Monday, February 02, 2009

ಸ್ಲಂಡಾಗ್ ಸುತ್ತ ಮುತ್ತ

ಕೆಂಡಸಂಪಿಗೆ ಯಲ್ಲಿ ಪ್ರಕಟಿತ ಬರಹ:

೨೦೦೫ರಲ್ಲಿ, ಲಂಡನ್ನಿನ ಮನೆ ಹತ್ತಿರದ ಲೈಬ್ರರಿನಲ್ಲಿ ಭಾರತೀಯರು ಬರೆದಿರುವ ಕಾದಂಬರಿ ಹುಡುಕುವಾಗ ವಿಕಾಸ್ ಸ್ವರೂಪ್ ಬರೆದ "Q & A" ಕಣ್ಣಿಗೆ ಬಿತ್ತು, ಮೂರು ದಿನದಲ್ಲಿ ಓದಿ ಮುಗಿಸಿದೆ, ಮೂರು ಕ್ಷಣದಲ್ಲಿ ಮರೆತೂ ಬಿಟ್ಟಿದ್ದೆ, ಅಷ್ಟು ಚೆನ್ನಾಗಿದೆ ಆ ಕಾದಂಬರಿ. ಹಿಂದಿ ಸಿನೆಮಾದ (ಯಾಕೋ ನನಗೆ ಬಾಲಿವುಡ್ ಪದ ಸರಿ ಅನಿಸುವುದಿಲ್ಲ) "ಅಮರ್ ಅಕ್ಬರ್ ಅಂತೋನಿ" ತರಹ ಕಾದಂಬರಿಯ ನಾಯಕನ ಹೆಸರು "ರಾಮ್ ಮಹಮ್ಮದ್ ಥಾಮಸ್" ಎಂದು ಶುರುವಾದಾದಲೇ ಈ ಕಾದಂಬರಿಯ ಬಣ್ಣ ಗೊತ್ತಾಗಿಹೋಗುತ್ತದೆ. ಕನ್ನಡದ "ರಾಗಸಂಗಮ"ದಲ್ಲಿ ಬರುತ್ತಿದ್ದ ಕಾದಂಬರಿಗಳಿಗಿಂತ ಇದು ಭಿನ್ನವಾಗೇನೂ ಇಲ್ಲ. "ಸ್ಲಂಡಾಗ್ ಮಿಲಿಯನೇರ್" ಸಿನೆಮಾದ ಹಸಿ ಹಸಿ ಸುದ್ದಿಗಳು ಹೊರಬರುತ್ತಿದ್ದಾಗ ಗೊತ್ತಾದದ್ದು, ಈ ಸಿನೆಮಾ ಆ ಕಾದಂಬರಿಯ ಆಧಾರಿತ ಎಂದು! ಭಾರತೀಯ ಭಾಷೆಗಳಲ್ಲಿ ಬಿಡಿ, ಇಂಗ್ಲೀಷಿನಲ್ಲೇ ಭಾರತೀಯರು ಇದಕ್ಕಿಂತ ಚೆನ್ನಾಗಿರುವ ಕಾದಂಬರಿಗಳನ್ನು ಬರೆದಿರುವಾಗ, ಹೋಗೀ ಹೋಗೀ ಇಂಥ ಕಳಪೆ ಕಾದಂಬರಿಯನ್ನು ಆಧರಿಸಿ ಹಾಲಿವುಡ್‍ನವರು ಭಾರತದ ಬಗ್ಗೆ ಮಾಡಿದ ಸಿನೆಮಾ ಇಷ್ಟೊಂದು ಸುದ್ದಿ ಮಾಡುತ್ತಿದೆಯಾ ಎಂದು ಆಶ್ಚರ್ಯವಾಯಿತು.

ಈಗ ಸಿನೆಮಾ ಬಂದಾಗಿದೆ, ಸಿನೆಮಾಗೆ ಪ್ರಶಸ್ತಿಗಳು ಬಂದಿವೆ, ಭಾರತದಲ್ಲೂ ಬಿಡುಗಡೆಯಾಗಿದೆ, ಎಲ್ಲ ಪತ್ರಿಕೆಗಳಲ್ಲೂ, ಬಹುತೇಕ ಎಲ್ಲ ಬ್ಲಾಗುಗಳಲ್ಲೂ ಈ ಸಿನೆಮಾದ ವಿಮರ್ಶೆ ಬಂದಿದೆ. ಕೆಲವರು ಈ ಸಿನೆಮಾವನ್ನು ಏಲಿಯಟ್ಟಿನ ವೇಸ್ಟ್ ಲ್ಯಾಂಡಿಗೆ ಹೋಲಿಸಿದ್ದರೆ, ಇನ್ನೂ ಕೆಲವರು ಈ ಸಿನೆಮಾದ ಬಗ್ಗೆ ಬರೆಯುವುದೇ ವೇಸ್ಟು ಎಂದು ಬರೆದಿದ್ದಾರೆ. ಆದ್ದರಿಂದಲೇ ಉದ್ದೇಶಪೂರ್ವಕವಾಗಿ ನಾನು ಈ ಸಿನೆಮಾದ ವಿಮರ್ಶೆಯನ್ನು ಇಲ್ಲಿ ಬರೆಯುತ್ತಿಲ್ಲ. ನಾನೀಗ ಹೇಳಹೊರಟಿರುವುದು ಈ ಸಿನೆಮಾದ ನೆಪದಲ್ಲಿ ಹೊರಬಂದ ಬಿಳಿಯರ ವರ್ಣತಾರತಮ್ಯದ (super race) ಮತ್ತು ಪಶ್ಚಿಮ ಮಾತ್ರ ಎಲ್ಲದಕ್ಕೂ ದಾರಿತೋರಿಸಬಲ್ಲದು ಎಂಬ ಪಶ್ಚಿಮದ ಜಂಭದ ಬಗ್ಗೆ.

