Tuesday, October 30, 2012

ಗುರುಪ್ರಸಾದ್ ಕಾಗಿನೆಲೆಯವರ ’ಗುಣ’ದ ಬಗ್ಗೆ...

ಗುಣ ಎಂದರೆ ಸ್ವಭಾವ. ರೋಗದಿಂದ ವಾಸಿ ಎಂತಲೂ ಆಗುತ್ತದೆ. ಯೋಗ್ಯತೆಯಂತಲೂ ಅರ್ಥವಿದೆ. ಈ ಮೂರೂ ಅರ್ಥಗಳು ಈ ಕಾದಂಬರಿಯ ಆಶಯಕ್ಕೆ ಪೂರಕವಾಗಿವೆ.

ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ, ಎಂಬಿಬಿಎಸ್ ಮತ್ತು ಪಿಜಿ ಮಾಡಿ, ದುಡ್ಡು ಮಾಡಲು, ಬದುಕು ಕಟ್ಟಲು ವೈದ್ಯನೊಬ್ಬ ಇನ್ನೊಬ್ಬ ವೈದ್ಯೆಯನ್ನು ಮದುವೆಯಾಗಿ ಅಮೇರಿಕದಲ್ಲಿ ಸುಮಾರು ಇಪ್ಪತ್ತು ವರ್ಷ ಬದುಕಿದ ಕತೆ ಇದು.

ಪಿಜಿ ಮಾಡುವಾಗಲೇ ಆಗುವ ಅರೇಂಜ್ಡ್ ಮದುವೆ  (ರೋಮ್ಯಾನ್ಸ್ ಇಲ್ಲವೇ ಇಲ್ಲವೆನ್ನುವಷ್ಟು ವಿವರಗಳು ಕಡಿಮೆ), ಅತ್ತೆ-ಸೊಸೆಯರ ಜಟಾಪಟಿ, ಅಮೇರಿಕಕ್ಕೆ ಹೋಗಲು ಮಾಡುವ ಕೆಲಸಗಳು, ಅಮೇರಿಕದಲ್ಲಿ ರೆಸಿಡೆನ್ಸಿ ಮಾಡುವಾಗಿನ ಘಟನೆಗಳು, ರೆಸಿಡೆನ್ಸಿ ಮುಗಿಸಿ ಕೆಲಸಕ್ಕೆ ಸೇರುವುದು, ಮಗಳು ಹುಟ್ಟುವುದು, ಅವಳ ಬೆಳವಣಿಗೆ,  ಕೆಲಸದ ಖುಷಿಗಳು-ಒತ್ತಡಗಳು.

ಅಮೇರಿಕದಲ್ಲೇ ದಶಕಗಳು ಕಳೆಯುತ್ತ ಬಂದಾಗ ಖಾಲಿ ಖಾಲಿ ಎನಿಸುವ ಬದುಕು, ಹೊಸತನವಿಲ್ಲದ ನಿಂತ ನೀರಾದ ದಾಂಪತ್ಯ, ತಾಯಿಯ ಸಾವು, ತಂದೆಯ ಕಾಯಿಲೆ, ಹದ್ದು ಮೀರುತ್ತಿರುವ ಹರೆಯಕ್ಕೆ ಕಾಲಿಟ್ಟ ಹುಡುಗಿ, ಕುಡಿತದ ಮೊರೆ.

ತಾನೊಬ್ಬ ಕುಡುಕನಾಗುತ್ತಿದ್ದೇನೆ, ತನ್ನ ಧಿಡೀರ್ ಕೋಪದ ಬುದ್ಧಿ ತನ್ನ ಹತೋಟಿಯನ್ನೂ ಮೀರುತ್ತಿದೆ ಎಂದು ಅರಿವಾಗುವುದರಲ್ಲಿ ಹೆಂಡತಿ ಮಕ್ಕಳು, 'ಸ್ವಲ್ಪ ದಿನದ ಮಟ್ಟಿಗಾದರೂ ನೀನು ನಮ್ಮಿಂದ ದೂರವಿದ್ದರೆ ಒಳ್ಳೆಯದು' ಎಂದು ಮನೆಯಿಂದ ಸಾಗಹಾಕುತ್ತಾರೆ. ಅಸ್ಪತ್ರೆಯ ನಿಯಮದ ಪ್ರಕಾರ ತಾನು ಇರುವ ಊರನ್ನು ಬಿಟ್ಟು ಒಂದು ವರ್ಷಕ್ಕೆ ಬೇರೆ ಊರಿಗೆ ಹೋಗುವ 'ಅವಕಾಶ' ಬರುತ್ತದೆ.

