Monday, October 05, 2009

ಕೆಂಡಸಂಪಿಗೆಯ ಸಾವನ್ನು ನೆನೆಯುತ್ತ...

ನಾನೂ ಕೆಂಡಸಂಪಿಗೆಗೆ ಅತ್ಯಂತ ಅನಿಯಮಿತವಾಗಿ ಬರೆಯುತ್ತಿದ್ದೆ, ಆದರೆ ದಿನವೂ ತಪ್ಪದೇ ಓದುತ್ತಿದ್ದೆ. ಕೆಂಡಸಂಪಿಗೆ ನಿಂತಿದೆ, ಒಂದು ಕಡೆ ಕನ್ನಡ ದಿನ ಪತ್ರಿಕೆಗಳ ಸಂಖ್ಯೆ ಮತ್ತು ಪ್ರಸಾರ ದಿನೆ ದಿನೆ ಹೆಚ್ಚಾಗುತ್ತಿದೆ. ಆದರೆ ಕನ್ನಡದ ಜಾಲಗಳು ಮುಚ್ಚುತ್ತಿವೆ. ಜಾಲ ನಡೆಸುವುದು ಅಷ್ಟೊಂದು ದುಬಾರಿಯ ಕೆಲಸವೇ? ನನ್ನ ಬ್ಲಾಗನ್ನೇ ನೋಡಿ. ಅದಕ್ಕೆ ನನ್ನ ಕಡೆಯಿಂದ ಖರ್ಚು - ಸೊನ್ನೆ. ಅದಕ್ಕೆ ನಾನು ತೆರುವ ಬೆಲೆ - blogspot ಎಂಬ ಕೊಂಡಿ. ಅದಿದ್ದರೇನಂತೆ. ನನ್ನ ಬ್ಲಾಗು ನನ್ನದು. ಬ್ಲಾಗಿನ ಹಂಗಿಲ್ಲದೇ ಸ್ವತಂತ್ರವಾಗಿ ಜಾಲ ನಡೆಸುವ ಖರ್ಚು ಎಷ್ಟು ಎಂದು ನನಗೆ ಗೊತ್ತಿಲ್ಲ. ಆದರೆ ಅದು ಪತ್ರಿಕೆ ನಡೆಸುವಷ್ಟು ದುಬಾರಿಯಾಗಿರಲು ಸಾಧ್ಯವೇ ಇಲ್ಲ. ಬಹುಷಃ ದಿನ ಪತ್ರಿಕೆ ನಡೆಸುವ ಖರ್ಚಿನ ಒಂದಂಶವೂ ಆಗುವುದು ಸಂಶಯವೇ (ಗೊತ್ತಿದ್ದವರು ಮಾಹಿತಿ ಕೊಡಬೇಕು)!


ಪಾಶ್ಚಾತ್ಯ ದೇಶಗಳಲ್ಲಿ ದಿನಪತ್ರಿಕೆ ನಡೆಸುವುದೇ ದುಸ್ತರವಾಗುವ ಸ್ಥಿತಿ ಇದೆ. ಅದಕ್ಕೆ ಕಾರಣ ಮನೆ ಮನೆಯಲ್ಲಿ ಕೂತಿರುವ ಇಂಟರ್ನೆಟ್, ಜೇಬು ಜೇಬುಗಳಲ್ಲಿ ಕೂತಿರುವ ಸ್ಮಾರ್ಟ್ ಫೋನುಗಳು. ಅದಕ್ಕೇ ಈ ಪತ್ರಿಕೆಗಳು ತಮ್ಮ ಆದಾಯ ಉಳಿಸಿಕೊಳ್ಳಲು ಜಾಲಕ್ಕೆ ಕೈ ಹಾಕಿವೆ. ಬರೀ ಜಾಲ ಮಾಡಿ ಕೂಡ ಇಲ್ಲಿ ಬದುಕಬಹುದು, ಏಕೆಂದರೆ ಅಷ್ಟೊಂದು ಜನ ಜಾಲಸಂಪರ್ಕ ಹೊಂದಿದ್ದಾರೆ. ಅದಲ್ಲದೇ ಇಂಗ್ಲೀಷು ಬರೀ ಇಂಗ್ಲಂಡು ಅಮೇರಿಕಕ್ಕೆ ಸೀಮಿತವಲ್ಲವಲ್ಲ! ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಕೆನಡಾ, ಮತ್ತು ಎಲ್ಲ ಭಾರತದಂತಹ ದೇಶಗಳಲ್ಲೀ ಇದೆ. ಜಾಹಿರಾತುಗಳು ಆಯಾ ದೇಶಕ್ಕೆ, ಪ್ರದೇಶಕ್ಕೆ ತಕ್ಕಂತೆ ಜಾಲದಲ್ಲಿ ಬದಲಾಗುವ ವ್ಯವಸ್ಥೆಯೂ ಇದೆ. ಈ ಸೌಭಾಗ್ಯ ಕನ್ನಡದ ಜಾಲಕ್ಕೆ ಇಲ್ಲವಲ್ಲ! ನಮ್ಮ ದೇಶದ ಇತರ ಭಾಷೆಗಳ ಜಾಲಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ ಎಂದು ಕೊಂಡಿದ್ದೇನೆ.

