Sunday, June 28, 2009

ಇಂದು ಎಸ್.ಪಿ ಭೂಪ ರಾಗದ ಗುಂಗನ್ನು ಹಿಡಿಸಿದ್ದು

ಇವತ್ತು ಈ-ಟಿವಿಯಲ್ಲಿ ಒಂದು ಹುಡಿಗಿ "ನಾಗಮಂಡಲ"ದ ಸಂಗೀತಾ ಕಟ್ಟಿ ಹಾಡಿರುವ "ಈ ಹಸಿರು ಸಿರಿಯಲಿ ಮನಸು ನಲಿಯಲಿ ನವಿಲೇ" ಎಂಬ ಹಾಡು ಹಾಡಿದಳು.



ಈ ಹಾಡಿನ ನಂತರ ಎಸ್.ಪಿ ಇದು ರಾಗ್ ಭೂಪ್ (ಭೂಪಾಲಿ ಅಂತಲೂ ಕರೆಯುತ್ತಾರೆ) ಎಂದು ರಾಗದ ಚಲನವನ್ನು ಹಾಡಿ ತೋರಿಸಿದರು. ನಂತರ, ಈ ರಾಗದಲ್ಲಿ ತುಂಬ ಚಂದದ ಹಾಡುಗಳನ್ನು ಹೊಸೆದ ಭೂಪೇನ್ ಹಜಾರಿಕಾರನ್ನು ನೆನೆಸಿಕೊಂಡಿದ್ದು ತುಂಬ ಚೆನ್ನಾಗಿತ್ತು. ಭೂಪ ರಾಗ ನಸುಕಿನ ರಾಗ, ಭೂಪೇನ್ ಆಸಾಮಿನವರು, ಭಾರತದಲ್ಲಿ ಮೊಟ್ಟಮೊದಲು ನೇಸರ ಕಾಣಿಸುವ ಪ್ರದೇಶದವರು, ಅದಕ್ಕೇ ಅವರಿಗೆ ಭೂಪ ರಾಗ ತುಂಬ ಇಷ್ಟವಿರಬಹುದೇ ಎಂದು ತಮ್ಮಲ್ಲಿಯೇ ನಕ್ಕರು. "ರುಡಾಲಿ" ಚಿತ್ರದ "ದಿಲ್ ಹುಂ ಹುಂ ಕರೇ" ಹಾಡು ಕೂಡ ಇದೇ ರಾಗದ್ದು ಎಂದು ಹೇಳಿದರು.



ಭೂಪ ರಾಗ ಕೇವಲ ಐದು ಸ್ವರಗಳ ರಾಗ "ಸಾ ರೆ ಗ ಪ ಧ ಸಾ"



ರಾಗದ ಏರಿಳಿತಗಳು ತುಂಬ ಇಂಪು. ರಾಗದ ಒಂದು ರಚನೆ ಇಲ್ಲಿ ಹಾರ್ಮೋನಿಯಂನಲ್ಲಿ:



ಈ ರಾಗ ನಸುಕಿನ ರಾಗ ಎಂದು ಹೇಳಿದೆನಷ್ಟೇ. ರಾಗ್ ಭೂಪದ ಈ ಕೊಳಲನ್ನು ಕೇಳಿ, ನಿಜ ಅನ್ನಿಸದಿರದು.



ಹಿಂದಿಯಲ್ಲಿ ಈ ರಾಗದಲ್ಲಿ ತುಂಬ ಹಾಡುಗಳಿವೆ:

ಭೂಪ ರಾಗ ಹಿಂದುಸ್ಥಾನಿ ಸಂಗೀತದಲ್ಲಿ ಬಹಳಷ್ಟು ಕಡೆ ಮೊಟ್ಟಮೊದಲು ಹೇಳಿ ಕೊಡುವ ರಾಗ. ಈ ಸಿನೆಮಾ ಹಾಡನ್ನು ಹಿಂದುಸ್ಥಾನಿ ಪಾಠಮಾಡುವವರೂ ಹೇಳಿಕೊಡುತ್ತಾರೆ. ಲತಾ ಮಂಗೇಶ್ಕರ್ ಹಾಡಿದ ಈ ಹಳೆಯ ಹಾಡು ಇನ್ನೂ ಸಂಗೀತ ಕಲಿಯುವವರ ಬಾಯಲ್ಲಿ ನಲಿದಾಡುತ್ತದೆ, "ಜ್ಯೋತಿ ಕಲಶ ಛಲಕೆ"



ಹೆಣ್ಣು ನೋಡಲು ಬಂದಾಗ, ಇದೇ ರಾಗದಲ್ಲಿ ನಮ್ಮ ಮಾಮಿ "ಯೋಗಿ ಮನೆಗೆ ಬಂದ" ಎಂದು ಹಾಡಿ ನಮ್ಮ ಮಾಮಾನ ಮನೆ ಗೆದ್ದದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.



