Wednesday, March 11, 2009

ದಯವಿಟ್ಟು ಓದಿ, ಪ್ಲೀಸ್!


ಕೆಂಡಸಂಪಿಗೆಯಲ್ಲಿ ಪ್ರಕಟವಾದ ಬರಹ:

ಗದುಗಿನ ಭಾರತವೊಂದನ್ನೇ ಜೀವನ ಪೂರ್ತಿ ಓದಿ ಅರೆದು ಕುಡಿದು ಸತ್ತವರ ಬಗ್ಗೆ ಕೇಳಿದ್ದೇನೆ. ತರಾಸು, ಅನಕೃರ ಕಾದಂಬರಿಯ ಒಂದೇ ಪುಟವನ್ನು ಬಿಡದೇ ಓದಿದವರನ್ನು ಹತ್ತಿರದಿಂದ ನೋಡಿದ್ದೇನೆ. ಮನೆ ಬಾಗಿಲಲ್ಲಿ ‘ಸುಧಾ’ ಬೀಳುತ್ತಿದ್ದಂತೆ, ಯಂಡಮೂರಿಯ ‘ಬೆಳದಿಂಗಳ ಬಾಲೆ’ ಧಾರಾವಾಹಿಯನ್ನು ಯಾರು ಮೊದಲು ಓದುವುದು ಎಂದು ನಿರ್ಧಾರವಾಗುವುದು ನಾನು ನನ್ನಣ್ಣ ಕೈ-ಕೈ ಜಗಳವಾಡಿಯಾದ ಮೇಲೆಯೇ ಅಗಿತ್ತು! ಅನಂತಮೂರ್ತಿಯವರ ‘ಪೂರ್ವಪರ’ ಹಿಡಿದುಕೊಂಡು ದಿನಗಟ್ಟಲೇ ನಾನೇ ಚರ್ಚಿಸಿದ್ದೇನೆ. ರಾವ್ ಬಹಾದ್ದೂರರ ‘ಗ್ರಾಮಾಯಣ’ ಹಿಡಿದು ಕುಳಿತರೆ ಸಾಕು, ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ದಿನ ಕಳೆಯುತ್ತಿರುವ ಅನುಭವದಲ್ಲಿ ಸುಟ್ಟುಹೋಗುತ್ತಿದ್ದರೆ, ಕಿಟಕಿಯ ಅಚೆ ಹೊಡೆಯುತ್ತಿರುವ ಜಡಿಮಳೆ ಕೂಡ ಗಮನಕ್ಕೆ ಬರುತ್ತಿರಲಿಲ್ಲ. ‘ಲಂಕೇಶ ಪತ್ರಿಕೆ’ಯ ಚಿಕ್ಕ ಟೀಕೆ-ಟಿಪ್ಪಣೆಯೊಂದನ್ನೇ ಹಿಡಿದುಕೊಂಡು ರಾತ್ರಿಯಿಡೀ ಬಲ ಮತ್ತು ಎಡಪಂಥೀಯ ವಾದಗಳಾಗುತ್ತಿದ್ದವು. ಒಂದೆರಡು ಓದಿಗೆ ಅರ್ಥವಾಗದ ಅಡಿಗರ ‘ಹಿಮಗಿರಿಯ ಕಂದರ’ವನ್ನು ಹತ್ತಿಪತ್ತು ಸಲ ಓದಿ, ಲೈಬ್ರರಿಗೆ ಹೋಗಿ ಕವಿತೆಗಳ ವಿಮರ್ಶೆ ಪುಸ್ತಕ ಓದಿ, ಶಬ್ದಕೋಶ ತೆರೆದು ಪದಗಳ ಅರ್ಥ ಹುಡುಕಿ, ಅಲ್ಲಲ್ಲಿ ಟಿಪ್ಪಣೆ ಗೀಚಿ ಕವಿತೆಯ ಅರ್ಥ ಕಾಣಿಸಿದಂತಾಗಿ ಖುಷಿಯಾಗುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ನನ್ನಲ್ಲಿ, ನನ್ನ ಸುತ್ತಮುತ್ತಲಿನವರಲ್ಲಿ ಇನ್ನೂ ಒಂಥರಹದ ಬದಲಾವಣೆಯಾಗುತ್ತಿದೆ. ಯಾವುದಾದರೂ ಕಾದಂಬರಿಯನ್ನು, ಪ್ರಬಂಧ ಸಂಕಲನವನ್ನು, ದೊಡ್ಡ ಕವಿತೆಯನ್ನು ನೋಡಿದಾಗ ವಿಚಿತ್ರ ವೇದನೆಯಾಗುತ್ತದೆ. ಪುಸ್ತಕ ಓದುವ ಏಕಾಗ್ರತೆ ಎಲ್ಲಯವರೆಗೆ ಬಂದಿದೆಯೆಂದರೆ, ಕಾದಂಬರಿಯ ನಾಕನೇ ಪುಟ ಬರುತ್ತಿದ್ದಂತೆ, ಕವಿತೆಯ ಐದನೇ ಸಾಲು ದಾಟುತ್ತಿದ್ದಂತೆ, ಪ್ರಬಂಧದ ಮೂರನೇ ಪ್ಯಾರಾ ಮುಗಿಯುತ್ತಿದ್ದಂತೆ ವಿಚಿತ್ರ ತಳಮಳವಾಗುತ್ತದೆ. ಪುಸ್ತಕ ಅಲ್ಲೇ ನಿಲ್ಲುತ್ತದೆ; ಮಾರನೆಯ ದಿನ ಇನ್ನೊಂದು ಪುಸ್ತಕ, ಮತ್ತೆದೇ ಕತೆ. ಯಾವ ಕಾದಂಬರಿಯೂ, ಕಥಾಸಂಕಲನವೂ, ಕವನ ಸಂಕಲನವೂ ಪೂರ್ತಿ ಮುಗಿಯುವುದೇನು, ಇನ್ನೂ ಸರಿಯಾಗಿ ಶುರು ಕೂಡ ಆಗಿರುವುದಿಲ್ಲ, ನಿಂತುಕೋಗುತ್ತದೆ. ಪುಸ್ತಕ ಬಿಡಿ, ಜಾಲದಲ್ಲೇ ಏನನ್ನೇ ಆಗಲಿ, ಬೇಗ ಬೇಗ ಸ್ಕ್ರೋಲ್ ಮಾಡಿಬಿಡಬೇಕು, ಓದಿ ಮುಗಿಸಿದ ನಾಟಕವಾಗಬೇಕು. ಇಡೀ ಲೇಖನದ/ಕತೆಯ ಎರಡು ಮೂರು ಸಾಲು ಓದಿದರೆ ಸಾಕು, ಲೇಖಕನ ತಳಮಳಗಳೆಲ್ಲ ಅರ್ಥವಾಗಿಬಿಡಬೇಕು (ಇಲ್ಲದಿದ್ದರೆ ಅವನು ಅದೆಂಥ ಲೇಖಕ?). ಇನ್ನೂ ಆ ಲೇಖನದ ಅರ್ಧ ಪ್ಯಾರಾ ಕೂಡ ಮುಗಿದಿರುವುದಿಲ್ಲ, ಇನ್ನೊಂದು ಫೀಡಿನ ಹೆಡ್ಡಿಂಗಿನ ಮೇಲೆ ಕಣ್ಣು ಹೋಗಿಯಾಗಿರುತ್ತದೆ.

