Monday, September 26, 2011

ಕ್ಷಣಗಳು

೨೪ ಅಗಸ್ಟಿನ ಗೂಗಲ್ ಡೂಡಲ್ ನೋಡಿದ್ದೀರಾ?


ಇದು ಹೂರೆ  ಲೂಇಸ್ ಬೋರ್ಹೇಸ್ (ಇಂಗ್ಲೀಷಿನಲ್ಲಿ ಬರೆಯುವುದು Jorge Luis Borges ಎಂದು ಆದರೆ ಉಚ್ಛಾರ ಮಾತ್ರ ಬೇರೆ) ಎಂಬ ಅರ್ಜಂಟೈನಾದ ಸಾಹಿತಿಯ ೧೧೨ನೇ ಹುಟ್ಟುಹಬ್ಬದ ನೆನಪಿಗೆ ಗೂಗಲ್ಲಿನ ಡೂಡಲ್ಲು ಇದು. ಆತನ ಬಗ್ಗೆ ಓದಲು ಇಲ್ಲಿ ಒತ್ತಿ: ವಿಕಿಯಲ್ಲಿ Jorge_Luis_Borges

ಆತನ ಒಂದು ಪ್ರಸಿದ್ಧ ಕವನವನ್ನು ಇಲ್ಲಿ ಇಂಗ್ಲೀಷಿನಿಂದ ಅನುವಾದಿಸಿದ್ದೇನೆ:

ಕ್ಷಣಗಳು

ನಾ ಮತ್ತೆ ಬದುಕಬಲ್ಲೆನಾದರೆ
ನನ್ನ ಯತ್ನವೆಲ್ಲ ಆಗ
ಇನ್ನೂ ಹೆಚ್ಚು ತಪ್ಪು ಮಾಡುವುದು
ಈಗಿನಷ್ಟು ಒಳ್ಳೆಯವನಾಗದಿರುವುದು
ಇನ್ನೂ ಹೆಚ್ಚು ಆರಾಮವಾಗಿರುವುದು
ಈಗಿನಕ್ಕಿಂತ ಹೆಚ್ಚು ತುಂಬಿಕೊಂಡಿರುವುದು

ನಿಜಾಂದ್ರೆ, ಕಡಿಮೆ ಗಂಭೀರನಾಗಿರುವುದು
ಹೆಚ್ಚು ಕೊಳಕಾಗಿರುವುದು
ಹೆಚ್ಚು ಓಡಾಡುವುದು
ಹೆಚ್ಚೆಚ್ಚು ಸಂಜೆಬಾನು ನೋಡುತ್ತ ಕೂರುವುದು
ಹೆಚ್ಚೆಚ್ಚು ಬೆಟ್ಟ ಗುಡ್ಡ ಹತ್ತುವುದು
ಇನ್ನೂ ಕಂಡರಿಯದ ಜಾಗಕ್ಕೆ ಹೋಗುವುದು
ತುಂಬ ಐಸ್‍ಕ್ರೀಮು ತಿನ್ನುವುದು
ಕಡಿಮೆ ಬೀನ್ಸು ತಿನ್ನುವುದು
ಅಸಲಿ ಸಮಸ್ಯೆಗಳನ್ನು ಜಾಸ್ತಿ, ಕಾಲ್ಪನಿಕವಾದವುಗಳನ್ನು ಕಡಿಮೆ 
ಮಾಡಿಕೊಳ್ಳುವುದು 

ನಾನೊಬ್ಬ ದೂರದೄಷ್ಟಿಯ ಜಾಗರೂಕ ನಾಗರಿಕ
ಬದುಕಿನ ಪ್ರತಿ ನಿಮಿಷದಲ್ಲೂ!
ಹಾಗಂತ ಬದುಕಲ್ಲಿ ನಲಿವಿನ ಕ್ಷಣಗಳ ಕಂಡಿಲ್ಲ ಎಂದೇನಿಲ್ಲ
ಮರಳಿ ಹೋಗುವೆನಾದರೆ ನನಗಿನ್ನೂ ಅಂಥ ಕ್ಷಣಗಳೇ ಬೇಕು

