Monday, January 19, 2009

ಉತ್ತರ ಕನ್ನಡ ಜಿಲ್ಲೆಯ ಪದಗಳು


ವಿವೇಕ ಶಾನಭಾಗರ "ಒಂದು ಬದಿ ಕಡಲು" ಓದುವಾಗ ಈ ಕೆಳಗಿನ ಪದಗಳು ಸಿಕ್ಕವು, ಹಂಚಿಕೊಳ್ಳುತ್ತಿದ್ದೇನೆ. ಕೆಲವಕ್ಕೆ ನನಗೆ ಸರಿಯಾದ ಅರ್ಥಗೊತ್ತಿಲ್ಲ ಅಥವಾ ಪದಮೂಲ ಗೊತ್ತಿಲ್ಲ (ಅವನ್ನು ದಪ್ಪಾಗಿಸಿದ್ದೇನೆ), ಗೊತ್ತಿದ್ದವರು ತಿಳಿಸಿ, ಧನ್ಯವಾದಗಳು.

ಹೊಳ, ಜಿಗ್ಗು, ಪೌಳಿ, ಗಿಳಿಗೂಟ, ಪಡಸಾಲೆ, ಕಟಾಂಜನ, ಬಾಂಕು, ಪಾಗಾರ, ಪರವಡಿ, ನಡುಮನೆ, ತಂಬಳಿ, ಗಿಂಡಿ, ಒರಳು, ಸೊನೆ, ಬಾಂದು, ದರವೇಶಿ, ಗೆರಟೆ, ಹಂಡೆ, ಬೋಗುಣಿ, ಅಟ್ಟ, ನಾಗೊಂದಿ, ಆನಿಸು, ಗಲಬರಿಸು, ಪೆಠಾರಿ, ಗವಾಕ್ಷಿ, ಪ್ರಭಾವಳಿ, ಕರಂಡಕ, ಹರಿವಾಣ, ಚಾದರ, ತಲೆಗಿಂಬು, ಧಾಡಸಿ, ದಮಡಿ, ನಪಾಸು, ಹಳವಂಡ, ಪಾಯರಿ ಹಣ್ಣು, ಆಬೋಲಿ, ಅಂಟವಾಳಕಾಯಿ, ದಣಪೆ, ದೋಟಿ, ಗಡಗಡೆ, ಪಚಾಂಡಿ, ಉಡಾಳ, ಬಶಿ, ಖಾನಾವಳಿ, ಸಂಡಾಸು, ಭೋಳೆತನ, ತೆಣೆ, ಬದು, ಧೋತರ, ಬೀಸಣಿಕಿ, ತಾಲಿ, ಉದ್ರಿ, ರೋಖ, ಕಿರಾಣಿ, ಪಗಾರ, ದಿನಸಿ, ಜವಳಿ, ಕಪಾಟು, ಗಲ್ಲೆ, ಭಡಾರನೆ, ಭಡಕ್ಕನೆ, ಖಟಪಟಿ, ಮಾಡು (ನಾಮಪದ), ಪಕಾಸೆ, ಫರಸಿ, ಫಿರತಿ, ಚಂಚಿ, ಆಜೂಬಾಜೂ, ರುಬ್ಬು, ಜಬುಡು, ನೆಗಸು, ದಾಗೀನು, ಸಂಚಿ, ವಜನು, ಬಜಂತ್ರಿ, ಕಲಗಚ್ಚು, ತೆಣೆ, ಎಬಡ, ಎಬಡಾ, ತಬಡಾ, ಶಾಣ್ಯಾ, ಆಯತವೆಳ್ಯಾ, ಖೇಚರ ಹೆಣ್ಣು, ಮಂಕಾಳಿ, ಅಡ್ಡೆ, ಫಡದೆ

7 comments:

 1. ಕುಲಕರ್ಣಿ ಸರ್,

  ಕಲಗಚ್ಚು, ಆಜುಬಾಜೂ, ವಜನು, ಬಜಂತ್ರಿ, ಕಪಾಟು, ದಿನಸಿ, ಜವಳಿ, ಸಂಡಾಸು, ಉಡಾಳ, ಹರಿವಾಣ, ತಂಬುಳಿ, ದರವೇಶಿ, ಇವುಗಳ ಅರ್ಥ ಮಾತ್ರ ಗೊತ್ತು....ಉಳಿದವು ನನಗೂ ಗೊತ್ತಿಲ್ಲ....

