Monday, May 04, 2009

ಎಲ್ಲರ ಮನೆಯ ಉಪ್ಪಿನಕಾಯಿಗೂ ಒಂದೇ ರುಚಿ!

("ಕೆಂಡಸಂಪಿಗೆ"ಯಲ್ಲಿ ಪ್ರಕಟಿತ ಬರಹ)


ಇಲ್ಲಿ ಇಂಗ್ಲೆಂಡಿನಲ್ಲಿ ದಕ್ಷಿಣದಿಂದ ಉತ್ತರ ತುದಿಯವರೆಗೆ ಡ್ರೈವ್ ಮಾಡಿ ಯಾವುದೇ ಊರು ಹೊಕ್ಕರೂ ಮತ್ತೆ ಅದೇ ಊರಿಗೆ ಬಂದಿದ್ದೇವೆನ್ನುವ ಭಾವ ಬರುತ್ತದೆ. ಯಾವುದೇ ಓಣಿಗೆ ಹೋದರೂ ನಮ್ಮ ಓಣಿಗೇ ಬಂದಿದ್ದೇವೆಂದು ಅನಿಸುತ್ತದೆ. ಯಾವುದೇ ಊರಿನ ಯಾವುದೇ ಹೈಸ್ಟ್ರೀಟ್ (ಮಾರುಕಟ್ಟೆ ಇರುವ ಬೀದಿ) ಅಥವಾ ಶಾಪಿಂಗ್ ಮಾಲಿಗೆ ಹೋದರೂ ಅವೇ ಅಂಗಡಿಗಳು - ಮಾರ್ಕ್ ಆಂಡ್ ಸ್ಪೆನ್ಸರ್, ಅದೇ ಡೆಬನ್‍ಹ್ಯಾಮ್ಸ್, ಅದೇ ಪ್ರೈಮಾರ್ಕ್, ಅದೇ ಬೂಟ್ಸ್...ಅವೇ ರೆಸ್ಟೋರಂಟುಗಳು - ಮ್ಯಾಕ್‍ಡೊನಾಲ್ಡ್, ಕೆ‍ಎಫ್‍ಸಿ, ಪಿಜಾ ಎಕ್ಸ್ ಪ್ರೆಸ್... ಇವುಗಳ ನಡುವೆ ಜಗತ್ತಿನಲ್ಲಿರುವ ಎಲ್ಲವನ್ನೂ ಒಂದೇ ಕಡೆ ಮಾರಾಟ ಮಾಡುವ ಪಣ ತೊಟ್ಟಿರುವ ಟೆಸ್ಕೋ, ಸೇನ್ಸ್ ಬರಿ, ಆಸ್ಡಾ ಎನ್ನುವ ಬೃಹದಾಕಾರದ ಮೆಗಾಸ್ಟೋರ್‍ಗಳು.

