Thursday, October 22, 2009

ಚಹಾ ಮತ್ತು ಪೇಪರ್

ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ "ಸಂಯುಕ್ತ ಕರ್ನಾಟಕ" (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ ಹಿಡಿದುಕೊಂಡು ಕೂತಿರುವ ದೃಶ್ಯ ಸಹಜವಾಗಿತ್ತು. ದೊಡ್ಡವನಾದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು, ಕೈಯಲ್ಲಿ ಒಂದು ಚಹಾದ ದೊಡ್ಡ ವಾಟಗಾ (ಲೋಟ) ಹಿಡಿದುಕೊಂಡು, ಸ.ಕ ಓದುತ್ತ ಮಂಜಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದೆ. 

ಮುಂದೆ ಹಾಸ್ಟೆಲಿಗೆ ಸೇರಿದಾಗ ಆ ಕನಸು ನಿಜವಾಗಿ ಬಿಟ್ಟಿತ್ತು. ಒಂದು ಉದ್ದ ಲೋಟದ ತುಂಬ ನೀರು ಚಹಾ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ಪುಟವನ್ನು ಹಂಚಿಕೊಂಡು ಇಬ್ಬಿಬ್ಬರು, ಮೂವರು ಸೇರಿ ಸ.ಕ ಓದುತ್ತಿದ್ದೆವು.

ಓದು ಮುಗಿಸಿ ಕೆಲಸ ಸೇರಿದಾಗ, ಮೈಸೂರಿನಲ್ಲಿ ದಿನಾ ಎರಡೆರಡು ದಿನಪತ್ರಿಕೆಗಳು, ಪ್ರಜಾವಾಣಿ ಮತ್ತು ಟೈಪಾಸ್ ಇಂಡಿಯಾ (ಟೈಮ್ಸ್ ಆಫ್ ಇಂಡಿಯಾ). ಬಹುಷಃ ಆರು ಆರುವರೆಗೇ ಸೈಕಲ್ಲಿನ ಮೇಲೆ ಎಲ್ಲ ಪತ್ರಿಕೆ ಹಿಡಿದುಕೊಂಡು ಪೇಪರಿನ ಹುಡುಗ ಬಾಗಿಲ ಸಂದಿಯಿಂದ ಪತ್ರಿಕೆಗಳನ್ನು ಹಾಕಿ ಹೋಗುತ್ತಿದ್ದ. ಖರೆ ಹೇಳುತ್ತೇನೆ, ನಾನು ಮೈಸೂರಿನಲ್ಲಿರುವವರೆಗೂ ಆ ಪೇಪರ್ ಹಾಕುವ ಹುಡುಗನ ಮುಖವನ್ನೇ ನೋಡಿಲ್ಲ (ನಾನು ಎಂದೂ ಏಳುಗಂಟೆಗೆ ಮೊದಲು ಎದ್ದೇ ಇಲ್ಲ). ತಿಂಗಳಿಗೊಮ್ಮೆ ಪೇಪರ್ ಕಾಕುವ ಯಜಮಾನ ಬಂದು ದುಡ್ಡು ತೆಗೆದುಕೊಂಡು ಹೋಗುತ್ತಿದ್ದ. ಸಮಯಕ್ಕೆ ಸರಿಯಾಗಿ ದಿನಪತ್ರಿಕೆಗಳು, ವಾರದ ದಿನಕ್ಕೆ ಸರಿಯಾಗಿ ತರಂಗ, ಸುಧಾ, ಕರ್ಮವೀರ, ಹಾಯ್ ಬೆಂಗಳೂರು, ಲಂಕೇಶ ಪತ್ರಿಕೆಗಳು.

