Monday, June 08, 2009

ಜಗಜೀತ್ ಸಿಂಗ್, ರಾಜಕುಮಾರ ಮತ್ತು ರಾಗ್ ಲಲಿತ್

ಮನೆಯಲ್ಲಿ ಮನೆಯೊಡತಿ ಇಲ್ಲದ ಹೊತ್ತು, ಮಾಡಲು ಕೆಲಸವಿಲ್ಲ. ರಾಜಕುಮಾರನ "ಕಣ್ಣೀರಧಾರೆ ಇದೇಕೇ" ಎಂದು ನನ್ನ ಕೆಟ್ಟ ಧ್ವನಿಯಲ್ಲಿ ಹಾಡುತ್ತ ಕೂತಿದ್ದೆ. ಅದು ರಾಗ್ ಲಲಿತ್ ಅಂತ ಯಾರೋ (ಹಂಸಾನಂದಿ ಇರಬಹುದೇ?) ಹೇಳಿದ್ದು ನೆನಪಾಯಿತು. ಆಯಿತು, ಜಾಲ ಜಾಲಾಡಲು ಶುರುಮಾಡಿದೆ. ನಾನಂತೂ ಗಾರ್ದಭಗಾನಾಸುರ, ನನ್ನ ಸಂಗೀತ ಜ್ಙಾನಯೂ ಅದಕ್ಕಿಂತ ಮುಂದೆ ಇಲ್ಲ. ಹಿಂದುಸ್ತಾನೀ ಸಂಗೀತ ನನಗೆ ತುಂಬ ಇಷ್ಟ, ಆದರೆ ಅದರೆ ಅಕ್ಷರಗಳು ಗೊತ್ತಾಗುವ ಮೊದಲೇ ದೇಶಬಿಟ್ಟು ಇಲ್ಲಿ ಬಂದು ಕೂತದ್ದಾಗಿದೆ. ಸಂಸಾರಸಾಗರದಲ್ಲಿ ಮುಳುಗಿ, ಸಂಗೀತ-ಸಾಹಿತ್ಯ ಎರಡಕ್ಕೂ ಎಣ್ಣೆ-ಸೀಗೆಕಾಯಿ ಮಾಡಿ ಕೂತದ್ದಾಗಿದೆ. ಆದರೂ ಆಗಾಗ ಇಂಥಾ ತೆವಲುಗಳು ಶುರುವಾಗುತ್ತವೆ. ಈಗ ಎರಡು ದಿನದಿಂದ ಬರೀ ಒಂದೇ ತಾನ "ನಿ ರೆ ಮ ಮ ಮ ಮ, ನಿ ರೆ ಮ ಮ ಮ ಮ" (bold ಅಲ್ಲಿರೋದು ಶುದ್ಧ ನಿ, ಮತ್ತು ತೀವ್ರ ಮ).