ಊರು ಮಾರುಕಟ್ಟೆ ಸುತ್ತಿ ಯಾರದೇ ಮನೆಗೆ ಹೋದರೂ ಅಷ್ಟೇ, ನಮ್ಮದೇ ಮನೆಗೆ (ಒಂದೆರೆಡು ರೂಮು ಹೆಚ್ಚು ಕಡಿಮೆ ಇರಬಹುದು) ಬಂದಿದ್ದೇವೆಂದು ಅನಿಸುತ್ತದೆ. ಮನೆ ಅಲಂಕಾರವೂ ಅಷ್ಟೇ, ಹಾಕಿದ ಫೋಟೋ ಫ್ರೇಮ್ ಯಾವ ಅಂಗಡಿಗಳಲ್ಲಿ ಎಷ್ಟು ದುಡ್ಡಿಗೆ ಯಾವ ಸೇಲಿನಲ್ಲಿ ಕೊಂಡಿದ್ದು ಎನ್ನುವುದು ಕೂಡ ಗೊತ್ತಾಗಿ ಹೋಗುತ್ತದೆ. ಮಲಗಿರುವ ಬುದ್ಧ ನೆಕ್ಸ್ಟ್ ಶಾಪಿನದು, ಮಂದಸ್ಮಿತ ಬುದ್ಧ ಹೋಮ್‍ಬೇಸಿನಲ್ಲಿ ಕೊಂಡಿದ್ದು ಎನ್ನುವುದು ತಲೆಗೆ ಹೋಗುತ್ತದೆಯೇ ವಿನಃ ಅದು ಕಲಾಕೃತಿ ಎನ್ನುವುದು ಮರೆತೇ ಹೋಗುತ್ತದೆ. ಪಡಿಯಚ್ಚುಗಳಲ್ಲಿ ಮಾಡಿದ ಒಂದೇ ತರಹದ ಮೂರ್ತಿಗಳು, ಲಕ್ಷಗಟ್ಟಲೇ ಪ್ರಿಂಟ್ ಮಾಡಿದ ಪೇಂಟಿಂಗುಗಳು, ಮಷೀನಿನಲ್ಲಿ ಮಾಡಿದ ಲೋಹದ ಆರ್ಟಿಫ್ಯಾಕ್ಟುಗಳು - ಎಲ್ಲರ ಮನೆಗಳಲ್ಲಿ ಅದೇ ಜಾಗಗಳಲ್ಲಿ ನಳನಳಿಸುತ್ತಿರುತ್ತವೆ. ಆಯತಾಕಾರದ ಕನ್ನಡಿ ಬೆಂಕಿಕಾಯಿಸುವ ಅಗ್ಗಷ್ಟಿಕೆಯ ಮೇಲೇ ಇರಬೇಕು. ಟಿವಿ ಪಡಸಾಲೆಯ (ಇಲ್ಲಿ ಅದಕ್ಕೆ ಹಾಲ್‍ರೂಮ್ ಎನ್ನುವುದಿಲ್ಲ, ಲಾಂಜ್ ಎನ್ನುತ್ತಾರೆ!) ಮೂಲೆಯಲ್ಲಿಯೇ ಇರಬೇಕು. ಯಾರ ಮನೆಗೆ ಹೋದರೂ ಚಮಚ ಎಲ್ಲಿರುತ್ತದೆ, ಸಂಡಾಸು ಎಲ್ಲಿದೆ ಎನ್ನುವುದನ್ನು ಮೂರು ವರುಷದ ಮಗುವಿಗೂ ಹೇಳುವ ಜರೂರತ್ತಿಲ್ಲ, ಅಷ್ಟು ಸುಲಭ.

ಆಧುನಿಕತೆ ನಮ್ಮ ಮೌಢ್ಯಗಳನ್ನು ಕಡಿಮೆ ಮಾಡಿದ್ದು ನಿಜ, ಅದೇ ಕಾಲಕ್ಕೆ ಹಾನಿಕಾರಕವಲ್ಲದ ನಮ್ಮ ಆಚರಣೆಗಳನ್ನು ನಿಧಾನವಾಗಿ ಇಲ್ಲವಾಗಿಸುತ್ತ ಹೋಯಿತು. ಕೈಗಾರಿಕೀಕರಣ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಮತ್ತು ಕ್ವಾಲಿಟಿಯನ್ನು ಸಾವಿರಾರು ಪಾಲು ಹೆಚ್ಚಿಸಿದ್ದು ನಿಜ, ಅದೇ ಕಾಲಕ್ಕೆ ಆಯಾ ಹಳ್ಳಿ-ಊರು-ಪ್ರದೇಶಕ್ಕೆ ಇರುವ ವಿಶಿಷ್ಟ ವಸ್ತುಗಳನ್ನು ಕಿತ್ತುಕೊಳ್ಳುತ್ತ ಹೋಯಿತು. ಉದ್ಯಮೀಕರಣ ನಮ್ಮ ಬದುಕನ್ನು ಐಷಾರಾಮದಲ್ಲಿ ಇರುವಂತೆ ಮಾಡುತ್ತ ಸಾಗಿತು, ಅದೇ ಕಾಲಕ್ಕೆ ಮನೆ ಮನೆಗೂ ಬೇರೆ ರುಚಿಯಿರುವ ಊಟವನ್ನು ಕಿತ್ತುಕೊಳ್ಳುತ್ತ ಹೋಗಿತು. ಜಾಗತೀಕರಣ ನಮ್ಮ ದೃಷ್ಟಿಕೋನವನ್ನು ಹಿಗ್ಗಿಸಿದ್ದು ನಿಜ, ಅದೇ ಕಾಲಕ್ಕೆ ನಮಗೆ ನಮ್ಮದೆನ್ನುವುದೆಲ್ಲ ಪರಕೀಯ ಎನ್ನಿಸುವಂತೆ ಮಾಡುತ್ತ ಸಾಗಿತು.


