Sunday, June 07, 2009

ಡ್ಯಾನಿ ಬಾಯ್ಲ್ ನಂತರ ಈಗ ಸೂಸನ್ ಬಾಯ್ಲ್


(ಕೆಂಡಸಂಪಿಗೆಯಲ್ಲಿ ಪ್ರಕಟಿತ)

ಹತ್ತರಲ್ಲಿ ಒಬ್ಬ ಎನ್ನುವಂತೆ ಸಣ್ಣ ನಿರ್ದೇಶಕನಾಗಿದ್ದ ಡ್ಯಾನಿ ಬಾಯ್ಲ್ ‘ಸ್ಲಂ ಡಾಗ್’ನಿಂದಾಗಿ ಪ್ರಸಿದ್ಧನಾದ. ಅವನ ಹೆಸರು ಮರೆಯುತ್ತಿರುವಾಗಲೇ ಇನ್ನೊಂದು ‘ಬಾಯ್ಲ್’ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಅವಳೇ ‘ಸೂಸನ್ ಬಾಯ್ಲ್’. ‘ಬ್ರಿಟನ್ ಹ್ಯಾಸ್ ಗಾಟ್ ಅ ಟೆಲೆಂಟ್’ ಎನ್ನುವ ರಿಯಾಲಿಟಿ-ಪ್ರತಿಭೆಯ ಟಿವಿ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಪ್ರಸಿದ್ಧಳಾದವಳು ಇವಳು. ಸ್ಕಾಟ್ ಲ್ಯಾಂಡಿನ ಹಳ್ಳಿಯೊಂದರಿಂದ ಹಾಡಲು ಬಂದ ಈ ಮಧ್ಯವಯಸ್ಕ ಹೆಂಗಸು ಈ ಕಾರ್ಯಕ್ರಮದ ಅಂತಿಮ ಹಂತದವರಗೂ ಬಂದು ಸೋತಳು, ಆದರೆ ಗೆದ್ದವರಿಗಿಂತಲೂ ಹೆಚ್ಚು ಪ್ರಸಿದ್ಧಳಾದಳು. ದಿನ ನಿತ್ಯ ಕಂಪ್ಯೂಟರಿನ ಮುಂದೆ ಕುಳಿತವರು ಸೂಸನ್ ಬಾಯ್ಲಳ ಹಾಡಿನ ಯೂಟ್ಯೂಬಿನಿಂದ ತಪ್ಪಿಸಕೊಳ್ಳುವದು ಕಷ್ಟ. ಬಹುಷಃ ಯುಟ್ಯೂಬಿನಲ್ಲಿ ಅತ್ಯಂತ ಹೆಚ್ಚು ಕ್ಲಿಕ್ಕುಗಳನ್ನು ಗಿಟ್ಟಿಸಿದ ವೀಡಿಯೋಗಳಲ್ಲಿ ಸೂಸನ್ ಬಾಯ್ಲ್ ಕೂಡ ಸೇರುತ್ತಾಳೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಹುಟ್ಟುವಾಗಲೇ ಉಸಿರಾಟದ ತೊಂದರೆಯಿಂದಾಗಿ ಓದು ಬರಹ ಕಲಿಯಲು ಕಷ್ಟಪಟ್ಟ ಸೂಸನ್, ಐರಿಷ್ ಮೂಲದ ಹುಡುಗಿ. ಏಳು ಜನ ಅಣ್ಣ ಅಕ್ಕಂದಿರ ತುಂಬು ಕುಟುಂಬದಲ್ಲಿ ಕೆಳಮಧ್ಯಮ ವರ್ಗದಲ್ಲಿ ಬೆಳೆದವಳು. ಓದು ತಲೆ ಹತ್ತದೇ ಹೊರಬಿದ್ದ ಸೂಸನ್ ತನ್ನ ಜೀವಮಾನದಲ್ಲಿ ಕೆಲಸ ಮಾಡಿದ್ದು ಕೇವಲ ಆರು ತಿಂಗಳು ಮಾತ್ರ. ತಂದೆ ಹಾಡುಗಾರ, ಬಹುಷಃ ಅವನಿಂದ ಸಂಗೀತದ ರುಚಿ ಅಂಟಿಸಿಕೊಂಡ ಸೂಸನ್ ಹಾಡು ಕಲಿಯುತ್ತಾ, ಅಲ್ಲಲ್ಲಿ ಹಾಡುತ್ತ ತಾಯಿಯನ್ನು ನೋಡಿಕೊಂಡು ಇದ್ದಳು. ಕೆಲಸವಿಲ್ಲದ್ದರಿಂದ ಸರಕಾರ (ಕೌನ್ಸಿಲ್) ಕೊಡುವ ವಾರದ ಭತ್ಯೆಯ ಮೇಲೆ ಜೀವನ ಸಾಗಿಸುತ್ತ ಬೆಕ್ಕನ್ನು ಸಾಕಿಕೊಂಡು ತಾಯಿಯ ಶುಶ್ರೂಷೆ ಮಾಡಿಕೊಂಡಿದ್ದಳು. ಅವಳ ಸಂಗೀತ ಗುರು ಅವಳನ್ನು ಹುರಿದುಂಬಿಸಿ ‘ಬ್ರಿಟನ್ ಹ್ಯಾಸ್ ಗಾಟ್ ಅ ಟೆಲೆಂಟ್’ ಟಿವ್ ಕಾರ್ಯಕ್ರಮಕ್ಕೆ ಕಳಿಸಿದ್ದೇ ಕೇವಲ ಆರೆಂಟು ವಾರಗಳಲ್ಲಿ ಅವಳ ಬದುಕು ಈ ತರಹ ಬದಲಾಗುತ್ತದೆಂದು ಯಾರೂ ಊಹಿಸಿರಲಾರರು.