ಶಾಲೆ-ಕಾಲೇಜಿನ ನೋಟುಬುಕ್ಕಿನ ಹಿಂದಿನ ಹಾಳೆಯಲ್ಲಿ, ಅಳಿದುಳಿದ ಕಾಗದಗಳ ಕಟ್ಟಿ, ದಿನ ರಾತ್ರಿ ಬರೆದು, ಬರೆದುದನ್ನು ತಿದ್ದಿ, ತಿದ್ದಿದ್ದನ್ನು ಮತ್ತೊಮ್ಮೆ ತಿದ್ದಿ, ಒಳ್ಳೆ ಕಾಗದಗಳ ತಂದು ದುಂಡಾಗಿ ಮತ್ತೊಮ್ಮೆ ತೀಡಿ ಹದರುತ್ತಲೇ ಆಪ್ತ ಗೆಳೆಯನಿಗೋ, ಸೀನಿಯರನಿಗೋ ಕೊಟ್ಟು ಮೊದಲ ಅನಿಸಿಕೆಗಾಗಿ ವಾರಗಟ್ಟಲೇ ಕಾದು, ನಂತರ ಇನ್ನೂ ‘ತಿಳಿದವರಿಗೆ’ ತೋರಿಸಿ, ಮತ್ತೆ ತಿದ್ದಿ, ಪತ್ರಿಕೆಗೆ ಕಳಿಸಿ, ತಿಂಗಳುಗಟ್ಟಲೇ ದಿನಾ ಅಂಚೆಯಣ್ಣನಿಂದ ಬರುವ ಸ್ವೀಕೃತ ಪತ್ರಕ್ಕಾಗಿ ಶಬರಿಯಂತೆ ಕಾಯುವಂತೆ ಮಾಡಿದ ದಿನಗಳಿದ್ದವು.