ಇಲ್ಲಿ ಕೂಡ ಬೆಳಿಗ್ಗೆ ಎದ್ದ ತಕ್ಷಣ ಎರಡೇ ನಿಮಿಷದಲ್ಲಿ ಚಹಾ ತಯಾರಾಗುತ್ತದೆ, ಥೇಟ್ ಅಲ್ಲಿನಂತೇ! ಆದರೆ ಮುಂಬಾಗಿಲ ಅಡಿಯಲ್ಲಿ ಪೇಪರು ಇರುವದಿಲ್ಲ. ಯಾಕೆಂದರೆ ಇಲ್ಲಿ ಆ ಒಂದು ಕಲ್ಚರೇ ಇಲ್ಲ. ಅಷ್ಟೇ ಅಲ್ಲ, ಮನೆಗೆ ಏನಾದರೂ ಪೇಪರ್ ಹಾಕಬೇಕೆಂದರೆ ಇಲ್ಲಿ ಪೇಪರಿನ ದುಡ್ಡಿನ ಜೊತೆ, ಡೆಲಿವರಿ ದುಡ್ಡನ್ನು ಕೊಡಬೇಕು! ಅಲ್ಲಿ, ಒಂದು ದಿನ ಪತ್ರಿಕೆ ತಡವಾಗಿ ಬಂದರೆ ಗುರ್ ಎನ್ನುತ್ತಿದ್ದೆವು, ಒಂದು ದಿನ ಲಂಕೇಶ್ ಪತ್ರಿಕೆ ಮನೆಗೆ ಹಾಕುವುದು ತಡವಾದರೆ, ನಾನೇ ಅಂಗಡಿಯಿಂದ ತಂದು ಬಿಟ್ಟು, ಮನೆಗೆ ಮುಂದಿನ ದಿನ ಹಾಕಿದ ಲಂಕೇಶ್ ಪತ್ರಿಕೆಯನ್ನು ವಾಪಸ್ಸು ಕಳಿಸುತ್ತಿದ್ದೆ!

ಇಲ್ಲಿ ಕಂಪ್ಯೂಟರ್ ಮುಂದೆ ಕೂತು, ನ್ಯೂಸ್ ಓದುವ ವಿಚಿತ್ರ ಅಭ್ಯಾಸ ರೂಢಿಯಾಗಿದ್ದರೂ, ಮುಂಜಾನೆ ಕಾಲ ಮೇಲೆ ಕಾಲು ಹಾಕಿಕೊಂಡು ಒಂದು ಕೈಯಲ್ಲಿ ಕನ್ನಡ ದಿನಪತ್ರಿಕೆ ಹಿಡಿದುಕೊಂಡು, ಇನ್ನೊಂದು  ಕೈಯಲ್ಲಿ ಚಹಾದ ಲೋಟ ಹಿಡಿದುಕೊಂಡು ಕೂಡುವ ಸುಖ ನೆನೆದು ಬೇಸರವಾಗುತ್ತೆ. ಅಷ್ಟು ದಿನ ಪೇಪರ್ ಹಾಕುವ ಹುಡುಗರನ್ನು ಒಂದಿನವೂ ಮಾತಾಡಿಸದೇ ಹೋದದ್ದಕ್ಕೆ ಮನಸ್ಸು ಖಿನ್ನವಾಗುತ್ತೆ.

9 comments:

 1. ಸಿಂಪಲ್ ಅನ್ಸಿದ್ರೂ ತುಂಬ ಕಾಡಿದ ಬರವಣಿಗೆ ಕೇಶವ್. ನನ್ನ ಬಾಲ್ಯ, ಪೇಪರ್ ತರುವ ಅಜ್ಜಿಬಪ್ಪ ಎನ್ನುವ ಮುದುಕನನ್ನು ಕಾಲು ನೋಯುವ ತನಕ ಕಾಯ್ತಿದ್ದಿದ್ದು, ಪೇಪರು, ತರಂಗ-ಸುಧಾಗಳಿಗಾಗಿ ಹಣ ಹೊಂದಿಸುತ್ತಿದ್ದಿದ್ದು ಎಲ್ಲ ನೆನಪಾಯ್ತು. ತುಂಬ ಖುಶಿಕೊಟ್ಟ ಲೇಖನ. ಬರೀತಿರಿ.

  ReplyDelete
 2. ಕುಲಕರ್ಣಿ ಅರ್,

  ದಿನಪತ್ರಿಕೆ ಮತ್ತು ಅದನ್ನು ಹಾಕುವ ಹುಡುಗರ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ನೆನಪುಗಳ ಮರುಕಳಿಕೆ ತುಂಬಾ ಚೆನ್ನಾಗಿದೆ. ನೀವು ಪತ್ರಿಕೆ ಹಂಚುವ ಹುಡುಗರನ್ನು ಒಮ್ಮೆಯಾದರೂ ಮಾತಾಡಿಸಲಿಲ್ಲವೆಂದು ಬೇಸರಿಸಬೇಡಿ. ಏಕೆಂದರೆ ಇದೇ ವೃತ್ತಿಯಲ್ಲಿದ್ದು ಹದಿನಾರು ವರ್ಷಗಳ ಅನುಭವವವನ್ನು ಲಲಿತ ಪ್ರಭಂದಗಳ ರೂಪದಲ್ಲಿ ಬರೆದಿರುವ ನನ್ನ ಕಥಾಸಂಕಲನ ನವೆಂಬರ ೧೫ ರಂದು ಬಿಡುಗಡೆಯಾಗುತ್ತಿದೆ. ಅದರಲ್ಲಿ ನೀವು ಎಲ್ಲಾ ಬೀಟ್ ಹುಡುಗರ, ಏಜೆಂಟರನ್ನು ಮಾತಾಡಿಸಬಹುದು. ಇನ್ನಿತರ ವಿವರಗಳನ್ನು ಮುಂದೆ ಕೊಡುತ್ತೇನೆ ಸರ್.

