Sunday, October 01, 2006

Adiga's Flute Poem

ಅಡಿಗರ 'ಮೋಹನ ಮುರಲಿ' - ಒಂದು ರಸಾನುಭವ:

Gopalakrishna Adiga is one of the most influential modern (ನವ್ಯ) Kannada poets. His style was typical of ನವೋದಯ before he took an U-turn from 'ನಡೆದು ಬಂದ ದಾರಿ' onwards, largely being inspired by poetry of T.S.Eliot and Y.B.Yeats. Here, I am trying to analyse his famous 'ಮೋಹನ ಮುರಲಿ'.

೧೯೪೮ ರಲ್ಲಿ ಪ್ರಕಟವಾದ 'ಕಟ್ಟುವೆವು ನಾವು' ಕವನಸಂಕಲನದ ಕವಿತೆ ಇಂದಿಗೂ ಇಷ್ಟೊಂದು ಜನಪ್ರೀಯವಾಗಿರಲು ಕಾರಣ ಮೈಸೂರು ಅನಂತಸ್ವಾಮಿ. ಬಹುಷಃ ಅನಂತಸ್ವಾಮಿ ಅದಕ್ಕೆ ಸಂಗೀತ ಸಂಯೋಜಿಸಿರದಿದ್ದರೆ, ಜನಸಾಮಾನ್ಯರು ಈ ಪದ್ಯದಿಂದ ವಂಚಿತರಾಗುತ್ತಿದ್ದರೋ ಏನೋ? (ಈ ಪದ್ಯವನ್ನು ಕನ್ನಡ ಸಿನೆಮಾ 'ಅಮೇರಿಕಾ, ಅಮೇರಿಕಾ'ದಲ್ಲಿ 'आपकी नजरॊ ने समझा' ಧಾಟಿಯಲ್ಲಿ ಹಾಡಿಸಿ, ಚಿತ್ರಕ್ಕೂ ಹಾಡಿಗೂ ಸಾಂಬಂಧವಿಲ್ಲದಂತೆ ನಾಗತಿಹಳ್ಲಿ ಚಂದ್ರಶೇಖರ್ ಕವನದ ಅತ್ಯಾಚಾರ ಮಾಡಿದ್ದಾರೆ, ಆ ಮಾತು ಬೇರೆ, ಬಿಡಿ). ಈ ಪದ್ಯ ನನ್ನ ಅಚ್ಚುಮೆಚ್ಚಿನ ಪದ್ಯಗಳಲ್ಲಿ ಒಂದು. ಈ ಕವನದ ಆಶಯವನ್ನು, ಧ್ವನಿಯನ್ನು ಚಿಂತಿಸುವುದೇ ಈ ಲೇಖನದ ಉದ್ದೇಶ.

ಕವಿತೆಯ ಭಾಷೆ ಸರಳವಾಗಿದೆ ಮತ್ತು ನವೋದಯ ಕಾಲದ ಕವಿತೆಯ ಆಶಯದಲ್ಲೇ ಇದೆ. ೧೪ ಸಾಲುಗಳ ಪುಟ್ಟ ಕವನವಿದು (ಸಾನೆಟ್ ಅನುಕರಣೆಯಾಗಿರಬಹುದೇ?). ಜೋಡಿ ಸಾಲುಗಳಲ್ಲಿ ಸಾಗುವ ಅಂತ್ಯ ಪ್ರಾಸದ ಪದ್ಯ ಕೊನೆಯ ಎರಡು ಸಾಲುಗಳು ಮೊದಲಿನೆರೆಡು ಸಾಲುಗಳ ನಕಲಿನಂತಿದೆ. ಮೊದಲು ಕವನವನ್ನು ಓದೋಣ:

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದಿ ರಿಂಗಣ

ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ
ಇಷ್ಟೇ ಸಾಕೆಂದಿದ್ದೆಯಲ್ಲೋ, ಇಂದು ಏನಿದು ಬೇಸರ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ?! ಯಾವ ದಿವ್ಯದ ಯಾಚನೆ..?