  ನನ್ನ ಬ್ಲಾಗಿಗೆ ಬಂದು ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್.....ಮತ್ತೆ ನಿಮ್ಮ ತಲೆ ಫೋಟೋ ಕಳುಹಿಸಿ ನಾನು ಸರಿಯಾದ ಭೂಪಟ ಹುಡುಕುತ್ತೇನೆ......ಥ್ಯಾಂಕ್ಸ್...

  ReplyDelete
 2. ಕೇಶವ್ ಸರ್,

  ನಂಗೂ ಇವುಗಳಲ್ಲಿ ಕೆಲ ಪದಗಳ ಅರ್ಥ ಈಗ ಹೊಳೆಯುತ್ತಿಲ್ಲ; ಆದರೆ ’ಒಂದು ಬದಿ ಕಡಲು’ ಓದುವಾಗ ಇವು ತೊಂದರೆ ಕೊಡಲೇ ಇಲ್ಲ! ಬಹುಶಃ ಇವು ನಮ್ಮೂರ ಆಡುಭಾಷೆಯ ಶಬ್ದಗಳಾದ್ದರಿಂದ ಕಾದಂಬರಿ ಓದುವಾಗ ಅದು ಹೇಗೋ ಅರ್ಥ ಆಗುತ್ತಾ ಹೋಗಿಬಿಟ್ಟಿತು ಅನ್ನಿಸೊತ್ತೆ.. :)

  ನಂಗೆ ಈಗ ಹೊಳೀತಿರೋ ಕೆಲ ಪದಗಳ ಅರ್ಥ ಹೀಗಿದೆ ನೋಡಿ:

  ಜಿಗ್ಗು= ತಂಪು ಮತ್ತು ಮಣ್ಣಿನ ಹದ ಕಾಯ್ದುಕೊಳ್ಳಲೆಂದು ತೋಟಕ್ಕೆ ಸೊಪ್ಪು ಹಾಸಿರುತ್ತಾರೆ. ಆ ಸೊಪ್ಪು ಒಣಗಿದ ಮೇಲೆ ಬರೀ ದಂಟು (ಸವಡು) ಉಳಿಯೊತ್ತಲ್ಲ, ಅದನ್ನ ’ಜಿಗ್ಗು’ ಅಂತ ಕರೀತೀವಿ. ತೋಟಕ್ಕೆ ಹೋದಾಗ ಈ ಜಿಗ್ಗಿನ ಮೇಲೆ ಓಡಾಡೋದು, ಅದರ ಮಧ್ಯೆ ಸಿಕ್ಕಿಕೊಂಡ ಅಡಿಕೆ ಹೆಕ್ಕೋದು ಅಂದ್ರೆ ದೊಡ್ಡ ತಲೆನೋವು. ಆದ್ರೆ ಒಂದೆರಡು ತಿಂಗಳಲ್ಲಿ ಈ ಜಿಗ್ಗೂ ಪುಡಿ-ಪುಡಿಯಾಗಿ ಮಣ್ಣಿನಲ್ಲಿ ಒಂದಾಗಿಬಿಡುತ್ತೆ; ಮಣ್ಣು ಫಲವತ್ತಾಗತ್ತೆ.

  ಪೌಳಿ, ಪಾಗಾರ= Compound.

  ಸೊನೆ= ಕೆಲ ಮರ-ಗಿಡದ ಕಾಯಿ ಅಥವಾ ಎಲೆಯ ತೊಟ್ಟು ಮುರಿದಾಗ ಒಂದು ರೀತಿಯ ದ್ರವ (ಹಾಲು ಅಥವಾ ಹಯನ ಅಂತಾರೆ ಕೆಲ ಕಡೆ) ಒಸರುತ್ತಲ್ಲ, ಅದೇ ಸೊನೆ.

  ಬಾಂದು= ಬಾಂದುಕಲ್ಲು. ಜಮೀನಿನ ಗಡಿಯ ಗುರುತಿಗಾಗಿ ಹೂತಿರುವ ಕಲ್ಲು.
  ಗೆರಟೆ= ತೆಂಗಿನಕಾಯಿಯ ಚಿಪ್ಪು.
  ನಾಗೊಂದಿ= ನಾಗೊಂದಿಗೆ. Shelf.
  ಪೆಠಾರಿ= ಪೆಟ್ಟಿಗೆ.
  ಗವಾಕ್ಷಿ= ಮನೆಯ ಸೂರಿನಲ್ಲಿ, ಒಂದು ಹೆಂಚಿನ ಬದಲು glass ಹಾಕಿರ್ತಾರೆ, ಬೆಳಕು ಬರ್ಲಿ ಅಂತ. ಗವಾಕ್ಷಿ ಅಂದ್ರೆ basically ಬೆಳಕಿಂಡಿ ಅಂತ -ಗೋಡೆ ಅಥವಾ ಸೂರಿಗೆ ಮಾಡಿದ ರಂಧ್ರ.
  ಕರಂಡಕ= ಡಬ್ಬ ಅಥವಾ ಭರಣಿ.