ದಿನಕ್ಕೆ ನನ್ನ ಬ್ಲಾಗಿನಂತೆ ನೂರಾರು ಬ್ಲಾಗುಗಳು ಹುಟ್ಟುತ್ತವೆ, ಬಹಳಷ್ಟು ಹುಟ್ಟುತ್ತಲೇ ಸಾಯುತ್ತವೆ, ಕೆಲವು (ನನ್ನ ಬ್ಲಾಗಿನಂತೆ) ತೆವಳುತ್ತ ತೆವಳುತ್ತ ಇನ್ನೂ ಉಸಿರಾಡುತ್ತಿವೆ, ಕೆಲವೇ ಕೆಲವು ಮಾತ್ರ ಗಟ್ಟಿಯಾಗಿ ಬೇರುರುತ್ತಿವೆ (ಶಿವು, ಶ್ರೀಶಂ, ಮಲ್ಲಿಕಾರ್ಜುನ, ಸಿಮೆಂಟು ಮರಳು ಇತ್ಯಾದಿ). ಗ್ರುಪ್‍ಬ್ಲಾಗುಗಳಾದ ಅವಧಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ ಕೆಂಡಸಂಪಿಗೆಯನ್ನು ಹೋಲುವ ಅಥವಾ ಅದಕ್ಕೆ ಸಮಾಂನಾಂತರವಾಗಿ ಇರುವ ಒಂದೇ ಒಂದು ಜಾಲವಿಲ್ಲದಿರುವುದು ಕನ್ನಡದ ದುರಂತವೇ ಸರಿ.

ಯಾಹೂ ಕನ್ನಡ, ದಾಟ್ಸ್ ಕನ್ನಡ, ವೆಬ್ ದುನಿಯಾಗಳು ಸುದ್ದಿಗಿಂತ ಹೆಚ್ಚೇನನ್ನೂ ಕೊಡಲಾರವು. ಇದ್ದರೂ ಅದು ಪಾಪ್ ಕಲ್ಚರ್‍ಗೆ ಸೀಮಿತ. ಕೆಂಡಸಂಪಿಗೆಯಂಥ ಬರಹಗಳು ಅವುಗಳಲ್ಲಿ ಕಡಿಮೆಯೇ.