ಹಂಸಾನಂದಿಯವರು ಟ್ವಿಟರಿನ ಮೂಲಕ ಈ ಕೆಳಗಿನ ಎರಡು ಭೂಪರಾಗದ ಹಾಡುಗಳನ್ನು ಟ್ವೀಟಿಸಿದ್ದಾರೆ, ಮತ್ತು ನನ್ನ ತಪ್ಪುಗಳನ್ನು ತಿದ್ದಿದ್ದಾರೆ.

ರೇಡಿಯೋ ಕಾಲದಲ್ಲಿ "ಅಭಿಲಾಷೆ"ಯಲ್ಲಿ ಪ್ರತಿಸಲ ಬರುತ್ತಿದ್ದ ವೈದ್ಯನಾಥನ್ ಸಂಗೀತದ "ಏಳು ಸುತ್ತಿನ ಕೋಟೆ" ಚಿತ್ರದ "ಸಂತಸ ಅರಳುವ ಸಮಯ"



ಕನ್ನಡದ ಇನ್ನೊಂದು anthem ಆಗಿಹೋದ ರಾಜಕುಮಾರ ಹಾಡಿದ "ಜೇನಿನ ಹೊಳೆಯೋ" ಕೂಡ ಭೂಪರಾಗ.



(ತಪ್ಪಿದ್ದಲ್ಲಿ ಸಂಗೀತ ಗೊತ್ತಿದ್ದವರು ತಿದ್ದಬೇಕು)
(ವಂದನೆಗಳು: ಯುಟ್ಯೂಬಿನಲ್ಲಿ ಈ ಸುಂದರ ಹಾಡುಗಳನ್ನು ಹಾಕಿದ ಎಲ್ಲರಿಗೂ)

Share/Save/Bookmark

Monday, June 08, 2009

ಜಗಜೀತ್ ಸಿಂಗ್, ರಾಜಕುಮಾರ ಮತ್ತು ರಾಗ್ ಲಲಿತ್

ಮನೆಯಲ್ಲಿ ಮನೆಯೊಡತಿ ಇಲ್ಲದ ಹೊತ್ತು, ಮಾಡಲು ಕೆಲಸವಿಲ್ಲ. ರಾಜಕುಮಾರನ "ಕಣ್ಣೀರಧಾರೆ ಇದೇಕೇ" ಎಂದು ನನ್ನ ಕೆಟ್ಟ ಧ್ವನಿಯಲ್ಲಿ ಹಾಡುತ್ತ ಕೂತಿದ್ದೆ. ಅದು ರಾಗ್ ಲಲಿತ್ ಅಂತ ಯಾರೋ (ಹಂಸಾನಂದಿ ಇರಬಹುದೇ?) ಹೇಳಿದ್ದು ನೆನಪಾಯಿತು. ಆಯಿತು, ಜಾಲ ಜಾಲಾಡಲು ಶುರುಮಾಡಿದೆ. ನಾನಂತೂ ಗಾರ್ದಭಗಾನಾಸುರ, ನನ್ನ ಸಂಗೀತ ಜ್ಙಾನಯೂ ಅದಕ್ಕಿಂತ ಮುಂದೆ ಇಲ್ಲ. ಹಿಂದುಸ್ತಾನೀ ಸಂಗೀತ ನನಗೆ ತುಂಬ ಇಷ್ಟ, ಆದರೆ ಅದರೆ ಅಕ್ಷರಗಳು ಗೊತ್ತಾಗುವ ಮೊದಲೇ ದೇಶಬಿಟ್ಟು ಇಲ್ಲಿ ಬಂದು ಕೂತದ್ದಾಗಿದೆ. ಸಂಸಾರಸಾಗರದಲ್ಲಿ ಮುಳುಗಿ, ಸಂಗೀತ-ಸಾಹಿತ್ಯ ಎರಡಕ್ಕೂ ಎಣ್ಣೆ-ಸೀಗೆಕಾಯಿ ಮಾಡಿ ಕೂತದ್ದಾಗಿದೆ. ಆದರೂ ಆಗಾಗ ಇಂಥಾ ತೆವಲುಗಳು ಶುರುವಾಗುತ್ತವೆ. ಈಗ ಎರಡು ದಿನದಿಂದ ಬರೀ ಒಂದೇ ತಾನ "ನಿ ರೆ ಮ ಮ ಮ ಮ, ನಿ ರೆ ಮ ಮ ಮ ಮ" (bold ಅಲ್ಲಿರೋದು ಶುದ್ಧ ನಿ, ಮತ್ತು ತೀವ್ರ ಮ).

