Tuesday, March 24, 2009

"ಪ್ರತಿಕ್ರಿಯೆಗಳು ಯಾಕೆ ಹೀಗೆ"ಗೊಂದು ಪ್ರತಿಕ್ರಿಯೆ

ಇತ್ತೀಚೆ "ಕೆಂಡಸಂಪಿಗೆ"ಯಲ್ಲಿ ಪ್ರೇಮಶೇಖರರ "ಪ್ರತಿಕ್ರಿಯೆಗಳು ಯಾಕೆ ಹೀಗೆ? " ಎಂಬ ಲೇಖನಕ್ಕೆ ನನ್ನ ಪ್ರತಿಕ್ರೆಯೆ:

ಪ್ರಸಿದ್ಧರಾದವರು (ಉದಾ: ಯು ಆರ್ ಅನಂತಮೂರ್ತಿ ಅಥವಾ ಜೋಗಿಯಂಥವರು) ಬರಹಕ್ಕೆ ಯಾವುದೇ ತರಹದ ಪ್ರತಿಕ್ರಿಯೆ ವ್ಯಕ್ತಪಡಿಸಲಿ ಅದರಿಂದ ಆಗುವ ಆನಂದವೇ ಬೇರೆ. ಇನ್ನೂ ಕೆಲ ಮಿತ್ರರು ಬಂಧುಗಳು ತಪ್ಪದೇ ಪ್ರತಿಕ್ರಿಯೆ ಬರೆಯುತ್ತಾರೆ, ಅದರಿಂದ ಏನೂ ಅನ್ನಿಸಿವುದಿಲ್ಲ. ಅದು ಬಿಟ್ಟರೆ ಪ್ರತಿಕ್ರಿಯೆ ಮಾಡಿವವರು ನಾಮಧೇಯರಾಗಿರಲಿ, ಅಥವಾ ಅನಾಮಧೇಯರಾಗಿರಲಿ ಬರಹಗಾರನಿಗೆ ಅಂಥಹ ವ್ಯತ್ಯಾಸವೇನೂ ಆಗುವುದಿಲ್ಲ, ಆಗಬಾರದು. ಹೆಸರಿನಲ್ಲೇನಿದೆ? ಓದಿದ ಬರಹದ ಬಗ್ಗೆ ನಿರ್ಭಿಡೆಯಾಗಿ ಪ್ರತಿಕ್ರಿಯೆ ಬರೆಯುವ ಹಕ್ಕು ಓದುಗನಿಗೆ ಇದ್ದೇ ಇದೆ. ಪ್ರಕಟಿಸುವುದೋ ಬಿಡುವುದೋ ಎನ್ನುವ ಹಕ್ಕು ಸಂಪಾದಕ ಮಂಡಲಿಗೆ ಇದ್ದೇ ಇದೆ.

ನನ್ನ ಪ್ರಕಾರ ವೈಯಕ್ತಿಕ ಮಟ್ಟದಲ್ಲಿ ತೆಗಳುವ ಪ್ರತಿಕ್ರಿಯೆಗಳನ್ನು ಬಿಟ್ಟು, ವಿಷಯಕ್ಕೆ ಸಂಬಂಧಿಸದ ಪ್ರತಿಕ್ರಿಯೆಗಳನು ಬಿಟ್ಟು (ಈ ಸಮಸ್ಯೆ ಇಂಗ್ಲೀಷ್ ಸೈಟುಗಳಿಗೆ ಜಾಸ್ತಿ. ಬರಹ ಏನೋ ಇರುತ್ತದೆ, ಪ್ರತಿಕ್ರಿಯೆಯಲ್ಲಿ “ರಾತ್ರಿಯ ಸುಖಕ್ಕೆ ಈ ವೆಬ್‍ಸೈಟ್ ಪ್ರವೇಶಿಸಿ” ಎಂದು ಬರೆದಿರುತ್ತಾರೆ) ಬೇರೆ ಎಲ್ಲ ಪ್ರತಿಕ್ರಿಯೆಗಳನ್ನೂ ಸಂಪಾದಕ ಮಂಡಲಿ ಪ್ರಕಟಿಸಬೇಕು.