  ReplyDelete
 3. ಕೇಶವ,
  ನನ್ನ ಬಾಲ್ಯದ ದಿನಗಳನ್ನೂ ನೆನಪಿಸಿದಿರಿ. ‘ಕರ್ಮವೀರ’ ವಾರಪತ್ರಿಕೆಯನ್ನು ಕಸಿದುಕೊಂಡು, ಅದರಲ್ಲಿಯ ‘ಫ್ಯಾಂಟಮ್’
  ಕಾರ್ಟೂನ್ ಓದಲು ನನಗೆ ಹಾಗು ನನ್ನ ತಮ್ಮನಿಗೆ ತುರುಸಿನ ಕಾಳಗವಾಗುತ್ತಿತ್ತು!
  ಈಗ ಮಾತ್ರ ನೀವು ವರ್ಣಿಸಿದಂತೆ, ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು, ಒಂದು ದೊಡ್ಡ ವಾಟಗಾ ಚಹಾ ಹೀರುತ್ತ ’ಸಂಯುಕ್ತ ಕರ್ನಾಟಕ’ವನ್ನು ಓದುತ್ತೇನೆ!

  ReplyDelete
 4. eshtu khushi kodtu sir e baraha. puttage chendage ide baraha.:)

  ReplyDelete
 5. ಸಿ೦ಪಲ್, ಆದ್ರೆ 'ಊರಿನ' ಫೀಲಿ೦ಗ್ ಸಿಕ್ಕಾಪಟ್ಟೆ ಗಾಢವಾಗಿದೆ. ಟಚಿ೦ಗ್

  ReplyDelete
 6. ನಿಮ್ಮ ಬರಹ ನನಗೆ ಬಾಲ್ಯದ ದಿನಗಳನ್ನು ನೆನಪಿಸಿತು. ನೀವು ಹೇಳಿದಂತೆ ಒಂದು ದೊಡ್ಡ ಲೋಟದಲ್ಲಿ ಕಾಫಿ ಹೀರುತ್ತಾ ಅಪ್ಪ ಪತ್ರಿಕೆ ಹಿಡಿದು ಕುರ್ಚಿಯಲ್ಲಿ ಕುಳಿತು ಓದುತ್ತಿದ್ದರೆ, ನಾವು ಕೆಳಗೆ ಕುಳಿತು ಅವರು ಪತ್ರಿಕೆ ಕೆಳಗೆ ಹಾಕುವುದನ್ನೇ ಕಾಯುತ್ತಿರುತ್ತಿದ್ದೆವು. ಆ ದಿನಗಳು, ದೊಡ್ಡ ಬೆತ್ತದ ಕುರ್ಚಿ, ಅದರಲ್ಲಿ ಕುಳಿತ ಅಪ್ಪ.... ಸೊಗಸಾದ ನೆನಪುಗಳನ್ನು ಚಪ್ಪರಿಸುವಂತೆ ಮಾಡಿದಿರಿ...

  ReplyDelete
 7. ಕೇಶವ್‌ ಸರ್‌ ಒಂದು ಎಸ್‌.ಕೆ ಪತ್ರಿಕೆ ಕಳುಹಿಸಿಕೊಡುತ್ತೇನೆ. ಅಡ್ರೆಸ್‌ ಕೊಡಿ. ಆರಾಮವಾಗಿ ಕುರ್ಚಿಯಲ್ಲಿ ಕಾಲು ಚಾಚಿಕೊಂಡು ಕುಳಿತು ದಿನವೆಲ್ಲಾ ಓದಿ... :)

  ಚೆಂದನೆಯ ಲೇಖನ..