ವಿವಶವಾಯಿತು ಪ್ರಾಣ, ಹಾ! ಪರವಶವು ನನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
------------------------------------------------------------------------------------------------
೧:

'ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು? '

ಕವಿತ ಪ್ರಶ್ನೆಗಳಿಂದ ಶುರುವಾಗುತ್ತದೆ ಎಂಬುದನ್ನು ಗಮನಿಸಿದರೆ, ಇದೊಂದು atypical ನವೋದಯ ಕವಿತೆ ಎಂಬುವುದರಲ್ಲಿ ಸಂಶಯವೇ ಇಲ್ಲ. 'ಮೋಹನ ಮುರಲಿ'ಯ ಪ್ರತಿಮೆ ಕನ್ನಡಕಾವ್ಯ ಲೋಕಕ್ಕೆ ಹೊಸತೇನಲ್ಲ, ಅದರಲ್ಲೂ ಪು.ತಿ.ನ ರ ಕವಿತೆಗಳನ್ನು ಓದಿದವರಿಗೆ ಕೃಷ್ಣ ಮತ್ತು ಆತನ ಕೊಳಲಿನ ಬಗ್ಗೆ ಏನೂ ಹೇಳಬೇಕಿಲ್ಲ. ಕವಿತೆ ನಾಯಕ ಸ್ವಗತದಲ್ಲಿ ತನಗೆ ತಾನೆ 2nd person ನಲ್ಲಿ ಮಾತಾಡಿಕೊಂಡಂತಿದೆ. ಕಾವ್ಯದ ನಾಯಕ ಯುವಕ (ಆತ ಯಾವುದರಲ್ಲಿ ನಿರತನಾಗಿದ್ದ ಎಂಬುವುದನ್ನು ಕವಿತೆ ಮುಂದೆ ಹೇಳುತ್ತದೆ), ಆತನಿಗೆ ಕೊಳಲಿನ ಧ್ವನಿ ಕೇಳುತ್ತಿದೆ, ಅದು ಮೋಹನವಾಗಿದೆ (ಅಥವಾ ಮೋಹನದ್ದಾಗಿದೆ) ಎಂದು ನಾಯಕನಿಗೆ ಗೊತ್ತು, ಅದು ದೂರತೀರದಿಂದ ಬರುತ್ತಿದೆ ಎಂದೂ ಗೊತ್ತು, ಅದು ಬೃಂದಾವನದ ಸೆಳೆತವೆಂದೂ ಗೊತ್ತು. ಆದರೂ ನಾಯಕನಲ್ಲಿ ಈ ಪ್ರಶ್ನೆಗಳೆದ್ದಿವೆ.

ಮೋಹನ, ಮುರಲಿ, ಬೃಂದಾವನ - ಈ ಮೂರೂ ಪ್ರತಿಮೆಗಳು ಭಾರತೀಯ ತತ್ವಜ್ನ್ಯಾನವನ್ನು (to be politically correct - Indian Vedic philosophical quest) ನೇರವಾಗಿ ಸೂಚಿಸುತ್ತವೆ. 'ಮೋಹನ', ಮೋಹಕವಾದ ಕೊಳಳಿನ ನಾದ ಅಥವಾ ಕೃಷ್ಣ ಅಥವಾ ಎರಡೂ ಅರ್ಥವನ್ನು ಸೂಚಿಸಬಹುದು. ಮುರಲಿ (ಕೊಳಲು), ಕೃಷ್ಣನ (in broader sense - ಭಾರತದ ತತ್ವಜ್ನ್ಯಾನದ) ಉಪದೇಶದ ಸಂಕೇತ. ಬೃಂದಾವನ - ಕೃಷ್ಣ ನೆಲೆಸಿದ ಜಾಗ, ಕವಿತೆಯಲ್ಲಿ ನಾಯಕನನ್ನು ಕಾಡುವ ಕರ್ಮಭೂಮಿಯಾಗುತ್ತದೆ.
------------------------------------------------------------------------------------------------
೨:

