾಣುವ ವ್ಯಕ್ತಿ ಭಾರತದ ನಟ ಅಲ್ಲ ಎನ್ನುವುದು ನಮಗೆ ತುಂಬ ಗೊಂದಲ ಉಂಟುಮಾಡಿತ್ತು. ಬೆನ್ ಕಿಂಗ್‍ಸ್ಲೆಯ ನಿಜ ಹೆಸರು ಕೃಷ್ಣ ಭಾಂಜಿ ಎಂದು ಗೊತ್ತಾಗಿ, ಆತನೂ ಭಾರತೀಯನೇ ಎಂದು ಸುಳ್ಳು ಸುಳ್ಳೇ ಖುಷಿ ಪಟ್ಟಿದ್ದೆವು.

ಹತ್ತು ವರುಷದ ನಂತರ ೧೯೯೨ರಲ್ಲಿ, ಸಾವಿನ ಹಾಸಿಗೆಯಲ್ಲಿದ್ದ ಸತ್ಯಜಿತ್ ರೇ ಗೆ ಜೀವಿತಾವಧಿ ಸಾಧನೆಯ ಆಸ್ಕರ್ ಬಂದಾಗ ನಾವೆಲ್ಲ ಕುಣಿದು ಕುಪ್ಪಳಿಸಿದ್ದೆವು. ಸತ್ಯಜಿತ್ ರೇನ ಒಂದೇ ಒಂದು ಚಿತ್ರವನ್ನು ಆಗ ನೋಡಿರದಿದ್ದರೂ. ಆಗ ನನ್ನ ರೂಮೇಟ್ ಆಗಿದ್ದ ಹೆಗ್ಗೋಡಿನ ಹುಡುಗನಿಗೆ ಖುಷಿಯೋ ಖುಷಿ. ನೀನಾಸಂನಲ್ಲಿ ರೇ ಸಿನೆಮಾಗಳನ್ನು ನೋಡಿರುವುದರ ಬಗ್ಗೆ, ಅಲ್ಲಿ ಆಗುವ ಚರ್ಚೆಗಳ ಬಗ್ಗೆ ದಿನಗಟ್ಟಲೇ ಮಾತಾಡಿ ನಮ್ಮನ್ನು ದಂಗು ಬಡಿಸಿದ್ದ. ಅದಾಗಿ ಹತ್ತು ವರುಷಗಳ ನಂತರ ೨೦೦೨ನಲ್ಲಿ, ‘ಲಗಾನ್’ ಪರಂಗಿ ಸಿನೆಮಾ ವಿಭಾಗದಲ್ಲಿ ಕೊನೆ ಐದು ಸಿನೆಮಾಗಳ ಮಟ್ಟ ಮುಟ್ಟಿದಾಗ, ಪತ್ರಿಕೆಗಳ ಮತ್ತು ಟಿವಿ ಚಾನಲ್‍ಗಳ (ಅದರಲ್ಲೂ ಇಂಗ್ಲೀಷ್) ಉಮೇದಿಗೆ ಮೇರೆಯೇ ಇರಲಿಲ್ಲ. ‘ಲಗಾನ್’ ಕೂದಲೆಳೆಯಿಂದ ಪ್ರಶಸ್ತಿಯನ್ನು (ಪಿ ಟಿ ಉಷಾ ಕೂದಲೆಳೆಯಿಂದ ಕಂಚಿನ ಪದಕ ತಪ್ಪಿಸಿಕೊಂಡಂತೆ) ತಪ್ಪಿಸಿಕೊಂಡಾಗ ಬೇಸರದಲ್ಲಿ ನಿಟ್ಟುಸಿರಿಟ್ಟವು. ಇದೀಗ ಎ ಆರ್ ರೆಹಮಾನಿಗೆ ‘ಸ್ಲಂಡಾಗ್ ಮಿಲೇನಿಯರ್’ ಚಿತ್ರಸಂಗೀತಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಾಗ ಮತ್ತೆ ಪತ್ರಿಕೆಗಳು ಮತ್ತು ಟಿವಿ ಚಾನಲ್‍ಗಳು ಖುಷಿಯಲ್ಲಿ ನರಳುತ್ತಿವೆ. ಭಾರತದ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಸ್ಥಾನಮಾನ ಸಿಕ್ಕಿತು, ಭಾರತೀಯರು ಧನ್ಯರಾದರು ಎಂಬಂತೆ ಬರೆಯುತ್ತಿವೆ.

