Tuesday, April 07, 2009

ಬಿಗ್‍ಬ್ರದರ್ ಪ್ರಪಂಚ

ಅದೇ ತಾನೆ ಇಂಗ್ಲಂಡಿಗೆ ಬಂದು (೨೦೦೪) ಇನ್ನೂ ಕೆಲಸ ಸಿಕ್ಕದೇ ಅಂಡಲೆಯುತ್ತಿದ್ದ ಸಮಯದಲ್ಲಿ ಚನಲ್ ೪ ನಲ್ಲಿ "ಬಿಗ್‍ಬ್ರದರ್" ಬರುತ್ತಿತ್ತು. ಪುಗಸಟ್ಟೆ ಸಿಗುವ “ಮೆಟ್ರೋ” ಮತ್ತು ನಾವು ಊಟಕ್ಕೆ ಹೋಗುವ ಶ್ರೀಲಂಕದವರ ಮನೆಯಲ್ಲಿ ಇರುವ “ಸನ್”ನಲ್ಲಿ ಎರಡೆರಡು ಪುಟಗಳು ಈ “ಬಿಗ್‍ಬ್ರದರ್” ಸುದ್ದಿಗೇ ಮೀಸಲು! image

ನಾಕಾರು ಜನ ಅಪರಿಚಿತರು ಟಿವಿಯಿಲ್ಲದೇ, ರೇಡಿಯೋ ಇಲ್ಲದೇ , ಅಂತರ್ಜಾಲವಿಲ್ಲದೇ, ಹೊರಗಿನ ಜನರ ಸಂಪರ್ಕವಿಲ್ಲದೇ, ಒಂದೇ ಮನೆಯಲ್ಲಿ ತಿಂದು, ಸೇದಿ, ಮಾತಾಡಿ, “ಟಾಸ್ಕ್”(ಅವರಿಗೆ ಆದೇಶಿಸಿದ ಚಿಲ್ಲರೆ ಕೆಲಸಗಳು)ಗಳನ್ನು ಮಾಡುವುದನ್ನು ಟಿವಿಯಲ್ಲಿ ನೇರಪ್ರಸಾರ ಮಾಡುವುದಂತೆ; ನೇರಪ್ರಸಾರ ನೋಡಲಾಗದವರು ಹೈಲೈಟನ್ನು ನೋಡುವುದಂತೆ, ನೋಡಿಬಿಟ್ಟು ವೋಟು ಹಾಕುವುದಂತೆ, ಯಾರೋ ಒಬ್ಬರು ಗೆಲ್ಲುತ್ತಾರಂತೆ! ಆ ವರ್ಷ ಟ್ರಾನ್ಸ್-ಸೆಕ್ಸುವಲ್‍ಆದ ನಾಡಿಯಾ ಒಂದು ಲಕ್ಷ ಪೌಂಡು ಗೆದ್ದು ಹೊರಬಂದಾಗ ಬಿಬಿಸಿಯಲ್ಲೂ ಅದು ದೊಡ್ಡಸುದ್ದಿಯಾಯಿತು.

ಅನಿವಾಸಿ ಭಾರತೀಯರು ಮತ್ತು ಪಾಕಿಸ್ತಾನಿಗಳು ಈ ಕಾರ್ಯಕ್ರಮಕ್ಕೆ ಮುಗಿಬಿದ್ದದ್ದು ೨೦೦೭ರಲ್ಲಿ ಶಿಲ್ಪಾ ಶೆಟ್ಟಿ ಇಲ್ಲಿನ "ಸೆಲಿಬ್ರಿಟಿ ಬಿಗ್‍ಬ್ರದರ್"ಗೆ ಬಂದಾಗ. ಈ ಬಿಗ್‍ಬ್ರದರ್ ಮೇಲೆ ಹೇಳಿದ ಬಿಗ್‍ಬ್ರದರ್ ತರಹ ಅಲ್ಲ, ಇದರಲ್ಲಿ ಇರುವವರೆಲ್ಲ ಸೆಲಿಬ್ರಿಟಿಗಳೇ! ಅಂಥ ಸೆಲಿಬ್ರಿಟಿಗಳಲ್ಲಿ “ಜೇಡ್ ಗುಡ್ಡಿ” ಕೂಡ ಇದ್ದಳು.

ಹಲ್ಲಿನ ನರ್ಸ್ ಆಗಿದ್ದ ಜೇಡ್ ಗುಡ್ಡಿ ಸೆಲಿಬ್ರಿಟಿಯಾಗಿದ್ದೇ ಈ ಹಿಂದೆ “ಮಾಮೂಲಿ ಬಿಗ್‍ಬ್ರದರ್ (೨೦೦೨)”ನಲ್ಲಿ ಭಾಗವಹಿಸಿ ಯಪರಾ ತಪರಾ ಮಾತಾಡಿ (“ಕೇಂಬ್ರಿಡ್ಜ್ ಲಂಡನ್ನಿನಲ್ಲಿದೆ”- ಕರ್ನಾಟಕದವ “ಮೈಸೂರು ಬೆಂಗಳೂರಿನಲ್ಲಿದೆ” ಎಂದು ಹೇಳಿದಂತೆ), ಕುಡಿದು ಬೆತ್ತಲೆ ಓಡಾಡಿ (ನೆನಪಿರಲಿ ಇದು ನೇರಪ್ರಸಾರವಾಗುವ ಟಿವಿ ಶೋ) “ಬಿಗ್‍ಬ್ರದರ್” ಮನೆಯಿಂದ ಸೋತು ಹೊರಬಿದ್ದ ಕಾರಣದಿಂದಾಗಿ!