ಇಲ್ಲಿನ ಘನ ಪತ್ರಿಕೆಗಳಾದ "ಗಾರ್ಡಿಯನ್", "ಟೈಮ್ಸ್", "ಆಬ್ಸರ್ವರ್"ಗಳ ಪ್ರಕಾರ "ಇತ್ತೀಚೆಗೆ ಭಾರತದ ಬಗ್ಗೆ ಬಂದ ಅತ್ಯುತ್ತಮ ಚಿತ್ರ ಮಾಡಿದ್ದು ಒಬ್ಬ ಬಿಳಿಯ (to quote in English: the best film to be made about India in recent times has been made by a white man)(ಬೋಲ್ಡ್ ಮಾಡಿದ್ದು ನಾನು), ಪಾಶ್ಚಾತ್ಯನೊಬ್ಬನಿಗೆ ತನ್ನ ದೇಶದ ಬಗ್ಗೆ ಹೆಚ್ಚು ತಿಳುವಳಿಕೆಯಿದೆ ಎಂದು ಭಾರತೀಯರು ಇದರಿಂದ ರೊಚ್ಚಿಗೇಳಲಿದ್ದಾರೆ" ಎಂದು ಒಕ್ಕೊರಲಿನಿಂದ ಬರೆದಿವೆ. "ಪಾಶ್ಚಾತ್ಯನೊಬ್ಬನ ಸೃಜನಶೀಲತೆ, ಹೊಸ ದೃಷ್ಟಿಕೋನ ಮತ್ತು ಹೊರಗಿನ ಹಣ (ಅಮೇರಿಕದ್ದು) ಇಲ್ಲದಿದ್ದರೆ ಇಂಥ ಸಿನೆಮಾ ತೆಗೆಯುವುದು ಅಸಾಧ್ಯದ ಮಾತು" ಎನ್ನುತ್ತವೆ, ಈ ಪತ್ರಿಕೆಗಳು. ಇನ್ನೂ ಮುಂದೆ ಹೋಗಿ, "ಘನತೆಯಿಂದ ಸಭ್ಯತೆಯಿಂದ ಮತ್ತು ಚಿಮ್ಮುವ ಜೀವನೋತ್ಸಾಹದಿಂದ ಬದುಕುವ ಈ ಕಡುಬಡವ ಭಾರತೀಯರು ಭಾರತದ ನಿಜವಾದ ಅಂತಃಸತ್ವ; ಅವರನ್ನು ಸಿನೆಮಾದಲ್ಲಿ ತೋರಿಸಬೇಕು; ಆದರೆ ಭಾರತದ ಜನಕ್ಕೆ ನಾಚಿಕೆಯಾಗಬೇಕು, ಅದನ್ನು ಒಬ್ಬ ‘ಬಿಳಿಯ ಮನುಷ್ಯ (a white man)’ ಸಾಧಿಸಿದ ಎಂದು. ಇನ್ನಾದರೂ ಭಾರತೀಯರು ಇಂಥ ಪ್ರಾಮಾಣಿಕ ಸಿನೆಮಾಗಳನ್ನು ಮಾಡುವುದನ್ನು ಕಲಿಯಬೇಕು." ಜಗತ್ತಿಗೇ ಮಾದರಿಯಾಗಿರುವ ಈ ಸೋಕಾಲ್ಡ್ ಪತ್ರಿಕೆಗಳು ಅಮಿತಾಬನನ್ನು ತೆಗಳುವ ನೆವದಲ್ಲಿ ಬರೆದ ತಿರುಳು ಇದು.