ರೆಹೆಮಾನ್ ತಾನು ಒಳ್ಳೆಯ ಸಿನೆಮಾ ಸಂಗೀತಗಾರನೆಂದು ಸಾಧಿಸಲು ಗೋಲ್ಡನ್ ಗ್ಲೋಬ್ ಬೇಕಾಗಿಲ್ಲ. ರೋಜಾ, ತಿರುಡಾ ತಿರುಡಾ, ಅಲೆ ಪಾಯುತೆ, ಸ್ವದೇಸ್, ಲಗಾನ್, ೧೯೪೭-ಅರ್ತ್, ಕರುತಮ್ಮ ಇತ್ಯಾದಿ ಸಿನೆಮಾ ಹಾಡುಗಳು ಮತ್ತು ಸಂಗೀತ ಸ್ಲಂಡಾಗ್ ಮಿಲೆನಿಯರ್‍ಗಿಂತ ತುಂಬ ಚೆನ್ನಾಗಿವೆ, ಹಾಗೆಂದು ಅವನ ಪ್ರತಿಭೆ ಅಳೆಯಲು ಗೋಲ್ಡನ್ ಗ್ಲೋಬ್ ಬರುವವರೆಗೂ ಕಾಯಬೇಕಾಗಿಲ್ಲ. ಭಾರತೀಯ ಸಂಗೀತ ಪರಂಪರೆ ಪಾಶ್ಚಾತ್ಯ ಸಂಗೀತಕ್ಕಿಂತ ತುಂಬ ಭಿನ್ನ ಎನ್ನುವ ಬೇಸಿಕ್ ಗೊತ್ತಿಲ್ಲದವರಿಗೆ ಭಾರತೀಯ ಸಂಗೀತಗಾರರಿಗೆ ಯಾಕೆ ಗ್ರಾಮಿ ಬರುವುದಿಲ್ಲ ಎಂದು ತಲೆ ಚಚ್ಚಿಕೊಳ್ಳುತ್ತಲೇ ಇರುತ್ತಾರೆ (೨೦೦೬ರಲ್ಲಿ ಜಾಕೀರ್ ಹುಸೇನ್‍ಗೆ ಗ್ರಾಮಿ ತಪ್ಪಿಹೋಯಿತು). ದುರಂತವಿರುವುದು, ಒಂದು ಗೋಲ್ಡನ್ ಗ್ಲೋಬ್, ಒಂದು ಆಸ್ಕರ್ ನಮ್ಮ (ಮುಖ್ಯವಾಗಿ ಮೀಡಿಯಾದ) ದೃಷ್ಟಿಕೋನವನ್ನೇ ಬದಲಿಸುತ್ತಲ್ಲ ಅಲ್ಲಿ. ಇದುವರೆಗೂ ಆಸ್ಕರ್ ಪಡೆದಿರುವ ಚಿತ್ರಗಳೆಲ್ಲ ಚೆನ್ನಾಗಿಲ್ಲವಲ್ಲ. ೨೦೦೨ ನಲ್ಲಿಯ ಕಾಸರವಳ್ಳಿಯ ‘ದ್ವೀಪ’ ಕಲಾಕೃತಿಯೋ, ಅಥವಾ ಆಸ್ಕರ್ ಗೆದ್ದ ‘ಚಿಕಾಗೋ’ ಕಲಾಕೃತಿಯೋ ಬಿಡಿಸಿ ಹೇಳಬೇಕಾಗಿಲ್ಲ. ಭಾರತೀಯ ಸಂಗೀತಗಾರರಿಗೆ ಗೋಲ್ಡನ್ ಗ್ಲೋಬ್ ಬರಲಿ, ಆಸ್ಕರ್ ಬರಲಿ, ಗ್ರಾಮಿ ಬರಲಿ - ಅದು ಆಯಾ ಪ್ರಶಸ್ತಿ ಮಂಡಲಿಗಳ ಹೆಚ್ಚುತ್ತಿರುವ ಪ್ರಪಂಚದ ಅರಿವನ್ನು ತೋರಿಸುತ್ತದೇ ವಿನಹ ಆ ಸಂಗೀತಗಾರರು ಇಂಥ ಪ್ರಶಸ್ತಿ ಬಂದ ಮಾತ್ರಕ್ಕೆ ಪ್ರತಿಭೆ ಇರುವವರು ಎಂದೇನೂ ಆಗುವುದಿಲ್ಲ. ಈಗಿನ ಮೆಡಿಯಾಕರ್ ಮೀಡಿಯಾ ಸಂಸ್ಕೃತಿಯಲ್ಲಿ ಬಾಲಿವುಡ್‍ನಿಂದ ಬಂದಿರುವುದೇ ಭಾರತದ ಅತ್ಯುತ್ತಮ ಸಿನೆಮಾ ಮತ್ತು ಸಂಗೀತ ಎನ್ನುವಂತೆ ಬರೆಯುವ ತೋರಿಸುವ ಸಮಯದಲ್ಲಿ, ಇಂಥ ಪ್ರಶಸ್ತಿಗಳು ಪ್ರಾದೇಶಿಕ ಸಿನೆಮಾ, ಸಂಸ್ಕೃತಿ ಮತ್ತು ಸಂಗೀತವನ್ನು ಇನ್ನೂ ಕಡೆಗಾಣಿಸುವಂತೆ ಕಿರಿಯ ಪೀಳಿಗೆಯನ್ನು ಪ್ರಚೋದಿಸುತ್ತದೆ.