ರಾಗ್ ಲಲಿತ್ ಕೇಳಲು ತುಂಬ ಚಂದ, ಯಾಕೆ ಅಂತ ಗೊತ್ತಿರಲಿಲ್ಲ. ಅಲ್ಲಲ್ಲಿ ಜಾಲಾಡಿಸಿ ಕೀಬೋರ್ಡಿನಲ್ಲಿ ಅಲ್ಲಲ್ಲಿ ಕುಟ್ಟಿದ ಮೇಲೆ ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ, ತಿಳಿದವರು ಮನ್ನಿಸಬೇಕು, ತಿದ್ದಬೇಕು. ಈ ರಾಗದಲ್ಲಿ ಎರಡು "ಮ"ಗಳು ಆರೋಹ ಅವರೋಹ ಎರಡರಲ್ಲೂ ಬರುತ್ತವೆ, ಮತ್ತು ಶುದ್ಧ "ಗ"ದಿಂದ ಕೋಮಲ "ರೆ"ಗೆ ಇಳಿಯುವ ರೀತಿಯಲ್ಲೇ ಈ ರಾಗದ ಮೋಡಿಯಿದೆ ಅನ್ನಿಸುತ್ತೆ.ನಾನು ಚಿಕ್ಕವನಾಗಿದ್ದಾಗ, ನಮ್ಮ ಮನೆಗೆ ಅದೇ ತಾನೆ ಮನೆಗೆ ಹೊಸದಾಗಿ ಬಂದ ಕ್ಯಾಸೆಟ್ ಪ್ಲೇಯರ್ (ನಾವದಕ್ಕೆ ಟೂ-ಇನ್-ಒನ್)ನಲ್ಲಿ ರಾಜಕುಮಾರನ ಈ ಹಾಡು ಕೇಳಿದ್ದೂ ಕೇಳಿದ್ದೇ, ನನ್ನ ಕೆಟ್ಟ ಕಂಠದಲ್ಲಿ ಹಾಡಿದ್ದೂ ಹಾಡಿದ್ದೇ. ಆಗ ನಮ್ಮ ಪಕ್ಕದ ಮೆನೆ ರಸೀದ ಈ ಹಾಡು ಕೇಳುತ್ತಲೇ ಇದು ಹಿಂದಿಯಲ್ಲಿದೆ ಎಂದುಬಿಟ್ಟ. ನನಗಾಗ ಕೆಂಡಾಮಂಡಲು ಸಿಟ್ಟು ಬಂತು. ಎಂ.ರಂಗರಾವ್ ಆ ತರಹ ಟ್ಯೂನ್ ಕದಿಯುವುದಿಲ್ಲ, ರಾಜಕುಮಾರ್ ಅಂಥ ಕದ್ದ ಟ್ಯೂನ್ ಹಾಡುವುದಿಲ್ಲ ಎಂದು ವಾದ ಮಾಡಿದ್ದೆ. ಅದಾದ ಸ್ವಲ್ಪ ದಿನಗಳ ಮೇಲೆ ಅವನೇ ಎಲ್ಲಿಂದಲೋ ಜಗಜೀತನ ಈ ಹಾಡನ್ನು ನಮ್ಮ ಟೂ-ಇನ್-ಒನ್ನಲ್ಲೇ ಕೇಳಿಸಿ ದಂಗುಬಡಿಸಿಬಿಟ್ಟ. ಒಂದು, ನನ್ನ ವಾದಕ್ಕೆ ಸೋಲಾಗಿತ್ತು. ಎರಡು, ಅದುವರೆಗೂ ಎಂದೂ ಕೇಳದ ಅದ್ಭುತ ಧ್ವನಿ ಕಿವಿಯ ಮೇಲೆ ಬಿತ್ತು. ಅವತ್ತೇ ನಾನು ಜಗಜೀತನ ದೊಡ್ಡ ಫ್ಯಾನ್ ಆಗಿಬಿಟ್ಟೆ. ಆಗ ಶುರುವಾದ ನನ್ನ ಜಗಜೀತನ ಸಹವಾಸ ಇನ್ನೂ ಬಿಟ್ಟಿಲ್ಲ.
ಇಲ್ಲಿದೆ ಆ ಹಾಡಿನ ನನ್ನ ಕನ್ನಡೀಕರಣ:

ಯಾರೋ ಬಳಿ ಬಂದರು ನಸುಕು ನಸುಕು
ನನ್ನ ಕೆಣಕ ಬಂದರು ನಸುಕು ನಸುಕು

ನನ್ನ ಕತೆಯ ಅಲ್ಲಲ್ಲಿ ಬದಲಿಸಿ
ನನಗೇ ಹೇಳಿದರು ನಸುಕು ನಸುಕು

ಸಾವರಿಸು ಅಂತ ಹೇಳುವವರೇ
ತಡವರಿಸುತಿಹರು ನಸುಕು ನಸುಕು

ರಾತ್ರಿ ಪೂರ್ತಿ ಹೆಂಡದ ಮನೆಯಲ್ಲಿ
ದೇವರ ನೆನಪಾಯಿತು ನಸುಕು ನಸುಕು

13 comments:

 1. ಕುಲಕರ್ಣಿ ಸರ್,

  ನೀವು ಬರೆದಿದ್ದನ್ನು ಓದಿ ನಂತರ ರಾಜ್ ಹಾಡಿದ ಕನ್ನಡ ಹಾಡು ಕೇಳಿದೆ. ನಂತರ ಹಿಂದಿಯಲ್ಲಿ ಜಗಜಿತ್ ಸಿಂಗ್ ಹಾಡಿದ್ದು ಕೇಳಿದೆ. ಎರಡು ಸೂಪರ್ ಅನ್ನಿಸಿತು. ಅದು ಕದ್ದಿದ್ದೋ ಮತ್ತೊಂದು ಆಗಿದ್ದೊ ಏನಾದರಾಗಲಿ ಒಟ್ಟಾರೆ ಎರಡು ಭಾಷೆಯಲ್ಲೂ ಅದ್ಭುತವಾದ ಹಾಡುಗಳು ಅದ್ಭುತವಾದ ಗಾಯಕರಿಂದ ಹಾಡಿಸಲ್ಪಟ್ಟು ನನಗಂತೂ ಇಂದು ಬೆಳಿಗ್ಗೆ ಎರಡು ಹಾಡುಗಳನ್ನು ಕೇಳಿ ಮನಸ್ಸಿಗೆ ಉಲ್ಲಾಸ ಉಂಟಾಯಿತು...