"ತುಂಬ ಕಹಿಯಾದ ಸತ್ಯವೇನೆಂದರೆ, ಸ್ಲಂಡಾಗ್ ಮಿಲೇನಿಯರ್ ನಂಥ ಚಿತ್ರಗಳನ್ನು ಕೇವಲ ಪಾಶ್ಚಾತ್ಯರು ಮಾತ್ರ ಮಾಡಲು ಸಾಧ್ಯ" ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿವೆ. ಬಚ್ಚನ್ ನನ್ನು ಬಯ್ಯುವ ಭರದಲ್ಲಿ ಇಡೀ ಭಾರತೀಯರನ್ನು ಉಗಿಯುತ್ತಾರೆ, "ಬಚ್ಚನ್ನನ ತರಹ, ಈ ಭಾರತೀಯರೂ ಅಂಧರು. ಬಡತನ, ಬಚ್ಚನ್ ಹೇಳುವಂತೆ ಕೇವಲ underbelly ಅಲ್ಲ; ನಿಜವೆಂದರೆ ಬಡತನವೇ ಭಾರತ" ಎಂದು ಹೇಳಿ ಅದನ್ನು ಯಥಾಪ್ರಕಾರ ಅಂಕಿಅಂಶಗಳಿಂದ ಸ್ಪಷ್ಟೀಕರಿಸುತ್ತಾರೆ, "ಶೇಕಡಾ ೮೦ಕಿಂತ ಹೆಚ್ಚು ಜನ ೨.೫೦ ಡಾಲರಿಗಿಂತ ದಿನಕ್ಕೆ ಕಡಿಮೆ ಗಳಿಸುತ್ತಾರೆ, ಜಗತ್ತಿನ ಮೂರನೇ ಒಂದು ಭಾಗದ ಬಡವರು ಭಾರತದಲ್ಲಿದ್ದಾರೆ, ಮುಂಬೈ ಒಂದರಲ್ಲೇ ೨೬ ಲಕ್ಷ ಮಕ್ಕಳು ಸ್ಲಂಗಳಲ್ಲೇ ಬದುಕುತ್ತಾರೆ, ನಾಲ್ಕು ಲಕ್ಷ ಹೆಂಗಸರು ಸೂಳೆಗಾರಿಕೆ ಮಾಡುತ್ತಾರೆ". ವಿಕಾಸ್ ಸ್ವರೂಪ್ ತನ್ನ ದೇಶವನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾನೆ, ಮತ್ತು ದೇಶದ ಬಗೆಗಿನ ಸತ್ಯವನ್ನು ಮಾನವೀಯತೆಯಿಂದ ಆರ್ದ್ರತೆಯಿಂದ ಈ ಕತೆಯಲ್ಲಿ ಹೇಳುತ್ತಾನೆ" ಎಂದು ವಿಕಾಸ್ ಸ್ವರೂಪ್ ಬಗ್ಗೆ ಸರ್ಟಿಫಿಕೇಟ್ ಕೊಡುತ್ತಾರೆ. ಭಾರತೀಯ ಸಿನೆಮಾದ ಜನ (ಪಾಶ್ಚಾತ್ಯರಿಗೆ ಭಾರತೀಯ ಸಿನೆಮಾ ಅಂದರೆ ಹಿಂದಿ ಚಿತ್ರರಂಗ ಮಾತ್ರ - ಬಾಲಿವುಡ್) ಭಾರತದ ಬಗ್ಗೆ ಪ್ರೀತಿಯಿಲ್ಲದ ಜನ, ಸತ್ಯವನ್ನು ಮುಚ್ಚಿಟ್ಟು ರಂಜನೀಯ ಲೋಕದಲ್ಲಿ ವಿಹರಿಸುವ ಜನ ಎನ್ನುವಂತೆ ಮುಂದುವರೆಯುತ್ತಾರೆ. ಭಾರತ ಪ್ರಕಾಶಿಸುತ್ತಿದೆ ಎನ್ನುವುದು ಎಷ್ಟು ಸುಳ್ಳು ಎನ್ನುವುದು ಈ ಸಿನೆಮಾ ನೋಡಿ ಭಾರತೀಯ ಮೂಲದ ಇಲ್ಲಿನ ಜನಕ್ಕೆ ಗೊತ್ತಾಯಿತಂತೆ, ಈ ಸಿನೆಮಾ ಅಷ್ಟು ಬೃಹತ್ ಉಪಕಾರವನ್ನು ಮಾಡಿದೆಯಂತೆ.