ನಮ್ಮ ಪ್ರತಿಭೆಗಳಿಗೆ ಪಾಶ್ಚಾತ್ಯ ಮನ್ನಣೆ ಸಿಕ್ಕರೆ ಮಾತ್ರ ಅವರನ್ನು ಹೊಗಳುವ ಭೋಳೆತನ ನಮ್ಮದು. ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಏನೂ ಗೊತ್ತಿಲ್ಲದ ಇಂಗ್ಲೀಷ್ ಪತ್ರಿಕೆಗಳು, ಟಿವಿ ಚಾನಲ್‍ಗಳು ಪಶ್ಚಿಮದಿಂದ ಬಂದ ಉಚ್ಚೆ ಕೂಡ ತೀರ್ಥ ಎಂದು ಬರೆಯುವಾಗ ಗೋಲ್ಡನ್ ಗ್ಲೋಬ್ ಮತ್ತು ಆಸ್ಕರ್‍ಗಳಿಗೆ ಎಂಥ ಮಹತ್ವ ಕೊಡುತ್ತವೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಕಮಲ್‍ಹಾಸನ್‍-ಮುಮ್ಮುಟ್ಟಿ ಬಗ್ಗೆಯಾಗಲೀ, ಇಳೆಯರಾಜಾ-ಜೇಸುದಾಸ್ ಬಗ್ಗೆ ಆಗಲೀ, ರಷೀದ್ ಖಾನ್-ಚೌರಾಸಿಯಾ ಬಗ್ಗೆ ಆಗಲೀ ಅಸಡ್ಡೆ ತೋರಿಸುವ ಈ ಮೀಡಿಯಾ, ಅವರಿಗೆ ತಪ್ಪಿ ಒಂದು ಜನಪ್ರಿಯ ಪಾಶ್ಚಾತ್ಯ ಪ್ರಶಸ್ತಿ ಬಂದು ಬಿಡಲಿ, ಆಗ ಅವರ ಪ್ರತಿಭೆಯ ಬಗ್ಗೆ ಅವರಿಗೆ ಅರಿವಾಗುತ್ತದೆ. ‘ತಾರೆ ಜಮೀನ್ ಪರ್’ ಆಸ್ಕರ್ ರೇಸಿನಿಂದ ಹೊರ ಬಿದ್ದರೆ ಅದು ಕೆಟ್ಟ ಚಿತ್ರವೇನೂ ಆಗುವುದಿಲ್ಲ. ಈಗಿನ ಬಂಡವಾಳಶಾಹಿ ಯುಗದಲ್ಲಿ, ಇಂಥ ಪಾಶ್ಚಾತ್ಯ ಪ್ರಶಸ್ತಿಗಳು ನಮ್ಮ ಸಂಗೀತದ, ಸಾಹಿತ್ಯದ, ಸಿನೆಮಾದ ಆರ್ಥಿಕತೆಯನ್ನು ಹೆಚ್ಚಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ, ಆದರೆ ಅದೇ ಸಮಯಕ್ಕೆ ಪಶ್ಚಿಮವನ್ನು ಮೆಚ್ಚಿಸುವ ಒಂದೇ ಉದ್ದೇಶದಿಂದ ಮಾಡುವ ಕಲೆ ಅರವಿಂದ ಅಡಿಗರ ಬಿಳಿಹುಲಿಯಂತೆ ಆಗುವ ಅಪಾಯವಿದೆ ಎನ್ನುವುದನ್ನು ಮರೆಯಬಾರದು.


