
೧೯೪೮ ರಲ್ಲಿ ಪ್ರಕಟವಾದ 'ಕಟ್ಟುವೆವು ನಾವು' ಕವನಸಂಕಲನದ ಕವಿತೆ ಇಂದಿಗೂ ಇಷ್ಟೊಂದು

ಕವಿತೆಯ ಭಾಷೆ ಸರಳವಾಗಿದೆ ಮತ್ತು ನವೋದಯ ಕಾಲದ ಕವಿತೆಯ ಆಶಯದಲ್ಲೇ ಇದೆ. ೧೪ ಸಾಲುಗಳ ಪುಟ್ಟ ಕವನವಿದು (ಸಾನೆಟ್ ಅನುಕರಣೆಯಾಗಿರಬಹುದೇ?). ಜೋಡಿ ಸಾಲುಗಳಲ್ಲಿ ಸಾಗುವ ಅಂತ್ಯ ಪ್ರಾಸದ ಪದ್ಯ ಕೊನೆಯ ಎರಡು ಸಾಲುಗಳು ಮೊದಲಿನೆರೆಡು ಸಾಲುಗಳ ನಕಲಿನಂತಿದೆ. ಮೊದಲು ಕವನವನ್ನು ಓದೋಣ:
ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ

ಬಯಕೆ ತೋಟದ ಬೇಲಿಯೊಳಗೆ ಕರಣಗಣದಿ ರಿಂಗಣ
ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ
ಇಷ್ಟೇ ಸಾಕೆಂದಿದ್ದೆಯಲ್ಲೋ, ಇಂದು ಏನಿದು ಬೇಸರ?
ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ?! ಯಾವ ದಿವ್ಯದ ಯಾಚನೆ..?
ವಿವಶವಾಯಿತು ಪ್ರಾಣ, ಹಾ! ಪರವಶವು ನನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?
ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
------------------------------------------------------------------------------------------------
೧:
'ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು? '

ಮೋಹನ, ಮುರಲಿ, ಬೃಂದಾವನ - ಈ ಮೂರೂ ಪ್ರತಿಮೆಗಳು ಭಾರತೀಯ ತತ್ವಜ್ನ್ಯಾನವನ್ನು (to be politically correct - Indian Vedic philosophical quest) ನೇರವಾಗಿ ಸೂಚಿಸುತ್ತವೆ. 'ಮೋಹನ', ಮೋಹಕವಾದ ಕೊಳಳಿನ ನಾದ ಅಥವಾ ಕೃಷ್ಣ ಅಥವಾ ಎರಡೂ ಅರ್ಥವನ್ನು ಸೂಚಿಸಬಹುದು. ಮುರಲಿ (ಕೊಳಲು), ಕೃಷ್ಣನ (in broader sense - ಭಾರತದ ತತ್ವಜ್ನ್ಯಾನದ) ಉಪದೇಶದ ಸಂಕೇತ. ಬೃಂದಾವನ - ಕೃಷ್ಣ ನೆಲೆಸಿದ ಜಾಗ, ಕವಿತೆಯಲ್ಲಿ ನಾಯಕನನ್ನು ಕಾಡುವ ಕರ್ಮಭೂಮಿಯಾಗುತ್ತದೆ.
------------------------------------------------------------------------------------------------
೨:
ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದಿ ರಿಂಗಣ
ಈ ಎರೆಡು ಸಾಲುಗಳಲ್ಲಿ ನಾಯಕನ ಮನಸ್ಸು- ದೇಹಗಳ ಕ್ರಿಯೆಯನ್ನು ಕವಿ ವರ್ಣಿಸುತ್ತಾರೆ. ಈ ಎರೆಡು ಸಾಲು