  ಹಳವಂಡ= ಕನವರಿಕೆ, ಭ್ರಮೆ, ತಳಮಳ.

  ಅಂಟವಾಳಕಾಯಿ= ಒಂದು ಬಗೆಯ ಕಾಯಿ. ಇದು ಸೋಪಿನ ಹಾಗೆ ನೊರೆ ನೊರೆ ಬರುತ್ತೆ. ಹಿಂದೆಲ್ಲಾ ಇದನ್ನೇ ಸ್ನಾನಕ್ಕೂ ಬಳಸುತ್ತಿದ್ದರಂತೆ; ಈಗ ಪಾತ್ರೆ ತೊಳೆಯುವುದಕ್ಕೆ ಬಳಸುತ್ತಾರೆ. ಮತ್ತೆ ಹಳ್ಳಿಜನ ಕಾಡಿಗೆ ಹೋಗಿ ಅಂಟವಾಳಕಾಯಿ ಸಂಗ್ರಹಿಸಿ ಪೇಟೆಗೆ ಹೋಗಿ ಮಾರುತ್ತಾರೆ. ಅದು ಸೋಪ್ ಮಾಡುವುದಕ್ಕೆ ಹೋಗತ್ತಂತೆ.

  ದಣಪೆ= ಗೇಟು ಸಾರ್.. ಆ ಕಡೆ - ಈ ಕಡೆ ಎರಡು ಎರಡು ಕಂಬ ಹುಗಿದು, ಆ ಕಂಬಗಳಿಗೆ ತೂತುಗಳನ್ನು ಮಾಡಿ, ಮಧ್ಯೆ ಗಳು (ಅಥವಾ ದಬ್ಬೆ ಅಥವಾ ಕೋಲು) ಸಿಕ್ಕಿಸಿ ಆ ಕಡೆ ಈ ಕಡೆ ಸರಿಸಲಿಕ್ಕೆ ಬರುವಂಥದು..

  ದೋಟಿ= ಕೊಕ್ಕೆ. ಎತ್ತರದಲ್ಲಿರುವ ಹೂವು, ಹಣ್ಣು, ಕಾಯಿ ಕೊಯ್ಯಲಿಕ್ಕೆ ಬಳಸೋ ಉದ್ದ ಕೋಲು.

  ಬದು= ಗಡಿ; ಒಡ್ಡು; ಗದ್ದೆಯಲ್ಲಿ ಓಡಾಡಲಿಕ್ಕೆ ಇರುವ ದಾರಿ.
  ತಾಲಿ= ಪಾತ್ರೆ.
  ಪಕಾಸೆ= ಮನೆಗೆ ಹೆಂಚು ಹೊದಿಸಲಿಕ್ಕೆ ಮೊದಲು ದಪ್ಪ ಮರದ ತುಂಡುಗಳನ್ನು vertically ಜೋಡಿಸಿ ಕೂರಿಸುತ್ತಾರೆ; ಆ ನಂತರ ಸಣ್ಣ ಮರದ ತುಂಡುಗಳನ್ನು horizontally ಹೊಡೆಯುತ್ತಾರೆ. ಅದರ ಮೇಲೆ ಹೆಂಚು ಇಡುತ್ತಾ ಬರುವುದು. ಹಾಗೆ vertically ಜೋಡಿಸಿದ ತುಂಡುಗಳು ’ಪಕಾಸೆ’; horizontally ಹೊಡೆದವು ’ರೀಪು’.

  (ಇವನ್ನೆಲ್ಲಾ explain ಮಾಡೋದು ಎಷ್ಟು ಕಷ್ಟ ಅಂತ ಈಗಲೇ ನಂಗೆ ಅರಿವಾದ್ದು! ಮಾತನಾಡುವಾಗ ಅಥವಾ ಓದುವಾಗ ಬಂದು-ಹೋಗುವ ಈ ಶಬ್ದಗಳ ಅರ್ಥ ಅಥವಾ ಮತ್ತೊಂದರ್ಥ ಗಮನಕ್ಕೇ ಬರೊಲ್ಲ!)

  ReplyDelete
 3. super sushrutha. thanx Keshav saar. ನಂಗೂ ಅರ್ಧಂಬರ್ದ ಗೊತ್ತಿತ್ತು. ಈಗ ಸುಮಾರು ತಿಳಿದುಕೊಂಡೆ.