ಕೇಶವ, ಭಾರತೀಯರು ಪಾಶ್ಚಿಮಾತ್ಯ ಪ್ರಶಸ್ತಿಗಳಿಗೆ ಮೋಹ ಪಡುವದನ್ನು ಬಿಡದಿದ್ದರೆ, slum dog ಆಗಿಯೇ ಉಳಿಯುತ್ತಾರೆ. ಉತ್ತಮ ವಿಶ್ಲೇಷಣೆ ಮಾಡಿದ್ದೀರಿ. -ಸುನಾಥ...

 ಈ ಮಟ್ಟಿಗಿನ ಪ್ರಚಾರವನ್ನು ನೋಡಿ ಸ್ಲಂ ಡಾಗ್ ಸಿನೆಮಾದಲ್ಲೇನೋ ನಾವು ಕಾಣದ್ದು, ಕಾಣಲೇ ಬೇಕಾದ್ದು ಇರಬೇಕು ಎಂದುಕೊಂಡು ಸಿನೆಮಾ ನೋಡಿದೆ. ಅದರಲ್ಲಿ ವಿಶೇಷತೆಯೇನೂ ಕಾಣಲಿಲ್ಲ. ಪ್ರಶಸ್ತಿಗಳು ಹಾಗೂ ವಿವಾದಗಳಿಂದ ಮಾತ್ರ ಇಂದು ಸಿನೆಮಾ, ಪುಸ್ತಕಗಳಿಗೆ ಪ್ರಸಿದ್ಧಿ ಬರೆತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. -ಸುಪ್ರೀತ್.ಕೆ.ಎಸ್...

 My comments are in english as there is no facility in this hospital computer to write in kannada. Our situation is like a slum dog behaving the same way even after becoming a millionaire. We have inherited the independence from our grand parents. But not much has changed in the thought process, in fact it is more worse. I bet this music is not one of the best of ARR. It is the hype and shows the attitude of the media we have....

 ತುಂಬಾ ಸರಿಯಾಗಿ ವಿಶ್ಲೇಶಿಸಿದ್ದೀರಿ. ನಾವು ಈ ದೃಷ್ಟಿಕೋನದಲ್ಲಿ ಯೋಚಿಸುವಂತಾದ ದಿನ ಮಾತ್ರ ನಮ್ಮ ದೇಶ ಉದ್ಧಾರವಾಗುವುದು....

 ninna lekhana odi "Hadu hakkige beke birudu sanmanaa" emba shivarudrappanavara kavite nenapayitu. Kannadadalli Rajkumar mattu Hindiyalli Amitabh yendu yaava prashastigagi kelasa maadalilla. Evattina Ameerkhan kooda prashasti apeskisuvadilla. Paaschimatyara prashasti athavaa puraskara namma bharatiyara maanadandavaagabaradu. Wadiraj Kulkarni...

