Thursday, April 01, 2010

ಇದಕ್ಕೆ ಉಪಯವೇನು?


"ಬುದ್ಧಿವಂತರು ಶಿರಬಡಗಿಯಿಂದ ಬಾಗಲಕೋಟೆಗೆ ಹೋಗಿ ನೆಲೆಸುತ್ತಾರೆ,
ಅತಿ ಬದ್ಧಿವಂತರು ಬಾಗಲಕೋಟೆಯಿಂದ ಬಕ್ಕಿಂಗ್ ಹ್ಯಾಮ್ ಗೆ ಹೋಗುತ್ತಾರೆ
Image courtesy: Aayushi Mehta (flickr)
ದಡ್ಡರು ತಮ್ಮ ಬಡತನದಲ್ಲಿ ಬೇಯುತ್ತಾ,
ಸರಕಾರದ ಭಿಕ್ಷೆಗಾಗಿ ಕಾಯುತ್ತಾ,
ಬುದ್ಧಿವಂತರ ಸಬ್ಸಿಡೈಸ್ಡ್ ಶಿಕ್ಷಣಕ್ಕೆ ಬೇಕಾದ ಕಂದಾಯ ಕಟ್ಟುತ್ತಾ, ಶಿರಬಡಗಿಯಲ್ಲೇ ಉಳಿಯುತ್ತಾರೆ.
ಪ್ರತೀ ಸಾರಿ ನೆರೆ ಪರಿಹಾರದ ಚೆಕ್ ಬಂದಾಗ -ನಮ್ಮೂರಾಗ ಸಾಲಿ ಕಲ್ತವರ್ ಯಾರ್ ಇಲ್ರಿ- ಎನ್ನುತ್ತಾರೆ.
ತಲಾಠಿ ಹೇಳಿದ್ದನ್ನು ಕೇಳಿ, ತೋರಿಸಿದಲ್ಲಿ ಸಹಿ ಹಾಕಿ, ಅವನಿಗೆ ಲಂಚ ಕೊಟ್ಟು ದುಡ್ಡು ಇಸಿದುಕೊಳ್ಳುತ್ತಾರೆ

ಕೇವಲ ದುಡ್ದಿನಿಂದ ರಾಜ್ಯ ಅಭಿವೃದ್ಧಿ ಹೊಂದುತ್ತದೆ ಎನ್ನುವ ಭ್ರಮೆಯನ್ನು ಪತ್ರಿಕೆಗಳು ಉಂಟುಮಾಡುತ್ತವೆ.
ಇದನ್ನೇ ನಿಜ ಎಂದು ನಂಬಿದ ಇಬ್ಬರು ಮಾತನಾಡುತ್ತಾರೆ -
-ಇದಕ್ಕೆಲ್ಲ ಕೊನೆಯೇ ಇಲ್ಲವೇ-

ಇದಕ್ಕೆ ಉಪಾಯವೇನು?"

ನನ್ನನ್ನು ತುಂಬ ಹತ್ತಿರದಿಂದ ನೋಡಿದ ನನ್ನ ಅತ್ಯಂತ ಒಳ್ಳೆಯ ವಿಮರ್ಶಕ ಮಿತ್ರ ನನ್ನ ಬಗ್ಗೆ ಬರೆದ ಮಿಂಚಂಚೆಯ ಬರಹ ಇದು.
--------------                ---------------------


                   
ಹಳ್ಳಿಯಲ್ಲಿ ಹುಟ್ಟಿ ಚೆನ್ನಾಗಿ ಓದಿ, ಸರಕಾರಿ ಕಾಲೇಜಿನಲ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ ಮಾಡಿರುವ ಹುಡುಗ (ಹುಡುಗಿ ಅಂತಲೂ ಓದಿಕೊಳ್ಳಿ) ವಾಪಸ್ ತನ್ನ ಹಳ್ಳಿಗೆ ಹೋಗಿ ಮಾಡುವುದೇನಿದೆ? ಆತ ಕ್ಯಾಲಿಫೋರ್ನಿಯಾದಲ್ಲಿರಲಿ, ಮೆಲ್ಬೋರ್ನದಲ್ಲಿರಲಿ, ಯಾರಿಗೂ ಏನೂ ಅನಿಸುವುದಿಲ್ಲ. ಆದರೆ ಹಳ್ಳಿಯಲ್ಲಿ ಹುಟ್ಟಿ ಆತನಿಗಿಂತ ಚನ್ನಾಗಿ ಓದಿ, ಸರಕಾರಿ ಕಾಲೇಜಿನಲ್ಲಿ ಡಾಕ್ಟರಿಕೆ ಮಾಡಿ ನ್ಯುಯಾರ್ಕಿಗೋ ಲಂಡನ್ನಿಗೋ ಹೋಗಿ ನೆಲಸಲಿ, ಆತನ ನೆಂಟರಿಂದ ಹಿಡಿದು ದೂರದ ಗೆಳೆಯರವರೆಗೆ ‘ಪ್ರಪಂಚದ ಅತೀ ಕೆಟ್ಟ ಸ್ವಾರ್ಥಿ‘ ಎನ್ನುವ ಹಣೆಪಟ್ಟಿ.