ಪತ್ರಿಕೆಗಳಿಂದ ಕುಖ್ಯಾತಿಗಳಿಸಿದ್ದ ಜೇಡ್ ಜನರಲ್ಲಿ ಮಾತ್ರ ಅಗಾಧ ಜನಪ್ರೀಯತೆಯನ್ನು ಗಳಿಸಿಬಿಟ್ಟಿದ್ದಳು. ಇತ್ತೀಚೆ ಭಾರತದಲ್ಲೂ ಕಾಣಸಿಗುವ “ಹೀಟ್”, “ಓಕೆ” ತರಹದ ಪತ್ರಿಕೆಗಳಿಗೆ ಸಂದರ್ಶನ ಕೊಟ್ಟು, ಟಿವಿ ಶೋಗಳಲ್ಲಿ ಭಾಗವಹಿಸಿ ಲಕ್ಷಾಂತರ ಪೌಂಡು ಗಳಿಸಿದಳು. ತನ್ನ ಹೆಸರಿನ ಪರ್ಫ್ಯೂಮ್ ಮಾರುಕಟ್ಟೆಯಲ್ಲಿ ಬಿಟ್ಟರೆ ಕಳ್ಳೆಪುರಿಯಂತೆ ಮಾರಾಟವಾಯಿತು. ೨೫ನೇ ವಯಸ್ಸಿಗೇ ಆತ್ಮಚರಿತ್ರೆಯನ್ನು ಪ್ರಕಟಿಸಿದಳು.

“ಸೆಲಿಬ್ರಿಟಿ ಬಿಗ್‍ಬ್ರದರ್”ನಲ್ಲಿ ಸೆಲಿಬ್ರಿಟಿಯಾಗಿ ಬಂದಾಗ ತಾನು ಏನು ಮಾಡಿದರೂ ಜನ ಮೆಚ್ಚುತ್ತಾರೆ ಅಂದುಕೊಂಡಳು. ಶಿಲ್ಪಾಶೆಟ್ಟಿಗೆ “ಶಿಲ್ಪಾ ಪಾಪಡಂ” ಅಲ್ಲದೇ ಇನ್ನೂ ಅಶ್ಲೀಲ್ ಮಾತುಗಳನ್ನು ಅಂದಳು. ರೇಸಿಸ್ಟ್ ಅನಿಸುವಂಥ ಮಾತುಗಳನ್ನಾಡಿ ಭಾರತೀಯರನ್ನೂ ಕೆರಳಿಸಿದಳು.

ಸೆಲಿಬ್ರಿಟಿ ಬಿಗ್‍ಬ್ರದರ್ ಮನೆಯಿಂದ ಹೊರಬಂದಳು. ಸಾವಿರಾರು ಜನ ಜೇಡ್‍ಳನ್ನು ಖಂಡಿಸಿದರು, ಪತ್ರಿಕೆಗಳು ಉಗಿದು ಬರೆದವು, ಟಿವಿಯಲ್ಲಿ ಅದೇ ಚರ್ಚೆ. ಅವಳ ಹೆಸರಿನ ಪರ್ಫ್ಯೂಮ್‍ಅನ್ನು ಮಾರುಕಟ್ಟೆಯಿಂದ ಹಿಂತೆಗೆಯಲಾಯಿತು. ಅವಳ ಆತ್ಮಚರಿತ್ರೆಯ ಮರುಮುದ್ರಣ ರದ್ದಾಯಿತು.

ಜೇಡ್ ಕ್ಷಮೆ ಕೇಳಿದಳು, ಎಲ್ಲ ರೀತಿಯಿಂದಲೂ ಗೆದ್ದ ಶಿಲ್ಪಾ ಅವಳನ್ನು ಕ್ಷಮಿಸಿದಳು. ಶಿಲ್ಪಾಶೆಟ್ಟಿಯ ಗೆಲುವನ್ನು ಮುಂದಿಟ್ಟುಕೊಂಡು ಭಾರತದಲ್ಲೂ ಬಿಗ್‍ಬ್ರದರ್ ಮಾದರಿಯಲ್ಲಿ "ಬಿಗ್‍ಬಾಸ್" ಶುರುವಾದಾಗ ಜೇಡ್ ಗುಡ್ಡಿಯನ್ನೂ ಕರೆತಂದರು. ಅದೇ ಸಮಯ, ಕ್ಯಾನ್ಸರ್ ಅವಳನ್ನು ಆಗಲೇ ತಿನ್ನಲು ಶುರುಮಾಡಿತ್ತು ಅನಿಸುತ್ತದೆ, ಅರ್ಧಕ್ಕೇ ಇಂಗ್ಲಂಡಿಗೆ ವಾಪಸಾದಳು. 1