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದಿ ರಿಂಗಣ

ಈ ಎರೆಡು ಸಾಲುಗಳಲ್ಲಿ ನಾಯಕನ ಮನಸ್ಸು- ದೇಹಗಳ ಕ್ರಿಯೆಯನ್ನು ಕವಿ ವರ್ಣಿಸುತ್ತಾರೆ. ಈ ಎರೆಡು ಸಾಲುಗಳು ಅಡಿಗರ ನವೋದಯ ಕಾಲದ ಕವನಗಳ ಸುಂದರ ಸಾಲುಗಳು; ಈ ಸಾಲುಗಳಲ್ಲಿ ಲಯ, ಪ್ರಾಸ, ಅರ್ಥಗಳು ಒಂದಕ್ಕೊಂದು ಎಷ್ಟು ಸುಂದರವಾಗಿ ಪೋಣಿಸಿದಂತಿವೆ! ಕ್ರಿಯಾಪದಗಳಿಲ್ಲದ ಈ ಸಾಲುಗಳಲ್ಲಿ ಬರುವ ಪದಪುಂಜಗಳು ಮನಸ್ಸಿನ canvas ಮೇಲೆ ಸುಂದರ ಚಿತ್ರವನ್ನು, in no time, ಸೃಷ್ಟಿಸುತ್ತವೆ.

ಹೂವು - ಎಂದಕೂಡಲೇ ಹೂವಿನ ನುಣುಪು ಮತ್ತು ಪರಿಮಳದ ಅನುಭವವಾಗುತ್ತದೆ; ಹಾಸಿಗೆ - ಎನ್ನುತ್ತಿರುವಂತೇ, ಹಾಸಿಗೆಯ ಮೇಲೆ ಚಿಲ್ಲಿದ ಹೂಗಳ ಚಿತ್ರ ಮೂಡಿ ಗಂಡು-ಹೆಣ್ಣಿನ ಮಿಲನಮಹೋತ್ಸವದ ಕಲ್ಪನೆ ಶುರುವಾಗುತ್ತದೆ; ಚಂದ್ರ ಚಂದನ - ಪರಿಸರವನ್ನು ಇನ್ನಷ್ಟು romantic ಮಾಡುತ್ತಾರೆ; ನಂತರದ ಪ್ರಾಸಬದ್ಧ ಪದಗಳು ಪ್ರಣಯದ ಆಟಗಳು - ಬಾಹುಬಂಧನ ಚುಂಬನ.

ದೇಹ-ಮನಸ್ಸುಗಳು ಪ್ರಣಯದಲ್ಲಿ ಉನ್ಮತ್ತವಾಗಿವೆ. ಕವಿ, ಈ ಪ್ರಣಯೋನ್ಮಾದಕ್ಕೆ ಚಕ್ಕನೇ ತೋಟದ ಪ್ರತಿಮೆಯನ್ನು ತೊಡಿಸುತ್ತಾರೆ ಮತ್ತು ಅದು ಬೇಲಿಯಿರುವ ತೋಟವೆಂದು ಹೇಳುತ್ತ, ಪ್ರಣಯಿಗಳ ಪ್ರಣಯವನ್ನು ಉತ್ಸವವೆಂದು ಕರೆಯದೇ, ರಿಂಗಣವೆಂದು ಕರೆಯುತ್ತಾರೆ, ಎಂದರೆ ಬೇಲಿ ಹಾಕಿದ ತೋಟದಲ್ಲಿ ಹಾಕುವ ಗಿರಗಿಟ್ಲೆಗೆ (ಮಾಡಿದ್ದನ್ನೇ ಮಾಡುವ) ಪ್ರಣಯವನ್ನು ಹೋಲಿಸುತ್ತಾರೆ.