Image from: www.boston.com
ಕೆರೂರಿನವ ಬಾಗಲಕೋಟೆಗೆ, ಬಾಗಲಕೋಟೆಯವ ಹುಬ್ಬಳ್ಳಿಗೆ, ಹುಬ್ಬಳ್ಳಿಯಾಂವ ಬೆಂಗಳೂರಿಗೆ, ಬೆಂಗಳೂರಿನವ ಲಂಡನ್ನಿಗೆ, ಲಂಡನ್ನಿನವ ಬೇಏರಿಯಾಗೆ - ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗುಳೆ ಎದ್ದು  ಹೊರಟವರೇ ಅಲ್ಲವೇ? ಬಾಗಲಕೋಟೆ ಬಿಟ್ಟು ಹುಬ್ಬಳ್ಳಿಗೋ, ಬೆಂಗಳೂರಿಗೆ ಗುಳೆ ಎದ್ದು ಬದುಕನ್ನು ಕಟ್ಟಿಕೊಂಡಾಗ ಏಳದ ಪ್ರಶ್ನೆಗಳು, ಇಂಗ್ಲಂಡಿಗೋ ಅಮೇರಿಕಕ್ಕೋ ಬಂದಾಗ ನಮಗೂ, ನಮ್ಮ ಮಿತ್ರರಿಗೂ ಇಂಥ ಉತ್ತರವಿಲ್ಲದ ಪ್ರಶ್ನೆಗಳು ಹುಟ್ಟುವುದೇಕೆ?   

ಇವೆಲ್ಲ ವಿವರಣೆಗಳು ಪರದೇಶದಲ್ಲಿ ನೆಲಸಿರುವ ನಾವು ನಮ್ಮ ಸಮಾಧಾನಕ್ಕೆ ಹುಡುಕಿರುವ ಸಬೂಬು ಮಾತ್ರ, ನಿಜವಾದ ಉತ್ತರಗಳಲ್ಲ ಎಂದು ನಮಗೆ ಖಾತ್ರಿ ಗೊತ್ತು. ಪ್ರಶ್ನೆಗಳಿದ್ದರೆ ತಾನೆ ಉತ್ತರ ಹುಡುಕುವ ಕಷ್ಟ; ಅದಕ್ಕೆಂದೇ ನಾವೆಲ್ಲ ಬಹಳ ಜನ ಇಲ್ಲಿ ಅಂಥ ಪ್ರಶ್ನೆಗಳನ್ನೇ ಕೊಂದು ಹಾಕಿದ್ದೇವೆ. 

ವರುಷಕ್ಕೋ ಎರಡು ವರುಷಕ್ಕೋ ಒಂದೆರೆಡು ವಾರ ಇಂಡಿಯಾದಲ್ಲಿ ಸುತ್ತಾಡಿಕೊಂಡು, ಭಾರತದ ಸರಕಾರಕ್ಕೆ, ರಸ್ತೆಗಳಿಗೆ, ವಾಹನಸಂದಣಿಗೆ, ವಿದ್ಯುತ್ ಕಡಿತಕ್ಕೆ, ಸೊಳ್ಳೆ ಕಚ್ಚಿದ್ದಕ್ಕೆ ವರುಷವಿಡೀ ಬಯ್ದುಕೊಂಡು, ನಾಕಾರು ಡಾಲರೋ ಪೌಂಡೋ ಚಾರಿಟಿಗೆ ಕೊಟ್ಟು, ‘ಭಾರತ ಬದುಕಿರುವುದೇ ನಮ್ಮಂಥವರಿಂದ‘ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ಇದೇ ಈ ಸಮಸ್ಯೆಗಳಿಗೆ ತಕ್ಕ ಉಪಾಯ ಎಂದು ಕಂಠ ಪೂರ್ತಿ ವೈನು ಕುಡಿದು ಪಾರ್ಟಿಮಾಡುತ್ತೇವೆ.

3 comments: