Sunday, January 20, 2013

ನಾಕು ಬೆರಳು = ಎಂಟು ಬೆರಳು

೧೯೯೮ ನಲ್ಲಿ ಬಂದ ಸಿನೆಮಾ 'ಪ್ಯಾಚ್ ಅಡಮ್ಸ್' ನಿನ್ನೆ ನೋಡಿದೆ. ನೋಡುತ್ತಾ ನೋಡುತ್ತ 'ಮುನ್ನಾಭಾಯಿ ಎಂಬಿಬಿಸ್' ಈ ಸಿನೆಮಾದಿಂದಲೇ ಸ್ಫೂರ್ತಿ ಪಡೆದಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇರಲು ಸಾಧ್ಯವಿಲ್ಲ. ಈ ಸಿನೆಮಾ ಪ್ಯಾಚ್ ಅಡಮ್ಸ್ ಎಂಬ ಅಮೇರಿಕನ್ ಡಾಕ್ಟರನ  ಜೀವನದ ಮೇಲೆ ಆಧರಿಸಿದ್ದು (ಸಿನೆಮಾದ ಕತೆ ಮತ್ತು ಪ್ಯಾಚ್ ಅಡಮ್ಸ್ ಬಗ್ಗೆ ಓದಲು ಮೇಲಿರುವ ಎರಡು ಕೊಂಡಿಗಳನ್ನು ಒತ್ತಿ). 

Specialization ಕಾಲ ಮುಡಿದು ಈಗ ಏನಿದ್ದರೂ sub-specialization ಕಾಲ. ಇಂಥ ಕಾಲದಲ್ಲಿ ಈ ಪ್ಯಾಚ್ ಅಡಮ್ಸ್^ನಂಥ ವೈದ್ಯರುಗಳು ಹೋಲಿಸ್ಟಿಕ್ ಅಪ್ರೋಚ್^ನಲ್ಲಿ ನಂಬಿಕೆ ಇಟ್ಟುಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಸಣ್ಣ ಅಂದೋಲನ ಮಾಡುತ್ತಿದ್ದಾರೆ. ವ್ಯಕ್ತಿಯಿಂದ ರೋಗವನ್ನು ಬೇರೆಯಾಗಿಸಿ ನೋಡುವುದನ್ನು ಮಾಡರ್ನ್ ಮೆಡಿಸಿನ್ ಹೇಳಿಕೊಟ್ಟರೆ, ಪ್ಯಾಚ್ ಅಡಮ್ಸ್ ತರಹದ ವೈದ್ಯರುಗಳು ರೋಗಿಯನ್ನು ಮನುಷ್ಯನನ್ನಾಗಿ ನೋಡುವಂತೆ ಪ್ರೇರಿಸುತ್ತಾರೆ. 

ಅದೆಲ್ಲ ಇರಲಿ. 

ಈ ಸಿನೆಮದಲ್ಲಿ ಒಂದು ದೃಶ್ಯವಿದೆ. ಪ್ಯಾಚ್ ಸೈಕಿಯಾಟ್ರಿ ವಾರ್ಡಿನಲ್ಲಿ ಇರುವಾಗ ಇಲ್ಲಿರುವ ಇನ್ನೊಬ್ಬ ರೋಗಿ ನಾಕು ಬೆರಳುಗಳನ್ನು ಮೇಲಕ್ಕೆತ್ತಿ, 'ಇವು ಎಷ್ಟು?' ಎಂದು ಕೇಳುತ್ತಿರುತ್ತಾನೆ. ಎಲ್ಲರೂ, 'ನಾಕು' ಎಂದು ಉತ್ತರ ಕೊಡುತ್ತಿರುತ್ತಾರೆ. ಆ ಉತ್ತರ ಕೇಳಿದರೆ ಈ ರೋಗಿಗೆ ಇನ್ನಿಲ್ಲದ ಕೋಪ, 'ತಪ್ಪು, ತಪ್ಪು' ಎಂದು ಕಿರುಚುತ್ತ ಸಾಗುತ್ತಾನೆ. ಆ ರೋಗಿ ಪ್ಯಾಚ್^ಗೆ ಕೂಡ ಅದೇ ಪ್ರಶ್ನೆ ಕೇಳುತ್ತಾನೆ, ಪ್ಯಾಚ್ ಕೂಡ, 'ನಾಕು' ಎಂದು ಉತ್ತರ ಕೊಡುತ್ತಾನೆ. ಅದಕ್ಕೆ ಆ ರೋಗಿ ನಾಕು ಬೆರಳುಗಳನ್ನು ಮುಂದೆ ಹಿಡಿದು, ಪ್ಯಾಚ್^ಗೆ ಹೇಳುತ್ತಾನೆ, 'ಈ ಬೆರಳುಗಳ ಆಚೆ ನೋಡು' ಎನ್ನುತ್ತಾನೆ. ಪ್ಯಾಚ್ ಬೆರಳುಗಳ ಮೂಲಕ ಬೆರಳುಗಳ ಆಚೆ ನೋಡುತ್ತಾನೆ, ಬೆರಳುಗಳು ಮಬ್ಬಾಗಿ, ನಾಕು ಬೆರಳುಗಳು ಎಂಟು ಬೆರಳುಗಳ ತರಹ ಕಾಣುತ್ತವೆ. 'ಎಂಟು' ಎನ್ನುವ ಉತ್ತರ ಕೊಡುತ್ತಾನೆ ಪ್ಯಾಚ್. ಆ ಉತ್ತರದಲ್ಲಿ ತನ್ನ ಬದುಕಿನ ಅರ್ಥ ಕಂಡುಕೊಳ್ಳುತ್ತಾನೆ. ಕಣ್ಣಿಗೆ ಕಾಣುವ ವಾಸ್ತವದಲ್ಲಿ ಅದರಾಚೆಯ ವಾಸ್ತವವನ್ನು, ಕನಸನ್ನು, ಆಸೆಯನ್ನು, ಭೂತವನ್ನು ಒಟ್ಟಿಗೇ ನೋಡುತ್ತಾನೆ.  