ಗಮನಿಸಿ: ಮೊದಲಿನ ಸಾಲಿನ romantic ಸುಂದರ ಪ್ರಣಯದ ಚಿತ್ರ ಎರಡನೇ ಸಾಲಿಗೆ ಬರುವಷ್ಟರಲ್ಲಿ ಪ್ರಣಯ ಒಂದು ತರಹದ ಬಂಧನ ಈ ತರಹದ ಬದುಕಿನಲ್ಲಿರಬಹುದೇ ಎಂಬ ಪ್ರಶ್ನೆಯನ್ನು ಓದುಗನಲ್ಲಿ ತರುತ್ತದೆ. ಅಡಿಗರ ಕವಿತ್ವ ಈ ಎರೆಡು ಸಾಲುಗಳಲ್ಲಿ ಎಷ್ಟೊಂದು ಹೇಳುತ್ತದೆ!
------------------------------------------------------------------------------------------------
೩:

ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ
ಇಷ್ಟೇ ಸಾಕೆಂದಿದ್ದೆಯಲ್ಲೋ, ಇಂದು ಏನಿದು ಬೇಸರ?

'ಮಿದುವೆದೆ', ಎಂಬ ಶಬ್ದ ಅನಂತಸ್ವಾಮಿಗೆ ಅಶ್ಲೀಲವಾಗಿ ಕಂಡಿತೋ ಏನೋ, ಮೈಸೂರು ಅನಂತಸ್ವಾಮಿ ಈ ಸಾಲನ್ನು sensor ಮಾಡಿದ್ದಾರೆ. ಇದುವರೆಗೂ ಯಾವ ಹಾಡುಗಾರರೂ ಈ ಎರೆಡು ಸಾಲು ಹಾಡಿದ್ದು ನಾನು ಕೇಳಿಲ್ಲ.

ಹಿಂದಿನ ಸಾಲಿನ 'ಬೇಲಿ', ಈ ಸಾಲಿನಲ್ಲಿ ಇನ್ನೂ ಮುಂದುವರೆದು 'ಪಂಜರ' ವಾಗುತ್ತದೆ. ಯೌವನದಲ್ಲಿ ಪ್ರೀತಿ-ಪ್ರಣಯ-ರಾಸಲೀಲೆಗಳಿದ್ದರೆ ಸಾಕು, ಇನ್ನೇನು ಬೇಕು ಮನಸ್ಸಿಗೆ-ದೇಹಕ್ಕೆ? ಆದರೆ ಕವನದ ಯುವನಾಯಕನಿಗೆ ಎಲ್ಲೋ ಒಂದು ಕಡೆ ಬೇಸರ ಶುರುವಾಗಿದೆ; ಏಕೆಂದರೆ ಯೌವನದ ಬಯಕೆ, 'ಬೇಲಿ' ಬಿಟ್ಟು ಆಚೆ ಹೋಗಲೊಲ್ಲದು. ಪ್ರಣಯ-ಪ್ರೇಮ ಮಾಡಿದ್ದನ್ನೇ ಮಾಡುವ 'ರಿಂಗಣ'. ಯೌವನದ ಅನ್ಮತ್ತ ದೇಹ 'ಪಂಜರ'.
------------------------------------------------------------------------------------------------
೪:

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ

ನಾಯಕನ ಬೇಸರ ನಿಧಾನವಾಗಿ ಬೆಳೆದದ್ದು, ಚಕ್ಕನೇ ಬಂದ ಸ್ಖಲನ ವೈರಾಗ್ಯವಲ್ಲ ಎಂಬುದನ್ನು 'ಮರದೊಳಡಗಿದ ಬೆಂಕಿಯಂತೆ' ಎಂದು ಅಡಿಗರು ಹಳೆಯ ಪ್ರತಿಮೆಯನ್ನು ತಂದಿದ್ದಾರೆ. ಅಂಥ ಬೇಸರ ಹೊತ್ತಿ ಉರಿದು ಕಾಳ್ಗಿಚ್ಚಾದಾಗ ಅದು ಕಾತರವಾಗುತ್ತದೆ. ಕಾಳ್ಗಿಚ್ಚು ಏಳುವುದು ಮರಕ್ಕೆ ಮರ ತೀಡಿದಾಗ. ಅಡಗಿದ ಬೇಸರ ಕಾಳ್ಗಿಚ್ಚಿನ ಕಾತರವಾಗುವುದು 'ಏನು' ತೀಡಲು, 'ಏನು' ತಾಗಲು ಎಂಬುದನ್ನು ಮಾತ್ರ ಅಡಿಗರು ನಮ್ಮ ಊಹೆಗೆ ಬಿಡುತ್ತಾರೆ. ಬೇಕೆನಿಸಿದ್ದೆಲ್ಲ ಬಳಿಯಲ್ಲಿರುವಾಗ ಒಮ್ಮೆಲೇ ಏಕೆ ಬೇಸರ ಮೂಡುತ್ತದೆ; ಆ ಬೇಸರ ಇನ್ಯಾವುದೋ ಕಾತರಕ್ಕೆ ಯಾವಾಗ ಏಕೆ ತಿರುಗುತ್ತದೆ ಎಂದು ಅರ್ಥವಾದವರು ಯಾರಾದರೂ ಇದ್ದಾರೆಯೇ?
-----------------------------------------------------------------------------------------------
೫:

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?

ಮೊದಲಿನ ಸಾಲಿನಲ್ಲಿ ಬರುವ 'ತೀರ', ಹತ್ತಿರದ ನದಿಯ ಆಚೆ ದಡವಲ್ಲ, ' ಸಪ್ತಸಾಗರದಾಚೆ'ಗಿದೆಯೆನ್ನುವುದುನ್ನು ಕವಿ ಇಲ್ಲಿ ಹೇಳುತ್ತಾರೆ. ಆ ತೀರವೇನೂ ಶಾಂತ ತೀರವಲ್ಲ, ಅದರಾಳದಲ್ಲಿ 'ಸುಪ್ತಸಾಗರ' ನಾಯಕನಿಗಾಗಿ ಕಾಯುತ್ತಿದೆ ಎನ್ನುತ್ತಾರೆ. ನಾಯಕನಿಗೆ ಪಯಣಿಸಬೇಕಾದ ದೂರ ಗೊತ್ತಿದೆಯೋ ಇಲ್ಲವೋ? ಏಳು ಸಮುದ್ರದಾಚೆ ಪಯಣಿಸಿ ರಾಜಕುಮಾರಿಯನ್ನು ಗೆಲ್ಲುವ ಮಕ್ಕಳ ಕತೆ ಇಲ್ಲಿ ಹೊಸ ಪ್ರತಿಮೆಯಂತೆ ಮೂಡಿಬಂದಿದೆ. ಅಷ್ಟೇ ಅಲ್ಲ ಆ ಸುಪ್ತಸಾಗರದ ಅಲೆಗಳ ಮರ್ಮರ ನಾಯಕನಿಗೆ ತಾಕಿತೇ? ಎಂದು ಕವಿ ಪ್ರಶ್ನಿಸುತ್ತಾರೆ. ಇಲ್ಲಿರುವ ಪ್ರತಿಮೆಗಳ ಎಷ್ಟು ಅರ್ಥಪೂರ್ಣವಾಗಿವೆ ಎಂದು ನೋಡಿ: ನಾಯಕನಿಗಾಗಿ ಕಾದಿರುವ ಸಾಗರ ' ಸುಪ್ತ'; ಆ 'ಸುಪ್ತ'ಸಾಗರದ ಅಲೆಗಳು ಇನ್ನೂ 'ಮೊಳೆತಿಲ್ಲ'; ಆ ಮೊಳೆಯದೆಲೆಗಳು ಸಮುದ್ರದ್ದಾಗಿದ್ದರೂ ಭೋರ್ಗೆರೆತಗಳಿಲ್ಲ, ಆದರೆ ಮರ್ಮರಗಳಿವೆ, ಆ ಮರ್ಮರಗಳೋ ' ಮೂಕ'ವಾಗಿವೆ; ಅಂಥ 'ಮೂಕ' ಮರ್ಮರಗಳೊ ನಾಯಕನಿರುವಲ್ಲಿಗೂ ಬಂದು ತಲುಪಿದವೇ? ತಲುಪದಿದ್ದರೆ 'ಇದ್ದಕಿದ್ದೊಲೆ' ನಾಯಕ 'ದೂರ ತೀರಕ್ಕೇಕೆ' ಹಂಬಲಿಸುತ್ತಿದ್ದ? ಈ ಎರೆಡು ಸಾಲುಗಳು ನನಗೆ ತುಂಬ ಇಷ್ಟ, ನಿಮಗೆ?
------------------------------------------------------------------------------------------------