ನಿನಗೆ ಗೊತ್ತಿಲ್ಲದಿದ್ದರೆ ಕೇಳು - ಬದುಕು ಎಂದರೆ ಅದೇ-
’ಈಗ’ನ್ನು ಕಳೆದುಕೊಳ್ಳಬೇಡ

ನಾನೀಗ ಎಲ್ಲಿಗೆ ಹೋದರೂ
ಜ್ವರ ಮಾಪಕ ಬೇಕು
ಬಿಸಿನೀರು ಇರಬೇಕು
ಕೊಡೆ ಬೇಕು, ಗಾಳಿಕೊಡೆ ಕೂಡ

ಮತ್ತೆ ಜೀವಿಸಬಲ್ಲೆನಾದರೆ ನನ್ನದು ಬೆಳಕಿನ ಪಯಣ
ಮತ್ತೆ ಬದುಕಬಲ್ಲೆನಾದರೆ ನನ್ನದು ಬರಿಗಾಲ ದುಡಿತ
ವಸಂತನಿಂದ ಹೇಮಂತ ಬರುವವರೆಗೂ.
ಬಂಡಿ ಓಡಿಸುತ್ತೇನೆ ತುಂಬ ಸಲ 
ಮೂಡಲದಲ್ಲಿ ನೇಸರನಿಗಾಗಿ ಕಾಯುತ್ತೇನೆ ತುಂಬ ಸಲ 
ಮತ್ತೆ ಮಕ್ಕಳೊಡನೆ ಆಡುತ್ತೇನೆ ತುಂಬ ಹೊತ್ತು

ಮತ್ತೆ ಬದುಕನ್ನು ಇನ್ನೊಂದು ಸಲ ಬದುಕಬಲ್ಲೆನಾದರೆ...
ಆದರೆ... ನನಗೀಗ ವರ್ಷ ಎಂಬತ್ತೈದು
ಇನ್ನೆಷ್ಟು ದಿನ ನಾನು ಬದುಕಬಲ್ಲೆ?


(ಇಂಗ್ಲೀಷ್ ಅವತರಣಿಕೆ ಇಲ್ಲಿದೆ: http://www.poemhunter.com/poem/instants/

Friday, September 23, 2011

ನೀಲು ೪೫

ನನ್ನ ಮೈಮಾಟ ಕದ್ದು 

ನೋಡುತ್ತಿದ್ದ ಹುಡುಗ

ನನ್ನ ಕಣ್ಣಿನಲ್ಲಿ ಸಿಕ್ಕಿಬಿದ್ದಾಗ

ನೀರಿನಲ್ಲಿ ಬಿದ್ದ ನೊಣದಂತೆ

ಕಂಡ

Sunday, September 11, 2011

ರೆಹೆಮಾನನ ಚಿತ್ರಗಳು







ಕಳೆದ ವರ್ಷ ರೆಹಮಾನನ ಜೈಹೊ ಕಾರ್ಯಕ್ರಮದಲ್ಲಿ ತೆಗೆದದ್ದು. (ಇನ್ನು ಮುಂದೆ ನನ್ನ ತಥಾಕಥಿತ ಫೋಟೋಗ್ರಾಫಿಯನ್ನೂ ಇದೇ ಬ್ಲಾಗಿನಲ್ಲಿ ಹಾಕುತ್ತೇನೆ, ಬೇಜಾರು ಮಾಡಿಕೊಳ್ಳಬೇಡಿ)

Monday, September 05, 2011

ನೀಲು ೪೪


(from: http://lsmdevo.wordpress.com/2011/05/19/desires/)
ಯಾವುದು ಹೆಚ್ಚು ಕಷ್ಟ? 

ಸಾವಿರಾರು ಆಸೆಗಳ 

ಬೆನ್ನತ್ತಿ ಬಳಲುವುದೋ,



ಒಂದೊಂದೇ ಆಸೆಗಳ 

ಕೊಲ್ಲುತ್ತ ಸಾಯುವುದೋ?