ಕೆಂಡಸಂಪಿಗೆಯಲ್ಲಿ ಬಹಷಃ ಅತ್ಯಂತ ಹೆಚ್ಚು ಖಾರ ಖಾರ ಪ್ರತಿಕ್ರಿಯೆಗಳು ಬಂದ ಜೋಗಿ ಬರೆದ ಭೈರಪ್ಪನವರ ಬಗೆಗಿನ ಬರಹವನ್ನೇ (http://www.kendasampige.com/article.php?id=1548) ತೆಗೆದುಕೊಳ್ಳೋಣ. ಹೆಸರಿರುವ ಓದುಗರಿಂದ ಹಿಡಿದು ಚಿತ್ರವಿಚಿತ್ರ ಹೆಸರು ಬರೆದುಕೊಂಡ ಅನಾಮಧೇಯ ಓದುಗರವರೆಗೂ ಖಾರ ಪ್ರತಿಕ್ರಿಯೆಗಳು ಬಂದವು. ಒಂದು ಕಡೆ ಜೋಗಿಯವರ ಬರಹದ ಬಗ್ಗೆ ಆಕ್ರೋಶ ಮತ್ತೊಂದು ಕಡೆ ಪ್ರತಿಕ್ರಿಯೆ ಬರೆದ ಚೇತನಾ ತೀರ್ಥಹಳ್ಳಿಯವರ ಮೇಲೆ ಮಾತಿನ ದಾಳಿ ನಡೆಯಿತು. ವೈಯಕ್ತಿಕ ಮಟ್ಟದ ತೆಗಳುವಿಕೆಗಳನ್ನು ಬಿಟ್ಟರೆ ಚರ್ಚೆ ಒಂದು ಮಟ್ಟದಲ್ಲಿ ಚೆನ್ನಾಗಿಯೇ ನಡೆಯಿತು, ಓದುಗ-ಓದುಗರ ನಡುವೆ. ಬರಹಗಾರ (ಜೋಗಿ) ಮಾತ್ರ ದಿವ್ಯ ಮೌನವಹಿಸಿದರು.ಯಾವುದೇ ಬರಹಕ್ಕೆ ಹೊಗಳಿ ಪ್ರತಿಕ್ರಿಯೆ ಬಂದಾಗ ಬರಹಗಾರ ಅದಕ್ಕೆ ಉತ್ತರಿಸುವ ಅಗತ್ಯವಿಲ್ಲ. ಆದರೆ ಪ್ರತಿಕೂಲ ಪ್ರತಿಕ್ರಿಯೆ ಬಂದಾಗ, ವಿಭಿನ್ನ ದೃಷ್ಟಿಕೋನ ಬಂದಾಗ, ಮೂಲನಿಲುವನ್ನೇ ಪ್ರಶ್ನಿಸಿ ಬರೆದಾಗ ಬರಹಗಾರ ಅದಕ್ಕೆ ಪ್ರತಿಕ್ರಿಯಿಸಿದರೆ ತಾನೆ ಚರ್ಚೆ ಮುಂದುವರಿಯಲು ಸಾಧ್ಯ? ಬರಹಗಾರ ಧೀರ್ಘಮೌನ ತಾಳಿದರೆ “ಚರ್ಚೆ” ಎನ್ನುವ ಮಾತೇ ಚರ್ಚಾಸ್ಪದವಲ್ಲವೇ? "ಕೆಂಡಸಂಪಿಗೆ" ಚರ್ಚೆಯ ವೇದಿಕೆಯಾಗುವ ಮಾತೆಲ್ಲಿಂದ ಬಂತು?

ಒಂದು ಪ್ರಶ್ನೆ ನನ್ನನ್ನು ಕಾಡುತ್ತದೆ: “ಕೆಂಡಸಂಪಿಗೆ”ಯನ್ನು, ಕನ್ನಡದ ಬ್ಲಾಗುಗಳನ್ನು, ಕನ್ನಡದ ಜಾಲಗಳನ್ನು ಯಾವ ಯಾವ ಲೇಖಕರು, ಸಂಪಾದಕರು, ಪತ್ರಕರ್ತರು ಓದುತ್ತಾರೋ ಗೊತ್ತಿಲ್ಲ. ಆದರೆ ಇದುವರೆಗೆ (ನಾನು ಕನ್ನಡದ ಸುಮಾರು ೨೦೦ ಬ್ಲಾಗುಗಳನ್ನು ಹಿಂಬಾಲಿಸುತ್ತೇನೆ) ಒಂದೇ ಒಂದು ಯು.ಆರ್.ಅನಂತಮೂರ್ತಿಯವರ ಪ್ರತಿಕ್ರಿಯೆಯನ್ನೋ, ಅಥವಾ ಇನ್ನಾವ ಪ್ರಸಿದ್ಧ ಲೇಖಕರ ಪ್ರತಿಕ್ರಿಯೆಯನ್ನೋ ಓದಿದ ನೆನಪಿಲ್ಲ. ಅಂದರೆ ಪ್ರಸಿದ್ಧ ಲೇಖಕರು “ಕೆಂಡಸಂಪಿಗೆ”ಯನ್ನು ಓದುವುದಿಲ್ಲವೇ? ಓದಿದರೂ ಪ್ರತಿಕ್ರಿಯೆ ಬರೆಯುವಷ್ಟು ಅವರಿಗೆ ಪುರಸೊತ್ತಿಲ್ಲವೇ? ಕಂಪ್ಯೂಟರ್ ಉಪಯೋಗಿಸುವುದು ಇವರಿಗೆ ಗೊತ್ತಿಲ್ಲವೇ? ಅಸಡ್ಡಯೇ? ಅಥವಾ ಪ್ರತಿಕ್ರಿಯೆ ಬರೆಯುವುದು ಇವರ ಲೆವಲ್ಲಿಗೆ ಕಡಿಮೆಯೇ?