೬:
ವಿವಶವಾಯಿತು ಪ್ರಾಣ, ಹಾ! ಪರವಶವು ನನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?

ಇಂಥ ಬಿರುಗಾಳಿಯಲ್ಲಿ ಸಿಲುಕಿದ ನಾಯಕನ ಮನಸು (ಪ್ರಾಣ, ಚೇತನ) ಒದ್ದಾಡುತ್ತಿದೆ, ತುಡಿಯುತ್ತಿದೆ, ಒಳಗೊಳಗೇ ಕೇಳುತ್ತಿದೆ. ಯಾಕೆ ಬೇಕು ಬೇಕು ಎಂದು ಬಯಸಿದ ಬದುಕು ಬೇಸರವಾಗುತ್ತಿದೆ? ಯಾಕೆ ಸಪ್ತಸಾಗರದಾಚೆಯ ಸುಪ್ತಸಾಗರದ ಮೊಳೆಯದಲೆಗಳ ಮೂಕಮರ್ಮರಕ್ಕೆ ಮನಸ್ಸು ವಿವಶವಾಗುತ್ತದೆ? ಜೇವನವೆಂದರೆ ಇದೇನಾ - ಇರುವುದು ಬೇಡವಾಗುವುದು, ಇರದುದು ಬೇಕಾಗುವುದು? ಎರಡನೇ ಸಾಲು assertive ಅಲ್ಲ, ಬದಲಿಗೆ ಪ್ರಶ್ನಾರ್ಥಕವಾಗಿದೆ, ಆದ್ದರಿಂದಲೇ ಇದೊಂದು ಶ್ರೇಷ್ಟ ಕವನವಾಗಿದೆ.
------------------------------------------------------------------------------------------------
೭:

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

ಕೊನೆಯ ಎರಡು ಸಾಲುಗಳು ಮೊದಲೆರೆಡು ಸಾಲುಗಳಂತೆ ಕಂಡರೂ 'ಇದ್ದಕಿದ್ದೊಲೆ' ಮತ್ತು 'ಮಿಂಚಿನ ಕೈ' ಎಂಬ ಬದಲಾವಣೆಗಳು ಕವನದ ಅರ್ಥವನ್ನು ಹೆಚ್ಚಿಸುತ್ತದೆ.
------------------------------------------------------------------------------------------------
ಸರಳಿಸಿ ನೋಡಿದರೆ, ಪ್ರೇಮ-ಕಾಮ-ಲೈಂಗಿಕತೆಯೇ (ಒಲಿದ ಮಿದುವೆದೆ, ರಕ್ತ ಮಾಂಸ) ಜೀವನವೆಂದು ತಿಳಿದ ಯುವ ನಾಯಕ ಆಧ್ಯಾತ್ಮದತ್ತ (ಮೋಹನ, ಮುರಲಿ, ಬೃಂದಾವನ) ತಿರುಗುವ ಪ್ರಕ್ರಿಯೆ ಈ ಕವಿತೆಯ ಆಶಯ ಎನ್ನಬಹುದು ಮತ್ತು ಈ ಆಶಯ ಕನ್ನಡಕ್ಕೆ, ಭಾರತೀಯ ತತ್ವಶಾಸ್ತ್ರಕ್ಕೆ ತುಂಬ ಹಳೆಯದೇ. ಆದರೆ ಕವಿತೆ ಇಷ್ಟವಾಗುವುದು ರಚನೆಯಲ್ಲಿ (ಸಪ್ತಸಾಗರ, ಸುಪ್ತಸಾಗರ, ಮೊಳೆಯದಲೆಗಳು, ಮೂಕಮರ್ಮರ) ಮತ್ತು ಅದು ಕೇಳುವ universal ಪ್ರಶ್ನೆಗಳಲ್ಲಿ, 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?'. ಪ್ರತಿ ಸಲ ಓದಿದಾಗಲೂ ಅದು ಪ್ರಶ್ನೆ ಕೇಳಿ ನಮ್ಮನ್ನು ಚಿಂತಿಸಲು ತೊಡಗಿಸುವಲ್ಲಿ.
ನಾನೀಗ ನಿಮ್ಮನ್ನು ಕೇಳಿವುದು ಇದನ್ನೇ - ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?