ಕುಡಿಯುವುದನ್ನು ಬಿಡುತ್ತಾನೆ. ಕೋಪ ಶಮನಕ್ಕೆ ಹಾದಿಹುಡುಕಲು ಆರಂಭಿಸುತ್ತಾನೆ. ಮಗಳ ಗ್ರಾಜ್ಯುವೇಷನ್ ಡೇ ಗೆ ಮತ್ತೆ ವಾಪಸ್ಸು ಬರುತ್ತಾನೆ. ಬೆಳೆದು ನಿಂತ ಮಗಳ, ಅವಳ ಬಾಯ್‍ಫ್ರೆಂಡಿನ, ತನ್ನ ಮಡದಿಯ, ತನ್ನ ಗೇ ಗೆಳೆಯನ ಜೊತೆ ಮಾತಾಡುತ್ತ ಮತ್ತೊಂದು ಬದುಕಿಗೆ ಪ್ರಯತ್ನ ಮಾಡುತ್ತಾನೆ.

ಕನ್ನಡಕ್ಕೇ ಬಹುಷಃ ಮೊದಲ ಬಾರಿಗೆ ಗೇಗಳ ಬಗ್ಗೆ ಬಂದಿರುವ ಕಾದಂಬರಿ ಇದೇ ಇರಬೇಕು. ಈ ಕಾದಂಬರಿಯಲ್ಲಿ ಎರಡು ಗೇ ಪಾತ್ರಗಳು, ಒಬ್ಬ ಅಮೇರಿಕನ್, ಇನ್ನೊಬ್ಬ ಕನ್ನಡಿಗ ಡಾಕ್ಟರು. ನನಗೆ ಗೊತ್ತಿರುವ ಮಟ್ಟಿಗೆ ಕನ್ನಡದಲ್ಲಿ ಸಲಿಂಗಿಗಳ ಬಗ್ಗೆ ಬಂದಿರುವ ಮೊದಲ ಕಾದಂಬರಿ ಇದೇ ಇರಬೇಕು. ಈ ಸಲಿಂಗಿಗಳ ಕತೆ ಮೂಲ ಕತೆಯಲ್ಲಿ ಯಾವ ಪರಿಣಾಮ ಮಾಡದಿದ್ದರೂ, ಬದುಕಿನ ಇನ್ನೊಂದು ಕೋನವನ್ನು ಪರಿಶೀಲಿಸುತ್ತದೆ.

ಇಡೀ ಕಾದಂಬರಿ ಅನಿವಾಸಿ ಕನ್ನಡಿಗ ವೈದ್ಯನೊಬ್ಬನ ಪರ್ಸನಲ್ ಡೈರಿಯ ಪುಟಗಳನ್ನು ಹೆಕ್ಕಿ ಜೋಡಿಸಿಟ್ಟಂತಿದೆ. ಸುಮಾರು ಇಪ್ಪತ್ತು ವರುಷದ ಬದುಕಿದ ಮತ್ತು ಹತ್ತಿರದಿಂದ ಕಂಡ ಅಥವಾ ಬದುಕಿದ ಬದುಕನ್ನು ಯಾವ ಮೆಲೋಡ್ರಮಾಗಳಿಲ್ಲದೇ, ಯಾವ ಆಡಂಬರಗಳಿಲ್ಲದೇ, ಯಾವ ಇಂಟೆಲೆಕ್ಚ್ಯುವಲ್ ಇಸಂಗೂ ಜೋತುಬೀಳದೆ  ಬರೆಯುವುದು ಸುಲಭದ ಕೆಲಸವಲ್ಲ. ಕಾದಂಬರಿಯಲ್ಲಿ ಎಲ್ಲಿಯೂ ಉಪದೇಶಗಳಿಲ್ಲ, ಹಿಂದೆ ತಿರುಗಿ ನೋಡಿ ಸ್ಯುಡೂ ಹಳಹಳಿಯಿಲ್ಲ, ಇದು ಹೀಗೇ ಇದ್ದರೆ ಚಂದ, ಹೀಗಿಲ್ಲದಿದ್ದರೆ ಅಸಹ್ಯ ಎನ್ನುವ ಫಿಲಾಸಾಫಿಯಿಲ್ಲ.

ಅನಿವಾಸಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಇದಕ್ಕಿಂತ ಒಳ್ಳೆ ಕನ್ನಡ ಕಾದಂಬರಿ ಇಲ್ಲ. ಅನಿವಾಸಿ ಕನ್ನಡಿಗರು, ಅದರಲ್ಲೂ ವೈದ್ಯರು ಓದಲೇ  ಬೇಕಾದ ಕಾದಂಬರಿಯಿದು.


(ಇದಕ್ಕೆ  ಪೂರಕವಾಗಿ ನನ್ನ ಇನ್ನೊಂದು ಬರಹ ಕೆಂಡಸಂಪಿಗೆಯಲ್ಲಿ: ಇದಕ್ಕೆಲ್ಲ ’ಗುಣ’ವೇ ಇಲ್ಲವೇ?)

2 comments:

 1. mitr my friend ಎನ್ನುವ ಹೆಸರಿನ ಒಂದು ಸಿನಿಮಾ 2002ರಲ್ಲಿ ಹಿಂದಿ ಭಾಷೆಯಲ್ಲಿ ಬಂದಿತ್ತು. ಬಹುಷಃ ಅದನ್ನು ನೋಡಿದ್ದರೆ ಗುರುಪ್ರಸಾದ್ ಕಾಗಿನೆಲೆಯವರು ಈ ಕಾದಂಬರಿಯನ್ನು ಬರೆಯುತ್ತಿರಲಿಲ್ಲ ಮತ್ತು ನೀವೂ ಇದನ್ನು ಓದಲೇಬೇಕಾದ ಕಾದಂಬರಿ ಎನ್ನುವ ದಡ್ಡತನ ಮಾಡುತ್ತಿರಲಿಲ್ಲ! ಗೇ ಗಳ ಬಗ್ಗೆ ಶಂಕರ ಮೊಕಾಶಿ ಪುಣೇಕರ್ ಅವರು ನಟನಾರಾಯಣಿ ಅಂತ ಒಂದು ಕಾದಂಬರಿಯನ್ನು ಎಂಭತ್ತರ ದಶಕದಲ್ಲೇ ಬರೆದಿದ್ದರು, ಹೆಗ್ಗೋಡಿನ ನೀನಾಸಂ ಅದನ್ನು ನಾಟಕ ರೂಪಾಂತರವನ್ನು ರಂಗಕ್ಕೂ ತಂದಿದೆ. ಸಲಿಂಗ ಕಾಮಿಗಳ ಬಗ್ಗೆ ಕಾರಂತರಾದಿಯಾಗಿ ಹಲವಾರು ಕಾದಂಬರಿಕಾರರು ಬರೆದಿದ್ದಾರೆಂಬುದನ್ನು ತಾವು ಮರೆತಿರೋ ಅಥವಾ ಹೊಗಳುವ ಭರದಲ್ಲಿ ಕಡೆಗಣಿಸಿದರೋ ಗೊತ್ತಿಲ್ಲ. ಕನ್ನಡದಲ್ಲಿ ಇಂಥ ಡಬ್ಬಾ ಕಾದಂಬರಿಗಳೇ ಹೆಚ್ಚುತ್ತಿರುವುದು, ಅವುಗಳಿಗೆ ಎಲ್ಲೆಂಲ್ಲಿಂದಲೋ ಪ್ರಶಸ್ತಿಗಳೂ ಸಿಗುತ್ತಿರುವುದು ಮತ್ತು ನಿಮ್ಮಂಥವರು ಅನಿವಾಸಿಗಳ ಬಗ್ಗೆ ಇದಕ್ಕಿಂತ ಒಳ್ಳೆಯ ಕಾದಂಬರಿಯೇ ಕನ್ನಡಲ್ಲಿ ಇಲ್ಲ ಎಂದು ಓದುಗರ ಕಾಲೆಳೆಯುವುದು ಕನ್ನಡದ ದುರಂತವೆನ್ನಬೇಕು. ಅನಿವಾಸಿಯೊಬ್ಬರು ಬರೆದಿದ್ದು ಎನ್ನುವುದನ್ನು ಬಿಟ್ಟರೆ ಈ ಕಾದಂಬರಿಯಲ್ಲಿ ಹೊಸತೇನೂ ಇಲ್ಲ.