ಮೊದಲ ಸುತ್ತಿನಲ್ಲಿ ಮೇಕಪ್ ಇಲ್ಲದೇ ಹಾಡಲು ನಿಂತ ೪೮ ವರುಷದ ಹಳ್ಳಿ ಹೆಂಗಸನ್ನು ನೋಡಿ ಜಡ್ಜುಗಳು ವೀಕ್ಷಕರು ನಕ್ಕರು. ‘ಐ ಡ್ರೀಮ್ಡ್ ಎ ಡ್ರೀಮ್’ ಎನ್ನುವ ಪ್ರಸಿದ್ಧ ಹಾಡು ಅವಳು ಹಾಡಲು ಆರಂಭಿಸಿದ್ದೇ ಸಭಾಂಗಣದ ತುಂಬೆಲ್ಲ ಆಶ್ಚರ್ಯ ತುಂಬಿದ ಮೌನ, ಜಡ್ಜುಗಳ ಮುಖದಲ್ಲಿ ಬದಲಾವಣೆ. ಅವಳ ಹಾಡು ಯುಟ್ಯೂಬಿನಲ್ಲಿ ಲಕ್ಷಾಂತರ ಜನ ನೋಡಿ ಖುಷಿಪಟ್ಟರು, ಅತ್ತರು. ಅವಳ ಗೆಲುವು ನಿಶ್ಚಿತವೆಂದು ಕೊಂಡಿದ್ದರು, ಸೂಸನ್ ಸೇರಿ. ಆದರೆ ಸೋತಳು, ಸೋತು ಗೆದ್ದಳೇ? ಕಾಲವೇ ಹೇಳಬೇಕು.

