ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!
ಹಗಲಿರುಳು ದುಡಿದರೂ, ಹಲುಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆವೆಚ್ಚ.
ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು
ನೆತ್ತರದಿ ಬರೆದುದಕೆ ಲೆಕ್ಕವಿಲ್ಲ.
ಚಿತ್ರ ಚಿತ್ರಾಕ್ಷರದ ಲಕ್ಷ ಪತ್ರಗಳುಂಟು;
ನಕ್ಷತ್ರ ಓದುತಿವೆ ಮರೆತು ಸೊಲ್ಲ.
ಏನಿಹುದೋ ಎಂತಿಹುದೋ ಸಂಸಾರಸಾರ!
ಕಂಡವರು ಯಾರದರ ಅಂತಪಾರ?
ಹೃದಯಸಂಪುಟದಲ್ಲಿ ಒಲವ-ಲೆಕ್ಕಣಿಕೆ
ಮಾಡಿ, ಬರೆಯಲೊ, ಹುಡುಗ, ನಿನ್ನ ಒಕ್ಕಣಿಕೆ.
ಏನಿಹುದೋ ಎಂತಿಹುದೋ ಸಂಸಾರಸಾರ!
ಕಂಡವರು ಯಾರದರ ಅಂತಪಾರ?
ಹೃದಯಸಂಪುಟದಲ್ಲಿ ಒಲವ-ಲೆಕ್ಕಣಿಕೆ
ಮಾಡಿ, ಬರೆಯಲೊ, ಹುಡುಗ, ನಿನ್ನ ಒಕ್ಕಣಿಕೆ.