ಹೂವು - ಎಂದಕೂಡಲೇ ಹೂವಿನ ನುಣುಪು ಮತ್ತು ಪರಿಮಳದ ಅನುಭವವಾಗುತ್ತದೆ; ಹಾಸಿಗೆ - ಎನ್ನುತ್ತಿರುವಂತೇ, ಹಾಸಿಗೆಯ ಮೇಲೆ ಚಿಲ್ಲಿದ ಹೂಗಳ ಚಿತ್ರ ಮೂಡಿ ಗಂಡು-ಹೆಣ್ಣಿನ ಮಿಲನಮಹೋತ್ಸವದ ಕಲ್ಪನೆ ಶುರುವಾಗುತ್ತದೆ; ಚಂದ್ರ ಚಂದನ - ಪರಿಸರವನ್ನು ಇನ್ನಷ್ಟು romantic ಮಾಡುತ್ತಾರೆ; ನಂತರದ ಪ್ರಾಸಬದ್ಧ ಪದಗಳು ಪ್ರಣಯದ ಆಟಗಳು - ಬಾಹುಬಂಧನ ಚುಂಬನ.
ದೇಹ-ಮನಸ್ಸುಗಳು ಪ್ರಣಯದಲ್ಲಿ ಉನ್ಮತ್ತವಾಗಿವೆ. ಕವಿ, ಈ ಪ್ರಣಯೋನ್ಮಾದಕ್ಕೆ ಚಕ್ಕನೇ ತೋಟದ ಪ್ರತಿಮೆಯನ್ನು ತೊಡಿಸುತ್ತಾರೆ ಮತ್ತು ಅದು ಬೇಲಿಯಿರುವ ತೋಟವೆಂದು ಹೇಳುತ್ತ, ಪ್ರಣಯಿಗಳ ಪ್ರಣಯವನ್ನು ಉತ್ಸವವೆಂದು ಕರೆಯದೇ, ರಿಂಗಣವೆಂದು ಕರೆಯುತ್ತಾರೆ, ಎಂದರೆ ಬೇಲಿ ಹಾಕಿದ ತೋಟದಲ್ಲಿ ಹಾಕುವ ಗಿರಗಿಟ್ಲೆಗೆ (ಮಾಡಿದ್ದನ್ನೇ ಮಾಡುವ) ಪ್ರಣಯವನ್ನು ಹೋಲಿಸುತ್ತಾರೆ.
ಗಮನಿಸಿ: ಮೊದಲಿನ ಸಾಲಿನ romantic ಸುಂದರ ಪ್ರಣಯದ ಚಿತ್ರ ಎರಡನೇ ಸಾಲಿಗೆ ಬರುವಷ್ಟರಲ್ಲಿ ಪ್ರಣಯ ಒಂದು ತರಹದ ಬಂಧನ ಈ ತರಹದ ಬದುಕಿನಲ್ಲಿರಬಹುದೇ ಎಂಬ ಪ್ರಶ್ನೆಯನ್ನು ಓದುಗನಲ್ಲಿ ತರುತ್ತದೆ. ಅಡಿಗರ ಕವಿತ್ವ ಈ ಎರೆಡು ಸಾಲುಗಳಲ್ಲಿ ಎಷ್ಟೊಂದು ಹೇಳುತ್ತದೆ!
------------------------------------------------------------------------------------------------
೩:
ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ
ಇಷ್ಟೇ ಸಾಕೆಂದಿದ್ದೆಯಲ್ಲೋ, ಇಂದು ಏನಿದು ಬೇಸರ?