ತಪ್ಪು ನಮ್ಮದೂ ಇದೆ. ಎನ್‍ಆರ್‍ಐಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಶ್ರೀಮಂತ ವಾತಾವರಣದಲ್ಲಿ ವಿದೇಶಗಳಲ್ಲಿ ಚಿತ್ರೀಕರಿಸುವ ಈ ಬಿಗ್‍ಬಜೆಟ್‍ನ ಚೋಪ್ರಾ-ಜೋಹರ್‍ಗಳ ತಲೆಬುಡವಿಲ್ಲದ ಹಿಂದಿ ಚಿತ್ರಗಳು ಇಲ್ಲದ ಪ್ರಚಾರ ಗಿಟ್ಟಿಸುವುದೂ, ಅಮೇರಿಕಾ-ಇಂಗ್ಲೆಂಡಿನ ಬಾಕ್ಸಾಫೀಸ್ ಕೊಳ್ಳೆಹೊಡೆಯುವುದೂ ಒಂದು ಮುಖ್ಯ ಕಾರಣ. ಅಡೂರ್ ಗೋಪಾಲಕೃಷ್ಣ, ಗಿರೀಶ್ ಕಾಸರವಳ್ಳಿಯಂಥ ನಿರ್ದೇಶಕರ ಸಿನಮಾಗಳು ನಮ್ಮ ಮುಖ್ಯವಾಹಿನಿಯಲ್ಲಿ ಸೇರದೇ ದೂರ ಉಳಿದುಬಿಟ್ಟಿವೆ. ಕನ್ನಡ ಮೀಡಿಯಾದಲ್ಲಿ, ಪತ್ರಿಕೆಗಳಲ್ಲಿ ಮತ್ತು ಕನ್ನಡದ ಬ್ಲಾಗುಗಳಲ್ಲಿ ಕಾಸರವಳ್ಳಿಯ "ಗುಲಾಬಿ"ಯ ಬಗ್ಗೆ ಹೆಚ್ಚು ಚರ್ಚೆಯಾಗಿದೆಯೋ, ಅಥವಾ ಕ್ಲೀಷೆಗಳೇ ತುಂಬಿಕೊಂಡಿರುವ "ಸ್ಲಂಡಾಗ್ ಮಿಲೇನಿಯರ್" ಬಗ್ಗೆ ಹೆಚ್ಚು ಚರ್ಚೆ ನಡೆದಿದೆಯೋ ಎನ್ನುವುದನ್ನು ನೋಡಿದರೆ ಗೊತ್ತಾಗುತ್ತದೆ - ಹಿತ್ತಲಿನ ಗುಲಾಬಿಯ ಪರಿಮಳಕ್ಕಿಂತ ಪಶ್ಚಿಮದ ಸ್ಲಂಡಾಗಿನ ಕೊಚ್ಚೆವಾಸನೆಯೇ ಮೂಗಿಗೆ ಹೆಚ್ಚು ಹಿತ.

ಇದೇ ಸಿನೆಮಾವನ್ನು ಯಥಾವತ್ ಹೀಗೆ ಭಾರತದ ನಿರ್ಮಾಪಕ-ನಿರ್ದೇಶಕರಿಂದ ಮೂಡಿಬಂದಿದೆ ಎಂದು ಒಂದು ಕ್ಷಣ ಊಹಿಸಿ. ಆಗಲೂ ಈ ಸಿನೆಮಾಕ್ಕೆ ಈಗ ಪಶ್ಚಿಮದಿಂದ ಸಿಗುತ್ತಿರುವ ವ್ಹಾವ್ಹಾಕಾರ, ಮನ್ನಣೆ ಮತ್ತು ಪುರಸ್ಕಾರಗಳು ಸಿಗುತ್ತಿದ್ದವಾ? ಆಗಲೂ ಈ ಸಿನೆಮಾವನ್ನು ಭಾರತದಲ್ಲಿ ನೋಡಲು ಜನ ಮುಗಿಬಿದ್ದು ಬಾಕ್ಸ್ ಆಫೀಸನ್ನು ಕೊಳ್ಳೆಹೊಡೆಯುತ್ತಿತ್ತಾ? ಆಗ ಈ ಸಿನೆಮಾ ಪಶ್ಚಿಮದಲ್ಲಿ ಬಿಡುಗಡೆಗೊಳ್ಳುತ್ತಲೇ ಇರಲಿಲ್ಲ, ಯಾವುದೋ ಒಂದೆರೆಡು ಸೀರಿಯಸ್ ಸಿನೆಮಾಗಳ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿತ್ತು; ಭಾರತದಲ್ಲಿ ಬಿಡುಗಡೆಯಾಗಲೂ ತಡಕಾಡುತ್ತಿತ್ತು, ಒಂದೆರೆಡು ಬ್ಲಾಗುಗಳಲ್ಲಿ ಅದರ ಬಗ್ಗೆ ಬರೆದು ಜನ ಸುಮ್ಮನಾಗುತ್ತಿದ್ದರು, ಅಲ್ಲವೇ?


Yes true the movie did not show the western pedophiles roaming and hunting slum kids, & also the illicit organ trade rackets operating in India using the same kids. This part of the story was specifically omitted. anyways the happiest thing about the movie is the three well deserved oscars for Indians esp AR RAHAMAN & his Music and a superb screenplay, and story telling. kritik who can deny that?...

 nija----kanri. SUBBARAO KODAPADI...