 Sriyuta kulakrniyvre, nimma lekhanada bgge mechchugeyide. aadre nmma janarige oscar, bookar, nobel, magsessay,intha prashastigala bagge mohavide. eshtaramattigendare, Baragooru Raamachandrappa avru ondu saari nmma Raajanna avru Budhana partu maadidare Oscar guarantee endu appane kodisiddaru. Avarige Oscar prashatiyu pfrdhaanavaagi english bhaasheya mattu MPAA( Motion Picturs Association of America) samsthege nondaayisida samste tegeyuva chitragalige maatra koduttaare ennuva arive irlilla.ondu vibhaagadalli maatra Foreign language sinimaage koduttaare. alli actor ge oscar koduvudilla. Ee oscar ewnnuva awardgalu namma national award thara. arivugettante maatanaaduvaaga tale ketta patrakartaru, channelgalinda viveka nireekshisuvudu tappaadeetu. nimma Karunaa P S...
 

2 comments:

 1. ಒಂದು ಸುಂದರ ಆರೋಗ್ಯಕರ ವಿಶ್ಲೇಷಣೆ. ನಮ್ಮನ್ನು ಗುರುತಿಸಲು ಆಸ್ಕರ್ ವರೆಗೆ ಹೋಗಬೇಕಿಲ್ಲ......ಅವರ ಎಷ್ಟೋ ಕೆಟ್ಟ ಚಿತ್ರಗಳು ಅಸ್ಕರ್ ಪಡೆದಿವೆ. ನಮ್ಮ ಎಷ್ಟೋ ಒಳ್ಳೇ ಚಿತ್ರಗಳು ಆಸ್ಕರ್ ಪಡೆದಿಲ್ಲ....ಅದಕ್ಕಾಗಿ ನಮಗೇನು ಚಿಂತೆಯಿಲ್ಲ.......

  ReplyDelete
 2. ಥ್ಯಾಂಕ್ಸ್ ಶಿವು,

  ಆಸ್ಕರ್ ಪ್ರಶಸ್ತಿ ಭಾರತೀಯ ಚಿತ್ರಗಳಿಗಲ್ಲವೇ ಅಲ್ಲ. motion pictures association ನಲ್ಲಿ ಇರುವ ಸಿನೆಮಾಗೆ ಮಾತ್ರ ಆಸ್ಕರ್ ಸಿಗುತ್ತದೆ. ಆದರೆ ಪರಂಗಿ ಕೆಟಗರಿಯಲ್ಲಿ ವರ್ಷಕ್ಕೆ ಒಂದು ನಾನ್-ಇಂಗ್ಲೀಷ್ ಸಿನೆಮಾವನ್ನು ಆಸ್ಕರ್ ಗುರುತಿಸುತ್ತದೆ. ಲಗಾನ್ ಕೊನೆ ಐದರ ಹಂತ ಮುಟ್ಟಿದಾಗ ನಮ್ಮ ಮೀಡಿಯಾಗಳ ಕೂಗು ಚಂದ್ರನನ್ನು ಮುಟ್ಟಿತ್ತು. ಪಶ್ಚಿಮ ತನ್ನ ಪ್ರತಿಭೆಯನ್ನು ಅಳೆಯಲು ಏಷಿಯಾ ಮತ್ತು ಆಫ್ರಿಕಾವನ್ನು ಯಾವತ್ತೂ ಕೇಳುವುದಿಲ್ಲ, ಯಾರಾದರೂ ಅಳೆದರೂ ಕೇರೂ ಮಾಡುವುದಿಲ್ಲ; ಆದರೆ ನಮ್ಮ ದುರಂತವೆಂದರೆ ಪಶ್ಚಿಮದಿಂದ ಗುರುತಿಸಿಕೊಳ್ಳದ ಹೊರತು ನಮಗೆ ನಾವೇ ಕಾಣೂವುದಿಲ್ಲ.

  -ಕೇಶವ
  -ಕೇಶವ

  ReplyDelete