ಇವತ್ತು ಮೈಸೂರು ಪ್ರಾಂತ್ಯದ ಯಾವುದಾದರೂ ಆಫೀಸಿನಲ್ಲಿ ಧೋತರ ಹಾಕಿಕೊಂಡು ಮೈಸೂರು ಪೇಟ ಹಾಕಿ ಕೆಲಸಕ್ಕೆ ಹೋಗುವುದು ಸಾಧ್ಯವೇ? ಇವತ್ತು ಸ್ಕಾಟ್‍ಲ್ಯಾಂಡಿನ ಯಾವುದಾದರೂ ಆಫೀಸಿನಲ್ಲಿ ಸ್ಕಾಟ್‍ಲ್ಯಾಂಡಿನ ಸ್ಕರ್ಟ್ ತರಹ ಲುಂಗಿಯನ್ನು ಸುತ್ತಿಕೊಂಡು ಕೆಲಸಕ್ಕೆ ಹೋಗುವುದು ಸಾಧ್ಯವೇ? ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಎಲ್ಲರೂ ಪ್ಯಾಂಟುಗಳನ್ನೇ ಹಾಕಿಕೊಂಡು ಕೆಲಸಕ್ಕೆ ಹೋಗುವ ಅಭ್ಯಾಸ ಒಂಚೂರೂ ಹಾನಿಕಾರಕವಲ್ಲದ ನಮ್ಮ ಉಡುಗೆಗಳನ್ನೇ ನಿರ್ನಾಮ ಮಾಡುತ್ತಿವೆ.

ಇವತ್ತು ಮನೆ ಮನೆಗಳಲ್ಲೂ ಬೆಳಗಿನ ತಿಂಡಿಯನ್ನು "ಕೆಲಾಗ್ಸ್ ನಿಂದಲೇ ತಿನ್ನಿ, ನಿಮ್ಮ ಬುದ್ಧಿ ಬೆಳಿಸಿಕೊಳ್ಳಿ" ಎನ್ನುವ ಜಾಹೀರಾತು ನೋಡಿ ನೋಡಿ ಮಕ್ಕಳಿಗೆ ಸೇರಿಯಲ್ಸ್ ಒಡುತ್ತೇವೆ, ಉತ್ತರ ಕರ್ನಾಟಕದ ಮನೆಮನೆಗಳಲ್ಲಿ ಮಾಡುತ್ತಿದ್ದ "ಅರಳ್ಹಿಟ್ಟು" (ಅದರ ರುಚಿ ಮತ್ತು ಟೆಕ್ಚರ್ ವೀಟಾಬಿಕ್ಸಿಗಿಂತ ಬೇರೆಯಾಗೇನೂ ಇಲ್ಲ) ಇವತ್ತು ಕಣ್ಮರೆಯಾಗುತ್ತಿದೆ. ಅವಲಕ್ಕಿ, ಉಪ್ಪಿಟ್ಟು, ದೋಸೆ, ಇಡ್ಲಿಯ ಜಾಗದಲ್ಲಿ ಬ್ರೆಡ್ಡು, ಸ್ಯಾಂಡ್ವಿಚ್ಚುಗಳು ಆಕ್ರಮಿಸುತ್ತಿವೆ, ನಮ್ಮ ಈ ತಿಂಡಿಗಳಿಂದ ಯಾವುದೇ ಹಾನಿ ಇಲ್ಲದಾಗಲೂ!

ಮನೆ ಮನೆಯಲ್ಲೂ ಉಪ್ಪಿನಕಾಯಿಯ ರುಚಿಯೇ ಬೇರೆ ಇರುತ್ತಿತ್ತು. ಬೇರೆ ಊರಿಗೆ ಹೋದರೆ ಅವರ ಮನೆಯ ಉಪ್ಪಿನಕಾಯಿ ತಂದು, ನಮ್ಮ ಮನೆಯ ಉಪ್ಪಿನಕಾಯಿ ಅವರಿಗೆ ಕೊಡುತ್ತಿದ್ದೆವು. ಮನೆ ಮನೆಯಲ್ಲೂ ಬೇರೆ ಬೇರೆ ರುಚಿಯ ಹಪ್ಪಳ, ಸಂಡಿಗೆ! ಈಗ ಎಲ್ಲರ ಮನೆಯಲ್ಲೂ ಪ್ರಿಯಾ ಉಪ್ಪಿನಕಾಯಿ, ಎಲ್ಲರ ಮನೆಯಲ್ಲೂ ಲಿಜ್ಜತ್ ಪಾಪಡ್. ನಮ್ಮ ನಾಲಗೆ ಬರಬರುತ್ತ ಚಪ್ಪಲಿ ತಳವಾಗುತ್ತಿದೆಯೇ?