  ReplyDelete
 4. ಸುಶ್ರುತರು ಈಗಾಗಲೇ almost all ಪದಗಳ ಅರ್ಥ ತಿಳಿಸಿದ್ದಾರೆ. ಅವರು ಬಿಟ್ಟ ಒಂದು ಪದ 'ಫಿರತಿ'ಅಂದರೆ taking rounds ಅನ್ನುವ ಅರ್ಥ. ಉದಾಹರಣೆಗೆ ಪೋಲೀಸರು ಮುಖ್ಯ ರಸ್ತೆಗಳಲ್ಲಿ ಫಿರತಿ ಮಾಡಿದರು.
  'ಆಬೋಲಿ' ಒಂದು ಬಗೆಯ ಹೂವು. ಯಶವಂತ ಚಿತ್ತಾಳರು ಬರೆದ 'ಆಬೊಲೀನ'ಎನ್ನುವ ಕಥೆಯಲ್ಲಿ ಈ ಪದವು ಕಥಾನಾಯಕಿಯ ಹೆಸರಾಗಿದೆ.

  ReplyDelete
 5. ಸುಶ್ರುತ,
  ತುಂಬ ಧನ್ಯವಾದಗಳು. ನಿಜ ಹೇಳಬೇಕೆಂದರೆ ಕಾದಂಬರಿ ಓದುವಾಗ ಯಾವ ಪದಗಳೂ ಕಷ್ಟಕೊಡುವುದಿಲ್ಲ, ಆದರೆ ಉತ್ತರ ಕರ್ನಾಟಕದ ನಾನು ಉತ್ತರ ಕನ್ನಡದ ಗೊತ್ತಿಲ್ಲದ ಪದಗಳ ಬಗ್ಗೆ ಗೀಟು ಹೊಡೆಯುತ್ತಾ ಓದಿದೆ. ಅವೇ ಈ ಪದಗಳು. ನನ್ನ ಭಯವಿರುವಿದು ಇಷ್ಟು ಚಂದದ ಪದಗಳು ನಮ್ಮ ದಿನಬಳಕೆಯಿಂದ ನಿಧಾನವಾಗಿ ಕಣ್ಮರೆಯಾಗುತ್ತಿವೆಯಲ್ಲ!

  ವಿಕಾಸ್, ಶಿವು, ಥ್ಯಾಂಕ್ಸ್!

  ಸುನಾಥ,
  ಚಿತ್ತಾಲರೂ ಉತ್ತರ ಕನ್ನಡದವರಲ್ಲವೇ? ಅಬೋಲಿನ ಕತೆಯನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್!

  -ಕೇಶವ

  ReplyDelete
 6. ಕೆಲವು ಬರಿ ಉತ್ತರ ಕನ್ನಡದ ಪದಗಳಲ್ಲ.ಹಳೇ ಮೈಸೂರು ಕಡೆಯೂ ಕೆಲವನ್ನು ಉಪಯೋಗಿಸುತ್ತಾರೆ.ಇವುಗಳ ಅರ್ಥ ಹುಡುಕಿ ಬರೆದಿದ್ದರೆ ಚೆನ್ನಿತ್ತು.ಸುಶ್ರುತ ಸ್ವಲ್ಪ ಸಹಾಯ ಮಾಡಿದ್ದಾರೆ.ಒಂದಂತೂ ನಿಜ ನಿಮ್ಮ ಈ ರೀತಿಯ ಬರಹಗಳು ಈ ಕಾದಂಬರಿಗಳ ಬಗ್ಗೆ ಕುತೂಹಲ ಮೂಡಿಸಿ ಓದಲು ಪ್ರೇರೇಪಿಸುತ್ತೆ.
  ಧನ್ಯವಾದಗಳು.
  ಅಶೋಕ ಉಚ್ಚಂಗಿ
  http://mysoremallige01.blogspot.com/

  ReplyDelete
 7. ಅಶೋಕ,
  ಅರ್ಥಗೊತ್ತಿಲ್ಲದವನ್ನು ಬೋಲ್ಡ್ ಮಾಡಿದ್ದೇನೆ, ಸುಶ್ರುತ ಸಾಕಷ್ಟು ಉತ್ತರ ಕೊಟ್ಟಿದ್ದಾರೆ. ಉಳಿದ ಪದಗಳ ಅರ್ಥ ವಿವೇಕ ಶಾನುಭೋಗರೇ ಹೇಳಬೇಕೇನೋ?
  -ಕೇಶವ

  ReplyDelete