ರಾಗ್ ಲಲಿತ್ ಕೇಳಲು ತುಂಬ ಚಂದ, ಯಾಕೆ ಅಂತ ಗೊತ್ತಿರಲಿಲ್ಲ. ಅಲ್ಲಲ್ಲಿ ಜಾಲಾಡಿಸಿ ಕೀಬೋರ್ಡಿನಲ್ಲಿ ಅಲ್ಲಲ್ಲಿ ಕುಟ್ಟಿದ ಮೇಲೆ ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ, ತಿಳಿದವರು ಮನ್ನಿಸಬೇಕು, ತಿದ್ದಬೇಕು. ಈ ರಾಗದಲ್ಲಿ ಎರಡು "ಮ"ಗಳು ಆರೋಹ ಅವರೋಹ ಎರಡರಲ್ಲೂ ಬರುತ್ತವೆ, ಮತ್ತು ಶುದ್ಧ "ಗ"ದಿಂದ ಕೋಮಲ "ರೆ"ಗೆ ಇಳಿಯುವ ರೀತಿಯಲ್ಲೇ ಈ ರಾಗದ ಮೋಡಿಯಿದೆ ಅನ್ನಿಸುತ್ತೆ.



ನಾನು ಚಿಕ್ಕವನಾಗಿದ್ದಾಗ, ನಮ್ಮ ಮನೆಗೆ ಅದೇ ತಾನೆ ಮನೆಗೆ ಹೊಸದಾಗಿ ಬಂದ ಕ್ಯಾಸೆಟ್ ಪ್ಲೇಯರ್ (ನಾವದಕ್ಕೆ ಟೂ-ಇನ್-ಒನ್)ನಲ್ಲಿ ರಾಜಕುಮಾರನ ಈ ಹಾಡು ಕೇಳಿದ್ದೂ ಕೇಳಿದ್ದೇ, ನನ್ನ ಕೆಟ್ಟ ಕಂಠದಲ್ಲಿ ಹಾಡಿದ್ದೂ ಹಾಡಿದ್ದೇ. ಆಗ ನಮ್ಮ ಪಕ್ಕದ ಮೆನೆ ರಸೀದ ಈ ಹಾಡು ಕೇಳುತ್ತಲೇ ಇದು ಹಿಂದಿಯಲ್ಲಿದೆ ಎಂದುಬಿಟ್ಟ. ನನಗಾಗ ಕೆಂಡಾಮಂಡಲು ಸಿಟ್ಟು ಬಂತು. ಎಂ.ರಂಗರಾವ್ ಆ ತರಹ ಟ್ಯೂನ್ ಕದಿಯುವುದಿಲ್ಲ, ರಾಜಕುಮಾರ್ ಅಂಥ ಕದ್ದ ಟ್ಯೂನ್ ಹಾಡುವುದಿಲ್ಲ ಎಂದು ವಾದ ಮಾಡಿದ್ದೆ. ಅದಾದ ಸ್ವಲ್ಪ ದಿನಗಳ ಮೇಲೆ ಅವನೇ ಎಲ್ಲಿಂದಲೋ ಜಗಜೀತನ ಈ ಹಾಡನ್ನು ನಮ್ಮ ಟೂ-ಇನ್-ಒನ್ನಲ್ಲೇ ಕೇಳಿಸಿ ದಂಗುಬಡಿಸಿಬಿಟ್ಟ. ಒಂದು, ನನ್ನ ವಾದಕ್ಕೆ ಸೋಲಾಗಿತ್ತು. ಎರಡು, ಅದುವರೆಗೂ ಎಂದೂ ಕೇಳದ ಅದ್ಭುತ ಧ್ವನಿ ಕಿವಿಯ ಮೇಲೆ ಬಿತ್ತು. ಅವತ್ತೇ ನಾನು ಜಗಜೀತನ ದೊಡ್ಡ ಫ್ಯಾನ್ ಆಗಿಬಿಟ್ಟೆ. ಆಗ ಶುರುವಾದ ನನ್ನ ಜಗಜೀತನ ಸಹವಾಸ ಇನ್ನೂ ಬಿಟ್ಟಿಲ್ಲ.