'ಮಿದುವೆದೆ', ಎಂಬ ಶಬ್ದ ಅನಂತಸ್ವಾಮಿಗೆ ಅಶ್ಲೀಲವಾಗಿ ಕಂಡಿತೋ ಏನೋ, ಮೈಸೂರು ಅನಂತಸ್ವಾಮಿ ಈ ಸಾಲನ್ನು sensor ಮಾಡಿದ್ದಾರೆ. ಇದುವರೆಗೂ ಯಾವ ಹಾಡುಗಾರರೂ ಈ ಎರೆಡು ಸಾಲು ಹಾಡಿದ್ದು ನಾನು ಕೇಳಿಲ್ಲ.
ಹಿಂದಿನ ಸಾಲಿನ 'ಬೇಲಿ', ಈ ಸಾಲಿನಲ್ಲಿ ಇನ್ನೂ ಮುಂದುವರೆದು 'ಪಂಜರ' ವಾಗುತ್ತದೆ. ಯೌವನದಲ್ಲಿ ಪ್ರೀತಿ-ಪ್ರಣಯ-ರಾಸಲೀಲೆಗಳಿದ್ದರೆ ಸಾಕು, ಇನ್ನೇನು ಬೇಕು ಮನಸ್ಸಿಗೆ-ದೇಹಕ್ಕೆ? ಆದರೆ ಕವನದ ಯುವನಾಯಕನಿಗೆ ಎಲ್ಲೋ ಒಂದು ಕಡೆ ಬೇಸರ ಶುರುವಾಗಿದೆ; ಏಕೆಂದರೆ ಯೌವನದ ಬಯಕೆ, 'ಬೇಲಿ' ಬಿಟ್ಟು ಆಚೆ ಹೋಗಲೊಲ್ಲದು. ಪ್ರಣಯ-ಪ್ರೇಮ ಮಾಡಿದ್ದನ್ನೇ ಮಾಡುವ 'ರಿಂಗಣ'. ಯೌವನದ ಅನ್ಮತ್ತ ದೇಹ 'ಪಂಜರ'.
------------------------------------------------------------------------------------------------
೪:
ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ

ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ
ನಾಯಕನ ಬೇಸರ ನಿಧಾನವಾಗಿ ಬೆಳೆದದ್ದು, ಚಕ್ಕನೇ ಬಂದ ಸ್ಖಲನ ವೈರಾಗ್ಯವಲ್ಲ ಎಂಬುದನ್ನು 'ಮರದೊಳಡಗಿದ ಬೆಂಕಿಯಂತೆ' ಎಂದು ಅಡಿಗರು ಹಳೆಯ ಪ್ರತಿಮೆಯನ್ನು ತಂದಿದ್ದಾರೆ. ಅಂಥ ಬೇಸರ ಹೊತ್ತಿ ಉರಿದು ಕಾಳ್ಗಿಚ್ಚಾದಾಗ ಅದು ಕಾತರವಾಗುತ್ತದೆ. ಕಾಳ್ಗಿಚ್ಚು ಏಳುವುದು ಮರಕ್ಕೆ ಮರ ತೀಡಿದಾಗ. ಅಡಗಿದ ಬೇಸರ ಕಾಳ್ಗಿಚ್ಚಿನ ಕಾತರವಾಗುವುದು 'ಏನು' ತೀಡಲು, 'ಏನು' ತಾಗಲು ಎಂಬುದನ್ನು ಮಾತ್ರ ಅಡಿಗರು ನಮ್ಮ ಊಹೆಗೆ ಬಿಡುತ್ತಾರೆ. ಬೇಕೆನಿಸಿದ್ದೆಲ್ಲ ಬಳಿಯಲ್ಲಿರುವಾಗ ಒಮ್ಮೆಲೇ ಏಕೆ ಬೇಸರ ಮೂಡುತ್ತದೆ; ಆ ಬೇಸರ ಇನ್ಯಾವುದೋ ಕಾತರಕ್ಕೆ ಯಾವಾಗ ಏಕೆ ತಿರುಗುತ್ತದೆ ಎಂದು ಅರ್ಥವಾದವರು ಯಾರಾದರೂ ಇದ್ದಾರೆಯೇ?
-----------------------------------------------------------------------------------------------
೫:
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?
ಮೊದಲಿನ ಸಾಲಿನಲ್ಲಿ ಬರುವ 'ತೀರ', ಹತ್ತಿರದ ನದಿಯ ಆಚೆ ದಡವಲ್ಲ, ' ಸಪ್ತಸಾಗರದಾಚೆ'ಗಿದೆಯೆನ್ನುವುದುನ್ನು ಕವಿ ಇಲ್ಲಿ ಹೇಳುತ್ತಾರೆ. ಆ ತೀರವೇನೂ ಶಾಂ

------------------------------------------------------------------------------------------------
೬:

ವಿವಶವಾಯಿತು ಪ್ರಾಣ, ಹಾ! ಪರವಶವು ನನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?
ಇಂಥ ಬಿರುಗಾಳಿಯಲ್ಲಿ ಸಿಲುಕಿದ ನಾಯಕನ ಮನಸು (ಪ್ರಾಣ, ಚೇತನ) ಒದ್ದಾಡುತ್ತಿದೆ, ತುಡಿಯುತ್ತಿದೆ, ಒಳಗೊಳಗೇ ಕೇಳುತ್ತಿದೆ. ಯಾಕೆ ಬೇಕು ಬೇಕು ಎಂದು ಬಯಸಿದ ಬದುಕು ಬೇಸರವಾಗುತ್ತಿದೆ? ಯಾಕೆ ಸಪ್ತಸಾಗರದಾಚೆಯ ಸುಪ್ತಸಾಗರದ ಮೊಳೆಯದಲೆಗಳ ಮೂಕಮರ್ಮರಕ್ಕೆ ಮನಸ್ಸು ವಿವಶವಾಗುತ್ತದೆ? ಜೇವನವೆಂದರೆ ಇದೇನಾ - ಇರುವುದು ಬೇಡವಾಗುವುದು, ಇರದುದು ಬೇಕಾಗುವುದು? ಎರಡನೇ ಸಾಲು assertive ಅಲ್ಲ, ಬದಲಿಗೆ ಪ್ರಶ್ನಾರ್ಥಕವಾಗಿದೆ, ಆದ್ದರಿಂದಲೇ ಇದೊಂದು ಶ್ರೇಷ್ಟ ಕವನವಾಗಿದೆ.
------------------------------------------------------------------------------------------------
೭:
ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
ಕೊನೆಯ ಎರಡು ಸಾಲುಗಳು ಮೊದಲೆರೆಡು ಸಾಲುಗಳಂತೆ ಕಂಡರೂ 'ಇದ್ದಕಿದ್ದೊಲೆ' ಮತ್ತು 'ಮಿಂಚಿನ ಕೈ' ಎಂಬ ಬದಲಾವಣೆಗಳು ಕವನದ ಅರ್ಥವನ್ನು ಹೆಚ್ಚಿಸುತ್ತದೆ.
------------------------------------------------------------------------------------------------
ಸರಳಿಸಿ ನೋಡಿದರೆ, ಪ್ರೇಮ-ಕಾಮ-ಲೈಂಗಿಕತೆಯೇ (ಒಲಿದ ಮಿದುವೆದೆ, ರಕ್ತ ಮಾಂಸ) ಜೀವನವೆಂದು ತಿಳಿದ ಯುವ ನಾಯಕ ಆಧ್ಯಾತ್ಮದತ್ತ (ಮೋಹನ, ಮುರಲಿ, ಬೃಂದಾವನ) ತಿರುಗುವ ಪ್ರಕ್ರಿಯೆ ಈ ಕವಿತೆಯ ಆಶಯ ಎನ್ನಬಹುದು ಮತ್ತು ಈ ಆಶಯ ಕನ್ನಡಕ್ಕೆ, ಭಾರತೀಯ ತತ್ವಶಾಸ್ತ್ರಕ್ಕೆ ತುಂಬ ಹಳೆಯದೇ. ಆದರೆ ಕವಿತೆ ಇಷ್ಟವಾಗುವುದು ರಚನೆಯಲ್ಲಿ (ಸಪ್ತಸಾಗರ, ಸುಪ್ತಸಾಗರ, ಮೊಳೆಯದಲೆಗಳು, ಮೂಕಮರ್ಮರ) ಮತ್ತು ಅದು ಕೇಳುವ universal ಪ್ರಶ್ನೆಗಳಲ್ಲಿ, 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?'. ಪ್ರತಿ ಸಲ ಓದಿದಾಗಲೂ ಅದು ಪ್ರಶ್ನೆ ಕೇಳಿ ನಮ್ಮನ್ನು ಚಿಂತಿಸಲು ತೊಡಗಿಸುವಲ್ಲಿ.
ನಾನೀಗ ನಿಮ್ಮನ್ನು ಕೇಳಿವುದು ಇದನ್ನೇ - ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?