ನಾಕು ಬೆರಳುಗಳು ಎಂಟು ಬೆರಳುಗಳ ತರಹ ನೋಡುವ ಕಣ್ಣಿದ್ದರೆ, ಬದುಕಿನ ಬಗೆಗಿನ ನಮ್ಮ ಎಲ್ಲ ದೃಷ್ಟಿಕೋನಗಳನ್ನು ಬದಲಿಸುವ ಶಕ್ತಿ ಬರುತ್ತದೆ, ಅಲ್ಲವೇ? 


ಅಮಿಶ್ ತ್ರಿಪಾಟಿ ಬರೆದ Shiva Trilogy  ನಲ್ಲಿ ಒಂದು ಪ್ರಶ್ನೆ ಬರುತ್ತದೆ, 'ಎಳೆಯ ಬಣ್ಣ ಯಾವುದು?', ಎಂದು. ಉತ್ತರ ಬಲು ಹಸಿರು'. ಆದರೆ ಈ ಉತ್ತರ ತಪ್ಪು. ಏಕೆಂದರೆ ಎಲೆ ಬೆಳಕಿನ ಏಳು ಬಣ್ಣಗಳಲ್ಲಿ ಹಸಿರನ್ನು ಬಿಟ್ಟು ಇನ್ನೆಲ್ಲ ಬಣ್ಣಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ ಎಳೆಯ ಬಣ್ಣ = ಏಳು ಬಣ್ಣ - ಹಸಿರು ಆಗಬೇಕಲ್ಲವೇ?

ಅಕಿರಾ ಕುರೋಸಾವಾನ ರಶೋಮೋನ್ ಚಿತ್ರ ಸತ್ಯ ಕೂಡ ಸಾಪೇಕ್ಷಕ ಎನ್ನುತ್ತದೆ.  

ನಾಕು ಬೆರಳು ತೋರಿಸಿ ಇವು ಎಷ್ಟು ಎಂದರೆ 'ಎಂಟು' ಎನ್ನುವುದು, ಎಲೆಯ ಬಣ್ಣ  ' ಹಸಿರು ಬಿಟ್ಟು ಏಳು ಬಣ್ಣ' ಎನ್ನುವುದು, ಬದುಕಿನ ವಾಸ್ತವ ಒಂದೇ ಅಲ್ಲ, ನಾವು ಬದುಕಿನ ವಿವಿಧ ವಾಸ್ತವಗಳಲ್ಲಿ  ಏಕಕಾಲದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ತೋರಿಸುತ್ತದೆ. ನಮಗೆ ಯಾವುದು  ಸ್ಪಷ್ಟ ಮತ್ತು ನಿಸ್ಸಂಶಯ ಅಂದುಕೊಂಡಿರುತ್ತೇವೆಯೋ ಅದಕ್ಕೆ ಕೂಡ ಹಲವಾರು ರೂಪಗಳು, ಆವೃತ್ತಿಗಳು ಇರುವ ಸಾಧ್ಯತೆ ಇರುತ್ತದೆ ಎನ್ನುವುದು ನೂರಕ್ಕೆ ತೊಂಬತೊಂಬತ್ತು ಸಲ ನಮ್ಮ ಅರಿವಿಗೆ ಬರುವುದಿಲ್ಲ.ಆ ೧% ಅರಿವನ್ನು ಪ್ಯಾಚ್ ಆಡಮ್ ಸಿನೆಮಾ ಕೊಡುತ್ತದೆ.



2 comments:

  1. ನೀವು ಹೇಳಿದ್ದು ನಿಜ. ಪ್ಯಾಚ್ ಆಡಮ್ಸ್ ಅತ್ಯುತ್ತಮ ಚಿತ್ರ. ಅದು ಮುನ್ನಾಭಾಯಿ ಗೆ ಸ್ಪೂರ್ತಿಯೂ ಹೌದು.ಹಾಗೆ ರಾಜಕುಮಾರ್ ಹಿರಾನಿಯವರ ಚಿತ್ರಗಳಲ್ಲಿ ನಾಯಕ ರಾಬಿನ್ ವಿಲಿಯಮ್ಸ್ ಚಿತ್ರಗಳ ನೆರಳು ಎದ್ದು ಕಾಣುತ್ತದೆ. ಅವರ ೩ ಇಡಿಯಟ್ಸ್ ನಲ್ಲಿ ಕೂಡ ಡೆಡ್ ಪೋಯೆಟ್ ಸೊಸೈಟಿ ಯ ನೆರಳಿದೆ.
    ಮೇಲಿನ ಬರಹದಲ್ಲಿ ಸಿನಿಮಾ ಮತ್ತು ಅದಕ್ಕೂ ಮೀರಿದ್ದನ್ನು ಹುಡುಕುವ ನಿಮ್ಮ ಪ್ರಯತ್ನಕ್ಕೆ ನಾನು ತಲೆಬಾಗುತ್ತೇನೆ.

    ReplyDelete
  2. ನಿಮ್ಮ ಲೇಖನ ತುಂಬ ಚೆನ್ನಾಗಿದೆ, ಇಷ್ಟವಾಯಿತು.

    ReplyDelete