ಇಲ್ಲಿದೆ ಆ ಹಾಡಿನ ನನ್ನ ಕನ್ನಡೀಕರಣ:

ಯಾರೋ ಬಳಿ ಬಂದರು ನಸುಕು ನಸುಕು
ನನ್ನ ಕೆಣಕ ಬಂದರು ನಸುಕು ನಸುಕು

ನನ್ನ ಕತೆಯ ಅಲ್ಲಲ್ಲಿ ಬದಲಿಸಿ
ನನಗೇ ಹೇಳಿದರು ನಸುಕು ನಸುಕು

ಸಾವರಿಸು ಅಂತ ಹೇಳುವವರೇ
ತಡವರಿಸುತಿಹರು ನಸುಕು ನಸುಕು

ರಾತ್ರಿ ಪೂರ್ತಿ ಹೆಂಡದ ಮನೆಯಲ್ಲಿ
ದೇವರ ನೆನಪಾಯಿತು ನಸುಕು ನಸುಕು

Sunday, June 07, 2009

ಭಾರತ ಬಾಂಗ್ಲಾದೇಶ್ ೨೦-೨೦

ಜೂನ್ ಆರರಂದು ನಾನು ನಾಟಿಂಗ್‍ಹ್ಯಾಮಿನ ಟ್ರೆಂಟ್-ಬ್ರಿಡ್ಜಿನಲ್ಲಿ ನಡೆದ ಮೊದಲ ಸುತ್ತಿನ ಟಿ೨೦ ಆಟವನ್ನು ನೋಡಲು ಹೋಗಿದ್ದೆ. ನನ್ನ ಆಂಡ್ರಾಯ್ಡ್ ಫೋನ್ ತನ್ನ ಬ್ಯಾಟರಿ ಕಳೆದುಕೊಂಡು ಸತ್ತುಹೋಯಿತು. ನನ್ನ ಮಿತ್ರ, ರಾಮಶರಣ ತನ್ನ ಕ್ಯಾಮರಾದಲ್ಲಿ ತಗೆದ ಚಿತ್ರಗಳನ್ನು ಆತನ ಅಪ್ಪಣೆಯಿಲ್ಲದೇ ಇಲ್ಲಿ ಹಾಕುತ್ತಿದ್ದೇನೆ, ಅವನೇನೂ ಅಂದುಕೊಳ್ಳುವುದಿಲ್ಲವೆಂದು ನನಗೆ ಗೊತ್ತು!

ಆ ದಿನ ಬೆಳಿಗ್ಗೆ ಧಾರಾಕಾರ ಮಳೆ. ಆಟ ರದ್ದಾಗುವುದೇನೋ ಎಂಬ ಭಯದಿಂದಲೇ ಹೋದೆವು. ಕಾರು ನಿಲ್ಲಿಸಿ ಹೊರಟರೆ ಎಲ್ಲಿ ನೋಡಿದಲ್ಲಿ ತ್ರಿವರ್ಣ ಧ್ವಜಗಳು, ಕೂಗುತ್ತಿರುವ ಜನ, ಕುಣಿಯುತ್ತಿರುವ ಜನ. ಸುಳ್ಳು ಸುಳ್ಳು ಮೈಕು ಹಿಡಿದು, 24x7 ಎಂದೀ ಸ್ಟಾರ್ ನ್ಯೂಸ್ ಅಂತಲೂ ಲೇಬಲ್ ಅಂಟಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿರುವ ಜನ. ಕೈಯಲ್ಲಿ ಬಿಯರ್ ಹಿಡಿದುಕೊಂಡು ಬಾಂಗ್ಡಾ ಹೇಳಿಕೊಂಡು ಕುಣಿಯುತ್ತಿರುವ ಜನ. ದಿಸ್ ಈಸ್ ಟಿಪಿಕಲ ಇಂಡಿಯನ್ ಅನ್ನಿಸಿದ್ದು ಸುಳ್ಳಲ್ಲ.