  ಈ ಕಾದಂಬರಿಯನ್ನು ಅನಿವಾಸಿಯಲ್ಲದವರು ಬರೆದಿದ್ದರೂ, ಇಡೀ ಕಾದಂಬರಿಯ ಸೆಟ್ಟಿಂಗ್ ಭಾರತವೇ ಆಗಿದ್ದರೂ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ ಎನ್ನುವುದು ನಿಮಗೆ ಅರ್ಥವಾಗಬೇಕಾದರೆ ಭಾರತ ಕೂಡಾ ಇವತ್ತು ನಿಮ್ಮ ಕಲ್ಪನೆಯ ಭಾರತವಾಗಿಯೇ ಉಳಿದಿಲ್ಲ ಅದೂ ಚಲಿಸುತ್ತಿದೆ ಎನ್ನುವುದು ಗೊತ್ತಿರಬೇಕಾಗುತ್ತದೆ. ಇಲ್ಲಿಯೂ ಹದಿಹರೆಯದವರನ್ನು ನಿಭಾಯಿಸುವುದು ಅಮೆರಿಕದ ಅನಿವಾಸಿ ಭಾರತೀಯ ತಾಯ್ತಂದೆಯರಿಗಾದಷ್ಟೇ ಕಷ್ಟವಾಗುತ್ತಿದೆ ಎನ್ನುವುದರ ಅಂದಾಜು ಕೂಡ ನಿಮಗಾಗಲೀ, ಕಾದಂಬರಿಕಾರರಿಗಾಗಲೀ ಇದ್ದಂತಿಲ್ಲ.

  ReplyDelete
  Replies
  1. ಸಾತ್ವಿಕರೇ,

   ಚರ್ಚೆಗೆ ಸ್ವಾಗತ!

   ಮಿತ್ರ, ಮೈ ಫ್ರೆಂಡ್, ನೋಡಿದ್ದೀನಿ. ನಟಾರಾಯಣಿಯನ್ನೂ ಓದಿದ್ದೀನಿ. ನಾನು ಹೊಗಳುವ ಭರದಲ್ಲಿ ಅವನ್ನು ಮರಿತಿಲ್ಲ; ನಾನೇನೂ ರೆಗ್ಯುಲರ್ ಬರಹಗಾರನಲ್ಲ, ನಾನು ಬರೆದಿರುವುದು ಬೇರೆ ಧ್ವನಿಯಲ್ಲಿ ನಿಮಗೆ ಕೇಳಿಸಿರಬಹುದು, ಕ್ಷಮೆಯಿರಲಿ.

   ಎ.ಕೆ.ರಾಮಾನುಜನ್ ಅನಿವಾಸಿ ಬರಹಗಾರರಲ್ಲಿ ದೊಡ್ಡ ಹೆಸರು. ಅನಿವಾಸಿ ಅಂಕಣಕಾರರಾಗಿ ಶ್ರೀವತ್ಸ ಜೋಶಿ ಬಹಳ ಬರೆದಿದ್ದಾರೆ. ಆದರೆ ಅನಿವಾಸಿಗಳ ಬಗ್ಗೆ ಕನ್ನಡ ಕಾದಂಬರಿಗಳು ವಿರಳ, ಅನಿವಾಸಿ ಕಾದಂಬರಿಕಾರರೂ ಕಡಿಮೆ ಎನ್ನುವುದು ನನ್ನ ಅನಿಸಿಕೆ. ತಪ್ಪಿದ್ದರೆ ತಿಳಿಸಿ.

   ನೀವು ಎರಡನೇ ಪ್ಯಾರಾದಲ್ಲಿ ಬರೆದಿರುವಂತೆ ಪೂರಕವಾಗಿ ಕೆಂಡಸಂಪಿಗೆಯಲ್ಲಿ ಈ ಹಿಂದೆ ಬರೆದಿದ್ದೇನೆ: ಲಿಂಕು: http://kendasampige.com/article.php?id=5669 .

   ಬ್ಲಾಗನ್ನು ಓದಿದ್ದಕ್ಕೆ, ಓದಿ ಕಮೆಂಟು ಬರೆದಿದ್ದಕ್ಕೆ ತುಂಬ ಧನ್ಯವಾದಗಳು.

   Delete