  ReplyDelete
 8. ಪೈ,
  "ನನ್ನ ಬಾಲ್ಯ, ಪೇಪರ್ ತರುವ ಅಜ್ಜಿಬಪ್ಪ ಎನ್ನುವ ಮುದುಕನನ್ನು ಕಾಲು ನೋಯುವ ತನಕ ಕಾಯ್ತಿದ್ದಿದ್ದು, ಪೇಪರು, ತರಂಗ-ಸುಧಾಗಳಿಗಾಗಿ ಹಣ ಹೊಂದಿಸುತ್ತಿದ್ದಿದ್ದು ಎಲ್ಲ ನೆನಪಾಯ್ತು. ತುಂಬ ಖುಶಿಕೊಟ್ಟ ಲೇಖನ."
  - ಬರೆಯದೇ ಉಳಿದದ್ದನ್ನು ನೀವು ಬರೆದಿದ್ದೀರಿ.

  ಶಿವು,
  ನಿಮ್ಮ ವೃತ್ತಿಯ ಬಗ್ಗೆ ನನಗೆ ಅನನ್ಯ ಗೌರವವಿದೆ. ನಿಮ್ಮ ಪುಸ್ತಕಕ್ಕಾಗಿ ಕಾಯುತ್ತಿದ್ದೇನೆ.

  ಸುನಾಥವರೇ,
  "ಈಗ ಮಾತ್ರ ನೀವು ವರ್ಣಿಸಿದಂತೆ, ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು, ಒಂದು ದೊಡ್ಡ ವಾಟಗಾ ಚಹಾ ಹೀರುತ್ತ ’ಸಂಯುಕ್ತ ಕರ್ನಾಟಕ’ವನ್ನು ಓದುತ್ತೇನೆ!"
  - ನಾನು ಆ ದಿನಕ್ಕಾಗಿ ಕಾಯುತ್ತಿದೇನೆ.

  ಗೌತಮ್, ಪ್ರಮೋದ್,
  ಥ್ಯಾಂಕ್ಸ್.

  ಶ್ಯಾಮಲಾ,
  "ನೀವು ಹೇಳಿದಂತೆ ಒಂದು ದೊಡ್ಡ ಲೋಟದಲ್ಲಿ ಕಾಫಿ ಹೀರುತ್ತಾ ಅಪ್ಪ ಪತ್ರಿಕೆ ಹಿಡಿದು ಕುರ್ಚಿಯಲ್ಲಿ ಕುಳಿತು ಓದುತ್ತಿದ್ದರೆ, ನಾವು ಕೆಳಗೆ ಕುಳಿತು ಅವರು ಪತ್ರಿಕೆ ಕೆಳಗೆ ಹಾಕುವುದನ್ನೇ ಕಾಯುತ್ತಿರುತ್ತಿದ್ದೆವು. ಆ ದಿನಗಳು, ದೊಡ್ಡ ಬೆತ್ತದ ಕುರ್ಚಿ, ಅದರಲ್ಲಿ ಕುಳಿತ ಅಪ್ಪ...."
  - ಹೌದು, ಇದು ಎಲ್ಲರ ಮನೆ ಚಿತ್ರವಾಗಿ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಕೂತಿವೆಯಲ್ಲವೇ?

  ಜೋಮನ್,
  ಥ್ಯಾಂಕ್ಸ್. ನೀವು ಕಳಿಸುವ ಪತ್ರಿಕೆಗೆ ಕಾಯುತ್ತಿದೇನೆ.

  - ಕೇಶವ

  ReplyDelete
 9. ನನ್ನ ಈ ಪುಟ್ಟ ಬರಹವನ್ನು ಪ್ರಕಟಿಸಿದ "ಮೀಡಿಯಾ ಮಿರ್ಚಿ" ಮತ್ತು "ಅವಧಿ" ಇಬ್ಬರಿಗೂ ನಮನಗಳು.

  http://avadhi.wordpress.com/2009/10/24/%E0%B2%95%E0%B3%87%E0%B2%B6%E0%B2%B5-%E0%B2%95%E0%B3%81%E0%B2%B2%E0%B2%95%E0%B2%B0%E0%B3%8D%E0%B2%A3%E0%B2%BF-%E0%B2%AC%E0%B2%B0%E0%B3%86%E0%B2%AF%E0%B3%81%E0%B2%A4%E0%B3%8D%E0%B2%A4%E0%B2%BE%E0%B2%B0/

  http://mediamirchi.wordpress.com/2009/10/24/%E0%B2%9A%E0%B2%B9%E0%B2%BE-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AA%E0%B3%87%E0%B2%AA%E0%B2%B0%E0%B3%8D/

  - ಕೇಶವ

  ReplyDelete