ಇಲ್ಲಿನ ಅಂಗಡಿಗಳಲ್ಲಿ ಸಾಲು ಸಾಲು ತರಾವರಿ ಪತ್ರಿಕೆಗಳು, ದಿನನಿತ್ಯದ ಸಮಾಚಾರದಿಂದ ಹಿಡಿದು, ಮನೆಯ ಅಂದ-ಚಂದ, ಕ್ರೀಡೆಗಳು, ಗ್ಯಾಜೆಟ್ಟುಗಳಿಂದ ಸಾಗಿ, ಸೆಲಿಬ್ರಿಟಿ ಗಾಸಿಪ್ಪಿನವರೆಗೂ ನೂರಾರು ಪತ್ರಿಕೆಗಳು. ಆದರೆ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಮಾತ್ರ ಹೆಸರು ಮಾತ್ರ ಬೇರೆ ಇರುವ ಒಂದೇ ತರಹದ ಹುಡುಗಿಯರ ಚಿತ್ರಗಳು! ಎಲ್ಲ ಮಾಡೆಲ್ ಗಳ ನಿಲ್ಲುವ ಭಂಗಿಯಿಂದ ಹಿಡಿದು ಮುಗುಳ್ನಗುವ ರೀತಿಯವರೆಗೂ, ಮುಖದಿಂದ ಹಿಡಿದು ಅಂಗುಷ್ಟದವರೆಗೂ ಒಂದೇ ತರಹ!


ಕ್ಲೋನಿಂಗ್ ಬರೀ ವೈದ್ಯಕೀಯ ರಂಗದ ಪವಾಡವಲ್ಲ. ಎಲ್ಲ ಊರುಗಳ ಹೈಸ್ಟ್ರೀಟ್‍ಗಳೂ ಒಂದೇ ತರಹದ ಕ್ಲೌನ್‍ ಮಾರುಕಟ್ಟೆಗಳಾಗುತ್ತಿವೆ. ಜಾಗತೀಕರಣದ ಹೆಸರಿನಲ್ಲಿ ಎಲ್ಲ ಊರುಗಳಲ್ಲೂ ಸೂಪರ್ ಮಾಲ್‍ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು; ಆಧುನಿಕತೆಯ ಹೆಸರಿನಲ್ಲಿ ಎಲ್ಲ ಮನೆಯಲ್ಲೂ ಬ್ರೆಡ್ಡು, ಟಾಯ್ಲೆಟ್ ಪೇಪರುಗಳು; ಬಂಡವಾಳಶಾಹೀ ಹೆಸರಿನಲ್ಲಿ ಮಕ್ಕಳಿಗೆಲ್ಲ ಇಂಗ್ಲೀಷ್‍ನಲ್ಲಿ ಮಾತ್ರ ಬರೆಯಬೇಕು-ಮಾತಾಡಬೇಕು ಎನ್ನುವ ಪಿತೃಗಳು.

ನಮಗೆ ಗೊತ್ತಿಲ್ಲದಂತೆಯೇ ನಮ್ಮ ಆಚರಣೆಗಳಲ್ಲಿ, ನಮ್ಮ ಉಡುಗೆ-ತೊಡುಗೆಗಳಲ್ಲಿ, ನಮ್ಮ ಆಹಾರಗಳಲ್ಲಿ, ಮನೆಮನೆಗಳಲ್ಲಿ, ಭಾಷೆ-ಸಂಪರ್ಕಗಳಲ್ಲಿ, ಆಚಾರ-ವಿಚಾರಗಳಲ್ಲಿ, ದೇಹದ ಕಲ್ಪನೆಗಳಲ್ಲಿ, ಆಧುನಿಕತೆ-ಜಾಗತೀಕರಣ-ಪಾಶ್ಚಾತ್ಯೀಕರಣ-ಕ್ಯಾಪಿಟಲಿಸಂ-ವೈಜ್ಞಾನೀಕರಣದ ಹೆಸರಿನಲ್ಲಿ ಸರ್ವತೋಮುಖ ಕ್ಲೋನಿಂಗ್ ನಡೆಯುತ್ತಿದೆ, ಇದರಿಂದ ತಪ್ಪಿಸಿಕೊಳ್ಳುವ ಮಾರ್ಗವೇ ಇಲ್ಲವೇ?
 