ಟಿಕೆಟ್ ತೋರಿಸಿ ಒಳ ಹೋದೆವು. ಇನ್ನೂ ಮೋಡ ಕವಿದ ವಾತಾವರಣ. ಅಲ್ಲೊಬ್ಬನಿಗೆ ತನ್ನ ಹಳೆಯ ತುಂಬಾ ವರ್ಷಗಳಾದ ಮೇಲೆ ಸಿಕ್ಕಿದ ಅನಿಸುತ್ತೆ, ಜೋರಾಗಿ, "ಏ ದೋಸತಿ ಹಂ ನಹೀಂ ಛೋಡೇಂಗೇ" ಎಂದು ಗಂಟಲು ಹರಿಯುವಂತೆ ಹಾಡಿ ತಬ್ಬಿಕೊಂಡ! ನಾವು ನಮ್ಮ ಜಾಗ ಹುಡುಕಿ ಕೂತೆವು. ಅಲ್ಲಿಯೇ ಒಂದು ದೊಡ್ಡ ಗುಂಪು ಕೇಸರಿ ಬಿಳಿ ಹಸಿರು ಬಣ್ಣಗಳನ್ನು ಕೆನ್ನೆಗೆ ಹಾಕಿಕೊಳ್ಳುತ್ತಿದ್ದರು. ನಾನೂ ತೆಗೆದುಕೊಂಡು ಹಚ್ಚಿಸಿಕೊಂಡೆ (ಈ ವಯಸ್ಸಿನಲ್ಲಿ ಇದೆಂಥ ರೋಗ!)



ನಮ್ಮ ಆಟಗಾರರು ತಮ್ಮ ತಾಲೀಮು ಮುಗಿಸಿ ಬರುತ್ತಿರುವಾಗ ನನ್ನ ಗೆಳೆಯನ ಕ್ಯಾಮರಾದಲ್ಲಿ ಇವರು ಸೆರೆಸಿಕ್ಕರು.

ತಂಡದಲ್ಲಿಲ್ಲದ ಸೇವಾಗ್ (ಅವನಿಗೂ ದೋನಿಗೂ ಗಲಾಟೆಯಂತೆ?)



ಯುವರಾಜ ಸಿಂಗ ಡ್ಯಾನ್ಸ್ ಮಾಡಿಕೊಂಡು ಬಂದ.

ಇರ್ಫಾನ್ ಮತ್ತು ಇಷಾಂತ್ ಹೆಗಲ ಮೇಲೆ ಕೈಹಾಕಿಕೊಂಡು ಮಾತಾಡಿಕೊಂಡು ಬರುವ ದೃಶ್ಯ ಚನ್ನಾಗಿತ್ತು.


ಈ ಚೋಟುದ್ದ ಟಿ೨೦ ಕಪ್ಪಿಗೆ ಇಷ್ಟು ಸೆಣಸಾಟವೇ?


"ಜನ ಗಣ ಮನ" ದ ಸಮಯ. ನಾವೆಲ್ಲರೂ ಒಕ್ಕೊರಲಿನಿಂದ ಹಾಡಿದೆವು, ಜೋರಾಗಿ!

ಪ್ರತಿ ಫೋರು, ಸಿಕ್ಸರಿಗೂ ಹುಚ್ಚೆದ್ದು ಕುಣಿವ ಜನ!

ಭಾರತ ಗೆದ್ದಿತು, ಆದರೆ ಗೆಲುವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆಟ ಮುಗಿದದ್ದೇ ಎಲ್ಲ ಕಡೆ ವಿಜಯೋತ್ಸಾಹ!





ಆಟ ಮುಗಿಸಿ ಮನೆಗೆ ಬಂದಾಗ, ಖುಶಿ. ಇದು ನನ್ನ ಮೊದಲ ಟ್೨೦ ಅನುಭವ.

ಡ್ಯಾನಿ ಬಾಯ್ಲ್ ನಂತರ ಈಗ ಸೂಸನ್ ಬಾಯ್ಲ್


(ಕೆಂಡಸಂಪಿಗೆಯಲ್ಲಿ ಪ್ರಕಟಿತ)