ಇತ್ತೀಚಿನ ವರ್ಷಗಳಲ್ಲಿ ಯಾರು ಏನು ಬೇಕಾದರೂ ಬರೆಯಬಹುದಾದ ‘ಬ್ಲಾಗರ್.ಕಾಂ, ವರ್ಡ್‍ಪ್ರೆಸ್.ಕಾಂ’ಗಳಿವೆ. ಯಾವ ದೊಣ್ಣೆನಾಯಕನ ಅಪ್ಪಣೆಗೂ ಕಾಯಬೇಕಿಲ್ಲ, ಸಂಪಾದಕ ತಿರಸ್ಕರಿಸುತ್ತಾನೆಂಬ ಭಯವಿಲ್ಲ, ಅಂಚೆವಿಚ್ಚವಿಲ್ಲ, ಹಾಳೆಯ ಒಂದೇ ಮಗ್ಗುಲಿಗೆ ಹೀಗೇ ಬರೆಯಬೇಕೆಂಬ ನಿರ್ಬಂಧವಿಲ್ಲ. ನಾನುಂಟು, ನನ್ನ ಹೊಗಳುಭಟ್ಟ ಮಿತ್ರರುಂಟು, ಸೋಲಿನ ಭಯವೇ ಇಲ್ಲ.

ಬ್ರಾಡ್‍ಬ್ಯಾಂಡಿಗೆ ತಿಂಗಳಿಗೆ ಇಷ್ಟು ಅಂತ ಕಟ್ಟಿದರೆ ಆಯಿತು, ಫಿನೋಲೆಕ್ಸ್ ಪೈಪಿನಲ್ಲಿ ಹರಿದಂತೆ ಕತೆ-ಕವನ-ಕಾದಂಬರಿ-ಪ್ರಬಂಧ-ವಿಮರ್ಶೆ ಸರಾಗವಾಗಿ ೨೪ ಗಂಟೆ ಭೋರ್ಗರೆದು ಹರಿದು ಬರುತ್ತಿದೆ. ಏನು ಬೇಕಾದರೂ ಗೂಗಲಿಸು ಗೂಗಲಿಸು ತಮ್ಮಾ, ಏನು ಬೇಕಾದರೂ ಕುಟ್ಟುತಿರು ತಮ್ಮಾ! ಹೆಚ್ಚಿನ ಓದನ್ನು ಜಾಲದಲ್ಲಿ, ಹೆಚ್ಚಿನ ಬರವಣಿಗೆಯನ್ನು ಕಂಪ್ಯೂಟರಿನಲ್ಲಿ ಮಾಡುವ ಎಲ್ಲರ ಹಣೆಬರಹವೂ ಇದೇ ಅನಿಸುತ್ತದೆ, ಯಾವುದೇ ದೊಡ್ಡ ಬರವಣಿಗೆಯನ್ನು, ಕಾದಂಬರಿಯನ್ನು ಓದಲು ತಾಳ್ಮೆಯೇ ಇರುವುದಿಲ್ಲ. ಬರೆಯುವಾಗಲೂ ಅಷ್ಟೇ, ಮೂರು ನಾಕು ಪ್ಯಾರಾಗಿಂತ ಜಾಸ್ತಿ ಟೈಪಿಸಲು ಕೈ ತಡವರಿಸುತ್ತದೆ. ಜಾಲ ನಾವು ಓದುವ ಬಗೆಯನ್ನು, ಬರೆಯುವ ಬಗೆಯನ್ನು ಹೇಗೆ ನಿಯಂತ್ರಿಸುತ್ತಿದೆಯಲ್ಲವೇ? ಈಗ ಲಕ್ಷಾಂತರ ಪುಸ್ತಕಗಳನ್ನು ಕಂಪ್ಯೂಟರಿಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು. ಆದರೆ ಎಷ್ಟು ಸಲ ಆ ಈ-ಪುಸ್ತಕಗಳನ್ನು ತೆರೆದು ಒಂದು ಪುಟವನ್ನಾದರೂ ಓದಿದ್ದೇವೆ?