 Dearest Keshav: I read you article and was very impressed by the matter you have eloborated.... life has become mechanical and sterotyped.....everybody wants to follow the mainstream and this is the ultimate result of that....Look forward to hear from you... Dr.Shailendra...

 ಏನು ಕುಲಕರ್ಣಿಯವರೆ, ಪಾಠಕ್ ಉಪ್ಪಿನಕಾಯಿ ಫೋಟೋ ಹಾಕಿ ಪ್ರಿಯಾ ಉಪ್ಪಿನಕಾಯಿ ಅ೦ತ ಬರೆದಿದೀರಲ್ರೀ? ಪಶ್ಚಿಮ ದೇಶಗಳಲ್ಲಿ, ಅದರಲ್ಲೂ ಲ೦ಡನ್ ನಲ್ಲಿ ಭಾರತೀಯ ಸ್ಟೋರ್ ಗಳಲ್ಲಿ ಎಷ್ಟೋ೦ದು ತರಹ ಉಪ್ಪಿನಕಾಯಿ ದೊರೆಯುತ್ತದೆ. ಪಾಠಕ್, ಪ್ರಿಯಾ, ದೀಪ್, ಸ್ವಾದ್, ವಿಮಲ್, ಜಿಟ್ಸ್, ಲಿಜ್ಜತ್, ಅಮ್ಮ, ಬೇಡೇಕರ್ಸ್... ಇನ್ನೂ ಎಷ್ಟು ಬೇಕು? ಇನ್ನು ಯಾವ ತರದ ಉಪ್ಪಿನಕಾಯಿಗಳು ಅ೦ತ ಬೇಕಾ? Mango Pickles pickles (Extra Hot), Mango and Lime Pickles, Mango and Chilly Pickles, Lime Pickles, Chilly Pickles, Vegtable Mixed Pickles, Green chilli pickles, Garlic Pickles, Ginger Pickles, Brinjal Pickles, Khaman Gunda Pickles, Stuffed Ghoongra Pickles, Gorkeri Pickles, Chhundo Sweet Lime Pickles, Sweet Mango Chutney. ನಾನ೦ತೂ ಹೆಚ್ಚು ಅರಿಯದವ. ಹುಡುಕಿದರೆ ನಿಮ್ಮ೦ಥಹ ಬುದ್ದಿವ೦ತರಿಗೆ ಇನ್ನೂ ಎಷ್ಟು ಸಿಗಬಹುದು?...