ಇಂಗ್ಲೆಂಡಿನಲ್ಲಿ ಇದು ಹೊಸತೇನಲ್ಲ. ಇತ್ತೀಚೆಗೆ ಸತ್ತ ಜೇಡ್ ಗುಡಿ ‘ಬಿಗ್ ಬ್ರದರ್’‍ನಲ್ಲಿ ಬೆತ್ತಲೆ ಕುಣಿದು ಇದ್ದಕ್ಕಿದ್ದಂತೆ ಪ್ರಸಿದ್ಧಳಾದಳು; ತನ್ನ ಪ್ರಸಿದ್ಧಿಯನ್ನು ಲಕ್ಷಾಂತರ ಪೌಂಡುಗಳನ್ನಾಗಿ ಮಾಡಿಕೊಂಡಳು - ಟಿವಿಗಳಿಗೆ ಸಂದರ್ಶನ ಕೊಟ್ಟು, ಪತ್ರಿಕೆಗಳಿಗೆ ಫೋಟೋ ಕೊಟ್ಟು, ಆತ್ಮಕತೆ ಬರೆದು (ಒಂದಲ್ಲ ಎರಡೆರಡು), ತನ್ನ ಹೆಸರಿನ ಸುಗಂಧ ದ್ರವ್ಯ ತಂದು.

ಈಗ ಜೇಡ್ ಗುಡಿಯ ತರಹದ ಪ್ರಚಾರ ಪ್ರಸಿದ್ಧಿ ಸೂಸನ್‍ಗೆ ಸಿಗುತ್ತಿದೆ. ಯಾವ ಪತ್ರಿಕೆ ತೆರೆದರೂ, ಯಾವ ಟಿವಿ ಚನಲ್ ಹಾಕಿದರೂ ಅವಳದೇ ಮಾತು. ಅವಳು ವರ್ಜಿನ್ ಅಂತೆ, ಅವಳು ಇದುವರೆಗೂ ಯಾರಿಗೂ ಮುತ್ತು ಕೂಡ ಕೊಟ್ಟಿಲ್ಲವಂತೆ, ಈ ವಯಸ್ಸಿನಲ್ಲಿ ಅವಳಿಗೆ ತನಗಿಂತ ೧೫ ವರ್ಷ ದೊಡ್ಡವನ ಮೇಲೆ ಕ್ರಷ್ ಅಂತೆ, ಆತ ಒಪ್ಪಲಿಲ್ಲವಂತೆ, ಅವಳ ತಲೆ ಸರಿಯಿಲ್ಲವಂತೆ, ಫೈನಲ್ಲಿಗೆ ಮುಂಚೆ ಅವಳಿಗೆ ಹುಚ್ಚು ಹಿಡಿಯುವುದೊಂದೇ ಬಾಕಿ ಇತ್ತಂತೆ, ಫೈನಲ್ಲಿನಲ್ಲಿ ಸೋತ ಮೇಲಿ ಕ್ಲಿನ್ನಿಕ್ಕಿಗೆ ಹೋಗಿದ್ದಳಂತೆ.

ಇನ್ನೊಂದು ಕಡೆ ಈ ಕಾರ್ಯಕ್ರಮದ ಸೂತ್ರಧಾರ ಸೈಮನ್ ಕೊವೆಲ್ ಅವಳಿಂದ ಇನ್ನೂ ಹೆಚ್ಚು ಹಣ ಗಳಿಸುವ ಲೆಕ್ಕಾಚಾರದಲ್ಲಿದಾನೆ, ಅವಳನ್ನು ಮಿಲಿಯನೇರ್ ಮಾಡುವ ನಕ್ಷೆ ತಯಾರಿಸಿದ್ದಾನೆ. ಅವಳ ಆತ್ಮಕತೆ ಬರೆಸಲಾಗುತ್ತದೆ. ಅವಳನ್ನು ಕರೆದುಕೊಂಡು ಅಮೆರಿಕದಲ್ಲಿ ಹಾಡಿಸಲಾಗುತ್ತದೆ. ಒಂದೆರೆಡು ವರ್ಷದಲ್ಲಿ ಅವಳ ಬಳಿ ದುಡ್ಡಿನ ಮಳೆಯೇ ಸುರಿಯಲಿದೆ ಎಂದೆಲ್ಲ ಬರೆಯಲಾಗುತ್ತಿದೆ.