ಮಕ್ಕಳು ಹಾಳಾಗುತ್ತಾರೆಂದು ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಟಿವಿ ನೋಡಲು ಅವಕಾಶ ಕೊಡದ ನಾವುಗಳೂ ನಮ್ಮ ಎಲ್ಲಾ ಕಂಪ್ಯೂಟರು, ಮೊಬೈಲು, ಟಿವಿ, ಡಿವಿಡಿಗಳನ್ನೂ ಆರಿಸಿ ದಿನಕ್ಕೆ ಒಂದು ಗಂಟೆಯಾದರೂ ಕೈಲಿ ಪುಸ್ತಕ ಹಿಡಿದು ಕೂತುಕೊಳ್ಳದಿದ್ದರೆ, ಕೈಲಿ ಪೆನ್ನು ಹಿಡಿದು ಬರೆಯಲು ಕೂಡದಿದ್ದರೆ "ಗದುಗಿನ ಭಾರತ"ವಲ್ಲ, ದುಂಡಿರಾಜರ ಚುಟುಕಗಳನ್ನೂ ಓದಲು ಕಷ್ಟಪಡಬೇಕಾಗಬಹುದು, ‘ಮಲೆಗಳಲ್ಲಿ ಮದುಮಗಳು’ ಅಲ್ಲ, ‘ಕರ್ವಾಲೋ’ ಸೈಜಿನ ಪುಸ್ತಕ ಬರೆಯಲೂ ಹೆಣಗಾಡುವ ದಿನ ದೂರವಿಲ್ಲ ಅನಿಸುತ್ತದೆ.


ಲೇಖನ ತುಂಬಾ ಚೆನ್ನಾಗಿದೆ. ನಮ್ಮಲ್ಲಿನ ತಾಳ್ಮೆ ಏಕೆ ಕಡಿಮೆಯಾಗುತ್ತಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ.ಧನ್ಯವಾದಗಳು. -ಪ್ರದೀಪ ಬಡಿಗೇರ...

 Yes... each and every sentence is true. - Prathibha Kudthadka...

 You are right. On a positive note though, IT has revolutionized the way everybody even thinks and definitely has made people understand anybody can be a writer/reader/etc. It has opened door to immense possibilities for poor people like me :). Thanks for this article . very well written and i certainly share the same opinion on many things said in this article. Regards SP...

 Good one. As u suggested we all are culprit. We should change first & then ask our kids to follow us. Art of reading is slowly dying, which should not....

 ದಿಟವಾದ ಮಾತು. ನಿಮ್ಮ ಹಾಗೇ ನನಗೂ ಒಮ್ಮೊಮ್ಮೆ ಅನಿಸುತ್ತೆ. >>ಯಾವ ದೊಣ್ಣೆನಾಯಕನ ಅಪ್ಪಣೆಗೂ ಕಾಯಬೇಕಿಲ್ಲ, ಸಂಪಾದಕ ತಿರಸ್ಕರಿಸುತ್ತಾನೆಂಬ ಭಯವಿಲ್ಲ, ಅಂಚೆವಿಚ್ಚವಿಲ್ಲ, ಹಾಳೆಯ ಒಂದೇ ಮಗ್ಗುಲಿಗೆ ಹೀಗೇ ಬರೆಯಬೇಕೆಂಬ ನಿರ್ಬಂಧವಿಲ್ಲ. ನಾನುಂಟು, ನನ್ನ ಹೊಗಳುಭಟ್ಟ ಮಿತ್ರರುಂಟು, ಸೋಲಿನ ಭಯವೇ ಇಲ್ಲ. ಈ ಮಾತು ನೂರಕ್ಕೆ ನೂರು ನಿಜ. -ಅನಿಲ್....