ನಾಡಿನಿಂದ ದೂರ ಕೂತಿರುವ ನನ್ನಂಥವರಿಗೆ ಜಾಲಗಳು ಕೊಂಡಿಯಾಗಿ ಕೂತಿವೆ. ಲಂಕೇಶ್ ಸತ್ತಮೇಲೆ ಪತ್ರಿಕೆ ಸತ್ತಿದೆ. ಇದ್ದುದರಲ್ಲೇ ಒಂಚೂರು ಲಂಕೇಶ್ ಪತ್ರಿಕೆ ಹೋಲುವ ಹಾಯ್, ಜಾಲದಲ್ಲಿ ಲಬ್ಯವಿಲ್ಲ. ತರಂಗ ಸುಧಾ ತಮ್ಮ ಗುಣಮಟ್ಟ ಯಾವತ್ತೋ ಕಳೆದುಕೊಂಡು ಬಿಟ್ಟಿವೆ. ಇದ್ದುದರಲ್ಲ ಮಯೂರವೇ ವಾಸಿ. ಆದರೆ ಈ ಪತ್ರಿಕೆಗಳ ಜಾಲಗಳು ಓದಲು ಆಗದಷ್ಟು ಕಷ್ಟಕೊಡುತ್ತವೆ.

ಪ್ರತಿಸಲ ಭಾರತಕ್ಕೆ ಹೋದಾಗ ತರುವ ಕನ್ನಡ ಪುಸ್ತಕಗಳೇ ಇನ್ನು ಗತಿ ಅನಿಸುತ್ತದೆ. ಆದರೆ ಒಂದು ದಿಗಿಲು ನನ್ನಲ್ಲಿ ಬಹುಷಃ ಯಾವಾಗಲೂ ಕಾಡುತ್ತದೆ, "ಕನ್ನಡ ಬೆಡಗು ಪರಿಮಳ ದಶಕದಿಂದ ದಶಕಕ್ಕೆ ಕಡಿಮೆಯಾಗುತ್ತಿದೆಯೇ? ಕನ್ನಡ ಮುಂದೊಂದು ದಿನ ಸಾಯಲಿದೆಯೇ?"

8 comments:

 1. ಸರ್,

  ಚಿಂತೆ ಮಾಡಬೇಡಿ, ಕನ್ನಡ ಸಾಯುವುದಿಲ್ಲ. ನಾವಿದ್ದೇವೆ.

  ReplyDelete
 2. ಕಾಲಾಯ ತಸ್ಮೈ ನಮಃ!

  ReplyDelete
 3. ಶಿವು,

  ನಿಮ್ಮಗಳ ಹುಮ್ಮಸ್ಸು ಕನ್ನಡವನ್ನು ಬೆಳೆಸಲಿ ಎಂದಷ್ಟೇ ಪ್ರಾರ್ಥಿಸುವೆ. ನನ್ನ ಭಯ ಸುಳ್ಳೇ ಇರಬಹುದು, ಆದರೂ ನನ್ನ ಭಯವನ್ನು ಇನ್ನೊಮ್ಮೆ ವಿವರಿಸಿ ಬರೆಯುತ್ತೇನೆ.

  ಸುನಾಥವರೇ,

  ಏನು ಮಾಡುವುದು?

