Wednesday, May 12, 2010

ಆಸೆಯೇ ದುಕ್ಕದ ಮೂಲ, ನನಗೋ ಈ ಆಸೆಯೇ ಸುಖದ ಮೂಲ!

"What is more important? To satisfy one thousand desires, or to conquer just one?" – 'ಸಂಸಾರ' ಸಿನೆಮಾದಲ್ಲಿ ಈ ಮಾತಿದೆಯಂತೆ.

'ಆಸೆಯೇ ದುಃಖದ ಮೂಲ, ಅದನ್ನು ಬಿಡಬೇಕು' ಎನ್ನುವುದು ಬುದ್ಧನ ಆಸೆ! ಆಸೆಗಳನ್ನೇ ಕೊಲ್ಲುವ ಆಸೆ! ಇದಕ್ಕಿಂದ ದೊಡ್ಡ ಆಸೆ ಉಂಟೇ ಪ್ರಪಂಚದಲ್ಲಿ?

'ವಸುಧೈವ ಕುಟುಂಬಕಮ್' ಎಂದರಂತೆ ವೈದಿಕರು. ಇಡೀ ಪ್ರಪಂಚವೇ ತನ್ನ ಮನೆ ಎಂದುಕೊಳ್ಳುವ ಆಸೆ! ಎದಕ್ಕಿಂತ ದೊಡ್ಡ ಆಸೆ ಉಂಟೇ ಪ್ರಪಂಚದಲ್ಲಿ?

ನನಗೋ ದಿನವೆಲ್ಲ ಕೂತು ಜಾಲ ಜಾಲಾಡಿಸುವಾಸೆ, ಅದೇ ವೇಳೆ ಕುವೆಂಪು ತರಹ ದಪ್ಪ ದಪ್ಪ ಪುಸ್ತಕಗಳನ್ನು ಬರೆಯುವ ಆಸೆ! ಒಂದನ್ನು ನೆಂಜಿಕೊಂಡರೆ ಇನ್ನೊಂದರ ಸಾವು. ಆದರೆ ಎರಡರಲ್ಲಿ ಒಂದನ್ನು ಮಾಡಲೂ ನನಗೆ ದಿನದಲ್ಲಿ ಸಿಗುವುದು ಬರೊಬ್ಬರಿ ಒಂದು ಗಂಟೆ :(

ಪುಸ್ತಕಗಳ ಮೇಲೆ ಪುಸ್ತಕ ಬರೆದು, ಕತೆಗಳ ಮೇಲೆ ಕತೆ ಬರೆದು, ವಾರ ವಾರವೂ ಅಂಕಣ ಬರೆದು ಓದುಗರನ್ನು ಗೋಳು ಹೊಯ್ದುಕೊಳ್ಳುವ ಒಳ್ಳೊಳ್ಳೆಯ ಲೇಖಕರ ಬರಹಗಳನ್ನು ಓದುವಾಗಲೆಲ್ಲೆ ಹೊಟ್ಟೆ ಉರಿಯುತ್ತದೆ. ನನಗೂ ಅವರಂತೆ ಬರೆಯಲು ಬರಬಾರದಿದಿತ್ತೇ? ನನಗೂ ಅವರಂತೆ ಅಷ್ಟೊಂದು ವೇಳೆ ಇರಬಾರದಿತ್ತೇ? 

ಆಸೆ, ಆಸೆಯೇ ದುಃಖದ ಮೂಲ, ಅದನ್ನು ತೊರೆಯಬೇಕು ಎಂದು ಬುದ್ಧನ ಮಾತನ್ನು ಪಾಲಿಸಿದ್ದರೆ ಈಗ ಬರೆಯುವಷ್ಟನ್ನೂ ಬರೆಯುತ್ತಿರಲಿಲ್ಲ.

ಬುದ್ಧ, ನಿನ್ನ ಮಾತು ಎಕ್ಕುಟ್ಟೋಗ! ನನ್ನ ಆಸೆ ಹೀಗೇ ಇನ್ನೂ ಬೆಳೆಯಲಿ. ಚಿಕ್ಕ ಚಿಕ್ಕ ನೀಲುವಿಗೇ ನನ್ನ ಬರಹಗಳು ಮುಗಿಯದಿರಲಿ. ದಿನದಿನವೂ ಏನಾದರೊಂದು ಅರಳುತ್ತಲಿರಲಿ. ಓದುಗರು ನರಳುತ್ತಲಿರಲಿ. ನನ್ನ ಬರಹಗಳನ್ನು ಓದಿ, ನನ್ನ ದೈತ್ಯ ಶಕ್ತಿಗೆ ಬೆಕ್ಕಸ ಬೆರಗಾಗಿ, ಈಗ ನಾನು ಹೊಟ್ಟೆ ಉರಿಸಿಕೊಳ್ಳುತ್ತಿರುವಂತೆಯೇ ತುಂಬಾ ಜನ ಹೊಟ್ಟೆ ಉರಿಸಿಕೊಳ್ಳಲಿ!

Sunday, May 09, 2010

ನೀಲು ೩೫

ಕಾವ್ಯಗಳಲ್ಲಿ ಕತೆ ಕಾದಂಬರಿಗಳಲ್ಲಿ

ಹೆಣ್ಣನ್ನು ವರ್ಣಿಸುವ

ಉಪಮಾನ ರೂಪಕ ಉತ್ಪ್ರೇಕ್ಷಗಳೆಲ್ಲ

ಬ್ರಿಗೇಡ್ ರೋಡಿನ ಸಂಜೆಹೊತ್ತಲ್ಲಿ

ತುಂಬ ಸಪ್ಪೆ ಎನಿಸಿದವು