 ನಿಜ, ಈ ಬರಹ ಸಮಸ್ಯೆಯನ್ನು ಸೂಕ್ಷ್ಮವಾಗಿ ವಿವರಿಸಿದೆ. -ವಿಕಾಸ್...

 ಕನ್ನಡದಲ್ಲಿ ಇವತ್ತು ೨೦೦ ಪುಟಕ್ಕಿಂತ ಜಾಸ್ತಿ ಇರುವ ಪುಸ್ತಕಗಳನ್ನು ಬರೆದು ಬಿಡುಗಡೆ ಮಾಡುವ ಧೈರ್ಯವಿರುವವರು ಕೇವಲ ೪-೫ ಲೇಖಕರು ಮಾತ್ರ! ಕಾರಣ, ನೀವು ಹೇಳಿದಂತೆ ವ್ಯವಧಾನ ಕಡಿಮೆಯಾಗಿಹೋಗಿರುವ ಓದುಗರು. . - ಪ್ರವೀ...

 ಈ ಲೇಖನ, ಅದರ ಗಾತ್ರ, ಗಂಭೀರ ಪ್ರಶ್ನೆಗಳೊಂದಿಗೆ ಮುಖಾಮುಖಿಯಾಗದೆ ಉಳಿಯುವ ರೀತಿ, ಸಾರಾಸಗಟು ತೀರ್ಮಾನಗಳು, ಮತ್ಥೂ ಅದಕ್ಕೆ ಬಂದಿರುವ ಪ್ರತಿಕ್ರಿಯೆ,ಇತ್ಯಾದಿಗಳು ಲೇಖನ ಎತ್ತಿರುವ ಪ್ರಶ್ನೆಗಳನ್ನೇ ಪುಷ್ಟೀಕರಿಸಿದಂತಿದೆಯೆ? ಬೇಟೆಗಾರನೇ ಬೇಟೆಯಾಗುವುದರ ವಿಪರ್ಯಾಸವೇ ಇದು?...
 Re:  ನೀವು ಸರಿಯಾಗೇ ಗುರುತಿಸಿದ್ದೀರಿ: "ಬೇಟೆಗಾರನೇ ಬೇಟೆಯಾದಂತೆ". ಇಲ್ಲಿ ಬೇಟೆಗಾರ ಬರಹಗಾರನೂ ಹೌದು, ಓದುಗನೂ ಹೌದು. - ಕೇಶವ


 Contrary to the author's observation, more and more and new readers are drawn towards kannada books thanks to the book reviews, discussions that happen in blogs/different websites. And blogs infact have released the writers from the mercy of editors who think they are nothing less than God. Blogs have provided a novel way of reaching the readers and faster too. Those who crib that books are not being read have only to check with Ankita or Sapna for statistics. Instread of cribbing , one could introduce "books worth reading" via different blogs to help the cause of reading books! Radhika...

 ಕಾಲಕ್ಕೆ ತಕ್ಕ೦ತೆ ನಮ್ಮ ಅಭಿರುಚಿ. ಇವತ್ತು ಅದೇ ಸುಧಾದಲ್ಲಿ ಯ೦ಡಮುರಿವಿರೆ೦ದ್ರನಾಥರ ಕಾದ೦ಬರಿ, ಓದಲು ಸಮಯ/ತುಡಿತ ಯಾವುದು ಇಲ್ಲ. ನೂರಾರು ಚಾನಲ್, ಆದರೆ ಒ೦ದೂ ಕಾರ್ಯಕ್ರಮ ಪೂರ್ಣ ನೋಡುವದಿಲ್ಲ. ನೂರಾರು ಪುಸ್ತಕ/ಬ್ಲಾಗ್, ಆದರೆ ಒ೦ದೂ ಪೂರ್ಣ ಓದುವದಿಲ್ಲ. ನಿನ್ನ ಸ೦ಕಟ ನಮ್ಮೆಲ್ಲರ ಸ೦ಕಟ. ಎಚ್ಚರಿಕೆ ಕೊಟ್ಟಿದಕ್ಕೆ ಧನ್ಯವಾದಗಳು. ವಾದಿರಾಜ ಕುಲಕರ್ಣಿ...

