ಪ್ರತಾಪ ಸಿಂಹ ಅವರ ಅಂಕಣಕ್ಕೆ ಪ್ರತಿಕ್ರಿಯೆ(http://pratapsimha.com/2010/07/18/hindu-terror/)
ಪ್ರತಾಪ,
ಪ್ಯಾಲಸ್ಟೇನ್ ನಲ್ಲಿ ಮುಸ್ಲೀಮರ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ಕಂಡು ಮರುಗಿದ ಮಹಾನ್ ಚಿಂತಕ ಒಸಾಮಾ ಸೆಪ್ಟೆಂಬರ್ ೧೧ ರ ನಂತರ ಹೇಳಿದ್ದೂ ಅದನ್ನೇ, We reacted.
ನಾನೂ ಒಬ್ಬ ಹಿಂದು ಆಗಿಯೇ ಇದನ್ನೆಲ್ಲ ಹೇಳುತ್ತಿದ್ದೇನೆ, ಪ್ರತಾಪ. ಹಿಂದುಗಳು ರಿಯಾಕ್ಟ್ ಮಾಡಬೇಕು, ಆದರೆ ಬಾಂಬಿನಿಂದಲ್ಲ. ಭಾಂಬು ಸಿಡಿಸಿ, ಜನರನ್ನು ಕೊಂದರೆ, ಅವರು ಯಾವ ಧರ್ಮದವರೇ ಆಗಲಿ, ಅವರು ಟೆರರಿಸ್ಟುಗಳೇ, ಭಯೋತ್ಪಾದಕರೇ. ಇಸ್ಲಾಂ ಹೆಸರಿನಲ್ಲಿ ಜಗತ್ತಿನ ತುಂಬೆಲ್ಲೆ ಬಾಂಬು ಸಿಡಿಸಿ, ಇಡೀ ಮುಸ್ಲಿಂ ಸಮುದಾಯವನ್ನು ಸಂಶಯದ ಕಣ್ಣಿಂದ ನೋಡುವಂತೆ ಮಾಡಿರುವ ಮುಸಲ್ಮಾನ್ ಮೂಲಭೂತವಾದಿಗಳಿಗೂ ನಿಮಗೂ ಹೆಚ್ಚೇನೂ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ನೀವು ಕೈಯಲ್ಲಿ ಲೇಖನಿ ಹಿಡಿದು ಲಕ್ಷಾಂತರ ಕನ್ನಡಿಗರ (ಹಿಂದೂ ಮತ್ತು ಮುಸ್ಲಿಂ) ಮನಸ್ಸಿನಲ್ಲಿ ಕೊಚ್ಚೆ ವಿಚಾರವನ್ನು ತುಂಬುತ್ತಿದ್ದೀರಿ, ಅವರು ಕೈಯಲ್ಲಿ ಎ.ಕೆ ೪೭ ಹಿಡಿದಿದ್ದಾರೆ ಅಷ್ಟೇ!
ನೀವೇ ಬರೆದಿರುವಂತೆ (‘ಇತ್ತೀಚೆಗೆ ಫ್ರಾನ್ಸ್, ಸ್ಪೇನ್, ಬ್ರಿಟನ್, ಜರ್ಮನಿ ಹಾಗೂ ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆ ಏನು ಹೇಳುತ್ತದೆ ಗೊತ್ತೆ? ಸರಿಸುಮಾರು 82 ಪರ್ಸೆಂಟ್ ಫ್ರಾನ್ಸ್ ಜನರು ಬುರ್ಖಾವನ್ನು ನಿಷೇಧಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಷಯದಲ್ಲಿ ಫ್ರಾನ್ಸ್‌ನ ನಂತರದ ಸ್ಥಾನದಲ್ಲಿರುವ ಜರ್ಮನಿಯ ಶೇ 71ರಷ್ಟು ಜನರು ಬುರ್ಖಾಕ್ಕೆ ನೋ ಎಂದಿದ್ದಾರೆ. ಬ್ರಿಟನ್‌ನ ಶೇ. 62ರಷ್ಟು ಹಾಗೂ ಸ್ಪೇನ್‌ನ ಶೇ. 