ಇನ್ನೂ ಒಂದು ವಿಷಯ: “ಕೆಂಡಸಂಪಿಗೆ”ಯಲ್ಲಿ ನೊಂದಾಯಿಸಿದ ಬರಹಗಾರರಿಗೆ ಮಾತ್ರ ಪ್ರತಿಕ್ರಿಯೆಮಾಡಲು ಅವಕಾಶ ಮಾಡಿಕೊಟ್ಟರೆ ಅದರಿಂದ ಆಗುವ ಹಾನಿ “ಕೆಂಡಸಂಪಿಗೆ”ಗೇ ಮತ್ತು ಅದಕ್ಕೆ ಬರೆಯುವ ಲೇಖಕರಿಗೇ. ಮೊದಲು “ಲಾಗಿನ್” ಆಗಬೇಕು, ನಂತರ ಪ್ರತ್ರಿಕ್ರಿಯೆ ಬರೆಯಬೇಕು. ಈ ಪ್ರಕ್ರಿಯೆಯೇ ಸೋಮಾರಿತನವನ್ನು ತರುತ್ತದೆ. ಅಷ್ಟೇ ಅಲ್ಲ, ಒಬ್ಬನೇ ವ್ಯಕ್ತಿ ನೂರಾರು ಹೆಸರು, ನೂರಾರು ಈಮೇಲ್ ಐಡಿ ಮಾಡಿಕೊಳ್ಳುವ ಈ ದಿನದಲ್ಲಿ “ನೊಂದಾಯಿಸಿದ” ವ್ಯಕ್ತಿ ಅವನೇ ಅನ್ನುವುದು ಏನು ಗ್ಯಾರಂಟಿ? ಉದಾಹರಣೆಗೆ, ನಾನು ನನ್ನ ಈ-ಮೇಲ್ ಐಡಿಯನ್ನು “jogi.kendasampige@gmail.com” ಅಂತ ಮಾಡಿಕೊಂಡು ನನ್ನ ಹೆಸರು “ಗಿರೀಶ್ ರಾವ್” ಎಂದು ಹಾಕಿಕೊಂಡು, ಊರು “ಬೆಂಗಳೂರು” ಎಂದು ಬರೆದುಕೊಳ್ಳುತ್ತೇನೆ; ದೂರದ ಇಂಗ್ಲಂಡಿನಲ್ಲಿ ಕೂತುಕೊಂಡು ಜೋಗಿಯ ಹೆಸರಿನಲ್ಲಿ ಪ್ರತಿಕ್ರಿಯೆ ಬರೆಯುತ್ತೇನೆ. ಆಗ ಪ್ರತಿಕ್ರಿಯೆ ಓದುವವರು ಇದು “ಜೋಗಿ”ಯ ಪ್ರತಿಕ್ರಿಯೆ ಎಂದು ಖಂಡಿತ ನಂಬುತ್ತಾರೆ, ಏಕೆಂದರೆ ಅದು ನೊಂದಾಯಿಸಿದ ಈಮೇಲಿನಿಂದ ಬಂದಿರುತ್ತದೆ!