 ಒಂದು ದೇಶದ ಬಗ್ಗೆ ಎಲ್ಲಾ ತಿಳಿದವರ ಹಾಗೆ ಬರೆಯುವ ಹೊರಗಿನವರ ಬಗ್ಗೆಯಾಗಲೀ, ಒಳಗಿನವರದೇ ಅಜ್ಞಾನದ ಬಗ್ಗೆಯಾಗಲಿ ಅಷ್ಟು ತಲೆಕೆಡಿಸಿಕೊಳ್ಳಬೇಕಿಲ್ಲ ಕೇಶವ್. ನಮ್ಮನ್ನು ಉತ್ತಮಪಡಿಸಿಕೊಳ್ಳುವುದರ ಬಗ್ಗೆ ಸಲಹೆ ಇದ್ದರೆ ಅದನ್ನು ಕೇಳುವುದರಿಂದ ಕಳೆದುಕೊಳ್ಳುವುದೇನಿಲ್ಲ. ಆದರೆ ಸುಮ್ಮನೇ ಕೆಣಕಲು ಅಥವಾ ಅಜ್ಞಾನದಿಂದ ಮಾಡುವ ಟೀಕೆಯನ್ನು ಎಂಜಾಯ್ ಮಾಡುವುದು ಆರೋಗ್ಯಕರ. ಅವರ ಅಜ್ಞಾನ ನೀಗಲಿ ಎಂದು ಹಾರೈಸಬಹುದು ಬೇಕಿದ್ದರೆ. ಕೆ.ಟಿ.ಗಟ್ಟಿಯವರ ಒಂದು ಕಾದಂಬರಿ (ಅರಗಿನ ಮನೆ-೧೯೮೩ರಲ್ಲಿ ಬರೆದಿದ್ದು ಅಂತ ನೆನಪು)ಯಲ್ಲಿ ಇಥಿಯೋಪಿಯಾದ ಜನರಿಗೆ ಭಾರತದ ಬಗ್ಗೆ ಇದ್ದ ಮೂಢನಂಬುಗೆಗಳನ್ನು ಓದಿದರೆ ನಗುಬರುತ್ತದೆ, ಸ್ವತಃ ಅಧಃಪತನದಲ್ಲಿದ್ದ ದೇಶದ ಧಾರ್ಷ್ಟ್ಯದ ಬಗ್ಗೆ. ನಿಮ್ಮ ಲೇಖನ ಓದಿದಾಗ ನೆನಪಗಿದ್ದು ಅದೇ. - ನರೇಂದ್ರ ಪೈ...

 ಕೇಶವ, ಇದ್ದದ್ದನ್ನು ಇದ್ದಂತೆ ಹೇಳಿದ್ದೀರಿ, ಅಭಿನಂದನೆಗಳು. ಬಿಳಿಯರಿಗೆ ಹಾಗೂ ಕೆಲವು ಕರಿಯರಿಗೆ ದೃಷ್ಟಿದೋಷವಿದ್ದದ್ದು ಸುಳ್ಳಲ್ಲ....

 ಕುಲಕರ್ಣಿಯವರೇ, ಈ ದೇಶದ ಮಣ್ಣಿನಿಂದಲೇ ಹುಟ್ಟಿದ ಗಾಂದಿಯ ಬಗ್ಗೆ ಒಂದು ಒಳ್ಳೆಯ ಚಿತ್ರ ಮಾಡಿದ್ದು ಬಾರತೀಯರಲ್ಲ. ಇದು ಸತ್ಯವಲ್ಲವೇ? ಭಾರತದ ಬಹುಸಂಖ್ಯಾತ ನಗರಗಳಲ್ಲಿ ಹರಡಿರುವ ಸ್ಲಂಗಳ ಭಯಂಕರ ಪರಿಸ್ಥಿತಿಯನ್ನು ಸ್ಲಂಡಾಗ್ ಚಿತ್ರಿಸಿದೆ. ಆ ರೀತಿಯ ಚಿತ್ರವನ್ನು ಭಾರತೀಯರು ಮಾಡಿಲ್ಲ ಎನ್ನುವುದು ಸತ್ಯವಲ್ಲವೆ? ಅದನ್ನು ಭಾರತೀಯರು ಮಾಡಿದ್ದರೆ, ಇಷ್ಟೊಂದು ಚರ್ಚೆ ನಡೆಯುತ್ತಿತ್ತೆ? ನನಗಂತೂ ಅನುಮಾನ. ಹಿಂದೆ ಕನ್ನಡದಲ್ಲಿ ದೇವಿರಿ ಬಂತಲ್ಲ. ಅದರಲ್ಲೂ ಸ್ಲಂನ ನರಕವೇ ಚಿತ್ರಣವಾಗಿದೆ. ಯಾವ ಅನುಭವ ಯಾರಿಗೆ ದಕ್ಕುತ್ತದೆಯೋ ಅವರು ಅದನ್ನು ಕಲೆಯಾಗಿ ಅಭಿವ್ಯಕ್ತಿಸುತ್ತಾರೆ. ಪ್ರತಿಭೆಗೆ ಕರಿಯ ಬಿಳಿಯ ಎಂಬ ಬೇಧವಿದೆಯೇ? ಬರಾಕ್ ಒಬಾಮ ಅಧ್ಯಕ್ಷರಾದ ದಿನ ಭಾರತೀಯ ಮಾಧ್ಯಮಗಳೇ ಹೆಚ್ಚಾಗಿ ಕರಿಯ ಅಧ್ಯಕ್ಷ ಎಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು ಸುಳ್ಳಲ್ಲ. ಚಿತ್ರ ಇಷ್ಟವಾದರೆ ನೋಡೋಣ. ಮಾಡಿದವರ ಬೆನ್ನು ತಟ್ಟೋಣ. ಇಷ್ಟವಾಗಲಿಲ್ಲ ಸುಮ್ಮನಾಗೋಣ. .... ಡಾ. ಬಿ,ಆರ್. ಸತ್ಯನಾರಾಯಣ...