59ರಷ್ಟು ಜನರು ಬುರ್ಖಾ ಮೇಲೆ ಬ್ಯಾನ್ ಹಾಕಬೇಕೆಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲ, ಡೆನ್ಮಾರ್ಕ್ ದೇಶ ಮುಸ್ಲಿಮರನ್ನೇ ದೃಷ್ಟಿಯಲ್ಲಿಟ್ಟುಕೊಂಡು, ವಲಸೆ ಬರುವವರ ಮದುವೆ ವಯಸ್ಸನ್ನು 24ಕ್ಕೆ ನಿಗದಿ ಪಡಿಸಿದೆ. ಹಾಲೆಂಡ್ ತನ್ನ ನೆಲಕ್ಕೆ ವಲಸೆ ಬರುವವರಿಗಾಗಿ ಭಾಷೆ ಹಾಗೂ ಸಾಂಸ್ಕೃತಿಕ ಪರೀಕ್ಷೆಯನ್ನಿಟ್ಟಿದೆ. ಮಿನಾರ್‌ಗಳ (ಮುಸ್ಲಿಮರು ನಿರ್ಮಿಸುವ ಗೋಪುರ) ನಿರ್ಮಾಣದ ಮೇಲೆ ಸ್ವಿಜರ್‌ಲ್ಯಾಂಡ್ ನಿಷೇಧ ಹಾಕಿದೆ. ಬುರ್ಖಾ ನಿಷೇಧಿಸಿ ಬೆಲ್ಜಿಯಂ ಸಂಸತ್ ವಿಧೇಯಕ ಪಾಸು ಮಾಡಿದೆ. ಪೋಲೆಂಡ್ ಮತ್ತು ಆಸ್ಟ್ರಿಯಾದಲ್ಲಿ “Down with Jehad” ಎಂಬ ಭಿತ್ತಿಪತ್ರಗಳನ್ನು ಹಿಡಿದು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆದಿದೆ. ಏಕೆ?‘) ಈ ಮೇಲ್ಕಂಡ ದೇಶದವರಾರೂ ಮುಸಲ್ಮಾನರನ್ನು ಬಾಂಬು ಸಿಡಿಸಿ ಕೊಂದಿಲ್ಲ, ಬೆಂಕಿ ಹಚ್ಚಿ ಸಾಯಿಸಿಲ್ಲ, ಪೋಲೀಸರ ಎದುರೇ ಸಹಸ್ರಾರು ಮುಸಲ್ಮಾನರನ್ನು ಕೊಚ್ಚಿ ಕೊಂದಿಲ್ಲ (ಪೋಸ್ಟ್ ಗೋಧ್ರಾ ನೆನಪಿಸಿಕೊಳ್ಳಿ), ಬದಲು ಸಂವಿಧಾನಿಕವಾಗಿ, ಕಾನೂನುಬದ್ಧವಾಗಿ ನಡೆದುಕೊಂಡಿದ್ದಾರೆ.
ಒಂದು ಕಣ್ಣು ತೆಗೆದರೆ, ಎರಡು ಕಣ್ಣು ಕಿತ್ತು ಹಾಕುವ ಮಾತಾಡುತ್ತೀರಿ, ಎರಡು ಕಣ್ಣು ಕಳೆದುಕೊಂಡವ ನಮ್ಮ ಎರಡೂ ಕಾಲು ಕತ್ತರಿಸುತ್ತಾನೆ, ನಾವು ಅವರ ಎರಡು ಕೈ ಕತ್ತರಿಸೋಣ, ನಂತರ ಅವರು ನಮ್ಮ ಹೊಟ್ತೆಗೆ ಚೂರಿ ಹಾಕಲಿ, ನಾವು ಅವರ ಹೃದಯ ಬಗೆಯೋಣ. ಸಹಸ್ರಾರು ಅಮಾಯಕರ ಚಂಡ ಮುಂಡಗಳು ಧರ್ಮದ ಹೆಸರಿನಲ್ಲಿ ರಸ್ತೆ ತುಂಬೆಲ್ಲ ಚೆಲ್ಲಲಿ. ಶಾಲೆಗೆ ಹೋದ ಮಕ್ಕಳು ಮನೆಗೆ ಹಿಂತಿರುಗಿ ಬರದಿರಲಿ. ಕೆಲಸಕ್ಕೆ ಹೋದ ಅಪ್ಪ-ಅಮ್ಮನಿಗಾಗಿ ಮನೆಯಲ್ಲಿ ಕಾಯುತ್ತ ಕೂರಲಿ ಮಕ್ಕಳು ಮತ್ತು ವೃದ್ಧರು. ಇಷ್ಟಕೆಲ್ಲ ಟೆರರಿಸಂ ಅನ್ನಲಿಕ್ಕಾಗುತ್ತದೆಯೇ? ಅದು ಬರೀ ರಿಯಾಕ್ಷನ್ ಅಷ್ಟೇ!!