ನನ್ನ ಒಂದು ಸಲಹೆ: ಕನ್ನಡದಲ್ಲಿ ಟೈಪಿಸಲು ಆಗದವರು ಪ್ರತಿಕ್ರಿಯೆಯನ್ನು ಇಂಗ್ಲೀಷ್ ಲಿಪಿಯ ಕನ್ನಡದಲ್ಲಿ ಮಾಡುವ ಬದಲು ಇಂಗ್ಲೀಷಿನಲ್ಲೇ (ಲಿಪಿ ಮತ್ತು ಭಾಷೆ) ಬರೆದರೆ ಓದುವುದು ಸುಲಭ. ಕನ್ನಡವನ್ನು ಇಂಗ್ಲೀಷಿನಲ್ಲಿ ಟೈಪಿಸಿದರೆ ಓದಲು ನನಗಂತೂ ಚಿತ್ರಹಿಂಸೆಯಾಗುತ್ತದೆ. ಇಂಗ್ಲೀಷ್ ಲಿಪಿಯಲ್ಲಿರುವ ಕನ್ನಡ ಪ್ರತಿಕ್ರಿಯೆಗಳನ್ನು “ಕೆಂಡಸಂಪಿಗೆ”ಯ ತಂಡ ಕನ್ನಡ ಲಿಪಿಗೆ ಪರಿವರ್ತಿಸಿ ಪ್ರಕಟಿಸಿದರೆ ಚೆನ್ನ ಎಂದು ನನ್ನ ಅಭಿಪ್ರಾಯ.

ಪ್ರೀತಿಯಿಂದ,

ಕೇಶವ

5 comments:

 1. ಹೌದು ಸರ್, ನಿಮ್ಮ ಅನಿಸಿಕೆ ನನ್ನ ಅನಿಸಿಕೆಯೂ ಹೌದು. ನಾನೂ ಅನೇಕ ಬ್ಲಾಗುಗಳನ್ನು ಪ್ರತಿನಿತ್ಯ ನೋಡುತ್ತಿರುತ್ತೇನೆ. ಎಲ್ಲಿಯೂ ಕನ್ನಡದ ಹಿರಿಯ ಸಾಹಿತಿಗಳ ಕಾಮೆ೦ಟು ಕಾಣಸಿಗುವುದಿಲ್ಲ. ಅವರಿ೦ದಲೂ ಕಾಮೆ೦ಟುಗಳು ಬ೦ದರೆ ಬ್ಲಾಗಿಗರು ಇನ್ನಷ್ಟು ಹುರುಪುಗೊಳ್ಳಲು, ಸ್ಪೂರ್ತಿ ಪಡೆಯಲು, ತಿದ್ದಿಕೊಳ್ಳಲು ಸಾಧ್ಯ.

  ReplyDelete
 2. ಕೇಶವ,
  ಅನೇಕ ವಿಷಯಗಳನ್ನು ಎತ್ತಿರುವಿರಿ.
  ಮೊದಲನೆಯದಾಗಿ, ಖ್ಯಾತ ಲೇಖಕರು "ಯಾವ್ಯಾವದೋ ಲೇಖನಕ್ಕೆ" ಪ್ರತಿಕ್ರಿಯೆ ಕೊಟ್ಟು cheap ಆಗಲು ಬಯಸುವದಿಲ್ಲ. ಆದರೆ, ಶಂಖದಿಂದ ಬಂದದ್ದೇ ತೀರ್ಥ ಎಂದು
  ನಾವು ತಿಳಿದುಕೊಳ್ಳಬೇಕಿಲ್ಲ!
  ಎರಡನೆಯದಾಗಿ ಆಂಗ್ಲ ಬರಹವನ್ನು ಉಪಯೋಗಿಸುವವರು ಆಂಗ್ಲ ಭಾಷೆಯಲ್ಲಿ ಬರೆಯುವದೇ ಒಳ್ಳೆಯದು. Easily
  ಅರ್ಥವಾಗುತ್ತದೆ.
  ಇನ್ನು ಕೆಂಡಸಂಪಿಗೆಯ ಅಧಿಕೃತ ಓದುಗರು ಮಾತ್ರ ಪ್ರತಿಕ್ರಿಯೆ ಬರೆಯುವದಾದರೆ, ಅನೇಕರು ಬರೆಯಲೇ ಹೋಗುವದಿಲ್ಲ!

  ReplyDelete
 3. ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

  ReplyDelete
 4. ನೀವು ಹೇಳಿದ್ದು ನಿಜ ಸರ್.
  -ಧರಿತ್ರಿ

  ReplyDelete
 5. ಪರಂಜಪೆ, ಸುನಾಥ ಮತ್ತು ಧರಿತ್ರಿ,

  ಧನ್ಯವಾದಗಳು

  - ಕೇಶವ

  ReplyDelete