ಹತ್ತರಲ್ಲಿ ಒಬ್ಬ ಎನ್ನುವಂತೆ ಸಣ್ಣ ನಿರ್ದೇಶಕನಾಗಿದ್ದ ಡ್ಯಾನಿ ಬಾಯ್ಲ್ ‘ಸ್ಲಂ ಡಾಗ್’ನಿಂದಾಗಿ ಪ್ರಸಿದ್ಧನಾದ. ಅವನ ಹೆಸರು ಮರೆಯುತ್ತಿರುವಾಗಲೇ ಇನ್ನೊಂದು ‘ಬಾಯ್ಲ್’ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ. ಅವಳೇ ‘ಸೂಸನ್ ಬಾಯ್ಲ್’. ‘ಬ್ರಿಟನ್ ಹ್ಯಾಸ್ ಗಾಟ್ ಅ ಟೆಲೆಂಟ್’ ಎನ್ನುವ ರಿಯಾಲಿಟಿ-ಪ್ರತಿಭೆಯ ಟಿವಿ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಪ್ರಸಿದ್ಧಳಾದವಳು ಇವಳು. ಸ್ಕಾಟ್ ಲ್ಯಾಂಡಿನ ಹಳ್ಳಿಯೊಂದರಿಂದ ಹಾಡಲು ಬಂದ ಈ ಮಧ್ಯವಯಸ್ಕ ಹೆಂಗಸು ಈ ಕಾರ್ಯಕ್ರಮದ ಅಂತಿಮ ಹಂತದವರಗೂ ಬಂದು ಸೋತಳು, ಆದರೆ ಗೆದ್ದವರಿಗಿಂತಲೂ ಹೆಚ್ಚು ಪ್ರಸಿದ್ಧಳಾದಳು. ದಿನ ನಿತ್ಯ ಕಂಪ್ಯೂಟರಿನ ಮುಂದೆ ಕುಳಿತವರು ಸೂಸನ್ ಬಾಯ್ಲಳ ಹಾಡಿನ ಯೂಟ್ಯೂಬಿನಿಂದ ತಪ್ಪಿಸಕೊಳ್ಳುವದು ಕಷ್ಟ. ಬಹುಷಃ ಯುಟ್ಯೂಬಿನಲ್ಲಿ ಅತ್ಯಂತ ಹೆಚ್ಚು ಕ್ಲಿಕ್ಕುಗಳನ್ನು ಗಿಟ್ಟಿಸಿದ ವೀಡಿಯೋಗಳಲ್ಲಿ ಸೂಸನ್ ಬಾಯ್ಲ್ ಕೂಡ ಸೇರುತ್ತಾಳೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಹುಟ್ಟುವಾಗಲೇ ಉಸಿರಾಟದ ತೊಂದರೆಯಿಂದಾಗಿ ಓದು ಬರಹ ಕಲಿಯಲು ಕಷ್ಟಪಟ್ಟ ಸೂಸನ್, ಐರಿಷ್ ಮೂಲದ ಹುಡುಗಿ. ಏಳು ಜನ ಅಣ್ಣ ಅಕ್ಕಂದಿರ ತುಂಬು ಕುಟುಂಬದಲ್ಲಿ ಕೆಳಮಧ್ಯಮ ವರ್ಗದಲ್ಲಿ ಬೆಳೆದವಳು. ಓದು ತಲೆ ಹತ್ತದೇ ಹೊರಬಿದ್ದ ಸೂಸನ್ ತನ್ನ ಜೀವಮಾನದಲ್ಲಿ ಕೆಲಸ ಮಾಡಿದ್ದು ಕೇವಲ ಆರು ತಿಂಗಳು ಮಾತ್ರ. ತಂದೆ ಹಾಡುಗಾರ, ಬಹುಷಃ ಅವನಿಂದ ಸಂಗೀತದ ರುಚಿ ಅಂಟಿಸಿಕೊಂಡ ಸೂಸನ್ ಹಾಡು ಕಲಿಯುತ್ತಾ, ಅಲ್ಲಲ್ಲಿ ಹಾಡುತ್ತ ತಾಯಿಯನ್ನು ನೋಡಿಕೊಂಡು ಇದ್ದಳು. ಕೆಲಸವಿಲ್ಲದ್ದರಿಂದ ಸರಕಾರ (ಕೌನ್ಸಿಲ್) ಕೊಡುವ ವಾರದ ಭತ್ಯೆಯ ಮೇಲೆ ಜೀವನ ಸಾಗಿಸುತ್ತ ಬೆಕ್ಕನ್ನು ಸಾಕಿಕೊಂಡು ತಾಯಿಯ ಶುಶ್ರೂಷೆ ಮಾಡಿಕೊಂಡಿದ್ದಳು. ಅವಳ ಸಂಗೀತ ಗುರು ಅವಳನ್ನು ಹುರಿದುಂಬಿಸಿ ‘ಬ್ರಿಟನ್ ಹ್ಯಾಸ್ ಗಾಟ್ ಅ ಟೆಲೆಂಟ್’ ಟಿವ್ ಕಾರ್ಯಕ್ರಮಕ್ಕೆ ಕಳಿಸಿದ್ದೇ ಕೇವಲ ಆರೆಂಟು ವಾರಗಳಲ್ಲಿ ಅವಳ ಬದುಕು ಈ ತರಹ ಬದಲಾಗುತ್ತದೆಂದು ಯಾರೂ ಊಹಿಸಿರಲಾರರು.

