Sunday, October 31, 2010

ನೀಲು ೩೮

'ನಿದ್ದೆಯಲ್ಲಿ 'ನಾನು’ ಎಲ್ಲಿರುತ್ತೇನೆ? 

ನಿದ್ದೆಯಲ್ಲಿ 'ಕತ್ತಲು’ ಕೂಡ ಯಾಕೆ ಕಾಣುವುದಿಲ್ಲ?’

ಇನ್ನೂ ಐದು ತುಂಬದ ಮಗನ ಮುಗ್ಧ ಪ್ರಶ್ನೆಗಳು 

ನನಗೆ ಭಾರತೀಯ ತತ್ತ್ವಶಾಸ್ತ್ರದ 

ಜಟಿಲ ಒಗಟುಗಳಂತೆ ಕಂಡವು

Wednesday, October 13, 2010

ನಾಕು ಸಾಲುಗಳು

ನಾನು ಇತ್ತೀಚೆ ಏನೂ ಬರೆದೇ ಇಲ್ಲ, ಒಂದಿಷ್ಟು ನೀಲುಗಳನ್ನು ಬಿಟ್ಟು. ಜಾಸ್ತಿ ಓದುತ್ತಲೂ ಇಲ್ಲ. ಹಾಗಾಗಿ ಈ ’ನಾಕು ಸಾಲುಗಳು’. ಒಂದಕ್ಕೊಂದು ಸಂಬಂಧವಿಲ್ಲದ ನಾಕು ಸಾಲುಗಳ ನವೋದಯ ಮಾದರಿಯ ಪುಟ್ಟ ಕವನಗಳು ಇನ್ನು ಮುಂದೆ ಆಗಾಗ ಕಾಣಿಸಿಕೊಳ್ಳುತ್ತವೆ, ಬೇಸರಿಸಿಕೊಳ್ಳದೇ ಓದಿ ಟೀಕಿಸಿ! ಕೆಲವು ಗಜಲ್ ಕೇಳುತ್ತ (ಭಾವಾನುವಾದ), ಕೆಲವು ಹಾಗೇ, ಕೆಲವು ಅಕ್ಷರದ ತೀಟೆಗೆ, ಕೆಲವು ತಮಷೆಗೆ...

---------------------------------------


ಕವಿತೆ ಕೊರೆಯುತಿದೆ ಎದೆಯ
ಪದಗಳ ಹುಡುಕಾಟದಲಿ
ಕೂತಂತೆ ಮಾಡಿ ಹಾರಿ ಹೋಗಿವ ಚಿಟ್ಟೆ
ಕಾಗದದ ಮೇಲೆ ಕಾಣುವುದೇ ಇಲ್ಲ

---------------------------------------


ಹಗಲು ಆಗದೆ ಇರಲಿ ರಾತ್ರಿ ಕಳೆಯದೆ ಇರಲಿ
ಚುಕ್ಕೆ ಎಣಿಸುವ ಆಟ ಮುಗಿಯದಿರಲಿ
ಮೋಡ ಚಂದಿರನಾಟ ತಂಪು ತಿಂಗಳ ಬೇಟ
ನಿದ್ದೆ ರೆಪ್ಪೆಯ ಬಳಿಗೆ ಬಾರದಿರಲಿ

---------------------------------------


ಕೈಗಳ ಹೊಚ್ಚಲೇ ಕಾಲನು ಮುಚ್ಚಲೇ
ಎದೆಯಲಿ ಮೊಗವನು ಹೊದುಗಿಸಲೇ
ಬೆನ್ನನು ಸವರಲೇ ತಲೆಯನು ತಟ್ಟಲೇ
ಜೋ ಜೋ ಮಗುವೇ ಜೋಗುಳ ಹಾಡಲೇ

---------------------------------------


ಮುಂಗುರುಳು ಹಾರಿ ಹಾರಿ
ಗಾಳಿ ಘಂ ಎಂದಿತು
ಕಣ್ಣಂಚಿನ ಚಂಚಲತೆಗೆ
ಎದೆಯೆ ಝಲ್ ಎಂದಿತು

---------------------------------------



ಏನೆಲ್ಲ ಓದಿದರೂ ಏನೆಲ್ಲ ಕೇಳಿದರೂ
ಮನ ಮುಚ್ಚಿಕೊಂಡರೆ ಏನು ದಕ್ಕುವುದು?
ಏನೆಲ್ಲ ಕಂಡರೂ ಏಸು ಅನುಭವಿಸಿದರೂ
ಮನನವಿರದಿದ್ದರೆ ಏನು ಉಕ್ಕುವುದು?

---------------------------------------




ಕಣ್ಣ ಬಟ್ಟಲ ತುಂಬ
ನಶೆ ತುಂಬಿದ ನೋಟ
ತುಟಿಯ ಕೆಂಬೇಲಿಯಲಿ
ದಾಳಿಂಬೆ ತೋಟ

---------------------------------------


Monday, October 11, 2010

ನೀಲು ೩೭

Image courtsey: Huffington post

ನನ್ನ ಗಂಡ ಹೇಳುವ ಹಸಿ ಸುಳ್ಳುಗಳನ್ನು

ಆತನ ಫೇಸ್‍ಬುಕ್, ಆರ್ಕುಟ್, ಟ್ವಿಟರ್, ಬಜ್‍ಗಳು

ಕೂಡ ಹೇಳುವುದನ್ನು ಓದಿ

ನನಗೆ ನಗು ಬರುತ್ತೆ!