15 comments:

  1. ತುಂಬ ತುಂಬ ಧನ್ಯವಾದಗಳು .

    ReplyDelete
  2. ತುಂಬ ಚೆನ್ನಾಗಿದೆ.

    ReplyDelete
  3. ಕೇಶವ,

    tumba chennagidhe.. innu barali..

    ReplyDelete
  4. ತುಂಬ ಚೆನ್ನಾಗಿದೆ..ಈ ಕವನದ ಅರ್ಥವನ್ನು ಹುಡುಕುತ್ತಿದ್ದೆ..ಇನ್ನೂ ಬರಲಿ..

    ReplyDelete
  5. blog bahaLa cennAgide. A hADige oMdu koMDiyannU (link) koTTare innU cennAgiruttade.

    oLLeyadAgali

    ReplyDelete
  6. ಅದ್ಭುತವಾಗಿದೆ. ಎಲ್ಲೂ ಕೇಳದ ಸಾಲುಗಳನ್ನು ವಿವರಿಸಿ ಕವನದ ಮೂಲ ಆಶಯವನ್ನು ತಿಳಿಯುವಂತೆ ಮಾಡಿದ್ದಕ್ಕೆ ಧನ್ಯವಾದಗಳು.

    ಆದರೆ ಇದು ನಾಯಕನು ಸ್ವಗತದಲ್ಲಿ ಹೇಳಿಕೊಳ್ಳುವುದೇ?

    ಉನ್ನತ ಧ್ಯೇಯದಿಂದಾಗಿ (ಆಧ್ಯಾತ್ಮ) ತನ್ನಲ್ಲಿ ಅಸಡ್ಡೆ ತೋರುತ್ತಿರುವ ನಾಯಕನ ಬಗ್ಗೆ ಯೋಚಿಸುತ್ತಾ ನಾಯಕಿಯು ಸ್ವಗತದಲ್ಲಿ ವಿರಹವೇದನೆಯಿಂದ ಹೇಳಿಕೊಳ್ಳುವುದೆಂದು ಅರ್ಥೈಸಬಹುದೇ? ಅಂದರೆ.....
    ೧. ಅದಾವ ಸೊಬಗು ನೋಡಿ ನೀನು ಆಕರ್ಷಿತನಾದೆ?
    ೨. ನಮ್ಮ ಪ್ರೇಮವು ಎಷ್ಟು ಶೃಂಗಾರಮಯವಾಗಿತ್ತು
    ೩. ಅಷ್ಟೇ ಸಾಕೆಂದಿದ್ದ ನಿನಗೆ ಇಂದು ಏತಕ್ಕೆ ಬೇಸರವಾಯಿತು?
    ೪. ನನಗಾದರೋ ಪದೇ ಪದೇ ಹಳೆಯ ನೆನಪುಗಳೇ ಬಂದು ಬೇಸರ ಮೂಡಿಸುತ್ತದೆ
    ೫. ನೀನು ನನ್ನನ್ನು ಬಿಟ್ಟು ಹೋಗುವುದಕ್ಕೆ ಯಾವುದೋ ಸಮ್ಮೋಹಕವಾದ ಶಬ್ದವನ್ನು ಅಕಸ್ಮಾತಾಗಿ ನೀನು ಕೇಳಿದ್ದೇ ಇರಬೇಕು.
    ೬. ನಾನು ನನ್ನನೇ ಕಳೆದುಕೊಂಡು ನಿನ್ನವಶವಾಗಿದ್ದೇನೆ. ನೀನಾದರೋ ನನ್ನನು ಬಿಟ್ಟು ಇನ್ನಾವುದರ ಹಿಂದೆಯೋ ಹೋಗುತ್ತಿದ್ದೀಯೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನವೇ?
    ೭. ಯಾರು ನಿನ್ನನ್ನು ನನ್ನಿಂದ ಇದ್ದಕ್ಕಿದ್ದಂತೆ ದೂರ ಮಾಡಿದರು?