ಹೆಮ್ಮೆಯೇ. ಈ ಟಿವಿ-ಇಂಟರ್‍ನೆಟ್ ಬರುವ ಮೊದಲು ಹಳ್ಳಿಯೊಂದರಲ್ಲಿ ಬೆಳೆದು, ನೋಡಲು ಸುಂದರವಾಗಿಲ್ಲದ, ಯಾವ ಗಾಡ್‍ಫಾದರ್‍ಗಳಿಲ್ಲದ, ಮಧ್ಯ ವಯಸ್ಸಿನ ಹೆಂಗಸು ಇಷ್ಟೊಂದೆಲ್ಲವನ್ನು ಕೇವಲ ಆರೆಂಟು ವಾರದಲ್ಲಿ ಸಾಧಿಸಲಾಗುತ್ತಿತ್ತೇ? ಆದರೆ ಈ ಹಟಾತ್ ಪ್ರಚಾರದಿಂದಾಗಿ, ಪ್ರಸಿದ್ಧಿಯಿಂದಾಗಿ ಅವಳ ಬಾಳು ಹಾಳಾಗದಿರಲಿ, ಅವಳ ಬದುಕು ಹಸನಾಗಲಿ ಎನ್ನುವುದೊಂದೇ ನಮ್ಮೆಲ್ಲರ ಆಶಯ, ಅಲ್ಲವೇ?


adbhuta lekhana,atyadbhuta sadhane...

 ಓಳ್ಳೆಯ ಲೇಖನ ಕೇಶವ್. ರಿಯಾಲಿಟಿ ಷೋಗಳಿಂದ ಅಪರೂಪಕ್ಕೆಂಬಂತೆ ಇಂತಹ ಪ್ರತಿಭೆಗಳು ಹೊರಬರುತ್ತವೆ. ಜೇಡ್ ಗೂಡಿ ಕೆಟ್ಟ ಕಾರಣಗಳಿಗಾಗಿ ಹೆಸರು,ದುಡ್ಡು ಮಾಡಿದಳು. ಸೂಸನ್ ಗೆ ಅಂತಹ ಗಿಮಿಕ್ ಗಳ ಅಗತ್ಯವಿಲ್ಲ. ಆವಳ ಪ್ರತಿಭೆ ಅವಳನ್ನು ಮೇಲಕ್ಕೇರಿಸಲಿದೆ. ಆದರೆ ಇವರುಗಳಿಂದ ಹಣ ಮಾಡುವ ಮಾಫಿಯಾ ಇದೆಯಲ್ಲ ಇವುಗಳು ಮಾತ್ರ ನೈತಿಕತೆ ಕಳೆದುಕೊಂಡ ಅಮಾನವೀಯ ಜೀವಿಗಳು - ಚಿನ್ಮಯ....

 eeke hadida hadu tumba chennagide oduvaga olleya padya , keluvaga olleya hadu --lalitha siddabasavaiah...
 Re:  It was really true fact , Well written, Our wish for her too as I liked her voice .(Vidhi lille)
 

3 comments:

 1. ಕೇಶವ,
  ನೀವು ಇಲ್ಲಿ ಕೊಟ್ಟ ಲಿಂಕ್ ತೆರೆಯಲಿಲ್ಲ. ಬಳಿಕ ಕೆಂಡಸಂಪಿಗೆಗೆ ಹೋಗಿ ನಿಮ್ಮ ಲೇಖನ ಓದಿದೆ. ಸೂಸಾನ್ ಚರಿತ್ರೆ ವಿಸ್ಮಯಕರವಾಗಿದೆ. ಅವಳಿಗೆ ಶುಭ ಹಾರೈಸುವದಷ್ಟೇ ನಮ್ಮ ಕೆಲಸ!

  ReplyDelete
 2. ಸುನಾಥ,
  ಥ್ಯಾಂಕ್ಸ್. ಈಗ ಕೊಂಡಿಯನ್ನು ಸರಿಪಡಿಸಿದ್ದೇನೆ.

  ReplyDelete
 3. ಸರ್,

  ಸುಸಾನ್ ಬಾಯ್ಲ್ ಕತೆ ತುಂಬಾ ಆಸಕ್ತಿಕರವಾಗಿದೆ...

  ReplyDelete