  ಧನ್ಯವಾದಗಳು.

  ReplyDelete
 2. ನಿಮ್ಮ ಹಾಗೆ ನನಗು ಆಕಸ್ಮಿಕವಾಗಿ ಪರಿಚಿತರಾದವರು ಜಗಜಿತ್ ಸಿಂಗರು... "ಮಾ" ಭಜನ್ ನಿಂದ ಮೊದಲುಗೊಂಡು........ ಸದ್ಯ ಅವರ ಎಲ್ಲ ಹಾಡುಗಳನ್ನ ಸಂಗ್ರಹಿಸಿದ್ದೀನಿ .... ಒಂದೊಂದು ಹಾಡನ್ನು ಕೇಳಿದಾಗಲು ಹೊಸ ಹೊಸ ಅನುಭವ.
  -ಅಮರ

  ReplyDelete
 3. ಕೇಶವ,
  ಅದ್ಭುತವಾದ ಗಾಯನ ಕೇಳಿಸಿದಿರಿ. ಧನ್ಯವಾದಗಳು.

  ReplyDelete
 4. Keshav, thank you for the wonderful comment on my blog! Glad to see a couple with similar lingual dynamics. Cheers!

  ReplyDelete
 5. ಸರಿತ ನೋಡಿ ಎಷ್ಟು ದಿನ ಆಗಿತ್ತು, ಅವರೆಲ್ಲರ ನೆನಪು ಮಾಡಿಸಿದ್ದಕ್ಕೆ ಧನ್ಯವಾದಗಳು.

  ReplyDelete
 6. ಸರ್,
  ನನಗೆ ಸಂಗೀತದ ಗಂಧವಿಲ್ಲ. ಆದರೂ ಅದ್ಭುತವಾದ ಹಾಡುಗಳು. ಎಷ್ಟು ಬಾರಿ ಕೇಳಿದರೂ ಬೇಸರವಾಗದು. ಲಲಿತದ ಲಾಲಿತ್ಯವೇ ಅಂತಹುದೇನೋ.

  ReplyDelete
 7. ಕೇಶವ್,

  ಬೆಳಗಿನ ರಾಗಗಳೇ ಹಾಗೆ. ನಿಶ್ಯಬ್ಧದ ಮುಂಜಾವಿನಲ್ಲಿ ಮೈ ಮನವೆಲ್ಲಾ ಆವರಿಸಿಕೊಂಡು ದಿನವಿಡಿ ಕಿವಿಯಲ್ಲಿ ರಿಂಗುಣಿಸುತ್ತಲೇ ಇರುತ್ತವೆ. ಭೀಮಸೇನರ ಲಲಿತ್ -ಭಟಿಯಾರ್ ನ ‘ಓ ಕರತಾರ್’ ಇವತ್ತಿಗೂ ಸರ್ವಕಾಲಿಕ ಶ್ರೇಷ್ಠ ಸೃಷ್ಟಿಗಳಲ್ಲೊಂದು. ಲಲಿತ್ ನ ಮಾಧುರ್ಯವನ್ನು ಸಿನಿಮಾ, ಗಜಲ್ ಗಳಿಗೆ ತುಂಬ ಬಳಸಿಕೊಂಡಿದ್ದಾರೆ. ಗಜಲ್ ಗಳನ್ನು ನಕಲು ಮಾಡುವುದು ನಮ್ಮ ಸಿನಿಮಾ ಸಂಗೀತ ಸಂಯೋಜಕರ ಹಳೇ ಚಾಳಿ.
  ನಮ್ಮ ರಾಜನ್ - ನಾಗೇಂದ್ರ ಸಂಯೋಜಿಸಿ, ರಾಜ್ ಕುಮಾರ್ ಹಾಡಿದ ‘ಗೆಳತಿ ಬಾರದು ಇಂಥಾ ಸಮಯ’ ನೀವು ಕೇಳಿರಬಹುದು. ಹಾಗಿದ್ದರೆ ಗುಲಾಮ್ ಅಲಿಯ ಈ ಲಿಂಕ್ ಕೇಳಿ ನೋಡಿ. ಭಟ್ಟಿ ಇಳಿಸುವಿಕೆ ಎಂದರೆ ಇದೇ ಇರಬಹುದೇ?
  http://www.youtube.com/watch?v=Yw318T3YPic

  -ಚಿನ್ಮಯ

  ReplyDelete
 8. ಶಿವು,
  ಥ್ಯಾಂಕ್ಸ್.

  ಅಮರ,
  ಜಗಜೀತ್ ಜಗಜೀತನೇ. ಎರಡು ಮಾತಿಲ್ಲ.

  ಸುನಾಥ,
  ಧನ್ಯವಾದಗಳು.