 ಸ್ಲಮ್ ಡಾಗ್ ಸಿನೆಮಾಕಿ೦ತ ಮೊದಲು ನಮ್ಮ ಭಾರತೀಯ ನಿರ್ದೇಶಕರಿ೦ದ ಸಲಾಮ್ ಬಾ೦ಬೆ ಚಿತ್ರ, ಸತ್ಯಜಿತ್ ರಾಯ್ ಅವರ ಹಲವಾರು ಚಿತ್ರಗಳು, ನಮ್ಮ ಕನ್ನಡದ ಗಿರೀಶ ಕಾಸರವಳ್ಳಿಯವರ ಮತ್ತು ಕೆರ್ ಆಫ್ ಫುಟಪಾತ್ ಚಿತ್ರಗಳಲ್ಲಿ ಸ್ಲಮ್ ಜೀವನದ ಕಥೆ ವ್ಯಥೆಯನ್ನು ಮನಸ್ಸಿಗೆ ತಾಗುವ ರೀತಿಯಲ್ಲಿ ನಿವೇದಿಸಿದ್ದಾರೆ. ಇದೂ ಯಾರ ಕಣ್ಣಿಗೂ ಬೀಳುವದಿಲ್ಲಾ. ಪರ೦ಗಿ ಜನರು ಕಲ್ಲು ಮುಟ್ಟಿದರು ಚಿನ್ನ. ನಿನ್ನ ಭಾಷೆಯಲ್ಲೆ ಹೇಳುವದಾದರೆ ಪರ೦ಗಿ ಜನರ ಉಚ್ಚೆಯೂ ನಮಗೆ ತೀರ್ಥ. ನಮಗೆ ಯಾವಾಗ ನಮ್ಮತನವು ಜಾಗೃತವಾಗುತ್ತದೋ ಆ ದೇವನೇ ಬಲ್ಲ. ವಾದಿರಾಜ ಕುಲಕರ್ಣಿ...