  - ಕೇಶವ

  ReplyDelete
 4. ಪ್ರೀತಿಯ ಕೇಶವ್,
  ಎಲ್ಲರೂ ಲೇಖನಗಳನ್ನು upload ಮಾಡುವುದಕ್ಕೆ ಯೋಗ್ಯವಾದ ಕ್ರಮದಲ್ಲಿ ಕೊಡುವುದಿಲ್ಲ ಅಲ್ಲವೇ? ಕೆಂಡಸಂಪಿಗೆ ಈಗಾಗಲೇ ಬ್ಲಾಗು ಬರೆಯುತ್ತಿರುವವರನ್ನು ಮಾತ್ರ ಅವಲಂಬಿಸದೆ, ಅಂತರ್ಜಾಲಕ್ಕೆ ತೀರ‍ ಹೊಸಬರ ಬರಹಗಳನ್ನೂ ಕೊಡುತ್ತಿತ್ತು. ಆಗ ಕುಳಿತು ಟೈಪ್ ಮಾಡುವುದಕ್ಕೆ ಕೂಡ ಸಾಕಷ್ಟು ಪುರುಸೊತ್ತು ಇರುವ, ಸಮರ್ಥರಾದ ಜನ ಬೇಕಾಗುತ್ತಾರೆ. ಈಗ ಅಂಥ ಆಸಕ್ತ ಸಮರ್ಥರಿಗೆ ಪುರುಸೊತ್ತೆಲ್ಲಿದೆ? ಮತ್ತೆ ಇದೆಲ್ಲ ಒಂದೆರಡು ದಿನದ ಕೆಲಸವಲ್ಲವಲ್ಲ. ಒಬ್ಬರಾದರೂ ಸೈಟಿನಲ್ಲಿ ಕಸ-ಕಡ್ಡಿ ಹಾಕುವವರ ನಿಗಾ ಇಟ್ಟುಕೊಂಡು ಕುಳಿತಿರಬೇಕಾಗುತ್ತದೆ. host ಮಾಡುವವರು ಹೊರಗಿನವರಾದರೆ ಅವರ ನಕ್ರಾ-ತರಲೆಗಳನ್ನು ನಿಭಾಯಿಸಬೇಕಾಗುತ್ತದೆ. ಖರ್ಚು ಇಲ್ಲದಿರಬಹುದು, ಆದರೆ ಸಮಯಕ್ಕೆ ಬೆಲೆಕಟ್ಟಲಾದೀತೆ? ಮತ್ತೆ ನಾವು ನೀವೆಲ್ಲ ಇದನ್ನು ಅನುಕೂಲಕ್ಕೆ ತಕ್ಕಂತೆ, ನಿರೀಕ್ಷೆಗಳಿಲ್ಲದೇನೆ ಮಾಡುವವರು. ವೆಬ್ ಸೈಟ್ ಹಾಗಿರಲು ಸಾಧ್ಯವೇ? ಅಲ್ಲಿ ಅವರು ಅಂಕಣ ಇತ್ಯಾದಿ ಒಂದು ಶಿಸ್ತಿಗೆ ಒಳಪಟ್ಟ ಸಾಮಗ್ರಿಯನ್ನು ಕೂಡ ಕೊಡುತ್ತಿದ್ದರು. ಸಂಪದದ ನಾಡಿಗ್ ಒದ್ದಾಡುವುದನ್ನು ಕಂಡೇ ನನಗೆ ಅಯ್ಯೋ ಅನಿಸಿತ್ತು. ಇನ್ನು ಕೆಂಡಸಂಪಿಗೆಯ ಕಷ್ಟಗಳು ಇನ್ನೂ ಹೆಚ್ಚಿದ್ದವು ಅನಿಸುತ್ತದೆ. ಏನಿದ್ದರೂ ನಿಮ್ಮಂತೆ ನನಗೂ ಬೇಸರವೇ.

  ಸಾವನ್ನು ನೆನೆಯುತ್ತ ಎನ್ನಬೇಡ್ರಿ, ತುಂಬ ಹರ್ಟ್ ಆಗುತ್ತೆ, ಕಂಪನ್ನು ನೆನೆಯುತ್ತ ಎನ್ನಿ, ಕೆಂಡ ಸಂಪಿಗೆ ಒಣಗಿದರೂ ಕಂಪು ಚೆಲ್ಲುವ ಹೂವು...

  ReplyDelete
 5. ಕೇಶವ ಅವರೇ,

  ಯಾವುದೇ ಪತ್ರಿಕೆ ಇರಲಿ, ಮಾಧ್ಯಮದ ಅಂಗವಿರಲಿ, ಅದು ನಿಂತುಹೋದಾಗ ನಿಜಕ್ಕೂ ತುಂಬ ಬೇಸರವಾಗುತ್ತದೆ. ಕನಸೊಂದು ಅಲ್ಲಿಗೆ ಕೊನೆಗೊಂಡಂತೆ. ಉಳಿದಿದ್ದೇನಿದ್ದರೂ ಕನಸಿನ ಕನವರಿಕೆ.