 ಹೌದಲ್ವೇ! ನೋಡಿ ನೀವು ನಮ್ಮ ಆಂತರ್ಯದ ಒಳಹೊಕ್ಕು ಸ್ವತಃ ಅನುಭವಿಸಿ ಬರೆದಿದ್ದೀರಿ. ಇದೇಕೆ ಹೀಗೆ? ಸಿ ಮರಿಜೋಸೆಫ್...

 ಬಹಳ ಚೆನ್ನಾಗಿ ಬರೆದಿದ್ದೀರಿ. ....................ಯೋಗಿಂದ್ರ ಮರವಂತೆ...

 ನನ್ನ ಸಂಕಟಗಳನ್ನೇ ನೀವೂ ಅನುಭವಿಸುತ್ತಿದ್ದೀರಿ. ಓದಿಗೆ ಬೇಕಾದ ’ಸಮಯ’ ಕಳೆದುಕೊಂಡಿರುವ ನಾವೆಲ್ಲ ಹಾಳಾಗಿಹೋಗುತ್ತಿದ್ದೇವೆ. ಎಚ್ಚರದ ಮಾತಿಗೆ ಧನ್ಯವಾದ-ಡೀಎಸ್ಸಾರ್...
 Re:  ನನ್ನ ಮಾತುಗಳನ್ನೇ ನೀವೂ ಹೇಳುತ್ತಿದ್ದೀರಿ! ಆಧುನಿಕ ಜೀವನಕ್ರಮದಲ್ಲಿ ಓದಿಗೆ ಡೈವೋರ್ಸ್ ಕೊಟ್ಟಾಯಿತು. ಬೇಸರದ ಸಂಗತಿ.


 ಡಾ. ಕುಲಕರ್ಣಿಯವರೇ! ಉತ್ತಮ ಲೇಖನ ಬರೆದು ಮನೋಲೋಕದ ಕರೆಗಂಟೆಯ ಗುಂಡಿಯನ್ನು ಒತ್ತಿದ್ದೀರಿ. ತಮಗೆ ನಾನು ಆಭಾರಿ. - ಪೆಜತ್ತಾಯ ಎಸ್. ಎಮ್....

3 comments:

 1. ಕುಲಕರ್ಣಿ ಸರ್,

  ನಿಮ್ಮ ಮಾತು ನೂರಕ್ಕೆ ನೂರು ಸತ್ಯ....ಮೊದಲಿದ್ದ ಪುಸ್ತಕ ಪೆನ್ನಿನ ಪ್ರೀತಿ ಈಗ ತುಂಬಾ ಕಡಿಮೆಯಾಗಿದೆ....ತಲೆಯಲ್ಲಿ ವಿಚಾರಗಳಿದ್ದರೂ ಬರೆಯಲು ಸೋಮಾರಿತನ...ಇದ್ದೇ ಇದೆಯಲ್ಲ ಸುಲಭವಾಗಿ ಕುಟ್ಟಲು..ಕಂಪ್ಯೂಟರು...

  ReplyDelete
 2. ಕೇಶವ,
  ಕಾಲ ಬದಲಾಗಿದೆ ಅಲ್ವೆ? ಈಗ ನ್ಯಾನೋಸೆಕೆಂಡುಗಳು ಹಾಗೂ ಮೈಕ್ರೊಚಿಪ್‍ಗಳದೇ ಕಾರಭಾರ!

  ReplyDelete
 3. ಶಿವು, ಸುನಾಥ್,
  ತಪ್ಪದೇ ಪ್ರತಿಕ್ರಿಯೆ ಬರೆಯುತ್ತೀರಲ್ಲ! ಥ್ಯಾಂಕ್ಸ್ ಅಲ್ಲದೇ ಇನ್ನೇನು ಹೇಳಲಿ?
  - ಕೇಶವ

  ReplyDelete