 ಕಿಶೋರ್ ಧಮನೀಕರ್, ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಅನುವಾದಿಸಿರುವುದು, ನೀವು ಬರೆದಂತೆ, ನಿರ್ಪಾಲ್ ಧಾಲಿವಾಲನ ಮಾತುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಗ್ಲಂಡಿನಲ್ಲಿ ಹುಟ್ಟಿ ಬೆಳೆದಿರುವ ಭಾರತೀಯ ಉಪಖಂಡದ ಜನರು ಭಾರತೀಯರೋ ಅಥವಾ ಪಾಕಿಸ್ತಾನಿಗಳೋ ಅಥವಾ ಶ್ರೀಲಂಕದವರೋ ಅಲ್ಲ, ಅವರೆಲ್ಲ ಬ್ರಿಟಿಷ್ ಏಶಿಯನ್ಸ್. ಇಲ್ಲಿನ ಬ್ರಿಟಿಷ್ ಏಶಿಯನ್ಸ್‍ಗಳಲ್ಲಿ undercurrentಆಗಿ ಒಂದು ತರಹದ superiority complex ಇರುವುದು (ಎಲ್ಲರೂ ಅಲ್ಲ, and I dont want to generalise) ನನ್ನ ಅನಿಸಿಕೆ. ನಾನಿಲ್ಲಿ ಬರೆದಿರುವುದು ಅಂಕಣಕಾರನಾಗಿ. ನನ್ನ ಅಭಿಪ್ರಾಪವನ್ನು ಇಲ್ಲಿ ಮಂಡಿಸಲು ಆ ಲೇಖನದ ಕೆಲ ಭಾಗವನ್ನು quote ಮಾಡಿದ್ದೇನೆ, ಅಷ್ಟೇ! ಹಾಗೆ ನೋಡಿದರೆ ಯಾವ ಪತ್ರಿಕೆಯೂ ಸುದ್ದಿಗಳ ಹೊರತಾಗಿ ಮತ್ತೆಲ್ಲವನ್ನೂ ಅದು ಬರಹಗಾರನ ಮಾತು ಎಂದೇ ಹೇಳುತ್ತವೆ; ಆದರೆ ಪ್ರಕಟಿಸುವ ಮೊದಲು, ಸಂಪಾದಕ ಮಂಡಲಿ ಇರುತ್ತದಲ್ಲವೇ? ಈಗ ನಾನು ಕೆಂಡಸಂಪಿಗೆಯಲ್ಲಿ ಅಂಕಣಕಾರನಾಗಿ ಬರೆದರೂ, ನನ್ನ ಬರಹ ಸಂಪಾದಕ ಮಂಡಲಿಯನ್ನು ದಾಟಿ ತಾನೆ ಪ್ರಕಟವಾಗಬೇಕು, ಇಲ್ಲದಿದ್ದರೆ, ನನ್ನ ಬ್ಲಾಗಿನಲ್ಲಿ ಯಾರಿಗೂ ಕಾಯದೇ ಪ್ರಕಟಿಸಲು ಬರುತ್ತದಲ್ಲ! ಪಶ್ಚಿಮದಲ್ಲಿರುವ ನಾನು ಇಲ್ಲಿ ನಾನು ಪಶ್ಚಿಮದ ನಿಂದನೆಯಲ್ಲಿ ತೊಡಗಿಲ್ಲ; ಆದರೆ ಒಂದು ಸಿನೆಮಾ ಪಾಲಿಟಿಕಲಿ ಯಾವ ಯಾವ ಮಟ್ಟ ಮುಟ್ಟಬಹುದು ಎಂದು ನನ್ನ ಅಭಿಪ್ರಾಯ ಮಂಡಿಸಿದ್ದೇನೆ. ಉಳಿದ ಪತ್ರಿಕೆಗಳಲ್ಲಿ ನೇರವಾಗಿ ಈ ಮಾತುಗಳನ್ನು ಹೇಳಿಲ್ಲ, ಆದರೆ googleನಲ್ಲಿ ಹುಡಿಕಿ, ಈವರೆಗೆ ಬಂದ ಎಲ್ಲ ಬರಹಗಳನ್ನು ಒಟ್ಟು ಹಾಕಿ ಓದಿದರೆ, ನನಗೆ ಹೀಗೆ ಅನಿಸಿತು, ಅದನ್ನೇ ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ ಎಂದಷ್ಟೇ ಹೇಳಬಲ್ಲೆ. - ಕೇಶವ ಕುಲಕರ್ಣಿ...
 Re:  Fully Agree with you ... -Ganesh


 ನಿಮಗೆಲ್ಲ ಅರಗಿಸಿಕೊಳ್ಳದಷ್ಟು ದೊಡ್ಡ ಪೆಟ್ಟು ಕೊಟ್ಟಿದ್ದಾನಲ್ಲಾ ಆ ಡ್ಯಾನಿಗೆ ಹ್ಯಾಟ್ಸ್ ಅಫ್....

 tumba olleyala lekhana. jana marulo jatre marulo annuvanta paristiti. Idu nijavagalu duradrustakara. India andre bari Hindi film alla anta horaginavarige manavarike agabeku....