  ಮಲ್ಲಿಕಾರ್ಜುನ,
  ತಮಗೂ ಧನ್ಯವಾದಗಳು.

  ಚಿನ್ಮಯ,
  "ಗೆಳತಿ ಬಾರದು" ಹಾಡಿನ ಮೂಲ ಹಾಡಿನ ಲಿಂಕ್ ಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು. ಗುಲಾಂ ಅವರ ಹಾಡಿನಲ್ಲಿ ನಮ್ಮನ್ನು ಅವರ ಗುಲಾಮರನ್ನಾಗಿ ಮಾಡಿಬಿಡುತ್ತಾರೆ. ಆಂದ ಹಾಗೆ "ಗೆಳತಿ ಬಾರದು" ಹಾಡಿನ ಸಂಗೀತಗಾರ ರಾಜನ್-ನಾಗೇಂದ್ರ ಅಲ್ಲ, ಉಪೇಂದ್ರಕುಮಾರ್.

  - ಕೇಶವ

  ReplyDelete
 9. ಸರ್....

  ನಾನು ಅವಧಿಯಿಂದ ಇಲ್ಲಿಗೆ ಬಂದೆ....

  ಜಗಜಿತ್ ಸಿಂಗ್ ಮತ್ತು ರಾಜಕುಮಾರ್ ಇಬ್ಬರೂ ಗ್ರೇಟ್...

  ಬಹುಷಃ ಭಾಷೆಯ ಆತ್ಮೀಯತೆಯಿಂದ ಇರಬಹುದೇನೋ...
  ರಾಜಕುಮಾರ್ ಹಾಡು ಜಾಸ್ತಿ ಇಷ್ಟವಾಗುತ್ತಿದೆ...

  ಒಂದು ಸುಂದರ ಹಾಡಿನ ಬಗೆಗೆ ತಿಳೀಸಿದ ನಿಮಗೆ ಅಭಿನಂದನೆಗಳು...

  ReplyDelete
 10. ಜಗಜೀತ್ ಸಿಂಗ್ ಹಾಡಿದ್ದೇ ಮೊದಲು ಅನ್ನೋದು ಖಾತ್ರಿಯಾಗಿ ಗೊತ್ತೇನ್ರೀ? :)

  ReplyDelete
 11. Sir, could you please post all the amazing videos in keshyoutubes.blogspot.com ? We can have everything at one place to listen. Thanks in advance. :)

  ReplyDelete
 12. ಹೌದು ಹಂಸಾನಂದಿ, ಜಗಜೀತ ಹಾಡಿದ್ದು ಮೊದಲು.
  ಪ್ರವೀಣ, ನನ್ನ ಇಷ್ಟದ ಎಲ್ಲ ಹಾಡುಗಳನ್ನು ನನ್ನ ವೀಡಿಯೋ ಬ್ಲಾಗಿನಲ್ಲಿ ಹಾಕುವ ಸಲುವಾಗೇ ಆ ಬ್ಲಾಗನ್ನು ಶುರು ಮಾಡಿದ್ದು. ಕಾಲ ಯಾವಾಗ ಕೂಡಿ ಬರುತ್ತೋ ಗೊತ್ತಿಲ್ಲ. ಮತ್ತು ರಾಗದ ವಿಚಾರದಲ್ಲಿ ನನಗೆ ಹಂಸಾನಂದಿಯವರು ಸಹಾಯ ಮಾಡಬೇಕು.
  - ಕೇಶವ

  ReplyDelete
 13. My brother Madhav's translation is here.

  ಯಾರೋ ಬಂದರು ಸನಿಹ
  ಈ ಮುಂಜಾನೆ
  ಆವರಿಸಿಬಿಟ್ಟರು ನನ್ನ
  ಹೀಗೆ ಸುಮ್ಮನೆ

  ನನ್ನ ತುಮಲಗಳ
  ಬೇರೊಂದು ಭಾಶೆಯಲಿ
  ನನಗೇ ತಿಳಿಹೇಳಿದರು
  ಈ ಮುಂಜಾನೆ

  ಸಂತೈಸಿತ್ತು ನಸುಕು
  ಸಂಭಾಳಿಸೆಂದು
  ಆ ನಸುಕೇ ನಡುಗಿತೇ
  ಈ ಮುಂಜಾನೆ

  ಕಳೆದಿತ್ತು ನನ್ನ ರಾತ್ರಿ
  ಪೂರ್ತಿ ನಶೆಯಲಿ
  ಚಿತ್ತವೇಕೆ ಹೋಯಿತು ದೇವರೆಡೆಗೆ
  ಈ ಮುಂಜಾನೆ

  This is better translation than mine.

  ReplyDelete