    ReplyDelete
  7. ಭಾವಾರ್ಥ ತುಂಬಾ ಚೆನ್ನಾಗಿದೆ ಮನಸ್ಸು ಮುಟ್ಟಿತು

    ReplyDelete
  8. naanu tumba keluva haagu tumba mechchuva hadu idagittu adare nange idara bhavartha gothiralilla . the one line which striked me always is "iruvudellava bittu ihadedege tudivude jeevana" but i thought the song is about a person who wants to return to his motherland

    ReplyDelete
  9. ನಿಜವಾಗಿಯೂ ಈ ಕವನದ ವ್ಯಾಖ್ಯಾನ ತುಂಬಾ ಮನೋಜ್ಞವಾಗಿದೆ. ಢನ್ಯವಾದಗಳು

    ReplyDelete
  10. ಖರೇ ರೀ ಖರೇ.. ಛಲೋ ಹೇಳೀರಿ..

    "ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
    ಯಾವ ಸುಮಧುರ ಯಾತನೆ?! ಯಾವ ದಿವ್ಯದ ಯಾಚನೆ..? "

    --ಈ ಸಾಲುಗಳನ್ನ ಬಿಟ್ಬಿಟ್ರಲ್ಲಾ.. ಇವನ್ನೂ ವ್ಯಾಖ್ಯಾನ ಮಾಡ್ರೆಪಾ..
    ಆದ್ರ ಅರ್ಥವನ್ನ ಭಾರತೀಯ ತತ್ವ ಶಾಸ್ತ್ರಕ್ಕ ಸೀಮಿತಗೊಳಿಸಬ್ಯಾಡ್ರೆಲಾ..
    ಎಲ್ಲಾತರಹದ ಸೀಮೊಲ್ಲಂಘನಗಳಿಗೂ ಇದು ಅನ್ವಯ ಅಗ್ತದಲ್ವಾ...

    ReplyDelete
  11. ರನ್,
    ನೀವು ಹೇಳಿದ್ದು ಖರೆ, ಅದ್ಯಾಕ ಆ ಎರಡು ಸಾಲು ಬಿಟ್ಟು ಹೋದವೋ ಗೊತ್ತಾಗಿಲ್ಲ. ಆ ಎರಡು ಸಾಲು ಸೇರಿಸೀನಿ.
    - ಕೇಶವ

    ReplyDelete
  12. Sir i need meaning of Amrutdhare movie song " Giliyu Panjardolilla" Hadina Bavartha Bekagide dayavittu tilisi kodi pls .... This song meaning was awesome.Thank you

    ReplyDelete
  13. Thanks for the explanation. I am neither a singer or a writer or a poet to sing or write or critique, nor a painter to paint such a beautiful picture of life but an ordinary person trying to understand the hidden meaning of works of great people and to relate and understand my life. I have tried very hard to recite this song and now I am able to sing it comfortably and when I sing, the tears roll down my cheek. I can feel it but nobody can see it. Your explanation has added more meaning to the joy that I derive through this song. Now I have the challenge of learning a few more stanzas of this great song. Please permit me to use the link and the explanations furnished in your blog. Thank you once again.

    ReplyDelete
    Replies
    1. Thank you for your kind words. Please feel free to use the blog link.

      Delete
  14. Thanks, I have subscribed to your blog postings.
    With best wishes
    Yours Sincerely
    suriShiva KUmar

    ReplyDelete