 ಅಜ್ಜಿ, ಅಮ್ಮ, ಹೆಂಡತಿ ಮುಂತಾದವರು ಉಪ್ಪಿನಕಾಯಿ ಹಾಕಿ ಕೊಡುತ್ತಿದ್ದಾಗ ಅದಕ್ಕೆ ಬೇರೆ ಬೇರೆಯದೇ ಆದ ರುಚಿ ಇರುತ್ತಿದ್ದುದು ಹೌದು. ಆದರೆ ಈ ಉಪ್ಪಿನಕಾಯಿ ಹಾಕುವ ಪ್ರಕ್ರಿಯೆಯಲ್ಲಿ ಹಾಕುವವರೇ ಉಪ್ಪಿನಕಾಯಿಯಾಗಿ ಶತಮಾನಗಳಿಂದ ಅಡುಗೆ ಮನೆಯಲ್ಲಿ ಉಳಿದರು. ರುಚಿ ರುಚಿಯ ಉಪ್ಪಿನಕಾಯಿಗೆ ಅವರು ತಮ್ಮ ಜೀವನದ ಸ್ವಾತಂತ್ರ್ಯವನ್ನೇ ಬಲಿ ಕೊಡಬೇಕಾಗಿ ಬಂದದ್ದೂ ಹೌದು. ಆದುನಿಕತೆ, ಜಾಗತೀಕರಣದಿಂದಾಗಿ ನಮ್ಮ ಸಂಸ್ಕೃತಿ ಹಾಳಾಗಿ ಹೋಯಿತು ಎಂದು ಹಲುಬುವವರ ಸಂಖ್ಯೆಗೆ ಈಗೇನೂ ಕಡಿಮೆ ಇಲ್ಲ. ದಲಿತರು ವಿದ್ಯಾಭ್ಯಾಸ ಪಡೆದುದರಿಂದಾಗಿ ಬೂತ ಕಟ್ಟಲು ಜನ ಸಿಗುವುದಿಲ್ಲ. ನಂಬಿಕೆ, ಸಂಸ್ಕೃತಿ ಎಲ್ಲ ಹಾಳಾಗಿ ಹೋದವು ಎಂದು ಭಾವಿಸಿದ ಜನರಿಗೆ ಕಡಿಮೆ ಇಲ್ಲ.ಒಂದು ವರ್ಗದ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಕ್ಕಿಂತ ರುಚಿ ರುಚಿಯ ರುಚಿಯ ಉಪ್ಪಿನಕಾಯಿ ಮುಖ್ಯ ಎಂದು ನನಗೆ ಅನಿಸುವುದಿಲ್ಲ. ರಶ್ಮಿ, ಬೆಂಗಳೂರು...
 Re:  ರಷ್ಮಿ, ನಿಮ್ಮ ಇಷ್ಟಾರ್ಥಗಳು ಇಲ್ಲಿ ಅಷ್ಟಾಗಿ ಲೆಕ್ಕಕ್ಕೆ ಬರುವುದಿಲ್ಲ. ಜೀವನದಲ್ಲಿ ಬರೀ ’ಸ್ವಾತ೦ತ್ರ’ ಅ೦ತ ಹೋರಾಡುವವರು ಕೊನೆಗೆ ಬಾ೦ಧವ್ಯ, ರುಚಿ, ಸ್ನೇಹ, ಸ೦ಸ್ಕೃತಿ ಇಲ್ಲದೆ ಬೇಸರದಿ೦ದ ಪರಿತಪಿಸುವುದು ಸಾಮಾನ್ಯ.

 Re:  ರಷ್ಮಿ, ನಿಮ್ಮ ಇಷ್ಟಾರ್ಥಗಳು ಇಲ್ಲಿ ಅಷ್ಟಾಗಿ ಲೆಕ್ಕಕ್ಕೆ ಬರುವುದಿಲ್ಲ. ಜೀವನದಲ್ಲಿ ಬರೀ ’ಸ್ವಾತ೦ತ್ರ’ ಅ೦ತ ಹೋರಾಡುವವರು ಕೊನೆಗೆ ಬಾ೦ಧವ್ಯ, ರುಚಿ, ಸ್ನೇಹ, ಸ೦ಸ್ಕೃತಿ ಇಲ್ಲದೆ ಬೇಸರದಿ೦ದ ಪರಿತಪಿಸುವುದು ಸಾಮಾನ್ಯ.


 ಹೌದಲ್ಲ! ಎನ್ನಿಸುವ ಬರಹ. ತುಂಬಾ ಚೆನ್ನಾಗಿದೆ....

 ಜಗತ್ತೆಲ್ಲಾ ಒಂದೇ ಕುಟುಂಬವಾಗುತ್ತಿದೆ : MacDonald ಕುಟುಂಬ. -ಸುನಾಥ...