 ಒಂದು ಕೆಟ್ಟ ಚಿತ್ರದ ಬಗ್ಗೆ ಇಷ್ಟೆಲ್ಲಾ ಕಿಡಿ ಕಾರುವುದೂ ಅನಗತ್ಯ. ಆದರೆ ನೀವು quote ಮಾಡಿರುವ ಮಾತುಗಳು ನಿಮ್ಮ ಸಿಟ್ಟಿಗೆ ಅನುಕೂಲವಾಗುವಂತೆ ಪತ್ರಿಕೆಗಳ ವರದಿ ಎಂದು ಹೇಳಿರುವುದು ತಪ್ಪು. http://www.guardian.co.uk/film/filmblog/2009/jan/15/danny-boyle-shows ಲಿಂಕಿನಲ್ಲಿ ನೀವು ಅನುವಾದಿಸಿರುವ ಎಲ್ಲ ಮಾತುಗಳನ್ನೂ ಆಡಿರುವುದು ನಿರ್ಪಾಲ್ ಸಿಂಗ್ ಧಾಲಿವಾಲ ಎಂಬ ಭಾರತ ಮೂಲದವನು. ಅವನು gaurdian ಪತ್ರಿಕೆಗೆ freelance ಆಗಿ ಬರೆಯುತ್ತಾನೆ. ಅವನ ಕಾಲಂ ಅದು. ಹೇಗೆ ನಿಮ್ಮ ಮಾತು ಕೆಂಡಸಂಪಿಗೆಯ ಮಾತಾಗುವುದಿಲ್ಲವೋ ಹಾಗೆ ಅದು ಅವನ ಮಾತಷ್ಟೆ, ಗಾರ್ಡಿಯನ್ ಮಾತಲ್ಲ. ಭಾರತೀಯ ಮೂಲದವನು ಹಾಗೆ ಹೇಳಿದರೆ ಆ ಮಾತುಗಳ ಅರ್ಥವೇ ಬೇರಾಗುತ್ತದೆ. ನೀವು ಆತನ ಹೆಸರನ್ನು ಹೇಳಿದ್ದರೆ ಸರಿಯಾಗುತ್ತಿತ್ತು. ಉಳಿದಂತೆ ದೊಡ್ಡ ಪತ್ರಿಕೆಗಳಲ್ಲಿ ನೀವು ಹೇಳಿದಂತೆ "ಬಿಳಿಯರೇ ಇಂತಹ ಚಿತ್ರವನ್ನು ಮಾಡಬಲ್ಲರು" ಎಂಬ ಅರ್ಥ ಬರುವ ಮಾತುಗಳನ್ನು ನಾನು ನೋಡಿಲ್ಲ. ಹೌದಾಗಿದ್ದರೆ ದಯವಿಟ್ಟು ಲಿಂಕುಗಳನ್ನು ಕೊಡಿ. - ಕಿಶೋರ್‍ ಧಮನೀಕರ್‍...
 Re:  GOOD


 ನಿಮಗೆ ಯಾರೂ ಪ್ರತಿಕ್ರಿಯಿಸಲೇ ಇಲ್ಲ.ಯಾಕೆ?ಬಹುಶಃ ಹೊಗಳಿ ಬರೆಯಬೇಕಿತ್ತೋ ಏನೋ ಮುರಲಿ...
 Re:  paschimadada poorvaagrahada kannige nammora belagu kurudaagiruttade.avara sirigarada kurudige naavu maddanereyabekilla.kannadada kaadu sinima onede saaku ,slumdog tarada sinimaagalannu tippegeseyalu.mogalliganesh

5 comments:

 1. ಸರ್,

  ಈ ಸಿನಿಮಾ ಬಗ್ಗೆ ಪ್ರತಿಯೊಬ್ಬರೂ ಒಂದೊಂದು ದೃಷ್ಟಿಕೋನದಿಂದ ನೋಡುತ್ತಿದ್ದಾರೆ ನಿಮ್ಮ ದೃಷ್ಟಿಕೋನವು ವಿಭಿನ್ನವೇ ಆಗಿದೆ....ನಾನು ಸಿನಿಮಾ ನೋಡಿ ಪ್ರತಿಕ್ರಯಿಸುತ್ತೇನೆ.....

  ReplyDelete
 2. ಪ್ರತಿಕ್ರಿಯೆಗೆ ಕಾಯುತ್ತೇನೆ.
  -ಕೇಶವ

  ReplyDelete
 3. ಕೇಶವ್,

  ನೀವು ಹೇಳಿದಾಗೆ ಭಾರತೀಯ ನಿರ್ದೇಶಕ ಈ ಚಿತ್ರ ತೆಗೆದಿದ್ದರೆ ಬಹುಷಃ ಅದು ಈ ತರ ಸುದ್ದಿ ಮಾಡುತ್ತಿದ್ದಿಲ್ಲಾ. ಹೌದು ’ಗುಲಾಬಿ’ ಯ ಬಗ್ಗೆ ಒಂದೇ ಒಂದು ಚರ್ಚೆ ನಡೆದಿದ್ದು ಇಲ್ಲಾ.

  ReplyDelete
 4. ನಮ್ಮ ಮೀಡಿಯದವ್ರು ಪಶ್ಚಿಮವೆ೦ಬ ಶ೦ಖದಿ೦ದ ಬ೦ದಿದೆಲ್ಲಾ ತೀರ್ಥ ಅ೦ತ ಭಾವಿಸ್ತಾರೆ. ನಮ್ಮ 'ಜನರು' ಮೀಡಿಯವನ್ನು ಚಾಚು ತಪ್ಪದೆ ಫೋಲೋ ಮಾಡುವವರು..:( ಎವರೇಜ್ ಮೂವಿಗೆ ಸಿಕ್ಕಾಪಟ್ಟೆ ಹೈಪ್!!

  ಹಾಗೇನೇ ನಾನು ಇದ್ರ ಬಗ್ಗೆ ಬರ್ದಿದ್ದೆ.. @ http://pramodc.wordpress.com/2009/01/26/

  ReplyDelete