ಮೊದಲ ಸುತ್ತಿನಲ್ಲಿ ಮೇಕಪ್ ಇಲ್ಲದೇ ಹಾಡಲು ನಿಂತ ೪೮ ವರುಷದ ಹಳ್ಳಿ ಹೆಂಗಸನ್ನು ನೋಡಿ ಜಡ್ಜುಗಳು ವೀಕ್ಷಕರು ನಕ್ಕರು. ‘ಐ ಡ್ರೀಮ್ಡ್ ಎ ಡ್ರೀಮ್’ ಎನ್ನುವ ಪ್ರಸಿದ್ಧ ಹಾಡು ಅವಳು ಹಾಡಲು ಆರಂಭಿಸಿದ್ದೇ ಸಭಾಂಗಣದ ತುಂಬೆಲ್ಲ ಆಶ್ಚರ್ಯ ತುಂಬಿದ ಮೌನ, ಜಡ್ಜುಗಳ ಮುಖದಲ್ಲಿ ಬದಲಾವಣೆ. ಅವಳ ಹಾಡು ಯುಟ್ಯೂಬಿನಲ್ಲಿ ಲಕ್ಷಾಂತರ ಜನ ನೋಡಿ ಖುಷಿಪಟ್ಟರು, ಅತ್ತರು. ಅವಳ ಗೆಲುವು ನಿಶ್ಚಿತವೆಂದು ಕೊಂಡಿದ್ದರು, ಸೂಸನ್ ಸೇರಿ. ಆದರೆ ಸೋತಳು, ಸೋತು ಗೆದ್ದಳೇ? ಕಾಲವೇ ಹೇಳಬೇಕು.

ಇಂಗ್ಲೆಂಡಿನಲ್ಲಿ ಇದು ಹೊಸತೇನಲ್ಲ. ಇತ್ತೀಚೆಗೆ ಸತ್ತ ಜೇಡ್ ಗುಡಿ ‘ಬಿಗ್ ಬ್ರದರ್’‍ನಲ್ಲಿ ಬೆತ್ತಲೆ ಕುಣಿದು ಇದ್ದಕ್ಕಿದ್ದಂತೆ ಪ್ರಸಿದ್ಧಳಾದಳು; ತನ್ನ ಪ್ರಸಿದ್ಧಿಯನ್ನು ಲಕ್ಷಾಂತರ ಪೌಂಡುಗಳನ್ನಾಗಿ ಮಾಡಿಕೊಂಡಳು - ಟಿವಿಗಳಿಗೆ ಸಂದರ್ಶನ ಕೊಟ್ಟು, ಪತ್ರಿಕೆಗಳಿಗೆ ಫೋಟೋ ಕೊಟ್ಟು, ಆತ್ಮಕತೆ ಬರೆದು (ಒಂದಲ್ಲ ಎರಡೆರಡು), ತನ್ನ ಹೆಸರಿನ ಸುಗಂಧ ದ್ರವ್ಯ ತಂದು.

ಈಗ ಜೇಡ್ ಗುಡಿಯ ತರಹದ ಪ್ರಚಾರ ಪ್ರಸಿದ್ಧಿ ಸೂಸನ್‍ಗೆ ಸಿಗುತ್ತಿದೆ. ಯಾವ ಪತ್ರಿಕೆ ತೆರೆದರೂ, ಯಾವ ಟಿವಿ ಚನಲ್ ಹಾಕಿದರೂ ಅವಳದೇ ಮಾತು. ಅವಳು ವರ್ಜಿನ್ ಅಂತೆ, ಅವಳು ಇದುವರೆಗೂ ಯಾರಿಗೂ ಮುತ್ತು ಕೂಡ ಕೊಟ್ಟಿಲ್ಲವಂತೆ, ಈ ವಯಸ್ಸಿನಲ್ಲಿ ಅವಳಿಗೆ ತನಗಿಂತ ೧೫ ವರ್ಷ ದೊಡ್ಡವನ ಮೇಲೆ ಕ್ರಷ್ ಅಂತೆ, ಆತ ಒಪ್ಪಲಿಲ್ಲವಂತೆ, ಅವಳ ತಲೆ ಸರಿಯಿಲ್ಲವಂತೆ, ಫೈನಲ್ಲಿಗೆ ಮುಂಚೆ ಅವಳಿಗೆ ಹುಚ್ಚು ಹಿಡಿಯುವುದೊಂದೇ ಬಾಕಿ ಇತ್ತಂತೆ, ಫೈನಲ್ಲಿನಲ್ಲಿ ಸೋತ ಮೇಲಿ ಕ್ಲಿನ್ನಿಕ್ಕಿಗೆ ಹೋಗಿದ್ದಳಂತೆ.