  ಕನ್ನಡದಲ್ಲಿ ವೆಬ್‌ಸೈಟ್‌ ನಡೆಸುವುದು ಪತ್ರಿಕೆಗೆ ನಡೆಸುವುದಕ್ಕಿಂತ ತುಂಬ ಅಗ್ಗ. ಸಾಕಷ್ಟು ಅಗ್ಗ ಎಂದೇ ಹೇಳಬಹುದು. ಆದರೆ, ತುಂಬ ಜನ ಆ ಕನಿಷ್ಟ ಬೆಲೆಯನ್ನೂ ನೀಡಲು ಮೀನಮೇಷ ಮಾಡುತ್ತಿರುವುದೇ ಬಹುತೇಕ ತಾಣಗಳ ಅಕಾಲಿಕ ಸಾವಿಗೆ ಮುಖ್ಯ ಕಾರಣ.

  ಕನ್ನಡದ ಮೇಲೆ ಪ್ರೀತಿ ಇರುವ ಹಣವಂತರು ತುಂಬ ಜನ ಇದ್ದಾರೆ. ಸರಿಯಾದ ಯೋಜನೆ ಇಟ್ಟುಕೊಂಡು ತಾಣ ರೂಪಿಸುವುದಾದರೆ, ಅದ್ಭುತವಾದ ಕನ್ನಡ ತಾಣ ರೂಪುಗೊಳ್ಳಬಲ್ಲುದು. ತಾಣ ನಡೆಸಲು ಇಚ್ಛಿಸುವವರು ಕನಿಷ್ಠ ಮಟ್ಟದ ಖರ್ಚಿಗೆ ಸಿದ್ಧರಿರಬೇಕಾಗುತ್ತದೆ. ಖರ್ಚು ನಿಭಾಯಿಸುವ ಮಟ್ಟಿಗಿನ ವ್ಯಾಪಾರಿ ತಂತ್ರಗಳನ್ನು ಬಳಸಬೇಕಾಗುತ್ತದೆ. ಇಲ್ಲದಿದ್ದರೆ ಇದು ದುಬಾರಿ ಹವ್ಯಾಸವೇ ಸರಿ.

  ಅಂತರ್ಜಾಲದ ಮುಕ್ತತೆ, ದಕ್ಷತೆ ಮತ್ತು ತಂತ್ರಜ್ಞಾನದ ಬೆಂಬಲ ಹೊಂದಿದ ಯಾವ ತಾಣವೂ ಮುಚ್ಚಬೇಕಿಲ್ಲ. ಈ ಕುರಿತು ಗಂಭೀರವಾಗಿ ಯೋಚಿಸಬೇಕಾದ ಸಮಯ ಈಗ ಬಂದಿದೆ ಅನಿಸುತ್ತದೆ.

  ReplyDelete
 6. ನರೇಂದ್ರ ಪೈ ಅವರೇ,
  ನಿಮ್ಮ ಪ್ರಬುದ್ಧ ವಿಶ್ಲೇಷಣೆ ತಪ್ಪು ಎಲ್ಲಿದೆ ಎನ್ನುವುದನ್ನು ಸರಿಯಾಗೇ ತೋರಿಸುತ್ತದೆ. ನಾನು ಈ ಬ್ಲಾಗನ್ನು ತುಂಬ ಭಾವುಕವಾಗಿ ಬರೆದದ್ದು. ಕೆಂಡಸಂಪಿಗೆ ನನ್ನ ದಿನನಿತ್ಯದ ಓದಾಗಿತ್ತು. ಯಾವುದೇ ನ್ಯೂಸ್ ಓದುವ ಮೊದಲು ಕೆಂಡಸಂಪಿಗೆಯನ್ನು ಓದುತ್ತಿದ್ದೆ. ನಾಡಿನಿಂದ ದೂರವಿರುವ ನನ್ನಂಥವನಿಗೆ, ಅಲ್ಲಿರುವಂತೆ ನಾಕು ದಿನಕ್ಕೊಂದು ಪುಸ್ತಕ ಕೊಂಡುತಂದು, ಅಥವಾ ಲೈಬ್ರರಿಯಿಂದ ತಂದು ಓದಲಾಗುವುದಿಲ್ಲ. ಕೆಂಡಸಂಪಿಗೆ ಆ ಕಂದಕವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಿತ್ತು.