ರೋಗ ಉಲ್ಫಣಿಸಿತು, ಸಾವು ಮನೆ ಹೊಸ್ತಿಲ್ಲಲ್ಲೇ ಕಾಯುತ್ತಿತ್ತು. ಆಗ ತನ್ನ ಬಾಯ್‍ಫ್ರೆಂಡ್ ಟ್ವೀಡ್‍ನನ್ನು ಮದುವೆಯಾದಳು. ಆ ಮದುವೆಯನ್ನೂ (ಬಹುಷಃ ಏಳು ಲಕ್ಷ ಪೌಂಡಿಗೆ) ಓಕೆ ಪತ್ರಿಕೆಗೆ ಮಾರಿಕೊಂಡಳು. ಮುಂದೆ ಸ್ವಲ್ಪ ದಿನದಲ್ಲೇ (ಮಾರ್ಚ್ ೨೨) ಸತ್ತಳು.

೧೯೪೯ರಲ್ಲೇ ತನ್ನ “೧೯೮೪” ಕಾದಂಬರಿಯಲ್ಲಿ “ಬಿಗ್‍ಬ್ರದರ್” ಎಂಬ ಭಯಾನಕ ರಾಜಕೀಯ ಕಲ್ಪನೆ ಮಾಡಿದ ಜಾರ್ಜ್ ಆರ್ವೆಲ್ಲಿನ ಪ್ರಜಾಪ್ರಭುತ್ವವಿರುವ ಇಂಗ್ಲಂಡಿನಲ್ಲಿ ಇವತ್ತು ಸುಮಾರು ನಲವತ್ತೆರಡು ಲಕ್ಷ ಸಿಸಿಟಿವಿಗಳು ಜನಸಾಮಾನ್ಯರನ್ನು ೨೪ ಗಂಟೆ ಹಿಂಬಾಲಿಸುತ್ತಿವೆ. ಇವಕ್ಕೆ ಪ್ರತೀಕವಿಟ್ಟಂತೆ ವರ್ಷಕೊಮ್ಮೆ ಬರುವ ಈ “ಬಿಗ್‍ಬ್ರದರ್” ಎಂಬ ರಿಯಾಲಿಟಿ ಶೋ, ಅದರಿಂದಾಗಿಯೇ ಯಶಸ್ಸನ್ನೂ ಹಣವನ್ನೂ ಗಳಿಸಿದ “ಜೇಡ್‍ಳ ಜೀವನ” ನಮ್ಮ ಆಧುನಿಕ ಜಗತ್ತಿಗೆ ತಕ್ಕ ಪ್ರತಿಮೆಯಾಗುವುದು ನಮ್ಮ ಬದುಕಿನ ವಿಪರ್ಯಾಸಗಳಲ್ಲೊಂದಲ್ಲವೇ?

5 comments:

 1. ಜೇಡ್ ಗೂಡಿಯ ವಿಚಾರ ವಿಸ್ತಾರವಾಗಿ ವಿವರಿಸಿದ್ದೀರಿ...ಅವಳ ಬಗ್ಗೆ ಮತ್ತಷ್ಟು ತಿಳಿದುಕೊಂಡಂತೆ ಆಯಿತು...

  ಧನ್ಯವಾದಗಳು..

  ReplyDelete
 2. big brother ಬಗೆಗಿನ ಬರಹ ಅಂದಾಗ ಅಮೆರಿಕಾದ ಬಗ್ಗೆ ಬರಹ ಅಂದ್ಕೊಂಡೆ.
  ಚೆನ್ನಾಗಿದೆ.

  ReplyDelete
 3. ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
  http://yuvakavi.ning.com/

  ReplyDelete
 4. ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
  http://yuvakavi.ning.com/

  ReplyDelete
 5. ರಿಯಾಲಿಟಿ ಶೋಗಳು ಅನಾಗರಿಕವಾಗಿ ನಡೆದುಕೊಳ್ಳುವದನ್ನು
  ಕಲಿಸುತ್ತವೆ ಹಾಗೂ ಉತ್ತೇಜಿಸುತ್ತವೆ. ಜೇಡ್ ಗುಡ್ಡಿ ಅನಾಗರಿಕ
  ವರ್ತನೆ ತೋರಿಸಿದರೂ ಸಹ ಕ್ಯಾನ್ಸರ್ ಆದ ಕಾರಣ ಹುತಾತ್ಮಳಾಗಿ ಬಿಟ್ಟಳು. ಬ್ರಿಟನ್ನಿನ ಹದಿವಯದ ಅನೇಕ ಹುಡುಗಿಯರು ಜೇಡ್ ಗುಡ್ಡಿಯ ರಿಯಾಲಿಟಿ ಶೋ ವರ್ತನೆಯನ್ನು ಅನುಕರಿಸಿದರೆ ಆಶ್ಚರ್ಯವಿಲ್ಲ.

  ReplyDelete