ಇನ್ನೊಂದು ಕಡೆ ಈ ಕಾರ್ಯಕ್ರಮದ ಸೂತ್ರಧಾರ ಸೈಮನ್ ಕೊವೆಲ್ ಅವಳಿಂದ ಇನ್ನೂ ಹೆಚ್ಚು ಹಣ ಗಳಿಸುವ ಲೆಕ್ಕಾಚಾರದಲ್ಲಿದಾನೆ, ಅವಳನ್ನು ಮಿಲಿಯನೇರ್ ಮಾಡುವ ನಕ್ಷೆ ತಯಾರಿಸಿದ್ದಾನೆ. ಅವಳ ಆತ್ಮಕತೆ ಬರೆಸಲಾಗುತ್ತದೆ. ಅವಳನ್ನು ಕರೆದುಕೊಂಡು ಅಮೆರಿಕದಲ್ಲಿ ಹಾಡಿಸಲಾಗುತ್ತದೆ. ಒಂದೆರೆಡು ವರ್ಷದಲ್ಲಿ ಅವಳ ಬಳಿ ದುಡ್ಡಿನ ಮಳೆಯೇ ಸುರಿಯಲಿದೆ ಎಂದೆಲ್ಲ ಬರೆಯಲಾಗುತ್ತಿದೆ.

ಹೆಮ್ಮೆಯೇ. ಈ ಟಿವಿ-ಇಂಟರ್‍ನೆಟ್ ಬರುವ ಮೊದಲು ಹಳ್ಳಿಯೊಂದರಲ್ಲಿ ಬೆಳೆದು, ನೋಡಲು ಸುಂದರವಾಗಿಲ್ಲದ, ಯಾವ ಗಾಡ್‍ಫಾದರ್‍ಗಳಿಲ್ಲದ, ಮಧ್ಯ ವಯಸ್ಸಿನ ಹೆಂಗಸು ಇಷ್ಟೊಂದೆಲ್ಲವನ್ನು ಕೇವಲ ಆರೆಂಟು ವಾರದಲ್ಲಿ ಸಾಧಿಸಲಾಗುತ್ತಿತ್ತೇ? ಆದರೆ ಈ ಹಟಾತ್ ಪ್ರಚಾರದಿಂದಾಗಿ, ಪ್ರಸಿದ್ಧಿಯಿಂದಾಗಿ ಅವಳ ಬಾಳು ಹಾಳಾಗದಿರಲಿ, ಅವಳ ಬದುಕು ಹಸನಾಗಲಿ ಎನ್ನುವುದೊಂದೇ ನಮ್ಮೆಲ್ಲರ ಆಶಯ, ಅಲ್ಲವೇ?


adbhuta lekhana,atyadbhuta sadhane...

 ಓಳ್ಳೆಯ ಲೇಖನ ಕೇಶವ್. ರಿಯಾಲಿಟಿ ಷೋಗಳಿಂದ ಅಪರೂಪಕ್ಕೆಂಬಂತೆ ಇಂತಹ ಪ್ರತಿಭೆಗಳು ಹೊರಬರುತ್ತವೆ. ಜೇಡ್ ಗೂಡಿ ಕೆಟ್ಟ ಕಾರಣಗಳಿಗಾಗಿ ಹೆಸರು,ದುಡ್ಡು ಮಾಡಿದಳು. ಸೂಸನ್ ಗೆ ಅಂತಹ ಗಿಮಿಕ್ ಗಳ ಅಗತ್ಯವಿಲ್ಲ. ಆವಳ ಪ್ರತಿಭೆ ಅವಳನ್ನು ಮೇಲಕ್ಕೇರಿಸಲಿದೆ. ಆದರೆ ಇವರುಗಳಿಂದ ಹಣ ಮಾಡುವ ಮಾಫಿಯಾ ಇದೆಯಲ್ಲ ಇವುಗಳು ಮಾತ್ರ ನೈತಿಕತೆ ಕಳೆದುಕೊಂಡ ಅಮಾನವೀಯ ಜೀವಿಗಳು - ಚಿನ್ಮಯ....

 eeke hadida hadu tumba chennagide oduvaga olleya padya , keluvaga olleya hadu --lalitha siddabasavaiah...
 Re:  It was really true fact , Well written, Our wish for her too as I liked her voice .(Vidhi lille)