  ನಾನು ಬರೆದು ಕಳಿಸಿದ ಎಲ್ಲ ಬರಹಗಳನ್ನೂ ರಶೀದ್ ಕೆಂಡಸಂಪಿಗೆಯಲ್ಲಿ ಹಾಕಲಿಲ್ಲ, ಪ್ರಕಟಿಸಿದ್ದನ್ನು ತಿದ್ದಿದ್ದಾರೆ ಕೂಡ. ಅದೇ ಅಲ್ಲವೇ ಜಾಲಕ್ಕೂ ಬ್ಲಾಗಿಗೂ ಇರುವ ಅಂತರ.

  ನೀವು ಹೇಳುವುದು ಖರೆ. ಯಾವುದೇ ಜಾಲ (ಬ್ಲಾಗ್ ಅಲ್ಲ) ಪುಗಸಟ್ಟೆ ನಡೆಸಲು ಆಗುವುದಿಲ್ಲ.

  ಕನ್ನಡದ ಮೆಚ್ಚಿನ ಜಾಲಗಳಾದ ಸಂಪದ, ಕೆಂಡಸಂಪಿಗೆ ಒಂದೊಂದಾಗಿ ಮುಚ್ಚಿಕೊಳ್ಳುತ್ತಿದ್ದರೆ ಆಧುನಿಕ ಯುಗದಲ್ಲಿ ಕನ್ನಡಕ್ಕೆ ಜಾಗವೇ ಇಲ್ಲವೇ ಎನ್ನುವ ಭಯವಾಗುತ್ತದೆ.

  ನಿಮ್ಮ ಮಾತು, "ಸಾವನ್ನು ನೆನೆಯುತ್ತ ಎನ್ನಬೇಡ್ರಿ, ತುಂಬ ಹರ್ಟ್ ಆಗುತ್ತೆ, ಕಂಪನ್ನು ನೆನೆಯುತ್ತ ಎನ್ನಿ, ಕೆಂಡ ಸಂಪಿಗೆ ಒಣಗಿದರೂ ಕಂಪು ಚೆಲ್ಲುವ ಹೂವು...", ಹೌದು.

  - ಕೇಶವ

  ReplyDelete
 7. ಸವಡಿಯವರೇ,

  "ಆ ಕನಿಷ್ಟ ಬೆಲೆಯನ್ನೂ ನೀಡಲು ಮೀನಮೇಷ ಮಾಡುತ್ತಿರುವುದೇ ಬಹುತೇಕ ತಾಣಗಳ ಅಕಾಲಿಕ ಸಾವಿಗೆ ಮುಖ್ಯ ಕಾರಣ." - ಯಾಕೆ ಕನ್ನಡಿಗರು ಅಷ್ಟೊಂದು ಬಡವರಾಗಿ ಹೋದೆವು. ಮಕ್ಕಳ ಸ್ಕೂಲ್ ಬ್ಯಾಗಿನ ಮೇಲಿರುವ ಡಿಸ್ನಿ ಬ್ರ್ಯಾಂಡಿಗೆ ನೂರಾರು ರೂಪಾಯಿ ಹೆಚ್ಚು ಕೊಡುವ ನಮಗೆ ಇಂದು ಕನ್ನಡವನ್ನು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಾಪಾಡುವ, ಬೆಳೆಸುವ ಇಂಗಿತವೇ ಇಲ್ಲವಾಗಿದೆಯೇ? ಅಥವಾ ಇದು ಎಲ್ಲ "ಪ್ರಾದೇಶಿಕ" ಭಾಷೆ-ಸಂಸ್ಕೃತಿಗಳೂ ಇಂಗ್ಲೀಷ್-ಬಂದವಾಳಶಾಹಿತನ-ಪಾಶ್ಚಾತ್ಯೀಕರಣಗಳಿಂದ ನಿಧನಿಧಾನವಾಗಿ ಸಾಯುತ್ತಿರುವ ಸಂಕೇತಗಳೇ?

  - ಕೇಶವ

  ReplyDelete