 ನಾಗರೀಕರಣದ ಬೆಳಕಿನ ಕಿ೦ಡಿಯಾಗಿದೆ ಈ ಲೇಖನ. ವೈವಿಧ್ಯತೆಯಲ್ಲಿ ಏಕತೆ ಇದು ನಮ್ಮ ಸ೦ಸೃತಿ. ನಮ್ಮ ಭಾರತದಲ್ಲಿ ಮಹಾನಗರಗಳನ್ನು ಹೊರತು ಪಡಿಸಿ ಎಲ್ಲ ಊರುಗಳಲ್ಲಿ ಎಲ್ಲ ಉಪ್ಪಿನಕಾಯಿಯ ರುಚಿ ಬೇರೆ. ಮು೦ದೆ ಪಾಚ್ಯಾತ್ಯ ಸ೦ಸೃತಿಯ ಪ್ರಭಾವದಿ೦ದ ನಮ್ಮ ದೇಶದ ಎಲ್ಲ ಮನೆಯ ಉಪ್ಪಿನಕಾಯಿ ರುಚಿ ಒ೦ದೇ ಆಗದಿದ್ದರೆ ಸಾಕು. ವಾದಿರಾಜ, ಮೈಸೂರು....
 Re:  ಎಲ್ಲರ ಮನೆಯ ಅಡುಗೆಮನೆ, ಬಚ್ಚಲುಮನೆಗಳೂ ಒ೦ದೇರೀತಿಯವುಗಳಾಗುತ್ತಿವೆ.


 dear kehav, well written, it is very much true , and i always felt the same. krn...

 ಬಹಳ ಕಷ್ಟ ಕಣ್ರೀ ನಿಮ್ಮ ಲೈಫು ----...

 ಹೌದು ಈಗ ಎಲ್ಲರಮನೆಯ ಉಪ್ಪಿನ ಕಾಯಿಯೂ ಪ್ರಿಯಾನೇ... ನಿಮ್ಮ ಇನ್ನುಳಿದ ಅಂಶಗಳಿಗೆ ತಾಳೆಯಾಗದೆ ಇದೊಂದು ಮಾತಿನ ಬಗ್ಗೆಯೇ ಹೇಳುತ್ತೇನೆ ಕೇಳಿ.. ಯಾರಿಗೆ ಈಗಿನ ಕಾಲದಲ್ಲಿ ಅಡುಗೆ ಮಾಡಲು ಪುರುಸೊತ್ತಿದೆ?ಅಪ್ಪಿ ತಪ್ಪಿ ಮನೆವಾರ್ತೆಯನ್ನ್ನ ನೋಡಿಕೊಳ್ಳುತ್ತಾ ತರಹಾವರಿ ಅಡುಗೆ ಮಾಡುವವರಿಗೆ ನಾವು ಕೊಡುತ್ತಿರುವ ಮರ್ಯಾದೆ ಎಂಥದ್ದು? ಅಯ್ಯೋ ಮನೇಲೇ ಕೂತಿದೆ ಹಳೆಕಾಲದ ಅಜ್ಜಿ ತರ...ಅಂತ ಆಕೆಯ ಮಖಕ್ಕೇ ಹೊಡೆದ ಹಾಗೆ ಹೇಳಿಬಿಡುತ್ತೇವೆ ಈಗಿನ ಹುಡುಗಿಯರಿಗೆ ಹುಡುಗರಿಗೆ ಅಡುಗೆ ಕಲಿಯಲು ಯಾವ ಪ್ರೋತ್ಸಾಹವಿದೆ? ಓದಿ ಓದಿ ಹಣ ಗಳಿಸಬೇಕು ಅನ್ನುವುದೇ ಮಹಾಮಂತ್ರ! ನಮಗೇ ಅಮ್ಮ ಅಜ್ಜಿ ಮಾಡಿದ ಹಾಗೆ ಕೋಡುಬಳೆ ಚಕ್ಕಲಿ ಮಾಡಲು ಬರುವುದಿಲ್ಲ ನಮ್ಮ ಮಕ್ಕಳಿಗೆ ಬಹುಷ ಸಾರು ಉಪ್ಪಿಟ್ಟು ಸಹಾ ಮಾಡಲು ಬರುವುದಿಲ್ಲವೇನೋ......
 Re:  I very much agree with you!-D.M.Sagar

 

1 comment:

  1. ಸರ್,

    ಲೇಖನ ಓದುತ್ತಾ ಎಲ್ಲೋ ನಮ್ಮೆಲ್ಲಾ ವೈವಿಧ್ಯತೆಗಳನ್ನು ಹೀಗೆ ಕಳೆದುಕೊಳ್ಳುತ್ತಿದ್ದೇವಾ ಅನಿಸಿತು...ತುಂಬಾ ಅರ್ಥಗರ್ಭಿತವಾದ, ತೂಕವುಳ್ಳ ಲೇಖನ...ಧನ್ಯವಾದಗಳು.

    ReplyDelete